ಸಣ್ಣ ಕಾರುಗಳಿಗೆ ಆರು ಏರ್‌ಬ್ಯಾಗ್ ನಿಯಮದ ಸಂಕಷ್ಟ!

By Suvarna NewsFirst Published May 22, 2022, 8:16 PM IST
Highlights

ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿರುವುದರಿಂದ ಕಾರುಗಳ ದರ ಏರಿಕೆಯಾಗುವ ಆತಂಕ ಎದುರಾಗಿದೆ.

ದೊಡ್ಡ ಕಾರುಗಳು ಮಾತ್ರವಲ್ಲದೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು (Airbags)ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಳವಡಿಸಿಕೊಳ್ಳಲು ಅನೇಕ ಕಾರು ಉತ್ಪಾದಕ ಕಂಪನಿಗಳು ಹಿಂದೇಟು ಹಾಕುತ್ತಿವೆ. ಮತ್ತು ಅದರಿಂದ ಕಾರುಗಳ ದರ ಏರಿಕೆಯಾಗಲಿದೆ ಎಂದು ಸೂಚನೆಯನ್ನು ಕೂಡ ನೀಡಿವೆ. ಈಗ ಅದೇ ಮಾತನ್ನು ಪುನರುಚ್ಚರಿಸಿರುವ ಭಾರತದ ಅತಿ ದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited-MSIL), ಕಡ್ಡಾಯ ಆರು ಏರ್‌ಬ್ಯಾಗ್‌ಗಳ ನಿಯಮದಿಂದ ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಆಲ್ಟೊದ ಭವಿಷ್ಯವು ಅನಿಶ್ಚಿತವಾಗಬಹುದು ಎಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ, ಇದು ಪ್ರವೇಶ ಮಟ್ಟದ ಕಾರುಗಳ ಬೆಲೆ ಮತ್ತು ಬೇಡಿಕೆಯ ಸನ್ನಿವೇಶದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ . ಸಣ್ಣ ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳು ಹೊಂದಿಕೊಳ್ಳುತ್ತವೆಯೇ ಎಂಬುದು ಇನ್ನೂಸ್ಪಷ್ಟವಾಗಿಲ್ಲ. ಏಕೆಂದರೆ, ಈ ಏರ್‌ಬ್ಯಾಗ್‌ಗಳು ಸಣ್ಣ ಕಾರುಗಳಿಗಾಗಿ ತಯಾರಿಸಲ್ಪಟ್ಟಿಲ್ಲ. ಇದು ಖಂಡಿತವಾಗಿಯೂ ಸಣ್ಣ ಕಾರುಗಳ ಮಾರಾಟಕ್ಕೆ ಮತ್ತೊಂದು ಹಿನ್ನಡೆಯಾಗಲಿದೆ. ನಾಲ್ಕು ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಅಳವಡಿಸುವುದರಿಂದ ಅದರ ದರದಲ್ಲಿ ಗಣನೀಯ ವೆಚ್ಚವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ನಂಬರ್ ಪ್ಲೇಟ್ ಮೇಲೆ ನಿಗಮ, ಮಂಡಳಿ, ಅಧ್ಯಕ್ಷ ಯಾವುದೂ ಇರಬಾರದು, ಸರ್ಕಾರದ ಸುತ್ತೋಲೆ!

ಈ ವರ್ಷದ ಜನವರಿಯಲ್ಲಿ, ಎಲ್ಲಾ ವಾಹನಗಳಿಗೆ ನಾಲ್ಕು ಪ್ರಯಾಣಿಕ ಹಾಗೂ ಎರಡು ಬದಿಯ ಏರ್‌ಬ್ಯಾಗ್‌ ಸೇರಿದಂತೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿ ಸರ್ಕಾರ 2021ರ ಅಕ್ಟೋಬರ್‌ 1ರಂದು  ಕರಡು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದು ಕಾರು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜಾರಿಗೊಳಿಸಿದ ನಿಯಮ ಎಂದು ಸರ್ಕಾರ ತಿಳಿಸಿತ್ತು.

