
ನವದೆಹಲಿ (ಜು.21): ಜರ್ಮನಿಯ ಖ್ಯಾತ ವಾಹನ ತಯಾರಿಕಾ ಸಂಸ್ಥೆಯಾದ 'ಫೋಕ್ಸ್‌ವೇಗನ್ ಎಜಿ' (Volkswagen AG), ಭಾರತದಲ್ಲಿರುವ ತನ್ನ ಅಂಗಸಂಸ್ಥೆಯಾದ 'ಸ್ಕೋಡಾ ಆಟೋ ಫೋಕ್ಸ್‌ವೇಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್'ನ ಪಾಲನ್ನು ಮಾರಾಟ ಮಾಡಲು 'ಜೆಎಸ್‌ಡಬ್ಲ್ಯೂ ಗ್ರೂಪ್' (JSW Group) ಜೊತೆ ಗಂಭೀರ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದವು ಅಂತಿಮಗೊಂಡರೆ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರಿ ದೊಡ್ಡ ಬದಲಾವಣೆ ಕಂಡುಬರಲಿದೆ. ಈ ಪಾಲುದಾರಿಕೆಯಿಂದ ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಫೋಕ್ಸ್‌ವೇಗನ್‌ನ ಜಾಗತಿಕ ತಂತ್ರಜ್ಞಾನ ಮತ್ತು ವಾಹನ ಪ್ಲಾಟ್‌ಫಾರ್ಮ್‌ಗಳ ಪ್ರವೇಶ ಸಿಗಲಿದ್ದರೆ, ಜರ್ಮನ್ ಕಂಪನಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾಲವನ್ನು ವಿಸ್ತರಿಸಲು ನೂತನ ಮಾರ್ಗ ತೆರೆದುಕೊಳ್ಳಲಿದೆ.
ವಿಶ್ವದ ಮೂರನೇ ಅತಿ ದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಜರ್ಮನಿಯ ಈ ಕಾರು ತಯಾರಿಕಾ ಸಂಸ್ಥೆಗೆ ಪ್ರಬಲ ಸ್ಥಳೀಯ ಪಾಲುದಾರರ ಅಗತ್ಯವಿತ್ತು. ಇದರಲ್ಲಿ ಭಾರತದ ಜೆಎಸ್‌ಡಬ್ಲ್ಯೂ ಗ್ರೂಪ್ ಹೆಚ್ಚಿನ ಆಸಕ್ತಿ ತೋರಿಸಿದೆ. ಈ ಡೀಲ್ ಕುರಿತು ಉಭಯ ಸಂಸ್ಥೆಗಳ ಉನ್ನತಾಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದಾರೆ. ಆದರೆ, ಕಂಪನಿಯ ಮೌಲ್ಯಮಾಪನ (Valuation), ಬಂಡವಾಳ ಹೂಡಿಕೆ ಹಾಗೂ ಇತರ ವಿಷಯಗಳ ಕುರಿತು ಮಾತುಕತೆಗಳು ಇನ್ನು ನಡೆಯಬೇಕಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಈ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ.
ಫೋಕ್ಸ್‌ವೇಗನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ತನ್ನ ಜನಪ್ರಿಯ ಬ್ರ್ಯಾಂಡ್‌ಗಳಾದ ಸ್ಕೋಡಾ (Skoda), ಫೋಕ್ಸ್‌ವೇಗನ್ (VW) ಮತ್ತು ಆಡಿ (Audi) ಸೇರಿದಂತೆ ಎಲ್ಲಾ ಬ್ರ್ಯಾಂಡ್‌ಗಳು ಸೇರಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕೇವಲ ಶೇ 2.5 ರಷ್ಟು ಪಾಲನ್ನು ಮಾತ್ರ ಹೊಂದಲು ಸಾಧ್ಯವಾಗಿದೆ. ಕಂಪನಿಯು 2030 ರ ವೇಳೆಗೆ ತನ್ನ ಮಾರುಕಟ್ಟೆ ಪಾಲನ್ನು ಶೇ 5 ಕ್ಕೆ ಏರಿಸುವ ಗುರಿ ಹೊಂದಿತ್ತು. ಜೆಎಸ್‌ಡಬ್ಲ್ಯೂ ಜೊತೆಗಿನ ಮಾತುಕತೆಗಳು ಮೂರು ವರ್ಷಗಳ ಹಿಂದೆ ಆರಂಭವಾಗಿದ್ದು, ಆರಂಭದಲ್ಲಿ ಇದು ಪುಣೆ ಮತ್ತು ಛತ್ರಪತಿ ಸಂಭಾಜಿನಗರದಲ್ಲಿರುವ ಉತ್ಪಾದನಾ ಘಟಕಗಳ ಮೇಲೆ ಕೇಂದ್ರೀಕೃತವಾಗಿತ್ತು.
