Electric Vehicle Sale: ವರ್ಷದಲ್ಲಿ 1.35 ಲಕ್ಷ ಇ-ಚಕ್ರ ವಾಹನ ದಾಖಲೆ ಮಾರಾಟ

By Suvarna NewsFirst Published Dec 13, 2021, 4:58 PM IST
Highlights

- ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ
-   ಕಳೆದ 11 ತಿಂಗಳಲ್ಲಿ 1.35 ಲಕ್ಷ ವಾಹನಗಳ ಮಾರಾಟ
-    ಬೇಡಿಕೆ ಹೆಚ್ಚಳ ಹಿನ್ನೆಲೆ, ಮಾರಾಟದಲ್ಲಿ ಇನ್ನಷ್ಟು ಏರಿಕೆ ನಿರೀಕ್ಷೆ

ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ಎಲೆಕ್ಟ್ರಿಕ್‌ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆಯಾದರೂ, ಜನರು ನಿರೀಕ್ಷಿತ ಪ್ರಮಾಣದಲ್ಲಿ ಇವಿ (EV) ಗಳತ್ತ ಗಮನಹರಿಸುತ್ತಿರಲಿಲ್ಲ. ಆದರೆ, ಈ ವರ್ಷ ಸನ್ನಿವೇಶ ಬದಲಾಗಿದೆ. ಪ್ರಸಕ್ತ ಸಾಲಿನ 11 ತಿಂಗಳಲ್ಲಿ ಇದೇ ಮೊದಲ ಬಾರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ 1 ಲಕ್ಷ ದಾಟಿದೆ. ಇದು ಸಕಾರಾತ್ಮಕ ಬೆಳವಣಿಗೆ ಎಂದು ಆಟೊಮೊಬೈಲ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್, (Hero Electric) ಒಕಿನಾವಾ (Okinava), ಏಥರ್‌ ಎನರ್ಜಿ (Ather Energy), ಟಿವಿಎಸ್‌ (TVS) ಮೋಟಾರ್‌ ಕಂಪನಿ, ಬಜಾಜ್‌ (Bajaj) ಆಟೊದಂತಹ 25 ಕಂಪನಿಗಳ ಒಟ್ಟು ವಾಹನಗಳ ಮಾರಾಟ 1,16,669ರಷ್ಟಿದೆ. ಇದು ವರ್ಷದಿಂದ ವರ್ಷದ ವಾಹನ ಮಾರಾಟ ಪ್ರಮಾಣದ ಶೇ.355ರಷ್ಟಿದೆ.ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ಇದು ದಾಖಲೆಯ ಮಾರಾಟವಾಗಿದೆ. ಸೆಪ್ಟೆಂಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಸರಾಸರಿ 18,948 ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಮಾರಾಟವಾಗಿವೆ.

2021ರ ಕ್ಯಾಲೆಂಡರ್‌ ವರ್ಷದಲ್ಲಿ ದ್ವಿಚಕ್ರ ವಾಹನಗಳ ಒಟ್ಟು ವಲಯದ ಮಾರಾಟ 1,35,000ದಷ್ಟಿದೆ.ಈ ಪೈಕಿ ಹೀರೋ ಎಲೆಕ್ಟ್ರಿಕ್‌, ಒಕಿನಾವ  ,ಮತ್ತು ಏಥರ್ ಪ್ರಮುಖ ಬೇಡಿಕೆಯ ವಾಹನಗಳಾಗಿವೆ. 
ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್, ನವೆಂಬರ್ನಲ್ಲಿ ದಾಖಲೆಯ 7,102 ದ್ವಿಚಕ್ರ ವಾಹಗಳನ್ನು ಮಾರಾಟ ಮಾಡಿದೆ.  ಇದು ಇದುವರೆಗಿನ ಒಂದು ತಿಂಗಳ ಹೆಚ್ಚಿನ ಮಾಋಾಟವಾಘಿದೆ.2021ರ ಜನವರಿಯಿಂದ ನವೆಂಬರ್ ನಡುವೆ ಒಟ್ಟು 40,318 ವಾಹನಗಳು ಮಾರಾಟವಾಗಿವೆ.ಈ ಲೆಕ್ಕಾಚಾರದಲ್ಲಿ ಈ ಕಂಪನಿ ತಿಂಗಳಿಗೆ 3,665 ವಾಹನ ಮಾರಾಟ ಮಾಡಿದೆ ಅಥವಾ ನವೆಂಬರ್ವರೆಗೆ ವರ್ಷದ ಪ್ರತಿ ದಿನ 120 ಹೀರೋ ಇ-ಸ್ಕೂಟರ್ಗಳು ಮಾರಾಟವಾಗಿವೆ. ಅದರ 11 ತಿಂಗಳ ಮಾರಾಟದ ಪ್ರಮಾಣ ಶೇ.400ರಷ್ಟಿದೆ.

