
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬ ಮಾತು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕೇಳಿಬರುವ ತಮಾಷೆಯ ವಾಕ್ಯ. ಆದರೆ, ಇತ್ತೀಚೆಗೆ ಇಸ್ಲಾಮಾಬಾದ್‌ನ ಸಂಸತ್ ಭವನದ ಬಳಿಯ ‘ಡಿ-ಚೌಕ್’ ಎಂಬ ಹೈ-ಸೆಕ್ಯುರಿಟಿ ಪ್ರದೇಶದಲ್ಲಿ ನಡೆದ ಘಟನೆಯೊಂದು ಈ ಮಾತಿಗೆ ತಕ್ಕಂತೆ ಹಾಸ್ಯಾಸ್ಪದ ತಿರುವು ಪಡೆದುಕೊಂಡಿದೆ.
ಅಬೋಟಾಬಾದ್ ಮೂಲದ ತಂತ್ರಜ್ಞಾನ ಉತ್ಸಾಹಿ ಎಹ್ಸಾನ್ ಜಾಫರ್ ಎಂಬುವವರು ಅಭಿವೃದ್ಧಿಪಡಿಸಿದ್ದ 'ಚಾಲಕರಹಿತ' (Driverless) ತಂತ್ರಜ್ಞಾನವನ್ನು ಪ್ರದರ್ಶಿಸಲು ಪಾಕಿಸ್ತಾನಿ ಪತ್ರಕರ್ತ ಮುಹಮ್ಮದ್ ಆಲಿಜಾ ಅವರನ್ನು ಆಹ್ವಾನಿಸಲಾಗಿತ್ತು. ಟೆಸ್ಲಾ ಕಂಪನಿಯ ಕಾರುಗಳ ಮಾದರಿಯಲ್ಲೇ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತ ಆಲಿಜಾ, ಪಾಕಿಸ್ತಾನದಲ್ಲೂ ಅದ್ಭುತ ಪ್ರತಿಭೆಗಳಿವೆ ಎಂದು ವೀಡಿಯೊದಲ್ಲಿ ಕಾರಿನ ವಿಶೇಷತೆಗಳನ್ನು ಶ್ಲಾಘಿಸುತ್ತಿದ್ದರು.
ಆದರೆ, ಕೇವಲ ಕೆಲವೇ ಕ್ಷಣಗಳಲ್ಲಿ ಆ ಕಾರು ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವ್ಯಾನ್‌ಗೆ ನೇರವಾಗಿ ಹೋಗಿ ಡಿಕ್ಕಿ ಹೊಡೆಯಿತು! ಆಲಿಜಾ ತಕ್ಷಣವೇ ಹ್ಯಾಂಡ್‌ಬ್ರೇಕ್ ಎಳೆಯಲು ಪ್ರಯತ್ನಿಸಿದರೂ ಅಪಘಾತವನ್ನು ತಡೆಯಲು ಸಾಧ್ಯವಾಗಲಿಲ್ಲ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎರಡೂ ವಾಹನಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.
