
ಮುಂಬೈ: ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ವಾಹನ ವಿಭಾಗಕ್ಕೆ ಹೊಸ ರೀಟೆಲ್ ಬ್ರ್ಯಾಂಡ್ ಗುರುತನ್ನು ಘೋಷಿಸಿದ್ದು, ಇನ್ಮುಂದೆ ಈ ವಿಭಾಗವು 'Tata.cars' (ಟಾಟಾ.ಕಾರ್ಸ್) ಎಂಬ ಪ್ರಮುಖ ಬ್ರ್ಯಾಂಡ್ ಅಡಿಯಲ್ಲಿ ಗುರುತಿಸಿಕೊಳ್ಳಲಿದೆ. ಕಂಪನಿಯ ಸಾಂಪ್ರದಾಯಿಕ ಇಂಧನ (ICE) ಹಾಗೂ ಎಲೆಕ್ಟ್ರಿಕ್ ವಾಹನ (EV) ಮಾದರಿಗಳೆರಡೂ ಈ ನೂತನ 'ಅಂಬ್ರೆಲಾ ಬ್ರ್ಯಾಂಡ್' ವ್ಯಾಪ್ತಿಗೆ ಬರಲಿವೆ.
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ವಾಣಿಜ್ಯ ವಾಹನ (Commercial Vehicles) ಮತ್ತು ಪ್ರಯಾಣಿಕ ವಾಹನ (Passenger Vehicles) ವಿಭಾಗಗಳನ್ನು ಪ್ರತ್ಯೇಕಿಸಿದ ನಂತರವೂ ಗ್ರಾಹಕರಲ್ಲಿ ಸಣ್ಣ ಮಟ್ಟದ ಗೊಂದಲವಿತ್ತು. ಎಸ್‌ಯುವಿ (SUV) ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರು ಹಲವು ಬಾರಿ ಟ್ರಕ್ ಮತ್ತು ಬಸ್‌ಗಳನ್ನು ಮಾರಾಟ ಮಾಡುವ ವಾಣಿಜ್ಯ ವಾಹನಗಳ ಶೋ ರೂಂಗಳಿಗೆ ಬಂದು ವಿಚಾರಿಸುತ್ತಿದ್ದರು.
ಈ ಗೊಂದಲಕ್ಕೆ ತೆರೆ ಎಳೆಯಲು ಮತ್ತು ಪ್ರಯಾಣಿಕ ವಾಹನ ವಿಭಾಗಕ್ಕೆ ಪ್ರತ್ಯೇಕವಾದ, ಆಧುನಿಕ ಗುರುತನ್ನು ನೀಡಲು ಕಂಪನಿಯು ಈ ಕ್ರಮ ಕೈಗೊಂಡಿದೆ. 2026 ರ ಮೊದಲ ಏಳು ತಿಂಗಳಲ್ಲೇ ಟಾಟಾ ಸಂಸ್ಥೆಯು 4.7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕ ಕಾರುಗಳನ್ನು (ರಫ್ತು ಒಳಗೊಂಡಂತೆ) ಮಾರಾಟ ಮಾಡಿದ್ದರೆ, ವಾಣಿಜ್ಯ ವಾಹನ ವಿಭಾಗವು 2.75 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ.
ಕಂಪನಿಯ ಎಲೆಕ್ಟ್ರಿಕ್ ವಾಹನ ವಿಭಾಗದ ಬ್ರ್ಯಾಂಡ್ ಆದ 'Tata.ev', ಇನ್ಮುಂದೆ ಹೊಸದಾಗಿ ರಚಿಸಲಾದ 'Tata.cars' ಅಡಿಯಲ್ಲಿಯೇ ಒಂದು ಉಪ-ಬ್ರ್ಯಾಂಡ್ ಆಗಿ ಮುಂದುವರಿಯಲಿದೆ.
