ಕಾರಿನ ಕ್ಲಚ್ ಬಳಸುವಾಗ ಎಚ್ಚರವಿರಲಿ, ಈ ತಪ್ಪುಗಳನ್ನು ಮಾಡಬೇಡಿ

By Suvarna NewsFirst Published Sep 8, 2021, 5:41 PM IST
Highlights

ಹೊಸದಾಗಿ ಕಾರು ಡ್ರೈವ್ ಮಾಡುವವರು ಕ್ಲಚ್‌ಗೆ ಸಂಬಂಧಿಸಿ ಈ ಕೆಳಗಿನ ಹಲವು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವು ಯಾವುವು ಅಂತ ನೋಡಿ, ತಿದ್ದಿಕೊಳ್ಳಿ.
 

ನೀವು ಡ್ರೈವ್ ಮಾಡುವವರಾದರೆ ಕ್ಲಚ್‌ನ ಪ್ರಾಮುಖ್ಯತೆ ನಿಮಗೆ ಗೊತ್ತಿದ್ದೇ ಇರುತ್ತದೆ. ಗೇರ್ ಬದಲಿಸೋಕೆ, ಏರು ಹಾಗೂ ತಗ್ಗುಗಳಲ್ಲಿ ನಿಯಂತ್ರಣ ಇಡೋಕೆ ಕ್ಲಚ್ ಬೇಕೇ ಬೇಕು. ಕ್ಲಚ್ ಕಾರಿನ ಪ್ರಮುಖ ಭಾಗಗಳಲ್ಲಿ ಒಂದು. ಆದರೆ ಕೆಲವರು ಕ್ಲಚ್ ಬಳಸುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಕ್ಲಚ್ ಅನ್ನು ಬದಲಿಸಲು ಹೆಚ್ಚು ವೆಚ್ಚವಾಗುತ್ತದೆ. ಕೆಲವು ಸರಳ ವಿಧಾನಗಳ ಮೂಲಕ ಕ್ಲಚ್‌ನ ಜೀವಿತಾವಧಿಯನ್ನು ಹೆಚ್ಚಿಸಬಹುದು.

ಕಾಲುಗಳನ್ನು ಕ್ಲಚ್ ಮೇಲಿಡುವುದು
ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ. ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಗೇರ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು. ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ.

ನಿಲ್ಲಿಸಿರುವಾಗ ಕ್ಲಚ್ ಒತ್ತಿಡುವುದು
ಕೆಲವರು ಸಿಗ್ನಲ್‌ನಲ್ಲಿ ಅಥವಾ ಕೆಲವು ಸೆಕೆಂಡ್ ಕಾಲ ಕಾರು ನಿಲ್ಲಿಸಿ ಕಾಯಬೇಕಾದಾಗ ಕ್ಲಚ್ ಹಾಗೂ ಆಕ್ಸಿಲರೇಟರ್ ಬಳಸುತ್ತಾರೆ. ಇದು ತಪ್ಪು. ಇಂಥಲ್ಲಿ ಕಾರ್ ಅನ್ನು ನ್ಯೂಟ್ರಲ್ ಆಗಿಡಿ. ಹಲವಾರು ಚಾಲಕರು ಸಿಗ್ನಲ್‌ಗಳಲ್ಲಿ ಕಾಯುವಾಗ ಕ್ಲಚ್ ಅನ್ನು ಬಳಸುತ್ತಾರೆ. ಇದು ಕೆಟ್ಟ ಅಭ್ಯಾಸ. ಕೆಲವೇ ಕೆಲವು ಸೆಕೆಂಡುಗಳು ಮಾತ್ರ ಕ್ಲಚ್ ತುಳಿಯುತ್ತೇವೆ ಎಂದು ಲಘುವಾಗಿ ಪರಿಗಣಿಸುತ್ತಾರೆ. ಕ್ಲಚ್ ಬಳಕೆ 10 ಸೆಕೆಂಡುಗಳಾಗಿದ್ದರೂ ಅನಗತ್ಯ ಬಳಕೆ ಹೆಚ್ಚಾಗುತ್ತದೆ ಎಂದು ಅವರು ತಿಳಿಯುವುದಿಲ್ಲ. ಸಿಗ್ನಲ್‌ನಲ್ಲಿ ಕ್ಲಚ್ ತುಳಿಯುವ ಬದಲು ಕಾರ್ ಅನ್ನು ನ್ಯೂಟ್ರಲ್‌ನಲ್ಲಿ ಇಡಬಹುದು. ಬಳಕೆಯಲ್ಲಿಲ್ಲದಿದ್ದಾಗ ಕ್ಲಚ್ ಪೆಡಲ್ ಅನ್ನು ತುಳಿಯುವುದರಿಂದ ಅದರ ಜೀವಿತಾವಧಿಯು ಕಡಿಮೆಯಾಗುತ್ತದೆ.
 