ಇ-ವಾಹನ ಮಾರಾಟ: ಉತ್ತರ ಪ್ರದೇಶವೇ ಮೇಲು

ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಹೀರೋ ಎಲೆಕ್ಟ್ರಿಕ್‌ ಶೇ. 34.56ರಷ್ಟು ಕೊಡುಗೆ ನೀಡಿದೆ. ಇದರ ಜನಪ್ರಿಯ ಆಪ್ಟಿಮಾ, ಫೋಟಾನ್ ಮತ್ತು Nyx ಸೇರಿದಂತೆ ಇತರ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಇದು ದೇಶಾದ್ಯಂತ 700 ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಮಳಿಗೆಗಳನ್ನು ಒಳಗೊಂಡಿದೆ. ಜೊತೆಗೆ, ಇವಿ ಚಾರ್ಜಿಂಗ್ ನೆಟ್ವರ್ಕ್ ಅನ್ನು ವಿಸ್ತರಿಸಲು ಹೆಚ್ಚಿನ  ಹೂಡಿಕೆ ಮಾಡುತ್ತಿದೆ. ಬೆಂಗಳೂರು ಮೂಲದ EV ಚಾರ್ಜಿಂಗ್ ಸ್ಟಾರ್ಟ್-ಅಪ್, ಒಂದು ವರ್ಷದಲ್ಲಿ 1,00,000 ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಮುಂದಾಗಿದೆ.

ಸದ್ಯ ಬೆಂಗಳೂರು ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಬೇಡಿಕೆಯಲ್ಲಿರುವ ಎರಡನೇ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕಂಪನಿಯೆಂದರೆ ಅದು ಒಕಿನಾವ. 2021ರ ಜನವರಿಯಿಂದ ನವೆಂಬರ್‌ ತಿಂಗಳ ಅವಧಿಯಲ್ಲಿ ಇದು 23,899 ವಾಹನಗಳ ಮಾರಾಟ ದಾಖಲಿಸಿದ್ದು, ಇದು ಶೇ.329ರಷ್ಟು ವರ್ಷದಿಂದ ವರ್ಷದ ಪ್ರಗತಿಯಾಗಿದೆ. ಈ ಮೂಲಕ ಒಕಿನಾವ ಮಾರುಕಟ್ಟೆಗೆ ಶೇ.20.48ರಷ್ಟು ಕೊಡುಗೆ ನೀಡುತ್ತಿದೆ. ಇದು ಮಾಸಿಕ ಸರಾಸರಿ 4.257 ವಾಹನಗಳ ಮಾರಾಟ ದಾಖಲಿಸಿದೆ ಮತ್ತು ನವೆಂಬರ್‌ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 5.421 ವಾಹನಗಳನ್ನು ಮಾರಾಟ ಮಾಡಿದೆ.

