ಗುಂಡ್ಲುಪೇಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಕೆ ಹೊತ್ತಿದ್ರು ಅನ್ನೋ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿ ಹರಕೆ ಹೊತ್ತ ಕಾರಣದಿಂದಲೇ ನರಹಂತಕ ಹುಲಿ ಸೆರೆಯಾಗಿದೆ ಎಂಬ ಮಾತು ಈಗ ಗುಂಡ್ಲುಪೇಟೆಯಲ್ಲಿ ಕೇಳಿ ಬರ್ತಿದೆ.
ಚಾಮರಾಜನಗರ(ಅ.15): ಇಬ್ಬರು ರೈತರನ್ನು ಕೊಂದ ಹುಲಿ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹರಕೆ ಹೊತ್ತ ಕಾರಣದಿಂದಲೇ ಭಾನುವಾರ ನರಹಂತಕ ಹುಲಿ ಸೆರೆ ಸಿಕ್ಕಿದೆ ಎಂಬ ಮಾತು ಈಗ ಸದ್ಯ ಗುಂಡ್ಲುಪೇಟೆಯಲ್ಲಿ ಕೇಳಿಬರುತ್ತಿದೆ.
ಬಂಡೀಪುರ ಕಾಡಂಚಿನ ಗ್ರಾಮ ಕಬ್ಬೇಪುರ ಬಳಿಯಿರುವ ಮಾಳಿಗಮ್ಮನಿಗೆ ಪೂಜೆ ಸಲ್ಲಿಸದ ಕಾರಣ ಆ ದೇವತೆ ಮುನಿಸಿಕೊಂಡಿದ್ದಳಾ? ಪೂಜೆ, ಪುನಸ್ಕಾರ ಸ್ಥಗಿತಗೊಂಡ ಕಾರಣ ಈ ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿತ್ತಾ? ಮತ್ತೆ ಅರಣ್ಯ ಇಲಾಖೆಯ ಅಧಿಕಾರಿಗಳು ದೇವರ ಹರಕೆ ಹೊತ್ತ ಕಾರಣ ಹುಲಿ ಸೆರೆ ಸಿಕ್ಕಿತಾ? ಮಾಳಿಗಮ್ಮನ ಕಡೆಗಣಿಸಿದ್ದ ಕಾರಣ ಹುಲಿ ಕಾಟ ಹೆಚ್ಚಿತ್ತು. ಪೂಜೆ ನಿಲ್ಲಿಸಿದ್ದರಿಂದಲೇ ಈ ಭಾಗದ ಇಬ್ಬರು ರೈತರು ಹಾಗೂ ಹತ್ತಾರು ಜಾನುವಾರುಗಳನ್ನು ಹುಲಿ ಬಲಿ ಪಡೆದಿತ್ತಾ ಎಂದು ಜನರಲ್ಲಿ ಚರ್ಚೆ ನಡೆಯುತ್ತಿದೆ.
ಜನರ ಮಾತಿಗೆ ಕಟ್ಟು ಬಿದ್ದು ಹರಕೆ ಹೊತ್ತ ಅಧಿಕಾರಿ
ಹುಲಿ ಕಾರ್ಯಾಚರಣೆಯ ವೇಳೆ ಈ ಭಾಗದ ಜನರ ಮಾತಿಗೆ ಕಟ್ಟು ಬಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ಮಾಳಿಗಮ್ಮನ ಮೊರೆ ಹೋದ ಕಾರಣದಿಂದಲೇ ಹುಲಿ ಸೆರೆ ಸಿಕ್ಕಿತು ಎಂದು ಹೇಳಲಾಗುತ್ತದೆ. ಈ ಸಂಬಂಧ ಬಂಡೀಪುರ ಕಾಡಂಚಿನ ಗ್ರಾಮದ ಕಬ್ಬೇಪುರ ಬಳಿ ಮಾಳಿಗಮ್ಮನ ದೇವಸ್ಥಾನದಲ್ಲಿ ಅರಣ್ಯ ಇಲಾಖೆ ಅ. 15ರಂದು ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದೆ.