ಬ್ರೇಕ್ ಜೊತೆಗೆ ಕ್ಲಚ್‌ ಬೇಕಿಲ್ಲ
ಬ್ರೇಕ್ ಹಾಕಿದಾಗಲೆಲ್ಲಾ ಕ್ಲಚ್ ಬಳಸಬಾರದೆಂಬುದನ್ನು ನೆನಪಿನಲ್ಲಿಡಿ. ಬ್ರೇಕ್ ಹಾಕುವಾಗ ಹಲವರು ಬ್ರೇಕ್ ಪೆಡಲ್ ಹಾಗೂ ಕ್ಲಚ್ ಪೆಡಲ್ ಎರಡನ್ನೂ ಒತ್ತಿ ಹಿಡಿಯುತ್ತಾರೆ. ಇದು ಇನ್ನೊಂದು ಕೆಟ್ಟ ಅಭ್ಯಾಸ. ಕ್ಲಚ್ ಅನ್ನು ಅನಗತ್ಯವಾಗಿ ಈ ರೀತಿ ಬಳಸದಿರಿ.

ಕೊಡಗಿನ ವಿದ್ಯಾರ್ಥಿಯ ಆವಿಷ್ಕಾರ, 10 ರೂ.ನಲ್ಲಿ 40 ಕಿ.ಮೀ. ಓಡುವ ಎಲೆಕ್ಟ್ರಿಕ್ ಬೈಕ್!

ಪಾರ್ಕಿಂಗ್ ಬ್ರೇಕ್ ಬಳಸಿ
ಕಾರಿನ ಪಾರ್ಕಿಂಗ್ ಬ್ರೇಕ್ ಅನ್ನು ಸಂಪೂರ್ಣವಾಗಿ ಬಳಸಿ. ಕಾರ್ ಅನ್ನು ಗೇರ್‌ನಲ್ಲಿಡುವುದರಿಂದ ಅದು ಉರುಳುವುದನ್ನು ತಡೆಯಬಹುದು. ಆದರೆ ಈ ಕ್ರಿಯೆಯು ಕ್ಲಚ್ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ ಎಂಬುದನ್ನು ನೆನಪಿಡಿ.

ನಿಧಾನವಾಗಿ ಚಲಿಸಿ
ಕಾರ್ ಅನ್ನು ಯಾವಾಗಲೂ ಅತಿಯಾದ ವೇಗದಲ್ಲಿ ಚಾಲನೆ ಮಾಡುವ ಅಗತ್ಯವಿಲ್ಲ. ವೇಗವನ್ನು ಹೆಚ್ಚಿಸುವಾಗ ನಿಧಾನವಾಗಿ ಕ್ಲಚ್ ಅನ್ನು ನಿರ್ವಹಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಾಗುತ್ತದೆ.

ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ: ‘ಕೆಎ’ ಇದ್ದಂತೆ ಭಾರತಕ್ಕೆ ‘ಬಿಎಚ್‌’ ಸೀರೀಸ್‌!

ಅಗತ್ಯವಿದ್ದಾಗ ಮಾತ್ರ ಕ್ಲಚ್ ಬಳಸಿ
ವಾಹನ ದಟ್ಟಣೆ ಇರುವ ಸಂದರ್ಭಗಳಲ್ಲಿ ಕ್ಲಚ್ ಬಳಕೆ ಹೆಚ್ಚಾಗುತ್ತದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಅಗತ್ಯವಿದ್ದಾಗ ಮಾತ್ರ ಕ್ಲಚ್ ಬಳಸುವಂತೆ ನೋಡಿಕೊಳ್ಳಿ.

ಕ್ಲಚ್ ಶಬ್ದವನ್ನು ಆಲಿಸಿ
ಕಾಲ ಕಾಲಕ್ಕೆ ಕಾರು ಹಾಗೂ ಕ್ಲಚ್ ಬಗ್ಗೆ ಗಮನ ಹರಿಸಿ. ವಾರಕ್ಕೊಮ್ಮೆಯಾದರೂ ಕಾರಿನಿಂದ ಬರುವ ಶಬ್ದಗಳ ಮೇಲೆ ಹೆಚ್ಚು ಗಮನ ಹರಿಸಿ. ಕಾರಿನಿಂದ ಹೆಚ್ಚು ಶಬ್ದ ಕೇಳಿಸುತ್ತಿದ್ದರೆ ನಿರ್ಲಕ್ಷ್ಯ ಮಾಡದೇ ತಕ್ಷಣವೇ ಸರಿ ಪಡಿಸಿ. ಕ್ಲಚ್ ಜೊತೆಗೆ ಕಾರಿನ ಎಂಜಿನ್ ಆಯಿಲ್ ಅನ್ನು ಕೂಡ ಕಾಲ ಕಾಲಕ್ಕೆ ಬದಲಿಸ ಬೇಕು. ದೋಷಯುಕ್ತ ಎಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ರೀತಿಯ ಎಂಜಿನ್‌ಗಳು ಹೆಚ್ಚು ಇಂಧನವನ್ನು ಬಳಸುತ್ತವೆ.

click me!