ಬಿಡುಗಡೆಗೂ ಮುನ್ನವೇ ಕಿಡಿ ಹಚ್ಚಿದ ಟೊಯೋಟಾ: ಹೈಲಕ್ಸ್ ಆಫ್-ರೋಡರ್ SUV ಮೊದಲ ಟೀಸರ್ ಔಟ್

Published : Jul 23, 2026, 10:47 PM IST
toyota hilux teaser

ಸಾರಾಂಶ

ಟೊಯೋಟಾ ಸಂಸ್ಥೆಯು ಜುಲೈ 28 ರಂದು ತನ್ನ ಹೊಸ ಜಮಾನದ 'ಹೈಲಕ್ಸ್' ಪಿಕ್-ಅಪ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನೂತನ ಮಾಡೆಲ್ ಕಟ್ಟುಮಸ್ತಾದ ಮುಂಭಾಗದ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ದೊಡ್ಡ ಟಚ್‌ಸ್ಕ್ರೀನ್ ಮತ್ತು 48V ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ.

ನವದೆಹಲಿ (ಜು.23): ಜಪಾನ್ ಮೂಲದ ವಾಹನ ತಯಾರಿಕಾ ದೈತ್ಯ ಸಂಸ್ಥೆ ಟೊಯೋಟಾ (Toyota) ಜುಲೈ 28 ರಂದು ಭಾರತೀಯ ಮಾರುಕಟ್ಟೆಗೆ ತನ್ನ ಜನಪ್ರಿಯ ಹೊಸ ಜಮಾನದ 'ಹೈಲಕ್ಸ್' (Hilux) ಲೈಫ್‌ಸ್ಟೈಲ್ ಪಿಕ್-ಅಪ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಾರಿನ ನೂತನ ಮಾಡೆಲ್‌ನಲ್ಲಿ ಅತ್ಯಾಧುನಿಕ ಫ್ರಂಟ್ ಡಿಸೈನ್, ಪ್ರೀಮಿಯಂ ಕ್ಯಾಬಿನ್‌, ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಸೇರಿದಂತೆ ಹಲವು ಹೈಟೆಕ್ ಫೀಚರ್‌ಗಳನ್ನು ನೀಡುವ ನಿರೀಕ್ಷೆಯಿದೆ. ಈ ನೂತನ ಹೈಲಕ್ಸ್ ಕಾರಿನ ಬಿಡುಗಡೆಯ ಬೆನ್ನಲ್ಲೇ ಟೊಯೋಟಾ ಸಂಸ್ಥೆಯು ಹೊಸ ಆವೃತ್ತಿಯ ಫಾರ್ಚೂನರ್ (Fortuner) ಹಾಗೂ ಲ್ಯಾಂಡ್ ಕ್ರೂಸರ್ (Land Cruiser) ಮಾಡೆಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ.

ತನ್ನ ಜನಪ್ರಿಯ ಲೈಫ್‌ಸ್ಟೈಲ್ ಪಿಕ್-ಅಪ್ ಕಾರಿನ ನೂತನ ಲುಕ್ ಅನ್ನು ಪರಿಚಯಿಸುವ ಮುನ್ನ ಟೊಯೋಟಾ ಅಧಿಕೃತವಾಗಿ ಹೊಸ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. ಈ ಟೀಸರ್‌ನಲ್ಲಿ ಕಾರಿನ ಶಕ್ತಿಶಾಲಿ ಆಫ್-ರೋಡಿಂಗ್ ಕ್ಷಮತೆ ಹಾಗೂ ಅಪ್‌ಡೇಟೆಡ್ ಎಕ್ಸ್‌ಟೀರಿಯರ್ (ಹೊರ ವಿನ್ಯಾಸ) ಝಲಕ್ ಕಾಣಿಸಿಕೊಂಡಿದೆ. ಈ ಬಾರಿ ಹೈಲಕ್ಸ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಕಟ್ಟುಮಸ್ತಾದ ವಿನ್ಯಾಸ ಹಾಗೂ ಮಾಡರ್ನ್ ಫೀಚರ್‌ಗಳೊಂದಿಗೆ ಪರಿಚಯಿಸಲಾಗುತ್ತಿದೆ.

ಹೈಲಕ್ಸ್ ಫ್ರಂಟ್ ಲುಕ್‌ನಲ್ಲಿ ಬೃಹತ್ ಬದಲಾವಣೆ

ಬಿಡುಗಡೆಯಾಗಿರುವ ಟೀಸರ್‌ನಿಂದ ನೂತನ ಹೈಲಕ್ಸ್ ಕಾರಿನ ಮುಂಭಾಗದ ವಿನ್ಯಾಸದಲ್ಲಿ ಬೃಹತ್ ಬದಲಾವಣೆ ಮಾಡಿರುವುದು ಸ್ಪಷ್ಟವಾಗಿದೆ. ಇದರಲ್ಲಿ ನೂತನ ಹನಿಕಾಂಬ್‌ ಶೈಲಿಯ ಗ್ರಿಲ್ ಹಾಗೂ ಅತ್ಯಾಕರ್ಷಕ ತೆಳುವಾದ ಎಲ್ಇಡಿ (LED) ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದ್ದು, ಇದರಿಂದ ಕಾರಿನ ಲುಕ್ ಮತ್ತಷ್ಟು ಬೋಲ್ಡ್ ಹಾಗೂ ಪ್ರೀಮಿಯಂ ಆಗಿ ಗೋಚರಿಸುತ್ತದೆ. ಕಾರಿನ ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ, ಹೊಸ ವಿನ್ಯಾಸದ ಅಲಾಯ್ ವೀಲ್‌ಗಳು ಕಾರಿನ ಒಟ್ಟಾರೆ ಶೈಲಿಯನ್ನು ಇನ್ನಷ್ಟು ಮೆರುಗುಗೊಳಿಸಲಿವೆ.