2 ವರ್ಷದಿಂದ ಪೂಜೆ ಇರಲಿಲ್ಲ:
ಮಾಳಿಗಮ್ಮ ಈ ಭಾಗದ ಕಬ್ಬೇಪುರ, ಚೌಡಹಳ್ಳಿ, ಹುಂಡೀಪುರ, ಬೆಳವಾಡಿ ಸೇರಿದಂತೆ ಕಾಡಂಚಿನ ಗ್ರಾಮಗಳ ಆರಾಧ್ಯ ದೇವತೆ. ಪುರಾತನ ಕಾಲದ ಪ್ರತಿ ಮಂಗಳವಾರ ಪೂಜೆ ನಡೆಯುತ್ತಿತ್ತು. ಸುಗ್ಗಿಯ ಸಮಯದಲ್ಲಿ ಈ ದೇವತೆಗೆ ಪೂಜೆ ಸಲ್ಲಿಸಿದ ಬಳಿಕವಷ್ಟೆರೈತರು ಬೆಳೆ ಕಟಾವು ಮಾಡುತ್ತಿದ್ದರು. ಪ್ರತಿ ವರ್ಷ ದೀಪಾವಳಿ ಹಬ್ಬದ ವೇಳೆ ಜಾತ್ರೆ ಕೂಡ ನಡೆಯುತ್ತಿತ್ತು. ಜಾತ್ರೆ ಮಾಡುವುದು ವಿಳಂಬವಾದರೆ ಈ ಗ್ರಾಮಗಳಿಗೆ ಬರುತ್ತಿದ್ದ ಹುಲಿ ಯಾರ ಕಣ್ಣಿಗೂ ಬೀಳದೆ ಹಸುವೋ, ಎತ್ತೋ ಸಾಯಿಸಿ ಬಲಿ ಪಡೆವ ಸೂಚನೆ ಈ ದೇವತೆ ಕೊಡುತ್ತಿದ್ದಳು ಎಂಬ ಮಾತಿದೆ.
5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!
ತಕ್ಷಣ ಗ್ರಾಮದವರೆಲ್ಲ ಒಟ್ಟುಗೂಡಿ ಮಾಳಿಗಮ್ಮನಿಗೆ ಪೂಜೆ ಪುನಸ್ಕಾರ ಮಾಡಿ ಜಾತ್ರೆ ಮಾಡುತ್ತಿದ್ದರು. ಹೀಗೆ ಮಾಡಿದರೆ ಮತ್ತೆ ಈ ಕಡೆ ಹುಲಿ ಬರುತ್ತಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಪೂಜೆ ಹಾಗೂ ಜಾತ್ರೆ ಕೂಡ ನಡೆದಿಲ್ಲ. ಹಾಗಾಗಿ ಹುಲಿ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರ ಮಾತು.
ದೈವ ಸಂಕಲ್ಪವೇ:
ನಿಜಕ್ಕೂ ಇದು ದೈವ ಸಂಕಲ್ಪವೇ ಇರಬೇಕು ಎನಿಸುತ್ತಿದೆ. ಏಳು ಸಾಕಾನೆ, 200ಕ್ಕೂ ಹೆಚ್ಚು ಕ್ಯಾಮೆರಾ, ನಾಲ್ಕು ದ್ರೋಣ್ ಕ್ಯಾಮೆರಾ, 120ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಹಾಗೂ ಬುಡಕಟ್ಟು ಸೋಲಿಗರಿಂದ ಶೋಧನೆ, ರಾಣಾ ನಿಪುಣತೆ ಹೀಗೆ ನಾನಾ ರೀತಿಯ ಕಸರತ್ತು ನಡೆಸಿದರೂ ಯಾರ ಕಣ್ಣಿಗೂ ಬೀಳದ ಹುಲಿ ಮಾಳಿಗಮ್ಮನ ಮೊರೆ ಹೋಗುತ್ತಿದ್ದಂತೆ ಹುಲಿ ಸೆರೆ ಸಿಕ್ಕಿದೆ.
ಬಂಡೀಪುರ ನಿರ್ದೇಶಕರ ಹರಕೆ ಫಲಿಸಿತೇ?
ಈ ಭಾಗದಲ್ಲಿ ಇಬ್ಬರು ರೈತರ ಬಲಿ ಪಡೆಯುವ ಜೊತೆಗೆ ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿತ್ತು. ಗ್ರಾಮಸ್ಥರು ಕೂಡ ಭಯಬೀತರಾಗಿದ್ದರು. ಮಾಳಿಗಮ್ಮನ ಕಡೆಗಣಿಸಿದ್ದ ಕಾರಣ ಹುಲಿ ಹಾವಳಿ ಹೆಚ್ಚಾಗಿದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಈ ನಂಬಿಕೆಯನ್ನು ತಿಳಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ಮಾಳಿಗಮ್ಮನ ಬಳಿ ಹರಕೆ ಹೊತ್ತೆ ಬಿಟ್ಟರು.
ನರಹಂತಕ ಹುಲಿ ಹಿಡಿಯಲು 120 ಸಿಬ್ಬಂದಿ, 200 ಕ್ಯಾಮೆರಾ!
ಇದೇ ಮಂಗಳವಾರ ಮಾಳಿಗಮ್ಮನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಅಷ್ಟರೊಳಗೆ ಆಪರೇಷನ್ ಟೈಗರ್ ಕಾರ್ಯಾಚರಣೆಗೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿದ್ದರು. ಆದರೆ ಬಾಲಚಂದ್ರರ ಹರಕೆ ಫಲಿಸೇ ಬಿಟ್ಟಿದೆ. ಮಂಗಳವಾರಕ್ಕೂ ಮೊದಲೇ ನರಹಂತಕ ಹುಲಿ ಭಾನುವಾರವೇ ಸೆರೆಯಾಗಿದೆ.
-ರಂಗೂಪುರ ಶಿವಕುಮಾರ್