
ನವದೆಹಲಿ(ಮೇ.18): ಕಾರು ಖರೀದಿಸುವಾಗ ಪೆಟ್ರೋಲ್ ಮಾಡೆಲ್ ಆರಿಸಿಕೊಳ್ಳಬೇಕೋ ಅಥವಾ ಎಲೆಕ್ಟ್ರಿಕ್ (EV) ಮಾಡೆಲ್ ಆರಿಸಿಕೊಳ್ಳಬೇಕೋ ಎಂಬ ಗೊಂದಲ ಇಂದಿಗೂ ಕೋಟ್ಯಂತರ ಗ್ರಾಹಕರನ್ನು ಕಾಡುತ್ತಿದೆ. ಈ ಗೊಂದಲಕ್ಕೆ ತೆರೆ ಎಳೆಯಲು ಇತ್ತೀಚೆಗೆ ಒಂದೇ ಕಾರಿನ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳನ್ನು ಒಂದೇ ರೀತಿಯ ಹವಾಮಾನ ಹಾಗೂ ರಸ್ತೆ ಪರಿಸ್ಥಿತಿಯಲ್ಲಿ ಚಾಲನೆ ಮಾಡಿ ಜಂಟಿ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯ ಫಲಿತಾಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಇಂಧನ ದಕ್ಷತೆಯ (Efficiency) ವಿಷಯದಲ್ಲಿ ಪೆಟ್ರೋಲ್ ಕಾರುಗಳು ಎಲೆಕ್ಟ್ರಿಕ್ ಕಾರುಗಳಿಗಿಂತ ಮೈಲಿಗಲ್ಲುಗಳಷ್ಟು ಹಿಂದೆ ಬಿದ್ದಿರುವುದು ಸಾಬೀತಾಗಿದೆ. ಅತಿಯಾಗಿ ಏರಿಕೆಯಾಗುತ್ತಿರುವ ಇಂಧನ ದರಗಳ ಈ ಕಾಲದಲ್ಲಿ ಇವಿ ಹೇಗೆ ಸಂಪೂರ್ಣ ಲಾಭದಾಯಕ ಎಂಬುದನ್ನು ಈ ರೇಸ್ ಸ್ಪಷ್ಟಪಡಿಸಿದೆ.
ಯುಎಸ್ ಎನ್ವಿರಾನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (EPA) ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಒಂದು ಲೀಟರ್ ಪೆಟ್ರೋಲ್‌ನಲ್ಲಿ ಬರೋಬ್ಬರಿ 8.9 kWh ನಷ್ಟು ಉಷ್ಣ ಶಕ್ತಿ (Thermal Energy) ಅಡಗಿರುತ್ತದೆ. ಆದರೆ ನಾವು ಗಾಡಿಗೆ ಪೆಟ್ರೋಲ್ ಹಾಕಿಸಿದಾಗ ಈ ಶಕ್ತಿಯ ಬಹುದೊಡ್ಡ ಭಾಗ ವ್ಯರ್ಥವಾಗಿ ಕರಗಿಹೋಗುತ್ತದೆ. ಇದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು, ಒಂದೇ ಬ್ರ್ಯಾಂಡ್‌ನ 'ಕಿಯಾ ಕ್ಯಾರೆನ್ಸ್ ಕ್ಲೇವಿಸ್' (Kia Carens Clavis) ಕಾರಿನ ಪೆಟ್ರೋಲ್ ಆವೃತ್ತಿ ಮತ್ತು 'ಕ್ಲೇವಿಸ್ ಇವಿ' (Clavis EV) ಎಲೆಕ್ಟ್ರಿಕ್ ಆವೃತ್ತಿಗಳನ್ನು ಮುಖಾಮುಖಿ ಪರೀಕ್ಷೆಗೆ ಒಳಪಡಿಸಲಾಯಿತು. 'ಫೈನಾನ್ಷಿಯಲ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ ಈ ಪರೀಕ್ಷೆಯ ಮೈಲೇಜ್ ವಿವರಗಳು ಹೀಗಿವೆ.