ಈ ಕುರಿತು 'ಡಾನ್' ಪತ್ರಿಕೆಗೆ ಸ್ಪಷ್ಟನೆ ನೀಡಿದ ಪತ್ರಕರ್ತ ಆಲಿಜಾ, ಈ ಕಾರನ್ನು ಉಪಗ್ರಹ ಮತ್ತು ಇಂಟರ್ನೆಟ್ ಮೂಲಕ ರಿಮೋಟ್ ಆಗಿ ಹೊರಗಿನಿಂದ ನಿಯಂತ್ರಿಸಲಾಗುತ್ತಿತ್ತು. ಘಟನೆ ನಡೆದಾಗ ವಾತಾವರಣದಲ್ಲಿ ಮಳೆಯಿದ್ದು, ದಿಢೀರನೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರಿಂದ ಕಾರಿನ ನಿಯಂತ್ರಣ ತಪ್ಪಿತು ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಈ ವಿಡಿಯೋ ಪ್ರಕಟಿಸಿರುವುದು ಯಾರನ್ನೂ ಟೀಕಿಸುವುದಕ್ಕಾಗಿ ಅಲ್ಲ ಬದಲಿಗೆ ಸುರಕ್ಷತಾ ಜಾಗೃತಿ ಮೂಡಿಸಲು. ಕಡಿಮೆ ಸಂಚಾರವಿದ್ದ ಹೈ-ಸೆಕ್ಯುರಿಟಿ ಪ್ರದೇಶದಲ್ಲೇ ಹೀಗಾಗಿದೆ. ಅದೇ ಜನನಿಬಿಡ ರಸ್ತೆಯಾಗಿದ್ದರೆ ಪ್ರಾಣಾಪಾಯ ಸಂಭವಿಸುತ್ತಿತ್ತು. ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ಮಾನವ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಭಾರತೀಯ ನಟ ರಣವೀರ್ ಶೋರೆ ಸೇರಿದಂತೆ ಹಲವರು ಇದನ್ನು ಹಂಚಿಕೊಂಡಿದ್ದಾರೆ. ರಣವೀರ್ ಶೋರೆ "ಟೆಸ್ಲಾಗೆ ಪಾಕಿಸ್ತಾನದ ಉತ್ತರ: 'ದಿ ಮಸ್ಲಾ'" ಎಂದು ಶೀರ್ಷಿಕೆ ನೀಡಿ ಹಾಸ್ಯ ಮಾಡಿದ್ದಾರೆ.
ಇನ್ನು ನೆಟ್ಟಿಗರಿಂದಲೂ ತರಹೇವಾರಿ ಕಾಮೆಂಟ್ ಬಂದಿದೆ.
"ಸಹೋದರ, ನೀವು ಪ್ರತಿಭೆಯ ಬಗ್ಗೆ ಮಾತನಾಡಲು ತಪ್ಪು ಸಮಯ ಆಯ್ಕೆ ಮಾಡಿಕೊಂಡಿದ್ದೀರಿ!"
"ಉಳಿದೆಲ್ಲವನ್ನೂ ಬಿಟ್ಟು ನೇರವಾಗಿ ಪೊಲೀಸ್ ಕಾರಿಗೇ ಡಿಕ್ಕಿ ಹೊಡೆದಿದೆಯಲ್ಲ, ಎಂಥಾ ಪ್ರತಿಭೆ!"
"ಪೊಲೀಸರಿಂದ ಏಟು ಬೀಳಲಿಲ್ಲವಲ್ಲ, ನಿಮ್ಮ ಅದೃಷ್ಟ ಚೆನ್ನಾಗಿದೆ."
ಪ್ರಸ್ತುತ ಯುಎಸ್‌ನಲ್ಲಿ ‘ವೇಮೊ’ (Waymo) ರೋಬೋ-ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದ್ದರೆ, ಚೀನಾದಲ್ಲಿ 'ಬೈಡು' (Baidu) ನಂತಹ ಸಂಸ್ಥೆಗಳು ಸ್ವಾಯತ್ತ ಚಾಲನಾ ಪ್ರಯೋಗಗಳನ್ನು ನಡೆಸುತ್ತಿವೆ. ಇಷ್ಟು ಮಾತ್ರವಲ್ಲ ಅಮೆರಿಕದಲ್ಲಿ ಟೆಸ್ಲಾ ಡ್ರೈವರ್ ಲೆಸ್ ಕಾರು ಕೂಡ ಅತ್ಯಂತ ಪ್ರಸಿದ್ದಿ ಪಡೆದಿದೆ. ಆದರೆ, ಈ ರೀತಿಯ ತಂತ್ರಜ್ಞಾನಕ್ಕೆ ಅತ್ಯಂತ ಸುಧಾರಿತ ಸೆನ್ಸಾರ್ ಮತ್ತು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳು ಅಗತ್ಯವಾಗಿವೆ. ಇಂಟರ್ನೆಟ್ ಸಂಪರ್ಕವನ್ನೇ ಸಂಪೂರ್ಣವಾಗಿ ನೆಚ್ಚಿಕೊಳ್ಳುವ ಇಂತಹ ತಾತ್ಕಾಲಿಕ ವ್ಯವಸ್ಥೆಗಳು ಯಾವುದೇ ಕ್ಷಣದಲ್ಲಿ ಅಪಾಯ ತರಬಲ್ಲವು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.