2024ರಲ್ಲಿ ಭಾರತದಲ್ಲಿ ಓಡಲಿದೆ ಒಪ್ಪೋ ಎಲೆಕ್ಟ್ರಿಕ್ ಕಾರ್?!

By Suvarna News  |  First Published Nov 24, 2021, 4:22 AM IST

ಈಗಾಗಲೇ ಗೂಗಲ್ (Google), ಶಿಯೋಮಿ (Xiaomi) ಮತ್ತು ಆಪಲ್‌ (Apple) ಕಂಪನಿಗಳು ಎಲೆಕ್ಟ್ರಿಕ್ ಕಾರು ಉತ್ಪಾದಿಸುತ್ತಿರುವುದು ಗೊತ್ತಿರುವ ಸಂಗತಿಯಾಗಿದೆ. ಇದೀಗ ಚೀನಾ ಮೂಲದ ಒಪ್ಪೋ (Oppo) ಕೂಡ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಮುಂದಾಗಿದೆ. 2024ರ ಹೊತ್ತಿದೆ ಅದು ಭಾರತೀಯ ಇವಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯಂತೆ!


ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳೆಲ್ಲವೂ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಬೇಕೆಂದು ನಿರ್ಧರಿಸಿದಂತಿದೆ. ಈಗಾಗಲೇ ಗೂಗಲ್ (Google), ಆಪಲ್ (Apple) ಮತ್ತು ಶಿಯೋಮಿ (Xiaomi)  ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಹೇಳಿಕೊಂಡಿವೆ. ಇದೀಗ ಈ ಸಾಲಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ ಸೇರ್ಪಡೆಯಾಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಒಪ್ಪೋ (Oppo) ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ 2024ರಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಅಂದರೆ ಮುಂದಿನ ಎರಡು ವರ್ಷದಲ್ಲಿ ಭಾರತೀಯ ರಸ್ತೆಗಳಲ್ಲಿ ನೀವು ಒಪ್ಪೋ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಓಡಾಡುವುದನ್ನು ಕಾಣಬಹುದಾಗಿದೆ. 91ಮೊಬೈಲ್ಸ್ ಎಂಬ ವೆಬ್‌ಸೈಟ್ ಈ ಬಗ್ಗೆ ವರದಿಯನ್ನು ಪ್ರಕಟಿಸಿದ್ದು, ಒಪ್ಪೋ (Oppo), ರಿಯಲ್‌ಮಿ (Realme), ಒನ್‌ಪ್ಲಸ್‌(One Plus)ನಂಥ ಸ್ಮಾರ್ಟ್‌ಫೋನ್ ಬ್ರ್ಯಾಂಡುಗಳನ್ನು ಹೊಂದಿರುವ ಬಿಬಿಕೆ ಎಲೆಕ್ಟ್ರಾನಿಕ್ಸ್ (BBK Electronics) ಕಂಪನಿಯು,  ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಯೋಜನಾ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಹಂತದಲ್ಲಿದೆ ಎನ್ನಲಾಗಿದೆ. ಹಾಗಾಗಿ, 2024ರ ಹೊತ್ತಿಗೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮೊದಲ ಕಂತಿನಲ್ಲಿ ಒಪ್ಪೋ ಎಲೆಕ್ಟ್ರಿಕ್ ವಾಹನಗಳ ಕಾಣಿಸಬಹುದು ಎಂದು ಹೇಳಲಾಗುತ್ತಿದೆ. 

2025ರ ಹೊತ್ತಿಗೆಆಪಲ್ ಕಾರ್
ಆಪಲ್ ಕಂಪನಿಯ ಇದೀಗ ಕಂಪನಿಯು 2025ರ ಹೊತ್ತಿಗೆ ಆಪಲ್ ತನ್ನ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. ಆಪಲ್ .ತಯಾರಿಸಲಿರುವ ಈ ಎಲೆಕ್ಟ್ರಿಕ್ ಕಾರ್ ಸೆಲ್ಫ್ ಡ್ರೈವಿಂಗ್ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಬೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ವರದಿಯ ಪ್ರಕಾರ, ಆಪಲ್‌ನ ಈ ಕಾರ್‌ನಲ್ಲಿ ಸ್ಟೀರಿಂಗ್ ಆಗಲೀ, ಪೆಡಲ್‌ಗಳಾಗಿ ಇರುವುದಿಲ್ಲ! ಸಂಪೂರ್ಣ ಹೊಸ ತಂತ್ರಜ್ಞಾನ ಆಧರಿತವಾಗಿ ರೂಪುಗೊಳ್ಳಲಿರುವ ಈ ಕಾರ್ ಬಗ್ಗೆ ಈಗಾಗಲೇ  ಸಾಕಷ್ಟು ಕುತೂಹಲ ಜಗತ್ತಿನಾದ್ಯಂತ ಮೂಡಿದೆ. ತನ್ನ ವಿಶಿಷ್ಟ ತಂತ್ರಜ್ಞಾನ ಬಳಕೆಗೆ ಹೆಸರಾಗಿರುವ ಆಪಲ್‌, ಕಾರಿನಲ್ಲಿ ಅಂಥದ್ದೇನ್ನೇ ನಿರೀಕ್ಷಿಸಬಹುದಾಗಿದೆ.