ಪೆಟ್ರೋಲ್ ಕಾರಿನ ಮೈಲೇಜ್: ನಗರದ ಭಾರಿ ಟ್ರಾಫಿಕ್‌ನಲ್ಲಿ ಪೆಟ್ರೋಲ್ ಚಾಲಿತ ಕ್ಲೇವಿಸ್ ಕಾರು ಪ್ರತಿ ಲೀಟರ್‌ಗೆ ಕೇವಲ 12 ರಿಂದ 14 ಕಿಲೋಮೀಟರ್ ಮೈಲೇಜ್ ನೀಡಿದೆ. ಈ ಸಂಚಾರದ ಅವಧಿಯಲ್ಲಿ ಇಂಜಿನ್‌ನ ಅತಿಯಾದ ಶಾಖ, ಶಬ್ದ ಮತ್ತು ಘರ್ಷಣೆಯ (Friction) ಕಾರಣದಿಂದಾಗಿ ಪೆಟ್ರೋಲ್‌ನಲ್ಲಿದ್ದ ಒಟ್ಟು ಶಕ್ತಿಯ ಶೇಕಡಾ 70% ರಿಂದ 75% ರಷ್ಟು ಭಾಗ ಗಾಳಿಯಲ್ಲಿ ಸಂಪೂರ್ಣ ವ್ಯರ್ಥವಾಗಿ ಪೋಲಾಗಿದೆ!
ಎಲೆಕ್ಟ್ರಿಕ್ ಕಾರಿನ ಮೈಲೇಜ್: ಮತ್ತೊಂದೆಡೆ, ಅದೇ ಹೆವಿ ಟ್ರಾಫಿಕ್‌ನಲ್ಲಿ ಎಲೆಕ್ಟ್ರಿಕ್ ಮಾಡೆಲ್ (ಕ್ಲೇವಿಸ್ ಇವಿ) ಅನ್ನು ಚಲಾಯಿಸಿದಾಗ, ಅದು ಕೇವಲ 1 kWh (ಒಂದು ಯೂನಿಟ್) ವಿದ್ಯುತ್ ಬಳಕೆಗೆ ಸುಮಾರು 10 ಕಿಲೋಮೀಟರ್ ಚಲಿಸಿದೆ. ಇದನ್ನು ಪೆಟ್ರೋಲ್‌ನ ಒಟ್ಟು ಉಷ್ಣ ಶಕ್ತಿಗೆ (8.9 kWh) ಹೋಲಿಸಿ ಲೆಕ್ಕ ಹಾಕಿದರೆ, ಈ ಇವಿ ಕಾರು 1 ಲೀಟರ್ ಪೆಟ್ರೋಲ್‌ನಷ್ಟೇ ಶಕ್ತಿಯಲ್ಲಿ ಬರೋಬ್ಬರಿ 89 ಕಿಲೋಮೀಟರ್ ಚಲಿಸಬಲ್ಲದು!. ಈ ದಕ್ಷತೆಯ ಹತ್ತಿರಕ್ಕೂ ಬರಲು ಪ್ರಸ್ತುತ ಯಾವುದೇ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಅಥವಾ ಹೈಬ್ರಿಡ್ ಕಾರುಗಳಿಂದ ಸಾಧ್ಯವೇ ಇಲ್ಲ.