ಆದರೆ, ಈ ಅಧಿಸೂಚನೆ ಆಟೊಮೊಬೈಲ್‌ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರವೇಶ ಮಟ್ಟದ ಕಾರು ಮಾರುಕಟ್ಟೆಯಲ್ಲಿ ದರ ಹೆಚ್ಚಳದ ಬಿಸಿ ತಟ್ಟಲಿದೆ. ಈ ವಲಯದಲ್ಲಿ ದರ ಹೆಚ್ಚಳದಿಂದ ಗ್ರಾಹಕರು ಕಾರು ಕೊಳ್ಳುವುದರಿಂದ ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಜಾಟಾ ಡೈನಾಮಿಕ್ಸ್‌ ಇಂಡಿಯಾದ ಅಧ್ಯಕ್ಷ ಮತ್ತು ನಿರ್ದೇಶಕ ರವಿ ಭಾಟಿಯಾ ಪ್ರಕಾರ, ಏರ್‌ಬ್ಯಾಗ್‌ ಅಳವಡಿಕೆ ಪ್ರಸ್ತಾವನೆ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಉತ್ತಮ ನಿರ್ಧಾರ. ಆದರೆ, ಇದರ ಸಾಧ್ಯತೆ ಮತ್ತು ದರ ಹೆಚ್ಚಳದ ಆತಂಕ, ಎಲ್ಲಾ ವಾಹನಗಳಿಗೂ ಇದನ್ನು ಅಳವಡಿಸುವುದನ್ನು ಅಸಾಧ್ಯವಾಗಿಸಬಹುದು.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಉಪಕರಣ ಉತ್ಪಾದನೆ ಚುರುಕು, ಮಹೀಂದ್ರ ವೋಕ್ಸ್‌ವ್ಯಾಗನ್ ಒಪ್ಪಂದ!

ಸಣ್ಣ ಕಾರಿನ ವಲಯದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ(Maruti Suzuki), ಆರಂಭಿಕ ಹಂತದ ಹ್ಯಾಚ್‌ಬ್ಯಾಕ್‌ಗಳಾದ ಆಲ್ಟೋ(Alto) ಮತ್ತು ಎಸ್‌-ಪ್ರೆಸೋ(S-presso)ಗಳನ್ನು ತಯಾರಿಸುತ್ತದೆ. ಏರ್‌ಬ್ಯಾಗ್‌ನ ಹೊಸ ನಿಯಮ ಅಳವಡಿಕೆಯಾದಲ್ಲಿ ಆಲ್ಟೋ ದರ ಹೆಚ್ಚಳವಾಗಬಹುದು ಮತ್ತು ಗ್ರಾಹಕರು ಅದನ್ನು ಖರೀದಿಸುವುದರಿಂದ ಹಿಂದೆ ಸರಿಯಬಹುದು. ಇದರಿಂದ ಭಾರತದ 5 ಅತಿ ಹೆಚ್ಚು ಮಾರಾಟವಾಗುವ ಕಾರುಗಳನ್ನು ಒಂದಕ್ಕೆ ಅಂತ್ಯ ಹಾಡಬೇಕಾಗಬಹುದು. ಇದು 2020ರವರೆಗೆ ಅಂದರೆ ಕಳೆದ 16 ವರ್ಷಗಳಲ್ಲಿ 1ನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ಐದು ವರ್ಷಗಳಲ್ಲಿ 3.39 ಲಕ್ಷ ರೂ. ಬೆಲೆಯುಳ್ಳ ಆಲ್ಟೋ ಕಾರಿನ ದೇಶೀಯ ಮಾರುಕಟ್ಟೆ ಶೇ.44ರಷ್ಟು ಕುಸಿತ ಕಂಡಿದೆ.

ಪ್ರಸ್ತುತ ಎಲ್ಲಾ ವಾಹನಗಳಲ್ಲಿ ಎರಡು ಏರ್‌ಬ್ಯಾಗ್‌ಗಳು ಕಡ್ಡಾಯವಾಗಿವೆ. ಒಂದು ಚಾಲಕರಿಗೆ ಮತ್ತು ಚಾಲಕರ ಪಕ್ಕದ ಸೀಟಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರಿಗೆ. 2019ರ ಜುಲೈನಲ್ಲಿ ಚಾಲಕರ ಸೀಟಿನ ಏರ್‌ಬ್ಯಾಗ್ ಕಡ್ಡಾಯವಾಗಿತ್ತು. 2022ರ ಜನವರಿಯಿಂದ ಸಹ ಪ್ರಯಾಣಿಕರ ಸೀಟಿನ ಏರ್‌ಬ್ಯಾಗ್‌ ಅಳವಡಿಕೆ ಕೂಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಯಿತು. ಈಗ ಏಕಾಏಕಿ ಎರಡರಿಂದ ಆರು ಏರ್‌ಬ್ಯಾಗ್‌ಗೆ ಬದಲಿಸುವುದು ಕಷ್ಟ ಎಂಬುದು ಉದ್ಯಮದವರ ಅಳಲು.

click me!