ಟಾಟಾ ಕಂಪನಿಯ ಮುಂದಿನ ಸ್ಟಾರ್‌ ಟಾಟಾ ಪಂಚ್‌!

By Kannadaprabha NewsFirst Published Oct 12, 2021, 9:58 AM IST
Highlights

ಸೋತು ಗೆಲ್ಲುವ ಕತೆಗಳು ಎಲ್ಲರಿಗೂ ಇಷ್ಟ. ಹೀರೋ ನಾಲ್ಕು ಪೆಟ್ಟು ತಿಂದು ಬಿದ್ದು ಎದ್ದು ವಿಲನ್‌ಗೆ ಹೊಡೆದರೇನೇ ಮರ್ಯಾದೆ. ಅದೇ ಥರ ಸಕತ್ತಾಗಿ ಪೆಟ್ಟು ತಿಂದು ಮತ್ತೆ ಮತ್ತೆ ಬಿದ್ದು ಸೋತು ಕುಗ್ಗಿ ಹೋಗಿದ್ದ ಟಾಟಾ ಮೋಟಾರ್ಸ್‌ ಕಂಪನಿ ಫೀನಿಕ್ಸ್‌ನಂತೆ ಎದ್ದು ಬಂದು ಒಬ್ಬೊಬ್ಬರನ್ನೇ ಹೊಡೆದು ಸೈಡಿಗೆ ಹಾಕುತ್ತಿದೆ. ಕಣ್ಮುಂದೆ ಟಾಟಾ ಕಾರುಗಳ ಓಡಾಟ ಜಾಸ್ತಿಯಾಗುತ್ತಲೇ ಇದೆ. ಅದಕ್ಕೆ ಮತ್ತೊಂದು ಸೇರ್ಪಡೆ ಟಾಟಾ ಪಂಚ್‌.

1.2 ಲೀ ರಿವೋಟ್ರಾನ್‌ ಇಂಜಿನ್‌ ಹೊಂದಿರುವ ಈ ಎಸ್‌ಯುವಿ ಟಾಟಾದ ಕಾರುಗಳಲ್ಲೇ ಅತಿ ಸಣ್ಣದು. ಸಣ್ಣದು ಅಂತ ಹಗುರವಾಗಿ ಕಾಣುವ ಹಾಗಿಲ್ಲ. ಆಲ್ಫಾ ಆರ್ಕಿಟೆಕ್ಚರ್‌ ತಂತ್ರಜ್ಞಾನದಲ್ಲಿ ಸಿದ್ಧವಾಗಿರುವ ಈ ಕಾರು ಟಾಟಾ ನೆಕ್ಸಾನ್‌ಗಿಂತ ಸ್ವಲ್ಪ ಎತ್ತರ ಇದೆ. ದೂರದಿಂದ ನೋಡಿದರೆ ಆಕರ್ಷಕ. ಡೋರ್‌ ತೆಗೆದು ಒಳಗೆ ಹೋಗಿ ಡ್ರೈವಿಂಗ್‌ ಸೀಟಲ್ಲಿ ಕುಳಿತರೆ ಆರಾಮದಾಯಕ. ಹಿಂದಿನ ಸೀಟಲ್ಲಿ ಕೂರುವವರಿಗೆ ಬೇಜಾನ್‌ ಜಾಗ ಇದೆ. ಕುಟುಂಬ ಸಮೇತ ಹೊರಟರೆ ಮೂರು ಜನ ಕೂರುವುದು ನಮಗೆ ಸಾಮಾನ್ಯವಾದ್ದರಿಂದ ಐದು ಮಂದಿ ಆರಾಮಾಗಿ ಉಸಿರಾಡುವಷ್ಟುಸ್ಥಳ ಇದೆ. ಊರಿನಿಂದ ಬರುವಾಗ ಬಾಳೆಹಣ್ಣು, ಹಲಸು, ಕುಂಬಳಕಾಯಿ ತುಂಬಿಸಿಕೊಂಡು ಬರುವುದಕ್ಕೆ ಡಿಕ್ಕಿಯಲ್ಲಿ 319 ಲೀ ತುಂಬುವಷ್ಟುಬೂಟ್‌ ಸ್ಪೇಸ್‌ ಇದೆ.