ಫೋಕ್ಸ್‌ವೇಗನ್ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಮರುಸಂಘಟನೆಯ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಭಾರತೀಯ ಘಟಕವು ಮಾರ್ಚ್ 2025ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ತನ್ನ ಲಾಭವನ್ನು ಹೆಚ್ಚಿಸಿಕೊಂಡಿದೆಯಾದರೂ, ಸ್ಥಳೀಯ ಪಾಲುದಾರರಿಲ್ಲದೆ ಹೆಚ್ಚುವರಿ ಹೂಡಿಕೆ ಮಾಡಲು ಜರ್ಮನಿಯ ಪೇರೆಂಟ್ ಕಂಪನಿ ಹಿಂಜರಿಯುತ್ತಿದೆ. ಇದೇ ಕಾರಣಕ್ಕೆ ಭಾರತದಲ್ಲಿ ನೂತನ ಇವಿ (EV) ಪ್ಲಾಟ್‌ಫಾರ್ಮ್‌ಗಾಗಿ ಮೀಸಲಿಡಲಾಗಿದ್ದ 1 ಬಿಲಿಯನ್ ಡಾಲರ್ ಹೂಡಿಕೆಯನ್ನು 700 ಮಿಲಿಯನ್ ಡಾಲರ್‌ಗೆ ಕಡಿತಗೊಳಿಸಿದೆ.
ಸಜ್ಜನ್ ಜಿಂದಾಲ್ ನೇತೃತ್ವದ 'ಜೆಎಸ್‌ಡಬ್ಲ್ಯೂ ಗ್ರೂಪ್'ಗೆ ಈ ಒಪ್ಪಂದವು ಜಾಗತಿಕ ಮಟ್ಟದ ಸಹಯೋಗಕ್ಕೆ ದೊಡ್ಡ ತಡಿಪಾಯವಾಗಲಿದೆ. ಕಂಪನಿಯು ಈಗಾಗಲೇ 'ಎಸ್‌ಎಐಸಿ ಮೋಟಾರ್' (SAIC Motor) ಜೊತೆ ಜಂಟಿ ಸಹಭಾಗಿತ್ವ (JV) ಹೊಂದುವ ಮೂಲಕ 'ಎಂಜಿ' (MG) ಬ್ರ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಜೆಎಸ್‌ಡಬ್ಲ್ಯೂ ಬ್ರ್ಯಾಂಡ್ ನಡಿಯಲ್ಲೂ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಫೋಕ್ಸ್‌ವೇಗನ್ ಸಂಸ್ಥೆಯು ಈ ಹಿಂದೆ ಭಾರತದ 'ಮಹೀಂದ್ರಾ ಆಂಡ್ ಮಹೀಂದ್ರಾ' ಜೊತೆಯೂ ಪಾಲುದಾರಿಕೆಗಾಗಿ ಮಾತುಕತೆ ನಡೆಸಿತ್ತು. ಆದರೆ ಅಭಿವೃದ್ಧಿ ವೆಚ್ಚಗಳು ಹಾಗೂ ಇತರ ವ್ಯತ್ಯಾಸಗಳ ಕಾರಣದಿಂದಾಗಿ ಆ ಒಪ್ಪಂದ ಮುರಿದುಬಿದ್ದಿತ್ತು. ಭಾರತೀಯ ಕಾರು ಮಾರುಕಟ್ಟೆಯು ಬೆಲೆಯ ವಿಷಯದಲ್ಲಿ ಅತ್ಯಂತ ಸಂವೇದನಾಶೀಲವಾಗಿದ್ದು (Price Sensitive), ಮಾರುತಿ, ಹ್ಯುಂಡೈ, ಮಹೀಂದ್ರಾ ಮತ್ತು ಟಾಟಾದಂತಹ ದೇಶೀಯ ಬ್ರ್ಯಾಂಡ್‌ಗಳ ಎದುರು ಯುರೋಪಿಯನ್ ಕಂಪನಿಗಳು ತೀವ್ರ ಸವಾಲು ಎದುರಿಸುತ್ತಿವೆ. ಪ್ರಸ್ತುತ ಎರಡೂ ಕಂಪನಿಗಳು ಈ ಎಲ್ಲಾ ತೊಡಕುಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದು, ಈ ಒಪ್ಪಂದ ಪೂರ್ಣಗೊಂಡರೆ ಭಾರತೀಯ ಆಟೋ ರಂಗದಲ್ಲಿ ಭಾರಿ ಕ್ರಾಂತಿ ಸೃಷ್ಟಿಯಾಗಲಿದೆ.