ಐಷಾರಾಮಿ ಹಾಗೂ ಹೈಟೆಕ್ ಇಂಟೀರಿಯರ್

ಸಂಸ್ಥೆಯು ಕಾರಿನ ಒಳಗಿನ ಇಂಟೀರಿಯರ್ ಫೋಟೋಗಳನ್ನು ಇನ್ನೂ ಅಧಿಕೃತವಾಗಿ ಹಂಚಿಕೊಂಡಿಲ್ಲವಾದರೂ, ವರದಿಗಳ ಪ್ರಕಾರ ಕ್ಯಾಬಿನ್‌ಗೆ ಸಂಪೂರ್ಣ ಹೊಸ ರೂಪ ನೀಡಲಾಗಿದೆ. ಇದರಲ್ಲಿ ಹೊಸ ಡ್ಯಾಶ್‌ಬೋರ್ಡ್ ಲೇಔಟ್, ಅಪ್‌ಡೇಟೆಡ್ ಸ್ಟೀರಿಂಗ್ ವೀಲ್ ಹಾಗೂ ತಾಜಾ ಇಂಟೀರಿಯರ್ ಥೀಮ್ ಕಾಣಸಿಗಲಿದೆ. ಫೀಚರ್‌ಗಳ ಪಟ್ಟಿಯಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 9-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇನಂತಹ ಆಧುನಿಕ ತಂತ್ರಜ್ಞಾನಗಳು ಇರಲಿವೆ.

ಶಕ್ತಿಯುತ ಇಂಜಿನ್ ಸಾಮರ್ಥ್ಯ

ಇಂಜಿನ್ ವಿಷಯಕ್ಕೆ ಬಂದರೆ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ನೂತನ ಹೈಲಕ್ಸ್ ಕಾರಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ 2.8 ಲೀಟರ್ ಡೀಸೆಲ್ ಇಂಜಿನ್ ಮುಂದುವರಿಯಲಿದೆ. ಇದು ಸರಿಸುಮಾರು 201 bhp ಪವರ್ ಹಾಗೂ 500 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 6-ಸ್ಪೀಡ್ ಮ್ಯಾನುಯಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಸಿಗಲಿವೆ. ಇದಲ್ಲದೆ, ಮೈಲೇಜ್ ಹಾಗೂ ಡ್ರೈವಿಂಗ್ ಅನುಭವವನ್ನು ಉತ್ತಮಗೊಳಿಸಲು ಸಂಸ್ಥೆಯು ಇದರಲ್ಲಿ 48V ಮೈಲ್ಡ್-ಹೈಬ್ರಿಡ್ (Mild-Hybrid) ತಂತ್ರಜ್ಞಾನವನ್ನು ಸಹ ಜೋಡಿಸುವ ನಿರೀಕ್ಷೆಯಿದೆ.

ಅಂದಾಜು ಬೆಲೆ ಎಷ್ಟು?

ಬೆಲೆಯ ವಿಚಾರಕ್ಕೆ ಬಂದರೆ, ನೂತನ ಹೈಲಕ್ಸ್ ಕಾರಿನ ಅಂದಾಜು ಆನ್-ರೋಡ್ ಬೆಲೆ ₹36 ಲಕ್ಷದಿಂದ ₹46 ಲಕ್ಷ ರೂಪಾಯಿಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಮಾಡೆಲ್‌ನ ಲಾಂಚ್ ನಂತರ, ಮುಂಬರುವ ವರ್ಷಗಳಲ್ಲಿ ಟೊಯೋಟಾ ಹೊಸ ಪೀಳಿಗೆಯ ಫಾರ್ಚೂನರ್, ಲ್ಯಾಂಡ್ ಕ್ರೂಸರ್ FJ ಮತ್ತು ಲ್ಯಾಂಡ್ ಕ್ರೂಸರ್ ಪ್ರೋ ಮಾದರಿಗಳನ್ನು ಭಾರತಕ್ಕೆ ತರಲು ಯೋಜನೆ ರೂಪಿಸಿದೆ. ಹೀಗಾಗಿ ಆಫ್-ರೋಡಿಂಗ್ ಇಷ್ಟಪಡುವ ಭಾರತೀಯ ಕಾರು ಪ್ರಿಯರಿಗೆ ಮುಂಬರುವ ದಿನಗಳಲ್ಲಿ ಹಲವು ಅತ್ಯುತ್ತಮ ಆಯ್ಕೆಗಳು ಸಿಗಲಿವೆ.

 

 

PREV
Read more Articles on
click me!

Recommended Stories

ಸೇಫ್ಟಿಯಲ್ಲಿ ಹೊಸ Maruti Brezza Facelift ಕ್ರಾಂತಿ, 5 ಸ್ಟಾರ್‌ BNCAP ರೇಟಿಂಗ್‌ನೊಂದಿಗೆ ಆಗಲಿದೆ ಲಾಂಚ್‌
ಭಾರತಕ್ಕೆ ಲಗ್ಗೆ ಇಟ್ಟ ಐಷಾರಾಮಿ ಎಲೆಕ್ಟ್ರಿಫೈಡ್ ಮರ್ಸಿಡಿಸ್, ಕಾರಿನ ದುಡ್ಡಲ್ಲಿ ಬೆಂಗಳೂರಲ್ಲಿ ಸೈಟ್ ತೆಗೆದು ಮನೆ ಕಟ್ಟಬಹುದು!