
ಬೆಂಗಳೂರು (ಆ.21): ನೀವೇನಾದರೂ ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ, ಹಬ್ಬದ ಆಫರ್‌ಗಳಿಗಾಗಿ ಕಾಯದೆ ತಕ್ಷಣವೇ ಕಾರು ಬುಕ್ ಮಾಡುವುದು ಜಾಣತನ. ಏಕೆಂದರೆ, ಭಾರತದ ಪ್ರಮುಖ ಆಟೋಮೊಬೈಲ್ ದೈತ್ಯ ಸಂಸ್ಥೆಯಾದ 'ಟಾಟಾ ಮೋಟಾರ್ಸ್' (Tata Motors) ತನ್ನ ಎಲ್ಲಾ ಶೋರೂಮ್ ಮಾದರಿಗಳ ಕಾರು ಮತ್ತು ಎಸ್‌ಯುವಿಗಳ (SUV) ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 1ರಿಂದಲೇ ಈ ನೂತನ ದರ ಏರಿಕೆ ಜಾರಿಗೆ ಬರಲಿದೆ. ಸಾಫ್ಟ್‌ವೇರ್ ಮತ್ತು ಕಚ್ಚಾ ವಸ್ತುಗಳ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಇರುವ ದರದಲ್ಲೇ ಕಾರು ಖರೀದಿಸಲು ಗ್ರಾಹಕರಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.
ವರದಿಗಳ ಪ್ರಕಾರ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ತನ್ನ ಕಾರುಗಳ ಸಂಪೂರ್ಣ ಪೋರ್ಟ್‌ಫೋಲಿಯೋ ಮೇಲೆ ದರ ಏರಿಕೆಯನ್ನು ಪ್ರಕಟಿಸಿದೆ. 2026ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಟಾಟಾ ಕಾರುಗಳು ಮಾದರಿಗಳಿಗೆ ಅನುಗುಣವಾಗಿ ಗರಿಷ್ಠ ₹25,000 ವರೆಗೆ ದುಬಾರಿಯಾಗಲಿವೆ. ಈ ದರ ಏರಿಕೆಯು ಇಂಧನ ಆಧಾರಿತ (ಪೆಟ್ರೋಲ್ ಮತ್ತು ಡೀಸೆಲ್) ಹಾಗೂ ಎಲೆಕ್ಟ್ರಿಕ್ (EV) ಎರಡೂ ವಿಭಾಗದ ವಾಹನಗಳಿಗೂ ಅನ್ವಯಿಸಲಿದೆ.
ಉತ್ಪಾದನಾ ವೆಚ್ಚ (Production Cost) ಮತ್ತು ಹಣದುಬ್ಬರದ (Inflation) ಹೊರೆ ಹೆಚ್ಚಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ, ವೆಚ್ಚದ ಸಿಂಹಪಾಲು ಹೊಣೆಯನ್ನು ಕಂಪನಿಯೇ ಭರಿಸುತ್ತಿದ್ದು, ಕೇವಲ ಸಣ್ಣ ಪ್ರಮಾಣದ ಹೊರೆಯನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದಿದೆ.
2026ರ ಪ್ರಸಕ್ತ ಸಾಲಿನಲ್ಲಿ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಏಪ್ರಿಲ್ 1 ರಂದು ಪೆಟ್ರೋಲ್-ಡೀಸೆಲ್ (ICE) ವಾಹನಗಳ ದರ ಸರಾಸರಿ ಶೇ. 0.5 ರಷ್ಟು ಏರಿಕೆಯಾಗಿತ್ತು. ಆ ಬಳಿಕ ಜುಲೈ 1 ರಂದು ಐಸಿಇ ಮತ್ತು ಇವಿ (EV) ಎರಡೂ ಪೋರ್ಟ್‌ಫೋಲಿಯೋ ಬೆಲೆ ಶೇ. 1.5 ರಷ್ಟು ಹೆಚ್ಚಳವಾಗಿತ್ತು. ಈಗ ಸೆಪ್ಟೆಂಬರ್ 1 ರಿಂದ ₹25,000 ವರೆಗೆ ನೇರ ದರ ಏರಿಕೆಯಾಗುತ್ತಿದೆ.