ತನ್ನ ಉತ್ಪಾದನಾ ಸಾಮರ್ಥ್ಯದ  ಹೆಚ್ಚಿಸುವ ಸಲುವಾಗಿ, ಓಕಿನಾವಾ ರಾಜಸ್ಥಾನದ ಭಿವಾಡಿಯಲ್ಲಿ ಹೊಸ ಘಟಕ ನಿರ್ಮಾಣಕ್ಕಾಗಿ ರೂ 200-250 ಕೋಟಿರೂ.ಗಳ ಹೂಡಿಕೆ ಮಾಡುತ್ತಿದೆ. ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ (FY2022) ಶೇ. 100 ಪ್ರತಿಶತ ದೇಶೀಯ ಉತ್ಪನ್ನಗಳ ಬಳಕೆ ಮಾಡಿ ಇ-ಮೋಟಾರ್ ಸೈಕಲ್ ತಯಾರಿಸುವುದು ಇದರ ಗುರಿಯಾಗಿದೆ. ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಅಥರ್ ಎನರ್ಜಿ ಟಾಪ್ 25 EV OEM ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ  ಕಂಪನಿ, ವರ್ಷದ ಮೊದಲ 11 ತಿಂಗಳಲ್ಲಿ 14,152 ವಾಹನಗಳನ್ನು ಮಾರಾಟ ಮಾಡಿದೆ. ಅಥರ್ 450X ಮತ್ತು 450 ಪ್ಲಸ್ – ಎಂಬ ಎರಡು ಮಾದರಿಗಳನ್ನು ಮಾತ್ರ  ಹೊಂದಿರುವ ಹೊರತಾಗಿಯೂ ಕಂಪನಿಯು ಬೇಡಿಕೆಯಲ್ಲಿ ಉತ್ತಮ ಏರಿಕೆಯಾಗಿದೆ. 

ಕೈಗೆಟಕುವ ದರದಲ್ಲಿ ಹುಂಡೈ ಎಲೆಕ್ಟಿಕ್ ಕಾರು

ಈ ಮೂರು ಆಟೊಮೊಬೈಲ್‌ ಕಂಪನಿಗಳು ಒಟ್ಟಾಗಿ ಪ್ರಸಕ್ತ ಸಾಲಿನಲ್ಲಿ 78,369 ವಾಹನಗಳನ್ನು ಮಾರಾಟ ಮಾಡಿವೆ. ಇದು ಒಟ್ಟು ಮಾರಾಟದ ಶೇ.67ರಷ್ಟಿದೆ.  2030 ರ ವೇಳೆಗೆ 30 ಮಿಲಿಯನ್ ಇವಿ ವಾಹನಗಳ ಮಾರಾಟ ತಲುಪು ಗುರಿ ಹೊಂದಿರುವ ಏಥರ್ ಎನರ್ಜಿ, 2025 ರ ವೇಳೆಗೆ ಸುಮಾರು ಶೇ. 40ರಷ್ಟು ಪೆಟ್ರೋಲ್ ಎಂಜಿನ್ ಸ್ಕೂಟರ್ ಮಾರಾಟವನ್ನು ಎಲೆಕ್ಟ್ರಿಕ್ ಸ್ಕೂಟರ್ಗಳಾಗಿ ಪರಿವರ್ತಿಸುವ ಅಭಿಲಾಷೆ ಹೊಂದಿದೆ. ಓಲಾ (Ola) ದ S1 ಮತ್ತು S1 Pro 1,00,000 ಬುಕಿಂಗ್ಗಳನ್ನು ಪಡೆದುಕೊಂಡು ಇತರ ವಾಹನಗಳಿಗೆ ಸ್ಪರ್ಧೆ ನಿಡುತ್ತಿದೆ. ಜೊತೆಎ, ಸಿಂಪಲ್ ಎನರ್ಜಿ 30,000 ಕ್ಕೂ ಹೆಚ್ಚು ಮತ್ತು ಬೂಮ್ ಮೋಟಾರ್ಸ್ 25,000 ಕ್ಕೂ ಹೆಚ್ಚು ಬುಕಿಂಗ್ಗಳನ್ನು ಹೊಂದಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆಯ ವೇಗ ಗಮನಿಸಿದರೆ, ಮಾರಾಟ ಇನ್ನಷ್ಟು ಬೆಳೆಯುವ ನಿರೀಕ್ಷೆಯಿದೆ. ಫೇಮ್ ( FAME II )ಸಬ್ಸಿಡಿಯಲ್ಲಿನ ಹೆಚ್ಚಳ, ಪೆಟ್ರೋಲ್‌ ಬೆಲೆ ಏರಿಕೆಗಳು ಇದಕ್ಕೆ ಪೂರಕವಾಗಿದೆ. ಇದಲ್ಲದೆ, ದೇಶದ 20 ಕ್ಕೂ ಹೆಚ್ಚು ರಾಜ್ಯಗಳು ಇವಿ ( EV)ಸ್ನೇಹಿ ನೀತಿಗಳನ್ನು ಪ್ರಕಟಿಸುತ್ತಿವೆ. 

click me!