
ನವದೆಹಲಿ (ಆ.08) ಎಲೆಕ್ಟ್ರಿಕ್ ಕಾರುಗಳ ಪೈಕಿ ಅಮೆರಿದ ಟೆಸ್ಲಾ, ಚೀನಾದ ಬಿವೈಡಿ ಸೇರಿದಂತೆ ಕೆಲ ಪ್ರಮುಖ ಕಂಪನಿಗಳ ಕಾರುಗಳು ಜಾಗತಿಕವಾಗಿ ಭಾರಿ ಸದ್ದು ಮಾಡಿದೆ. ಆದರೆ ಅಂತಾರಾಷ್ಟ್ರೀಯ ಕೌನ್ಸಿಲ್ ಆಫ್ ಕ್ಲೀನ್ ಟ್ರಾನ್ಸ್‌ಪೋರ್ಟೇಶನ್ (ICCT) ಬಿಡುಗಡೆ ಮಾಡಿದ ವರದಿ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಟೆಸ್ಲಾ, ಬಿವೈಡಿ, ಮಜ್ದಾ ಸೇರಿದಂತೆ ಪ್ರತಿಷ್ಠಿತ ಇವಿ ಕಂಪನಿಗಳಿಗೆ ಭಾರತದ ಟಾಟಾ ಹಾಗೂ ಮಹೀಂದ್ರ ಶಾಕ್ ನೀಡಿದೆ. ವಿಶ್ವದಲ್ಲಿರುವ ಪ್ರಮುಖ ಎಲೆಕ್ಟ್ರಿಕ್ ಕಾರುಗಳ ಪೈಕಿ ಭಾರತದ ಟಾಟಾ ಹಾಗೂ ಮಹೀಂದ್ರ ಕಾರುಗಳು ಅತ್ಯುತ್ತಮ ಇಂಧನ ದಕ್ಷತೆ (ಎನರ್ಜಿ ಎಫಿಶಿಯೆಂಟ್) ಹಾಗೂ ಕಾರ್ಯಕ್ಷಮತೆ ಹೊಂದಿದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವದ ಯಾವುದೇ ಪ್ರತಿಷ್ಠಿತ ಕಾರುಗಳಿಗೆ ಹೋಲಿಸಿದರೆ ಅತೀ ಕಡಿಮೆ ಎನರ್ಜಿಯಲ್ಲಿ ಅತೀ ಹೆಚ್ಚು ದೂರ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಕಾರುಗಳಲ್ಲಿ ಟಾಟಾ ಹಾಗೂ ಮಹೀಂದ್ರ ಮೊದಲೆರೆಡು ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಭಾರತದ ತಂತ್ರಜ್ಞಾನ, ಭಾರತದ ಎಂಜಿನೀಯರಿಂಗ್ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ.
ಟೆಸ್ಲಾ, ಬಿವೈಡಿ, BMW ಸೇರಿದಂತೆ ಹಲವು ಕಾರುಗಳ ಕಂಪನಿಗಳ ಎಲೆಕ್ಟಿಕ್ ಕಾರುಗಳ ಗರಿಷ್ಠ ಸಾಮರ್ಥ್ಯದ ಬ್ಯಾಟರಿ ಬಳಸುತ್ತಿದೆ. ಈ ಮೂಲಕ ಫುಲ್ ಚಾರ್ಜ್ ಮಾಡಲು ಹೆಚ್ಚಿನ ವಿದ್ಯುತ್ ಅವಶ್ಯಕತೆ ಇದೆ. ಆದರೆ ಭಾರತದ ಟಾಟಾ ಹಾಗೂ ಮಹೀಂದ್ರ ಅತೀ ಕಡಿಮೆ ಸಾಮರ್ಥ್ಯದ ಬ್ಯಾಟರಿ ಮೂಲಕ ದಕ್ಷತೆಯಿಂದ, ಅತೀ ಹೆಚ್ಚು ದೂರ ಕ್ರಮಿಸುವ ವಾಹನಗಳನ್ನು ನಿರ್ಮಿಸುತ್ತಿದೆ ಎಂದು ICCT ವರದಿ ಹೇಳಿದೆ. ದ್ವಿಚತ್ರ, ತ್ರಿಚಕ್ರ, ಸಣ್ಣ ಗಾತ್ರದ ಕಾರುಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲೇ ಉತ್ತಮ ಎಂದು ICCT ವರದಿ ಹೇಳಿದೆ.
ಟೆಸ್ಲಾ, ಬಿವೈಡಿ, ಟೋಯೋಟಾ, ಹೋಂಡಾ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಬೃಹತ್ ಇಂಧನ ಸಾಮರ್ಥ್ಯದ ಬ್ಯಾಟರಿ ಬಳಸುತ್ತಿದೆ. ಆದರೆ ಟಾಟಾ ಹಾಗೂ ಮಹೀಂದ್ರ ಹಗುರವಾದ, ಕಡಿಮೆ ವೆಚ್ಚದ ಬ್ಯಾಟರಿ ಬಳಸಿ ಗರಿಷ್ಠ ಮೈಲೇಜ್ ನೀಡಬಲ್ಲ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗಿದೆ ಎಂದು ವರದಿ ಹೇಳಿದೆ. ಜಾಗತಿಕ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ಭಾರತದ ಎಲೆಕ್ಟಿಕ್ ವಾಹನ ಬಳಸುವ ವಿದ್ಯುತ್ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಟೆಸ್ಲಾ, ಬಿವೈಡಿ ಸೇರಿದಂತೆ ಇತರ ಜಾಗತಿಕ ಪ್ರಮುಖ ಎಲೆಕ್ಟ್ರಿಕ್ ಕಾರುಗಳು ದುಬಾರಿ ಬೆಲೆ ಹೊಂದಿದೆ. ಆದರೆ ಟಾಟಾ ಹಾಗೂ ಮಹೀಂದ್ರ ಕಾರುಗಳು ಅತೀ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪರ್ಫಾಮೆನ್ಸ್, ಗರಿಷ್ಠ ಮೈಲೇಜ್, ಅತ್ಯಾಕರ್ಷಕ ವಿನ್ಯಾಸಗಳನ್ನು ಹೊಂದಿದೆ. ಈ ಮೂಲಕ ಟಾಟಾ ಮಹೀಂದ್ರ ಇವಿ ಕಾರುಗಳ ಕುರಿತು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ವಿದೇಶಗಳಿಂದಲೂ ಬೇಡಿಕೆ ಬರುತ್ತಿದೆ.