Latest Videos

ಆಪಲ್ ಕಂಪನಿಯ ಈ ಎಲೆಕ್ಟ್ರಿಕ್ ಕಾರ್ ತಯಾರಿಕಾ ಪ್ರಾಜೆಕ್ಟ್‌ ಟೈಟನ್ (Titan) ಎಂದು ಗುರುತಿಸಲಾಗಿದೆ. 2014ರಿದಂಲೇ ಇಂಥದೊಂದು ಪ್ರಕ್ರಿಯೆಯನ್ನು ಕಂಪನಿಯು ಚಾಲ್ತಿಯಲ್ಲಿಟ್ಟಿದೆ. ದೇಶಗಳಲ್ಲಿ ಮತ್ತು ಗ್ರಾಹಕರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಿದೆ. ಟೆಸ್ಲಾ (Tesla) ಮತ್ತು ರಿವಿಯನ್‌ (Rivian)ನಂತಹ ಕಂಪನಿಗಳ  ಈ ಹೊಸ ಮಾರುಕಟ್ಟೆ ಮೌಲ್ಯವನ್ನು ಸಾಂಪ್ರದಾಯಿಕ ಕಾರು ತಯಾರಕರಿಗಿಂತ ಹೆಚ್ಚು ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿವೆ. ಹಾಗಾಗಿ, ಆಪಲ್ ಕೂಡ ಈ ವಲಯದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದೆ. ತಂತ್ರಜ್ಞಾನ ಬಳಕೆಯಿಂದ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇರುವ ಆಪಲ್, ಕಾರ್ ತಯಾರಿಕೆಯಲ್ಲೂ ಅದೇ ಪ್ಯಾಟರ್ನ್ ಅನ್ನು ನಿರೀಕ್ಷಿಸಬಹುದಾಗಿದೆ. 

Apple Electric Car: 2025ಕ್ಕೆ ಸ್ಟೀರಿಂಗ್ ಇಲ್ಲದ, ಸ್ವಯಂಚಾಲಿತ ಕಾರ್?!

ಕೆಲವು ವಿಶ್ಲೇಷಕರ ಪ್ರಕಾರ 2025ರ ಹೊತ್ತಿಗೆ ಆಪಲ್ ತನ್ನ ಕಾರನ್ನು ಲಾಂಚ್ ಮಾಡುವ ಸಂಭಾವ್ಯತೆ ಶೇ.60ರಿಂದ 65ರಷ್ಟಿದೆ. ಸೆಲ್ಫ್ ಡ್ರೈವಿಂಗ್ ಸಿಸ್ಟಮ್, ಪ್ರೊಸೆಸರ್ ಚಿಪ್ಸ್ ಮತ್ತು ಅಡ್ವಾನ್ಸ್ಡ್ ಸೆನ್ಸರ್‌ಗಳನ್ನು ಈ ಕಾರ್ ಹೊಂದಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ಆಪಲ್ ಕಂಪನಿಯು ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಶಿಯೋಮಿಯಿಂದಲೂ ಕಾರ್
ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರ ಗ್ಯಾಜೆಟ್‌ಗಳು ಉತ್ಪಾದನೆ ಹಾಗೂ ಮಾರಾಟದ ಮೂಲಕ ಹೆಚ್ಚು ಜನಪ್ರಿಯವಾಗಿರುವ ಚೀನಾದ ಮೂಲದ ಶಿಯೋಮಿ (Xiaomi Corp) ಕಂಪನಿ ಎಲೆಕ್ಟ್ರಿಕ್‌ ಕಾರ್ (Electric Car ) ಉತ್ಪಾದನೆಯನ್ನು 2024ರಲ್ಲಿ ಆರಂಭಿಸಲಿದೆ ಎಂದು ಅಕ್ಟೋಬರ್‌ನಲ್ಲಿ ಸುದ್ದಿಯಾಗಿತ್ತು.

2024ರಲ್ಲಿ ಭಾರಿ ಪ್ರಮಾಣದಲ್ಲಿ ಕಾರ್ ಉತ್ಪಾದನೆ ಮಾಡುವ ಬಗ್ಗೆ Weibo ಸೋಷಿಯಲ್ ಮೀಡಿಯಾ ತಾಣದಲ್ಲಿ ಕಂಪನಿಯು ಅಧಿಕಾರಿಯೊಬ್ಬರು ಬರೆದುಕೊಂಡಿದ್ದರು. ಹಲವು ವೆಬ್‌ಸುದ್ದಿ ತಾಣಗಳು ವರದಿ ಮಾಡಿದ್ದವು.  ಶಿಯೋಮಿ (Xiaomi)ಯು 2024ರ ಮೊದಲಾರ್ಧದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹಾಗೂ ಶಿಯೋಮಿ ಕಾರ್ ಉತ್ಪಾದನೆ ಮಾಡಿ, ರಸ್ತೆಗಿಳಿಸಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಮೊಬಿಲಿಟಿಯಲ್ಲಿ ಸಂಪರ್ಕ ಕ್ರಾಂತಿಯೇ ಸಂಭವಿಸುತ್ತಿದೆ. ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದರ ಪರಿಣಾಮ, ಹೊಸ ವಲಯದಲ್ಲಿನ ಅವಕಾಶವನ್ನು ಬಾಚಿಕೊಳ್ಳುವುದಕ್ಕಾಗಿ ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಗೆ ಮುಂದಾಗಿವೆ. 

New Car Launch: ಅಪ್‌ಡೇಟ್‌ಗಳೊಂದಿಗೆ ರಸ್ತೆಗಿಳಿಯಲಿದೆ ಹೊಸ ಮಾರುತಿ ವಿಟಾರಾ ಬ್ರೆಜಾ

click me!