
ಬೆಂಗಳೂರು (ಮೇ.9): ನೀವು ಈ ಮೇ ತಿಂಗಳಲ್ಲಿ ಹೊಸ ಕಾರನ್ನು ಮನೆಗೆ ತರಲು ಬಯಸಿದ್ದರೆ, ಕಾರು ಸಾಲದ (Car Loan) ಮೇಲಿನ ಬಡ್ಡಿದರಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವುದು ಅತ್ಯಗತ್ಯ. ಪ್ರಸ್ತುತ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿಯ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ. ಕಡಿಮೆ ಬಡ್ಡಿದರವು ನಿಮ್ಮ ಮಾಸಿಕ ಕಂತಿನ (EMI) ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಲಿದ್ದು, ಸರಿಯಾದ ಬ್ಯಾಂಕಿನ ಆಯ್ಕೆ ನಿಮ್ಮ ಹಣವನ್ನು ಉಳಿಸಬಹುದು.
ಕಾರು ಸಾಲ ಪಡೆಯುವಾಗ ಕೇವಲ ಬಡ್ಡಿದರವಷ್ಟೇ ಅಲ್ಲದೆ, ಪ್ರೊಸೆಸಿಂಗ್ ಫೀ ಮತ್ತು ಸಾಲದ ಅವಧಿಯನ್ನೂ ಗಮನಿಸುವುದು ಮುಖ್ಯ. ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ನಂತಹ ಪ್ರಮುಖ ಬ್ಯಾಂಕುಗಳು ಮೇ ತಿಂಗಳಿಗಾಗಿ ತಮ್ಮ ಹೊಸ ದರಗಳನ್ನು ಪ್ರಕಟಿಸಿವೆ. ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದರೆ, ನಿಮಗೆ ಇನ್ನೂ ಕಡಿಮೆ ದರದಲ್ಲಿ ಸಾಲ ಲಭ್ಯವಾಗುವ ಸಾಧ್ಯತೆ ಇದೆ.
| ಸಾರ್ವಜನಿಕ ವಲಯದ ಬ್ಯಾಂಕುಗಳು (Public Sector Banks) | |
| ಬ್ಯಾಂಕಿನ ಹೆಸರು | ಬಡ್ಡಿದರ (ಶೇಕಡಾವಾರು) |
| ಯೂನಿಯನ್ ಬ್ಯಾಂಕ್ | 7.60% |
| ಬ್ಯಾಂಕ್ ಆಫ್ ಬರೋಡಾ | 7.60% |
| ಪಂಜಾಬ್ ನ್ಯಾಷನಲ್ ಬ್ಯಾಂಕ್ | 7.65% |
| ಕೆನರಾ ಬ್ಯಾಂಕ್ | 7.95% |
| ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) | 8.90% |
| ಖಾಸಗಿ ವಲಯದ ಬ್ಯಾಂಕುಗಳು (Private Sector Banks) | |
| ಬ್ಯಾಂಕಿನ ಹೆಸರು | ಬಡ್ಡಿದರ (ಶೇಕಡಾವಾರು) |
| ಐಡಿಬಿಐ ಬ್ಯಾಂಕ್ | 7.75% |
| ಐಸಿಐಸಿಐ ಬ್ಯಾಂಕ್ | 8.50% |
| ಆಕ್ಸಿಸ್ ಬ್ಯಾಂಕ್ | 8.95% |
| ಎಚ್‌ಡಿಎಫ್‌ಸಿ ಬ್ಯಾಂಕ್ | 9.00% |
| ಐಡಿಎಫ್‌ಸಿ ಫಸ್ಟ್ ಬ್ಯಾಂಕ್ | 9.99% |
ಕೇವಲ ಬಡ್ಡಿದರವನ್ನು ಮಾತ್ರ ನೋಡಬೇಡಿ. ಅದರ ಜೊತೆಗೆ ಪ್ರೊಸೆಸಿಂಗ್ ಫೀ (Processing Fee), ಪ್ರಿಪೇಮೆಂಟ್ ಶುಲ್ಕಗಳು (Prepayment Charges) ಮುಂತಾದ ಇತರ ಗುಪ್ತ ಶುಲ್ಕಗಳ ಬಗ್ಗೆ ಮಾಹಿತಿ ಪಡೆಯಿರಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಉತ್ತಮ ಸ್ಕೋರ್ ಇದ್ದರೆ ಬ್ಯಾಂಕುಗಳ ಜೊತೆ ಬಡ್ಡಿದರ ಇಳಿಸಲು ಚೌಕಾಸಿ ಮಾಡಬಹುದು.
ಫ್ಲೋಟಿಂಗ್ (Floating) ಮತ್ತು ಫಿಕ್ಸೆಡ್ (Fixed) ಇಂಟರೆಸ್ಟ್ ರೇಟ್‌ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡು, ನಿಮಗೆ ಸೂಕ್ತವಾದದ್ದನ್ನು ಆರಿಸಿ. ದೀರ್ಘಾವಧಿಯ ಸಾಲ ಪಡೆದರೆ ಇಎಂಐ ಕಡಿಮೆ ಇರುತ್ತದೆ, ಆದರೆ ನೀವು ಬ್ಯಾಂಕಿಗೆ ಪಾವತಿಸುವ ಒಟ್ಟು ಬಡ್ಡಿಯ ಮೊತ್ತ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಆದಾಯಕ್ಕೆ ಅನುಗುಣವಾಗಿ ಸಮತೋಲಿತ ಅವಧಿಯನ್ನು ಆಯ್ಕೆ ಮಾಡಿ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಸಾಲ ಪಡೆಯುವ ಮೊದಲು ಸಂಬಂಧಪಟ್ಟ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಧಿಕೃತ ದರಗಳನ್ನು ಖಚಿತಪಡಿಸಿಕೊಳ್ಳಿ ಮತ್ತು ತಜ್ಞರ ಸಲಹೆ ಪಡೆಯಿರಿ.)