ನೋಡುವುದಕ್ಕೆ ಚೆಂದವಿದೆ, ಕೂರುವುದಕ್ಕೆ ಸಮಾಧಾನಕಾರ ಸ್ಥಳಾವಕಾಶ ಇದೆ, ಇನ್‌ಫೋಟೇನ್‌ಮೆಂಟ್‌ಗೆ ಮಾತಲ್ಲೇ ಆರ್ಡರ್‌ ಕೊಡಬಹುದಾದ ಸೌಲಭ್ಯ ಇದೆ. ಸೇಫ್ಟಿಗೆ ಏರ್‌ಬ್ಯಾಗುಗಳಿವೆ. ಅಂದ ಚೆಂದ ಎಲ್ಲಾ ಓಕೆ, ಗುಣ ಹೇಗೆ ಎಂದು ನೀವು ಕೇಳಬಹುದು. ಆನ್‌ರೋಡಿಗೆ ಆಫ್‌ರೋಡಿಗೆ ಯಾವುದಕ್ಕೆ ಬೇಕಾದರೂ ಸೈ ಈ ಟಾಟಾ ಪಂಚ್‌ ಎಂದಿದ್ದರಿಂದ ಆರಂಭದಲ್ಲಿ ನೀರು ಹರಿಯುವ ಮಣ್ಣು ಕಲ್ಲು ತುಂಬಿತುಳುಕುತ್ತಿರುವ ರಸ್ತೆಯಲ್ಲದ ರಸ್ತೆಯಲ್ಲಿ ಸಾಗಿದೆವು. ಆಗ ಅರ್ಥವಾಗಿದ್ದು ಏನೆಂದರೆ ಈ ಕಾರು ಆಫ್‌ ರೋಡಿಗೆ ಬೆಸ್ಟು. 190 ಮಿಮೀ ಗ್ರೌಂಡ್‌ ಕ್ಲಿಯರೆನ್ಸ್‌ ಇದೆ. ಮಣ್ಣು ರಸ್ತೆಯಲ್ಲಿ ನೆಲ ತಾಗುವುದಿಲ್ಲ. ಒಳ್ಳೆ ಪವರ್‌ ಇದೆ. ಸಣ್ಣ ಮಟ್ಟದ ಮಣ್ಣು ದಿಬ್ಬವನ್ನೂ ದೀರ್ಘ ಉಸಿರಾಟವಿಲ್ಲದೆ ಹತ್ತುತ್ತದೆ.

21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ SUV ಕಾರು!

ಕಡಿಮೆ ಗೇರಲ್ಲಿ ಈ ಕಾರು ಕೊಡುವ ಖುಷಿ ಹೆಚ್ಚು ಗೇರಲ್ಲಿ ಕೊಡಲಿಕ್ಕಿಲ್ಲ. ಅದು ಗೊತ್ತಾಗಿದ್ದು ಎಕ್ಸ್‌ಪ್ರೆಸ್‌ ಹೈವೇಗೆ ಇಳಿದಾಗ. ಹಾಗಂತ ನಿರಾಸೆ ಬೇಡ. ಒಂದೇ ವೇಗದಲ್ಲಿ ಹೋಗುವವರಿಗೆ ಯಾವುದೇ ಕಿರಿಕಿರಿ ಇಲ್ಲ. ಹೆಚ್ಚಿನ ಗೇರಲ್ಲಿ ಸ್ವಲ್ಪ ಪಿಕಪ್‌ ಕಡಿಮೆ ಇದೆ, ಕಡಿಮೆ ಗೇರ್‌ಗೆ ಬಂದು ಪಿಕಪ್‌ ತಗೊಂಡು ಮತ್ತೆ ವೇಗದಲ್ಲಿ ಸಾಗಿದರೆ ಅದರ ಮಜಾನೇ ಬೇರೆ. ಇದೇ ಮಾತನ್ನು ಟಾಟಾ ಪಂಚ್‌ನ ಅಟೋಮ್ಯಾಟಿಕ್‌ ವರ್ಷನ್‌ಗೆ ಹೇಳುವುದು ಸ್ವಲ್ಪ ಕಷ್ಟ.

