₹6.99 ಲಕ್ಷದ ಎಲೆಕ್ಟ್ರಿಕ್ ಕಾರಿಗೆ ಬರೋಬ್ಬರಿ ₹1.45 ಲಕ್ಷ ಡಿಸ್ಕೌಂಟ್: ನವೆಂಬರ್ ಧಮಾಕಾ ಆಫರ್ ಪ್ರಕಟಿಸಿದ ಟಾಟಾ ಮೋಟಾರ್ಸ್

Published : Nov 07, 2026, 01:10 AM IST
Tata Tiago EV

ಸಾರಾಂಶ

ಟಾಟಾ ಮೋಟಾರ್ಸ್ ನವೆಂಬರ್ 2026 ರ ಹಬ್ಬದ ಋತುವಿನಲ್ಲಿ ಟಿಯಾಗೋ EV ಮೇಲೆ ₹1.45 ಲಕ್ಷದವರೆಗೆ ಭಾರಿ ರಿಯಾಯಿತಿ ಘೋಷಿಸಿದೆ. ಈ ಕಾರು ಅತ್ಯಾಧುನಿಕ ಫೀಚರ್ಸ್, 285 ಕಿ.ಮೀ ವರೆಗಿನ ರೇಂಜ್ ಮತ್ತು BaaS ಯೋಜನೆಯೊಂದಿಗೆ ಲಭ್ಯವಿದೆ.

ದೇಶದ ಮುಂಚೂಣಿ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ನವೆಂಬರ್ 2026 ರ ಹಬ್ಬದ ಋತುವಿನಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್‌ಗಳನ್ನು ಪ್ರಕಟಿಸಿದೆ. ಕಂಪನಿಯ ಜನಪ್ರಿಯ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 'ಟಾಟಾ ಟಿಯಾಗೋ EV' (Tata Tiago EV) ಖರೀದಿಸುವ ಗ್ರಾಹಕರಿಗೆ ಗರಿಷ್ಠ ₹1.45 ಲಕ್ಷದವರೆಗೆ ಉಳಿತಾಯ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದೆ. ಈ ನವೆಂಬರ್ ಆಫರ್‌ಗಳಲ್ಲಿ ಗ್ರೀನ್ ಬೋನಸ್ (Green Bonus), ಇಂಟರ್‌ವೆನ್ಷನ್ ಆಫರ್ (Intervention Offer) ಮತ್ತು ಸ್ಕ್ರ್ಯಾಪೇಜ್ ಬೋನಸ್‌ಗಳನ್ನು (Scrappage Bonus) ಒಳಗೊಂಡಂತೆ ಗ್ರಾಹಕರಿಗೆ ಗರಿಷ್ಠ ರಿಯಾಯಿತಿಗಳನ್ನು ಒದಗಿಸಲಾಗುತ್ತಿದೆ.

ಯಾವ ವೇರಿಯೆಂಟ್‌ಗೆ ಎಷ್ಟು ರಿಯಾಯಿತಿ ಸಿಗಲಿದೆ?

ಟಿಯಾಗೋ EV LR XT ವೇರಿಯೆಂಟ್: ಈ ವೇರಿಯೆಂಟ್ ಮೇಲೆ ₹70,000 ಗ್ರೀನ್ ಬೋನಸ್, ₹50,000 ಇಂಟರ್‌ವೆನ್ಷನ್ ಆಫರ್ ಹಾಗೂ ₹25,000 ಸ್ಕ್ರ್ಯಾಪೇಜ್ ಬೋನಸ್ ಸೇರಿದಂತೆ ಒಟ್ಟಾರೆಯಾಗಿ ಬರೋಬ್ಬರಿ ₹1.45 ಲಕ್ಷದವರೆಗೆ ಭಾರಿ ರಿಯಾಯಿತಿ ಪಡೆದುಕೊಳ್ಳಬಹುದು.

ಲಾಂಗ್ ರೇಂಜ್ (LR) XZ+ ವೇರಿಯೆಂಟ್: ಈ ರೂಪಾಂತರದ ಮೇಲೆ ₹1 ಲಕ್ಷ ಗ್ರೀನ್ ಬೋನಸ್ ಸೇರಿದಂತೆ ಒಟ್ಟು ₹1.25 ಲಕ್ಷದವರೆಗೆ ಆಕರ್ಷಕ ಉಳಿತಾಯ ಮಾಡಬಹುದಾಗಿದೆ.

ಮೀಡಿಯಂ ರೇಂಜ್ (MR) ವೇರಿಯೆಂಟ್‌ಗಳು: ಟಿಯಾಗೋ EV ಯ ಮೀಡಿಯಂ ರೇಂಜ್‌ನ ಎಲ್ಲಾ ರೂಪಾಂತರಗಳ ಮೇಲೆ ಗರಿಷ್ಠ ₹65,000 ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ.

