
ನವದೆಹಲಿ (ಮೇ.17): ಯುವ ಪೀಳಿಗೆಯು ಲಕ್ಷಾಂತರ ರೂಪಾಯಿ ಸಂಬಳ ಹಾಗೂ ಸಾಮಾಜಿಕ ಗೌರವ ಸಿಗುವ ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರೆ, ಇಲ್ಲೊಬ್ಬ 25 ವರ್ಷದ ಯುವ ಎಂಜಿನಿಯರ್ ತಮಗೆ ಸಿಕ್ಕಿದ್ದ ಪ್ರತಿಷ್ಠಿತ 'ಮಹಾರತ್ನ' ಕಂಪನಿಯ ಉದ್ಯೋಗಕ್ಕೆ ಕೇವಲ ಎರಡೇ ವರ್ಷದಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ವರ್ಷಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ಪ್ಯಾಕೇಜ್ ಇದ್ದರೂ, ಕಚೇರಿಯಲ್ಲಿ ಕನಿಷ್ಠ ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳೂ ಇಲ್ಲದ ಕಾರಣಕ್ಕೆ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ರಾಜೀನಾಮೆ ನೀಡಿರುವ ಯುವಕ ಸೌರಭ್ ಮಿತ್ತಲ್, ಪ್ರತಿಷ್ಠಿತ ಎನ್‌ಐಟಿ (NIT) ಕುರುಕ್ಷೇತ್ರದ ಪದವೀಧರರಾಗಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ ಅವರು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಕಂಪನಿಗೆ ಒನ್ ಆಫ್ ದಿ ಬೆಸ್ಟ್ ಪ್ಯಾಕೇಜ್‌ನೊಂದಿಗೆ ಸೇರ್ಪಡೆಯಾಗಿದ್ದರು. ಸೌರಭ್ ಅವರಿಗೆ ಸಿಲಿಗುರಿಯಲ್ಲಿ ಪೋಸ್ಟಿಂಗ್ ನೀಡಲಾಗಿದ್ದು, ಇಡೀ ಉತ್ತರ ಬಂಗಾಳ, ಸಿಕ್ಕಿಂ ಮತ್ತು ಭೂತಾನ್ ಒಳಗೊಂಡ ವಲಯದ ಕಾರ್ಯಾಚರಣೆಯ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದರು. ಆದರೆ, ಹೊರಗಿನಿಂದ ಅತ್ಯಂತ ಆಕರ್ಷಕವಾಗಿ ಕಾಣುವ ಮಹಾರತ್ನ ಪಿಎಸ್‌ಯು (PSU) ಉದ್ಯೋಗದ ಒಳಗಿನ ಕಹಿ ಸತ್ಯವೇ ಬೇರೆಯಾಗಿತ್ತು ಎಂದು ಸೌರಭ್ ಹೇಳಿದ್ದಾರೆ.
ತಮ್ಮ ಕಠಿಣ ಕೆಲಸದ ವಾತಾವರಣದ ಬಗ್ಗೆ ಮಾತನಾಡಿರುವ ಸೌರಭ್, "ನನ್ನ ಕಚೇರಿ ಇದ್ದದ್ದು ಒಂದು ಹಳೆಯ ಗೋದಾಮಿನ (Warehouse) ಒಳಗೆ. ಅಲ್ಲಿ ಕನಿಷ್ಠ ಕುಡಿಯುವ ನೀರಾಗಲಿ ಅಥವಾ ಶೌಚಾಲಯವಾಗಲಿ ಇರಲಿಲ್ಲ. ಎಸಿ ಕೂಡ ಕೆಟ್ಟುಹೋಗಿತ್ತು, ಅದನ್ನು ನನ್ನ ಸ್ವಂತ ಹಣದಲ್ಲೇ ರಿಪೇರಿ ಮಾಡಿಸಿಕೊಂಡಿದ್ದೆ. ಕಚೇರಿಯಲ್ಲಿ ಶೌಚಾಲಯವಿಲ್ಲದ ಬಗ್ಗೆ ನಾನು ಮ್ಯಾನೇಜರ್, ಹಿರಿಯ ಅಧಿಕಾರಿಗಳು ಹಾಗೂ ಎಚ್‌ಆರ್ (HR) ವರೆಗೂ ಹತ್ತಾರು ಬಾರಿ ಮನವಿ ಮಾಡಿದೆ. ಆದರೆ ಅಧಿಕಾರಿಗಳ ಉದಾಸೀನತೆ ಪರಮಾವಧಿಯಾಗಿತ್ತು. ಎಚ್‌ಆರ್‌ನವರು ಇದು ಬಿಸಿನೆಸ್ ವಿಭಾಗಕ್ಕೆ ಸಂಬಂಧಿಸಿದ್ದು ಅಂದರು. ಮ್ಯಾನೇಜರ್ ಬಜೆಟ್ ಕೇಳುತ್ತೇನೆ ಎಂದರು. ಆದರೆ ಕೊನೆಗೆ ಫೈನಾನ್ಸ್ ಡಿಪಾರ್ಟ್‌ಮೆಂಟ್‌ನವರು, ಕಚೇರಿಯಲ್ಲಿ ಶೌಚಾಲಯ ಕಟ್ಟುವುದರಿಂದ ಕಂಪನಿಗೆ ಯಾವುದೇ ಆರ್‌ಒಐ (Return on Investment - ಹೂಡಿಕೆಯ ಮೇಲಿನ ಆದಾಯ) ಬರುವುದಿಲ್ಲ ಎಂದು ಪ್ರಸ್ತಾಪವನ್ನೇ ತಿರಸ್ಕರಿಸಿದರು!" ಎಂದು ಅಳಲು ತೋಡಿಕೊಂಡಿದ್ದಾರೆ.