ಗೇರ್‌ ಬದಲಾಗುವಾಗ ವೇಗ ಕಡಿಮೆಯಾಗುತ್ತವೆ, ಆ್ಯಕ್ಸಿಲೇಟರ್‌ ಬಲವಾಗಿ ಒತ್ತಿದರೂ ಕೊಂಚ ತಡವಾಗಿ ವೇಗ ಪಡೆದುಕೊಳ್ಳುತ್ತದೆ, ನಮಗೆ ಬೇಕಾದಂತೆ ಕೇಳುವ ಗುಣ ಮ್ಯಾನ್ಯುವಲ್‌ ವರ್ಷನ್‌ಗಿಂತ ಕಡಿಮೆ ಇದೆ. ಅದನ್ನು ಹೊರತುಪಡಿಸಿದರೆ ಟಾಟಾ ಪಂಚ್‌ನ ಅಟೋಮ್ಯಾಟಿಕ್‌ ವರ್ಷನ್‌ ಹಲವು ವಿಶೇಷ ಫೀಚರ್‌ ಹೊಂದಿದೆ. ಐಸ್‌ ಇರುವ ರಸ್ತೆಯಲ್ಲಿ ಸಾಗುವಾಗ ಕಾರು ಮುಂದೆ ಸಾಗದೆ ಚಕ್ರ ಗಿರಗಿರನೆ ತಿರುಗುತ್ತಿದ್ದರೆ ಸುಲಭವಾಗಿ ಮುಂದೆ ಸಾಗಲು ಟ್ರಾಕ್ಷನ್‌ ಪ್ರೋ ಫೀಚರ್‌ ಇದೆ.

Air India Sale| ಏರ್‌ ಇಂಡಿಯಾ ಗೆದ್ದ ಟಾಟಾಗೆ ಹೊಸ ಸವಾಲು!

ಕೆಲವು ಕಿಮೀ ದೂರ ಕ್ರಮಿಸಿದ ಅನುಭವದಲ್ಲಿ ಮೇಲಿಂದ ಕೆಳಗೆ ಒಳಗಿಂದ ಹೊರಗೆ ಸ್ಟೇರಿಂಗ್‌ನಿಂದ ಇಂಜಿನ್‌ವರೆಗೆ ನೋಡಿದರೆ ಟಾಟಾ ಪಂಚ್‌ ಒಂದೊಳ್ಳೆ ಕಾರು. ಸದ್ಯ ಕಾರಿನ ಬೆಲೆ ಘೋಷಣೆ ಮಾಡಿಲ್ಲ. ಕಲ್ಲು ಬಂಡೆಗೆ ಗುದ್ದಿದರೆ ಕಾರು ಎಷ್ಟುಸೇಫ್‌ ಆಗಿರುತ್ತದೆ ಎಂಬುದು ತಿಳಿಯಲು ಸೆಕ್ಯುರಿಟಿ ಪರೀಕ್ಷೆಗೆ ಈ ಕಾರು ಒಳಗಾಗಿದ್ದು, ಫಲಿತಾಂಶಕ್ಕೆ ಕಂಪನಿ ಕಾಯುತ್ತಿದೆ. ಬುಕಿಂಗ್‌ ಶುರುವಾಗಿದೆ. ಹೆಚ್ಚಿನ ಮಾಹಿತಿ, ವಿಡಿಯೋಗಳಿಗೆ ವೆಬ್‌ಸೈಟ್‌ ಅಂತೂ ಇದ್ದೇ ಇದೆ. ಟಾಟಾ.

click me!