ಕಂಪನಿಯ ಅಧಿಕೃತ ಹಾಗೂ ನೋಂದಾಯಿತ ಕಾನೂನು ಹೆಸರು 'ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್' (TMPVL) ಎಂದೇ ಉಳಿಯಲಿದೆ. ಕಾರ್ಪೊರೇಟ್ ಫೈಲಿಂಗ್‌ಗಳು, ಉತ್ಪಾದನಾ ಘಟಕಗಳು, ಒಪ್ಪಂದಗಳು ಮತ್ತು ನಿಯಂತ್ರಕ ಬಾಧ್ಯತೆಗಳಿಗೆ ಹಳೆಯ ಕಾನೂನು ಹೆಸರನ್ನೇ ಬಳಸಲಾಗುತ್ತದೆ. 'Tata.cars' ಎಂಬುದು ಕೇವಲ ಗ್ರಾಹಕ ಸ್ನೇಹಿ ಬ್ರ್ಯಾಂಡಿಂಗ್ ಆಗಿದೆ.
ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEM) ಸಂಸ್ಥೆಯು TMPVL ಯ ಅಂಗಸಂಸ್ಥೆಯಾಗಿ ಮುಂದುವರಿಯಲಿದ್ದು, ಪ್ರಸ್ತುತ ಇರುವ ಕಾರ್ಪೊರೇಟ್ ರಚನೆಯನ್ನು ಬದಲಾಯಿಸುವ ಯಾವುದೇ ಯೋಜನೆಗಳಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಈ ನೂತನ ಬ್ರ್ಯಾಂಡಿಂಗ್ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, "ಭಾರತೀಯ ಗ್ರಾಹಕರು ಈಗಾಗಲೇ ನಮ್ಮ ಪ್ರಯಾಣಿಕ ವಾಹನಗಳನ್ನು ಪ್ರೀತಿಯಿಂದ 'ಟಾಟಾ ಕಾರುಗಳು' ಎಂದೇ ಕರೆಯುತ್ತಿದ್ದರು. ಹಲವು ವಿಧಗಳಲ್ಲಿ ಈ ಹೆಸರನ್ನು ನಮಗೆ ನೀಡಿದ್ದೇ ಭಾರತದ ಜನತೆ. ಅದನ್ನು ಇಂದು ನಾವು ಅಧಿಕೃತವಾಗಿ ಸ್ವೀಕರಿಸುತ್ತಿದ್ದೇವೆ. 'ಟಾಟಾ' ಎಂಬ ಹೆಸರು ನಂಬಿಕೆ ಮತ್ತು ಪರಂಪರೆಯನ್ನು ಪ್ರತಿನಿಧಿಸಿದರೆ, 'Tata.cars' ನಮ್ಮ ವಾಹನ ಉದ್ಯಮಕ್ಕೆ ವಿಶಿಷ್ಟ ಹಾಗೂ ಭವಿಷ್ಯದ ದೃಷ್ಟಿಕೋನದ ಹೊಸ ರೂಪವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಪ್ರಕಾರ, ಈ ಬದಲಾವಣೆಯು 'ಪ್ಯಾರಲಲ್ ಪಾತ್‌ವೇಸ್' ಎಂಬ ವಿನ್ಯಾಸ ತತ್ವದ ಆಧಾರದ ಮೇಲೆ ರೂಪುಗೊಂಡಿದೆ.
ಆಂಬಿಷನ್ ಬ್ಲೂ (Ambition Blue): ಇದನ್ನು ಹೊಸ ಬ್ರ್ಯಾಂಡ್‌ನ ಪ್ರಮುಖ ಬಣ್ಣವಾಗಿ ಆಯ್ಕೆ ಮಾಡಲಾಗಿದೆ.
ಪ್ಯಾರಲಲ್ ಡಿಸ್ಪ್ಲೇ (Parallel Display): ಹೊಸ ಮಾದರಿಯ ಅಕ್ಷರಶೈಲಿ (Typeface) ಹಾಗೂ ಧ್ವನಿ ಗುರುತನ್ನು (Sonic identity) ಪರಿಚಯಿಸಲಾಗಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ತನ್ನ ಎಲ್ಲಾ ಶೋ ರೂಂಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಮಾರಾಟದ ನಂತರದ ಸೇವಾ ಕೇಂದ್ರಗಳು (Service Centers) ಮತ್ತು ಜಾಹೀರಾತುಗಳಲ್ಲಿ ಈ ಹೊಸ 'Tata.cars' ಬ್ರ್ಯಾಂಡಿಂಗ್ ಅನ್ನು ಹಂತ-ಹಂತವಾಗಿ ಬದಲಿಸಿ ನೂತನ ಹೆಸರನ್ನು ಇಡಲಿದೆ.