Ola to launch Electric Cars in India: 2024 ರ ಆರಂಭದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಓಲಾ ಸಿಇಓ ಸಿದ್ಧತೆ ನಡೆಸುತ್ತಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಎಲ್ಲಾ ವಿವಾದಿತ ಕಾರಣಗಳಿಗಾಗಿ ಸುದ್ದಿಯಲ್ಲಿರಬಹುದು. ಆದರೆ ಅದರ ಸಂಸ್ಥಾಪಕ ಭವಿಶ್ ಅಗರ್ವಾಲ್ ಮಾತ್ರ ವಿಚಲಿತರಾಗಿಲ್ಲ. ಓಲಾ ಸ್ಕೂಟರ್‌ಗಳಲ್ಲಿ ಒಂದಾದ S1 ಪ್ರೊ (S1 Pro) ಕಳೆದ ತಿಂಗಳು ಪುಣೆಯಲ್ಲಿ ಬೆಂಕಿಗೆ ಆಹುತಿಯಾಗಿದ್ದು, ದೇಶದಲ್ಲಿ ಇವಿ (EV)ಗಳ ಸುರಕ್ಷತೆಯ ಕುರಿತು ಈಗಾಗಲೇ ತೀವ್ರ ಚರ್ಚೆಯನ್ನು ಹೆಚ್ಚಿಸಿದೆ. ಆದರೆ ಅಗರ್ವಾಲ್ ಮಾತ್ರ ಹಿಂಜರಿಯದೆ 2024 ರ ಆರಂಭದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು (Electric Vehicle) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಓಲಾ ಎಲೆಕ್ಟ್ರಿಕ್ (Ola electric) ಕಾರುಗಳು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳಿಗೂ ಅನ್ವಯಿಸುವಂತೆ ನಿರ್ಮಿಸಲಾಗುವುದು, ಇದು ಸುಧಾರಿತ ಸ್ವಾಯತ್ತ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ. ಜೊತೆಗೆ, ಜನಸಾಮಾನ್ಯರಿಗೆ 10 ಲಕ್ಷ ರೂ. ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಒದಗಿಸುವುದು ತಮ್ಮ ಗುರಿ ಎಂದು ಸಿಇಓ (CEO) ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಟೆಸ್ಲಾದಂತಹ (Tesla) ಕಂಪನಿಗಳಿಂದ ವಿದ್ಯುತ್ ವಾಹನಗಳು ಪರಿಚಯವಾದವು. ಆ ಕಂಪನಿ ತಂತ್ರಜ್ಞಾನ ಆವಿಷ್ಕಾರದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ಆದರೆ, ಆ ತಂತ್ರಜ್ಞಾನಗಳು ಭಾರತಕ್ಕೆ ಸೂಕ್ತವಾದುದಲ್ಲ. ಅದರ ಮಾಡಲ್ 3 ಕೂಡ ಒಂದು ಲಕ್ಸುರಿ ಉತ್ಪನ್ನವಾಗಿದೆ. ನಮ್ಮ ಗುರಿಯೆಂದರೆ, ದೊಡ್ಡ ಪ್ರಮಾಣದ ಜನರಿಗೆ ಎಲೆಕ್ಟ್ರಿಕ್ ವಾಹನ ನಿರ್ಮಿಸುವುದು ತಮ್ಮ ಗುರಿ” ಎಂದು ಅಗರ್ವಾಲ್ ಹೇಳಿದ್ದಾರೆ.