ಕೇವಲ ಟಾಟಾ ಮೋಟಾರ್ಸ್ ಮಾತ್ರವಲ್ಲದೆ, ಇಡೀ ಆಟೋಮೊಬೈಲ್ ಕ್ಷೇತ್ರವೇ ಕಾರುಗಳ ಬೆಲೆ ಏರಿಕೆಗೆ ಮುಂದಾಗಿದೆ. ಮಾರುತಿ ಸುಜುಕಿ ಕಂಪನಿಯು ಆಗಸ್ಟ್‌ನಿಂದ ₹30,000 ವರೆಗೆ ಬೆಲೆ ಹೆಚ್ಚಿಸುವುದಾಗಿ ತಿಳಿಸಿದ್ದರೆ, ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ಸೆಪ್ಟೆಂಬರ್ 1ರಿಂದ ದರ ಹೆಚ್ಚಿಸುವ ಸುಳಿವು ನೀಡಿದೆ. ಉತ್ಪಾದನಾ ವೆಚ್ಚ ಹೆಚ್ಚಳದ ಜೊತೆಗೆ, ಇರಾನ್ ಯುದ್ಧ ಹಾಗೂ ಜಾಗತಿಕ ಉದ್ವಿಗ್ನತೆಯಿಂದಾಗಿ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿರುವುದು ಆಟೋ ರಂಗದ ಮೇಲಿನ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಟಾಟಾ ಕಂಪನಿಯ ಪ್ರತಿಯೊಂದು ಪ್ರಮುಖ ಮಾದರಿಯ ಮೇಲೆಯೂ ಈ ದರ ಏರಿಕೆ ಅನ್ವಯವಾಗಲಿದೆ.
ಪೆಟ್ರೋಲ್/ಡೀಸೆಲ್/ಸಿಎನ್‌ಜಿ ಮಾದರಿಗಳು: ಟಿಯಾಗೋ (Tiago), ಆಲ್ಟ್ರೋಜ್ (Altroz), ಟಿಗೋರ್ (Tigor), ಪಂಚ್ (Punch), ನೆಕ್ಸಾನ್ (Nexon), ಕರ್ವ್ (Curvv), ಸಿಯೆರಾ (Sierra), ಹ್ಯಾರಿಯರ್ (Harrier) ಮತ್ತು ಸಫಾರಿ (Safari).
ಎಲೆಕ್ಟ್ರಿಕ್ (EV) ಮಾದರಿಗಳು: ಟಿಯಾಗೋ ಇವಿ, ಟಿಗೋರ್ ಇವಿ, ಪಂಚ್ ಇವಿ, ನೆಕ್ಸಾನ್ ಇವಿ, ಕರ್ವ್ ಇವಿ, ಸಿಯೆರಾ ಇವಿ ಮತ್ತು ಹ್ಯಾರಿಯರ್ ಇವಿ.
ಯಾವ ವೇರಿಯೆಂಟ್‌ಗೆ ಎಷ್ಟು ದರ ಹೆಚ್ಚಾಗಲಿದೆ ಎಂಬ ಪಟ್ಟಿಯನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಆದರೆ, ಸೆಪ್ಟೆಂಬರ್ 1ರ ಒಳಗೆ ಬುಕಿಂಗ್ ಮಾಡುವ ಗ್ರಾಹಕರಿಗೆ ಡೀಲರ್‌ಶಿಪ್ ನಿಯಮಾವಳಿಗಳಿಗೆ ಒಳಪಟ್ಟು ಹಳೆಯ ದರದಲ್ಲೇ ಕಾರು ಸಿಗುವ ಅವಕಾಶವಿದೆ.