
ನವದೆಹಲಿ (ಸೆ.25) ಟಾಟಾ ಕಾರುಗಳು ಭಾರತದಲ್ಲಿ ಭಾರಿ ಬೇಡಿಕೆ ಕಾರುಗಳಾಗಿ ಹೊರಹೊಮ್ಮಿದೆ. ಸುರಕ್ಷತೆ, ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್, ಕೈಗೆಟುಕುವ ಬೆಲೆ ಸೇರಿದಂತೆ ಹಲವು ಕಾರಣಗಳಿಂದ ಟಾಟಾ ಕಾರುಗಳ ಮಾರಾಟ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೀಗ ಟಾಟಾ ಏರಿಸ್ ಕಾರು ಬಿಡುಗಡೆಯಾಗಿದೆ. ಟಾಟಾ ಟಿಗೋರ್ ಕಾರಿಗೆ ಗುಡ್ ಬೈ ಹೇಳಿ ಹೊಸ ಅವತಾರದಲ್ಲಿ ಟಾಟಾ ಏರಿಸ್ ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಟಾಟಾ ಏರಿಸ್ ಕಾರಿನ ಆರಂಭಿಕ ಬೆಲೆ ಕೇವಲ 5.29 ಲಕ್ಷ ರೂಪಾಯಿ ಮಾತ್ರ. ಈ ಮೂಲಕ ಮಾರುತಿ ಸ್ವಿಫ್ಟ್ ಡಿಸೈರ್, ಹ್ಯುಂಡೈ ಔರಾ ಸೇರಿದಂತೆ ಈ ಸೆಗ್ಮೆಂಟ್‌ನ ಹಲವು ಕಾರುಗಳಲ್ಲಿ ನಡುಕ ಸೃಷ್ಟಿಸಿದೆ.
ಹೊಸ ಟಾಟಾ ಏರಿಸ್ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಿದೆ. ಟಾಟಾ ಏರಿಸ್ ಕಾರಿನ ಆರಂಭಿಕ ಬೆಲೆ 5.29 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಹಾಗೂ ಟಾಪ್ ಮಾಡೆಲ್ ಬೆಲೆ 9.19 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಟಿಗೋರ್ ಕಾರಿಗೆ ಟಾಟಾ ಗುಡ್ ಬೈ ಹೇಳಿ ಇದೀಗ ಏರಿಸ್ ರೂಪದಲ್ಲಿ ಕಾರು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಆದರೆ ಟಾಟಾ ಟಿಗೋರ್ ಕಾರಿಗಿಂತ 40 ಸಾವಿರ ರೂಪಾಯಿ ಕಡಿಮೆ ಬೆಲೆಯಲ್ಲಿ ಏರಿಸ್ ಕಾರು ಲಭ್ಯವಿದೆ.
ಹೊಸ ಟಾಟಾ ಏರಿಸ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಮುಂಭಾಗದಲ್ಲಿ ಸ್ಲೀಕ್ ಡಿಸೈನ್ ಬಳಸಲಾಗಿದೆ. ಹೊಸ ಟಿಯಾಗೋ ಕಾರಿನಿಂದ ಪ್ರೇರಿತಗೊಂಡ ವಿನ್ಯಾಸ ಇದರಲ್ಲಿದೆ. ಸೈಡ್ ವೀವ್ ನೋಡಿದರೆ ಸ್ಮೂಥರ್ ಕರ್ವ್ ನೇರವಾಗಿ ರೇರ್ ಎಂಡ್ ಬಳಿ ರೂಫ್ ಲೈನ್ ಜೊತೆ ಮರ್ಜ್ ಆಗುತ್ತಿದೆ. ಇದರಿಂದ ಸೈಡ್ ಆಕರ್ಷಕಣೆ ಕೂಡ ಹೆಚ್ಚಾಗಿದೆ. ರೇರ್ ಡಿಸೈನ್ ಸಂಪೂರ್ಣ ಹೊಸದು. ಟೇಲ್ ಲೈಟ್ ಹಾಗೂ ರೇರ್ ಎಂಡ್ ವಿನ್ಯಾಸ ಬದಲಿಸಲಾಗಿದೆ. ಕನೆಕ್ಟೆಡ್ ಸ್ಟ್ರಿಪ್, ಲೋಗೋ ಕಾರಿನ ರೇರ್ ವೀವ್ಯೂ ಅಂದ ಹೆಚ್ಚಿಸಿದೆ.
ಟಾಟಾ ಏರಿಸ್ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.2 ಲೀಚರ್ ಪೆಟ್ರೋಲ್ ಎಂಜಿನ್ ಕಾರು 86 hp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. i-CNG ಪವರ್‌ಟ್ರೇನ್ ಜೊತೆಗೆ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ. ಸಿಎನ್‌ಜಿ ವೇರಿಯೆಂಟ್ ಕಾರು 70 ಲೀಟರ್ ಸಾಮರ್ಥ್ಯ ಹೊಂದಿದ್ದು, ಟ್ವಿನ್ ಸಿಲಿಂಡರ್ ಡಿಸೈನ್ ಮೂಲಕ 419 ಲೀಟರ್ ಬೂಟ್ ಸ್ಪೇಸ್ ನೀಡುತ್ತಿದೆ.
ಕಾರು ಆ್ಯಂಡ್ರಾಯ್ಡ್ ಆಟೋ ಹಾಗೂ ಆ್ಯಪಲ್ ಕಾರ್‌ಪ್ಲೇ ಸಪೋರ್ಟ್ ಮಾಡಲಿದೆ. ವೆಂಟಿಲೇಟೆಡ್ ಸೀಟು, ಡ್ಯುಯೆಲ್ ವೈಯರ್‌ಲೆಸ್ ಫೋನ್ ಚಾರ್ಜರ್ ಹೊಂದಿದೆ. ಟಾಟಾ ಕಾರುಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಏರಿಸ್ ಕಾರು 6 ಏರ್‌ಬ್ಯಾಗ್ ಹೊಂದಿದೆ. ಇನ್ನು ಹೈ ಬೀಮ್ ಅಲರ್ಟ್, ಇಎಸ್‌ಪಿ, ಟಿಪಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, ಬ್ಲೈಂಡ್ ವೀವ್ ಮಾನಿಟರಿಂಗ್, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಡ್ಯಾಶ್‌ಕ್ಯಾಮ್ ರೆಕಾರ್ಡರ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ ನೀಡಲಾಗಿದೆ.