ಅತ್ಯಾಧುನಿಕ ಫೀಚರ್ಸ್‌ ಮತ್ತು ಸುರಕ್ಷತೆ (Features & Safety)

ಟಾಟಾ ಟಿಯಾಗೋ EV ಒಳಾಂಗಣದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದ್ದು, ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ (Apple CarPlay) ಮತ್ತು ಆಂಡ್ರಾಯ್ಡ್ ಆಟೋ (Android Auto) ಗೆ ಬೆಂಬಲ ನೀಡುತ್ತದೆ. ಇದರೊಂದಿಗೆ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಹಾಗೂ ರೀಜನರೇಟಿವ್ ಬ್ರೇಕಿಂಗ್ ಮೋಡ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳಿವೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ (Standard) ಆಗಿ ನೀಡಲಾಗಿದೆ. ಇದರ ಜೊತೆಗೆ ABS ನೊಂದಿಗೆ EBD, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ರಿಯರ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ಡ್ರೈವಿಂಗ್ ರೇಂಜ್

ಟಾಟಾ ಟಿಯಾಗೋ EV ಯಲ್ಲಿ 19.2 kWh ಮತ್ತು 24 kWh ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಲಭ್ಯವಿವೆ.

19.2 kWh ಬ್ಯಾಟರಿ: ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 226 ಕಿಲೋಮೀಟರ್ ರೇಂಜ್ ನೀಡುತ್ತದೆ.

24 kWh ಬ್ಯಾಟರಿ: ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 285 ಕಿಲೋಮೀಟರ್ ಚಾಲನಾ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ.

ಫಾಸ್ಟ್ ಚಾರ್ಜರ್ (Fast Charger) ಸಹಾಯದಿಂದ ಈ ಕಾರಿನ ಬ್ಯಾಟರಿಯನ್ನು ಕೇವಲ 35 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು.

ಬೆಲೆ ಮತ್ತು BaaS ಯೋಜನೆ ಆಯ್ಕೆ

ಟಾಟಾ ಟಿಯಾಗೋ EV ಯ ಪ್ರಾರಂಭಿಕ ಎಕ್ಸ್-ಶೋರೂಮ್ ಬೆಲೆ ₹6.99 ಲಕ್ಷ ಇರಲಿದ್ದು, ಟಾಪ್ ವೇರಿಯೆಂಟ್ ಬೆಲೆ ₹10.09 ಲಕ್ಷದವರೆಗೆ ತಲುಪುತ್ತದೆ. ಕಂಪನಿಯು ಇದರಲ್ಲಿ ಬ್ಯಾಟರಿ-ಆಸ್-ಎ-ಸರ್ವೀಸ್ (BaaS - Battery-as-a-Service) ಆಯ್ಕೆಯನ್ನು ಸಹ ಒದಗಿಸಿದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಾರಿನ ಆರಂಭಿಕ ಬೆಲೆಯನ್ನು ₹4.69 ಲಕ್ಷಕ್ಕೆ ಇಳಿಸಿಕೊಳ್ಳಬಹುದು. ಆದರೆ ಈ ಪದ್ಧತಿಯಲ್ಲಿ ಬ್ಯಾಟರಿ ಬಳಕೆಗಾಗಿ ಪ್ರತ್ಯೇಕ ಬಾಡಿಗೆ/ಶುಲ್ಕ ಅನ್ವಯವಾಗುತ್ತದೆ.

(ಗಮನಿಸಿ: ಉಪಲಬ್ದವಿರುವ ಡಿಸ್ಕೌಂಟ್ ಮತ್ತು ಆಫರ್‌ಗಳ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಪ್ರದೇಶ ಹಾಗೂ ಶೋರೂಮ್‌/ಡೀಲರ್‌ಶಿಪ್‌ಗೆ ಅನುಗುಣವಾಗಿ ಆಫರ್‌ಗಳಲ್ಲಿ ವ್ಯತ್ಯಾಸಗಳಿರಬಹುದು).

PREV
Read more Articles on
click me!

Recommended Stories

ಬೆಂಗಳೂರಲ್ಲಿ ಶೀಘ್ರವೇ ಗ್ರೀನ್ ಎಸ್‌ಎಂ ಸೇವೆ, ಕೆಂಗೇರಿ ಬಳಿ ಸದ್ದಿಲ್ಲದೆ ಸಾಲುಕಟ್ಟಿ ನಿಂತ ಕಾರು, ಕ್ಯಾಬ್ ಚಾಲಕರಲ್ಲಿ ಆತಂಕ!
ದೀಪಾವಳಿ ಆಫರ್, ಮಾರುತಿ ಸುಜುಕಿ ಆಯ್ದ ಕಾರುಗಳಿಗೆ 1.50 ಲಕ್ಷ ರೂಪಾಯಿ ಡಿಸ್ಕೌಂಟ್