ಇದು ಸಂಪೂರ್ಣವಾಗಿ ಆಟೋಮೊಬೈಲ್ ಫಿಸಿಕ್ಸ್ ಆಟವಾಗಿದೆ. ಜಗತ್ತಿನಲ್ಲಿ ಕಳೆದ 100 ವರ್ಷಗಳಿಂದ ನಿರಂತರ ಸಂಶೋಧನೆಗಳು ನಡೆಯುತ್ತಿದ್ದರೂ, ಪೆಟ್ರೋಲ್ ಇಂಜಿನ್‌ಗಳಿಗೆ ಇಂಧನದ ಒಟ್ಟು ಶಕ್ತಿಯ ಪೈಕಿ ಕೇವಲ ಶೇಕಡಾ 25% ರಿಂದ 30% ರಷ್ಟು ಶಕ್ತಿಯನ್ನು ಮಾತ್ರ ಕಾರು ಚಲಾಯಿಸಲು ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ. ಉಳಿದ ಸಿಂಹಪಾಲು ಶಕ್ತಿಯು ಇಂಜಿನ್‌ನ ಪಿಸ್ಟನ್, ವಾಲ್ವ್, ಕೂಲಿಂಗ್ ಸಿಸ್ಟಮ್ ಮತ್ತು ಗೇರ್‌ಬಾಕ್ಸ್‌ನ ಘರ್ಷಣೆಯಿಂದಾಗಿ ಅಪವ್ಯಯವಾಗುತ್ತದೆ. ಇದಲ್ಲದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗಾಡಿ ನಿಲ್ಲಿಸಿದಾಗಲೂ ಇಂಜಿನ್ ಚಾಲ್ತಿಯಲ್ಲಿ ಬ್ರೂಮ್ ಆಗುತ್ತಾ ಪೆಟ್ರೋಲ್ ಸುಡುತ್ತಲೇ ಇರುತ್ತದೆ.
ಇದಕ್ಕೆ ತದ್ವಿರುದ್ಧವಾಗಿ, ಎಲೆಕ್ಟ್ರಿಕ್ ಮೋಟಾರ್‌ಗಳು ಶೇಕಡಾ 90% ಕ್ಕಿಂತ ಹೆಚ್ಚು ಕಾರ್ಯದಕ್ಷತೆ ಹೊಂದಿವೆ. ಇವುಗಳಲ್ಲಿ ಚಲಿಸುವ ಬಿಡಿಭಾಗಗಳ ಸಂಖ್ಯೆ (Moving parts) ಅತ್ಯಂತ ಕಡಿಮೆ ಇರುವುದರಿಂದ ಘರ್ಷಣೆ ಮತ್ತು ಶಕ್ತಿಯ ನಷ್ಟ ಇಲ್ಲವೇ ಇಲ್ಲ ಎನ್ನುವಷ್ಟಿರುತ್ತದೆ.
ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಎಂದರೆ ಪೆಟ್ರೋಲ್ ಕಾರುಗಳ ಇಂಧನ ಹೀರುವ ಶತ್ರು ಇದ್ದಂತೆ. ಆದರೆ ಇವಿ ಕಾರುಗಳಿಗೆ ಇದು ಮೈಲೇಜ್ ಹೆಚ್ಚಿಸುವ ಮಿತ್ರನಾಗಿ ಕೆಲಸ ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಇವಿಯಲ್ಲಿರುವ 'ರೀಜನರೇಟಿವ್ ಬ್ರೇಕಿಂಗ್' (Regenerative Braking) ತಂತ್ರಜ್ಞಾನ.