ಅದೃಷ್ಟವಶಾತ್ ಸೌರಭ್ ಅವರ ಮನೆ ಕಚೇರಿಯಿಂದ 10 ನಿಮಿಷದ ದೂರದಲ್ಲಿದ್ದ ಕಾರಣ, ಅವರು ದಿನದಲ್ಲಿ ಹಲವು ಬಾರಿ ಶೌಚಾಲಯಕ್ಕಾಗಿ ಮನೆಗೆ ಹೋಗಿ ಬರುತ್ತಿದ್ದರು. "ಕೊಲ್ಕತ್ತಾದ ಮುಖ್ಯ ಕಚೇರಿಯಲ್ಲಿ ಎಸಿ ರೂಂನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳಿಗೆ ಗ್ರೌಂಡ್ ಲೆವೆಲ್‌ನಲ್ಲಿ ನಾವಿಲ್ಲಿ ಅನುಭವಿಸುತ್ತಿದ್ದ ನರಕದ ಅರಿವೇ ಇರಲಿಲ್ಲ" ಎಂದು ಅವರು ಕಿಡಿಕಾರಿದ್ದಾರೆ.
ಕಚೇರಿಯ ಕೆಲಸದ ಒತ್ತಡದ ಬಗ್ಗೆಯೂ ಸೌರಭ್ ಗಂಭೀರ ಆರೋಪ ಮಾಡಿದ್ದಾರೆ. "ಅಲ್ಲಿ ರಜೆ ಎಂಬ ಪದವೇ ಇರಲಿಲ್ಲ. ಒಮ್ಮೆ ನನ್ನ ಮ್ಯಾನೇಜರ್ ಕಂಪನಿಯಲ್ಲಿ ರಜೆ ನೀಡುವುದಿಲ್ಲ, ರಜೆ ದಿನಗಳೆಂದರೆ ವರ್ಕ್ ಫ್ರಮ್ ಹೋಮ್ (WFH) ಮಾಡಲು ಇರುವ ದಿನಗಳು ಎಂದು ನೇರವಾಗಿಯೇ ಹೇಳಿದ್ದರು. ವೀಕೆಂಡ್ ಹಾಗೂ ಭಾನುವಾರಗಳೂ ಸೇರಿ ಮಧ್ಯರಾತ್ರಿ 12 ಗಂಟೆಯವರೆಗೂ ಆಫೀಸ್ ಕರೆಗಳು ಬರುತ್ತಿದ್ದವು. ಇಷ್ಟೇ ಅಲ್ಲದೆ, ನನ್ನ ಕೆಲಸಕ್ಕೆ ಯಾವುದೇ ಸಂಬಂಧವಿಲ್ಲದ ಹಿರಿಯ ಅಧಿಕಾರಿಗಳನ್ನು ಏರ್‌ಪೋರ್ಟ್‌ನಿಂದ ಪಿಕ್ ಮಾಡುವುದು, ಅವರಿಗೆ ಹೋಟೆಲ್ ಬುಕ್ ಮಾಡುವಂತಹ ವೈಯಕ್ತಿಕ ಕೆಲಸಗಳನ್ನೂ ನನ್ನ ಕೈಯಲ್ಲಿ ಮಾಡಿಸುತ್ತಿದ್ದರು. ಮೀಟಿಂಗ್‌ಗಳಲ್ಲಿ ಹಾಗೂ ವಿಡಿಯೋ ಕಾನ್ಫರೆನ್ಸ್‌ಗಳಲ್ಲಿ ಜೋರಾಗಿ ಕಿರುಚಾಡುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಲ್ಲಿ ಸಾಮಾನ್ಯ ಎಂಬಂತಾಗಿತ್ತು," ಎಂದು ಸೌರಭ್ ವಿವರಿಸಿದ್ದಾರೆ.