“ನಮ್ಮ ಗುರಿ ಕೇವಲ ಭಾರತವಲ್ಲ. ಬದಲಿಗೆ, ಆದರೆ ಏಷ್ಯಾ, ಆಗ್ನೇಯ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ, ಪೂರ್ವ ಮತ್ತು ಪಶ್ಚಿಮ ಯೂರೋಪ್ ಕೂಡ ಹೌದು. ಈ ದೇಶಗಳಲ್ಲಿ ಜನರು ಖರೀದಿಸುವ ವಾಹನ ಭಿನ್ನವಾಗಿವೆ. ನಮ್ಮ ಗುರಿ ಜಗತ್ತಿನ ಹೆಚ್ಚಿನ ಜನರು ಬಳಸುವ ದ್ವಿಚಕ್ರ ವಾಹನಗಳು, ಸಣ್ಣ ಕಾರುಗಳು, ಮಧ್ಯಮ ಗಾತ್ರದ ಕಾರುಗಳನ್ನು ವಿದ್ಯುತ್ ಚಾಲಿತವನ್ನಾಗಿಸುವುದಾಗಿದೆ. ಟೆಸ್ಲಾ ಪಶ್ಚಿಮಕ್ಕಾದರೆ, ಉಳಿದ ಭಾಗಗಳಿಗೆ ಓಲಾ (Ola) ಬರಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಇನ್ನೂ ಹಲವಾರು ಕಂಪನಿಗಳು ಸ್ವಾಯತ್ತತೆ ಪಡೆಯಲು ಶ್ರಮ ಪಡುತ್ತಿವೆ. ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದಕ್ಕೆ ದೊಡ್ಡ ಅಡ್ಡಿಯಾಗಿದೆ. ಆದರೆ, ಓಲಾದ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ ವೇಳೆ ಎಲ್ಲಾ ತಂತ್ರಜ್ಞಾನ ಲಭ್ಯವಿರುವಂತೆ ನೋಡಿಕೊಳ್ಳುವುದಾಗಿ ಅಗರ್ವಾಲ್ ಭರವಸೆ ನೀಡಿದ್ದಾರೆ. ಇದಕ್ಕಾಗಿ ಅವರು 2023ರ ಅಂತ್ಯ ಅಥವಾ 2024ರ ಆರಂಭದವರೆಗೆ ಗಡುವು ನೀಡಿದ್ದಾರೆ.
ಇದನ್ನೂ ಓದಿ: Electric Hybrid ಹೋಂಡಾ ಸಿಟಿ ಸುಪ್ರೀಂ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ಉತ್ಪಾದನೆ ಆರಂಭ!
ಸ್ವಯಂಚಾಲಿತ ತಂತ್ರಜ್ಞಾನ ಭಾರಿ ವೇಗದಲ್ಲಿ ಬೆಳೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಸ್ತುತವಾಗುತ್ತಿದೆ. ಈಗ ಸ್ವಂತ ಆಟೊನೊಮಸ್ ತಂತ್ರಜ್ಞಾನ ಹೊಂದುವುದು ಅತಿ ಅವಶ್ಯಕವಾಗಿದೆ. ಆದ್ದರಿಂದ ನಾವು ನಮ್ಮ ಕಾರನ್ನು ತಯಾರಿಸಿದರೆ, ಮತ್ತು ಅದನ್ನು ಭಾರತದಿಂದ ಹೊರಗೆ ರಫ್ತು ಮಾಡುವುದಾದರೆ, ನಮ್ಮಲ್ಲಿ ಸ್ವಯಂಚಾಲಿತ ತಂತ್ರಜ್ಞಾನದ ಸಾಮರ್ಥ್ಯಗಳಿರುವುದು ಅತಿ ಅವಶ್ಯಕವಾಗಿದೆ. ಇಲ್ಲದಿದ್ದರೆ ನಾವು ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲು ಸಾಧ್ಯವಿಲ್ಲ ಎಂದು ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಟಾಟಾ ಪ್ರಯಾಣಿಕ ವಾಹನಗಳ ದರ ಏರಿಕೆ: ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಳ
ಓಲಾ ಕಂಪನಿಯಲ್ಲಿ ಕಳೆದ 6-8 ತಿಂಗಳುಗಳಿಂದ ಕಾರಿನ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮುಂದಿನ ಎರಡು ವರ್ಷಗಳಲ್ಲಿ, ನಾವು ಅದನ್ನು ಸಿದ್ಧಪಡಿಸಲಿದ್ದೇವೆ. ಭಾರತಕ್ಕೆ 10 ಲಕ್ಷ ರೂ. ಕಾರುಗಳನ್ನು ಒದಗಿಸಲಾಗುವುದು. ಇಂತಹ ಹಲವು ಕಾರುಗಳು ಚೀನಾದಲ್ಲಿ ಉತ್ತಮ ಸದ್ದು ಮಾಡುತ್ತಿವೆ. ಅಲ್ಲಿನ ಉದಾಹರಣೆಯನ್ನು ಕೂಡ ನಾವು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಿದ್ದೇವೆ ಎಂದರು.