ಪೆಟ್ರೋಲ್ ಕಾರಿನಲ್ಲಿ ಪದೇ ಪದೇ ಬ್ರೇಕ್ ಹಾಕಿದಾಗ ಇಂಧನ ವ್ಯರ್ಥವಾಗುತ್ತದೆ. ಆದರೆ ಇವಿ ಕಾರಿನಲ್ಲಿ ಆಕ್ಸಿಲರೇಟರ್‌ನಿಂದ ಕಾಲು ತೆಗೆದ ತಕ್ಷಣ, ಕಾರಿನ ಮೋಟಾರ್ ಸ್ವಯಂಚಾಲಿತವಾಗಿ ಜನರೇಟರ್‌ನಂತೆ ಕೆಲಸ ಮಾಡಲು ಆರಂಭಿಸುತ್ತದೆ ಮತ್ತು ವಾಹನ ನಿಲ್ಲುವಾಗ ಉತ್ಪತ್ತಿಯಾಗುವ ಚಲನ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಿ ಬ್ಯಾಟರಿಯನ್ನು ರೀಚಾರ್ಜ್ ಮಾಡುತ್ತದೆ. ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ ಕ್ಲೇವಿಸ್ ಇವಿ ಕಾರನ್ನು ಪ್ರಸಿದ್ಧ ನಂದಿ ಬೆಟ್ಟದಿಂದ (Nandi Hills) ಕೆಳಗೆ ಇಳಿಸುವಾಗ, ಅದರ ಬ್ಯಾಟರಿ ಪಾಯಿಂಟ್ ಕಡಿಮೆಯಾಗುವ ಬದಲಿಗೆ ರೀಜನರೇಟಿವ್ ಬ್ರೇಕಿಂಗ್‌ನಿಂದಾಗಿ ಮತ್ತಷ್ಟು ಚಾರ್ಜ್ ಆಯಿತು! ಇದು ಕಾರಿನ ಡ್ರೈವಿಂಗ್ ರೇಂಜ್ ಅನ್ನು ಗಣನೀಯವಾಗಿ ಹೆಚ್ಚಿಸಿತು.
ಬಹಳಷ್ಟು ಜನರು "ಪೆಟ್ರೋಲ್‌ಗಾಗಿ ಅರಬ್ (ಗಲ್ಫ್) ದೇಶಗಳ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು, ಈಗ ಬ್ಯಾಟರಿಗಾಗಿ ಚೀನಾದ ಮೇಲೆ ಅವಲಂಬಿತರಾಗುತ್ತಿದ್ದೇವೆ" ಎಂದು ವಾದಿಸುತ್ತಾರೆ. ಆದರೆ ಇವೆರಡರ ನಡುವೆ ಆಕಾಶ ಭೂಮಿಯ ವ್ಯತ್ಯಾಸವಿದೆ.
ಒಂದು ಲೀಟರ್ ಪೆಟ್ರೋಲ್ ಅನ್ನು ಇಂಜಿನ್‌ನಲ್ಲಿ ಸುಟ್ಟರೆ ಅದು ವಿಷಕಾರಿ ಹೊಗೆಯಾಗಿ ಮಾರ್ಪಟ್ಟು ವಾತಾವರಣ ಸೇರುತ್ತದೆ ಮತ್ತು ಅದು ಶಾಶ್ವತವಾಗಿ ನಾಶವಾಗುತ್ತದೆ. ಆದರೆ ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ಹಾಗಲ್ಲ, ಅದೊಂದು ಮರುಬಳಕೆಯ ನಿರಂತರ ಖಜಾನೆ (Recycling Bin) ಇದ್ದಂತೆ. ಕಾರು ಹಳೆಯದಾಗಿ ಗುಜರಿಗೆ ಸೇರಿದರೂ, ಅದರ ಬ್ಯಾಟರಿಯಿಂದ ಶೇಕಡಾ 90% ರಷ್ಟು ಅಮೂಲ್ಯವಾದ ಲೋಹಗಳನ್ನು (ಉದಾಹರಣೆಗೆ ಲಿಥಿಯಂ, ಕೋಬಾಲ್ಟ್, ನಿಕಲ್) ಹೊರತೆಗೆದು ಮತ್ತೆ ಹೊಸ ಬ್ಯಾಟರಿಯನ್ನು ತಯಾರಿಸಬಹುದು. ಅಂದರೆ ಇಲ್ಲಿ ನೈಸರ್ಗಿಕ ಸಂಪನ್ಮೂಲಗಳು ಎಂದಿಗೂ ಶಾಶ್ವತವಾಗಿ ವ್ಯರ್ಥವಾಗುವುದಿಲ್ಲ.