ಕೇವಲ 3 ಪ್ರತಿಶತ ವಾರ್ಷಿಕ ಸಂಬಳದ ಏರಿಕೆ ಹಾಗೂ ಕೇವಲ ಹಿರಿತನದ ಆಧಾರದ ಮೇಲಿನ ಪ್ರಮೋಷನ್‌ಗಳಿಂದಾಗಿ ಅಲ್ಲಿ ಬೆಳವಣಿಗೆಯೂ ಇರಲಿಲ್ಲ. ಇಡೀ ಜೀವನವನ್ನು ಈ ರೀತಿ ಕಳೆಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಸೌರಭ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಹರಿಯಾಣದ ಕೈಥಾಲ್ ಎಂಬ ಸಣ್ಣ ಜಿಲ್ಲೆಯ ಸೌರಭ್ ಕುಟುಂಬಕ್ಕೆ ಬಿಪಿಸಿಎಲ್ ಕೆಲಸ ದೊಡ್ಡ ಪ್ರತಿಷ್ಠೆಯ ವಿಷಯವಾಗಿತ್ತು. ಹೀಗಾಗಿ ಮಗ ಸರ್ಕಾರಿ ಕೆಲಸ ಬಿಟ್ಟಿದ್ದನ್ನು ಅವರ ತಂದೆಗೆ ಇಂದಿಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಆದರೆ, ಮಗ ಅನುಭವಿಸುತ್ತಿದ್ದ ಮಾನಸಿಕ ಕಿರುಕುಳ ಮತ್ತು ತಡರಾತ್ರಿಯ ಕರೆಗಳನ್ನು ಖುದ್ದಾಗಿ ನೋಡಿದ್ದ ಅವರ ತಾಯಿ, "ನನ್ನ ಮಗ ಇಂತಹ ನರಕದಲ್ಲಿ ಇರುವುದು ನನಗೆ ಇಷ್ಟವಿಲ್ಲ" ಎಂದು ಮಗನ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಪ್ರಸ್ತುತ ಗುರುಗ್ರಾಮ್‌ನಲ್ಲಿರುವ ಸೌರಭ್ ಮಿತ್ತಲ್, ತಮ್ಮ ವೃತ್ತಿಜೀವನಕ್ಕೆ ಒಂದು ಸ್ಪಷ್ಟ ಮುನ್ನಡೆ ಹಾಗೂ ಬಿಸಿನೆಸ್ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಎಂಬಿಎ (MBA) ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಇದರ ಜೊತೆಗೆ ತಮ್ಮ ದಿನನಿತ್ಯದ ವೆಚ್ಚಗಳನ್ನು ಸರಿದೂಗಿಸಲು ಮತ್ತು ಯುವ ವೃತ್ತಿಪರರಿಗೆ ಇಂತಹ ಉದ್ಯೋಗಗಳ ಸತ್ಯಾಸತ್ಯತೆಯನ್ನು ತಿಳಿಸಲು ಅರೆಕಾಲಿಕವಾಗಿ ಕಂಟೆಂಟ್ ಕ್ರಿಯೇಷನ್ (ವಿಡಿಯೋ ಬ್ಲಾಗಿಂಗ್) ಮಾಡಲು ಆರಂಭಿಸಿದ್ದಾರೆ. ಯುವ ಪೀಳಿಗೆಯು ಯಾವುದೇ ಸರ್ಕಾರಿ ಉದ್ಯೋಗದ ಕೇವಲ ಹೊರಗಿನ ವೈಭವವನ್ನು ನೋಡಿ ಮರುಳಾಗುವ ಮುನ್ನ ವಾಸ್ತವವನ್ನು ಅರಿತುಕೊಳ್ಳಬೇಕು ಎಂಬುದು ಅವರ ಸಲಹೆ.