ಮಾರುತಿ ಸುಜುಕಿ ಕಾರುಗಳ ದರ ಶೀಘ್ರವೇ ದುಬಾರಿ: ಈ ತಿಂಗಳ ಒಳಗಾಗಿ ಕಾರ್‌ ಬುಕ್‌ ಮಾಡಿದ್ರೆ ಬೆಸ್ಟ್‌!

Published : Jul 21, 2026, 08:19 PM IST
Maruti Suzuki Brezza Facelift 2026

ಸಾರಾಂಶ

ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ, ಆಗಸ್ಟ್‌ನಿಂದ ತನ್ನ ಕಾರುಗಳ ಬೆಲೆಯನ್ನು 30,000 ರೂ.ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಈ ನಿರ್ಧಾರಕ್ಕೆ ಕಾರಣವಾಗಿದೆ.

ನವದೆಹಲಿ (ಜು.21): ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki) ತನ್ನ ಗ್ರಾಹಕರಿಗೆ ಭಾರಿ ಆಘಾತ ನೀಡಿದೆ. ಮುಂಬರುವ ಆಗಸ್ಟ್‌ನಿಂದ ಜಾರಿಗೆ ಬರುವಂತೆ ತನ್ನ ಕಾರುಗಳ ಬೆಲೆಯನ್ನು ಗರಿಷ್ಠ 30,000 ರೂಪಾಯಿಗಳವರೆಗೆ ಹೆಚ್ಚಿಸುವುದಾಗಿ ಕಂಪನಿ ಅಧಿಕೃತವಾಗಿ ಘೋಷಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಕಂಪನಿ ತಿಳಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಮತ್ತು ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಕಂಪನಿ ಹೇಳಿದೆ. ಆದರೆ ಉಕ್ಕು (Steel), ಅಲ್ಯೂಮಿನಿಯಂ, ಅಮೂಲ್ಯ ಲೋಹಗಳು, ಇತರ ಕಚ್ಚಾವಸ್ತುಗಳು ಹಾಗೂ ಸಾರಿಗೆ (Logistics) ಮತ್ತು ನಿರ್ವಹಣಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳೆಯ ದರಗಳಲ್ಲೇ ಕಾರುಗಳನ್ನು ಮಾರಾಟ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಎಲ್ಲಾ ಕಾರು ಮಾಡೆಲ್‌ಗಳ ಮೇಲೂ ಒಂದೇ ಸಮನಾಗಿ ಬೆಲೆ ಏರಿಕೆಯಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಾರಿನ ಮಾಡೆಲ್ ಮತ್ತು ವೇರಿಯೆಂಟ್ (Variant) ಆಧಾರದ ಮೇಲೆ ಬೆಲೆ ವ್ಯತ್ಯಾಸವಾಗಲಿದೆ. ಕೆಲ ಮಾಡೆಲ್‌ಗಳಿಗೆ ಕಡಿಮೆ ಹಾಗೂ ಇನ್ನು ಕೆಲ ಮಾಡೆಲ್‌ಗಳಿಗೆ ಹೆಚ್ಚಿನ ಪ್ರಮಾಣದ ಬೆಲೆ ಏರಿಕೆಯಾಗಲಿದ್ದು, ಗರಿಷ್ಠ ಏರಿಕೆ 30,000 ರೂಪಾಯಿಗಳವರೆಗೆ ಇರಲಿದೆ. 2026 ರಲ್ಲಿ ಮಾರುತಿ ಸುಜುಕಿ ಕೈಗೊಂಡಿರುವ ಪ್ರಮುಖ ದರ ಪರಿಷ್ಕರಣೆ ಇದಾಗಿದೆ.

ಹಿಂದೆಯೇ ಮುನ್ಸೂಚನೆ ನೀಡಿದ್ದ ಕಂಪನಿ

ಮೇ 2026 ರಲ್ಲಿ ಕಂಪನಿಯು ಉತ್ಪಾದನಾ ವೆಚ್ಚ ತಗ್ಗಿಸಲು ನಿರಂತರ ಶ್ರಮಿಸುತ್ತಿರುವುದಾಗಿ ತಿಳಿಸಿತ್ತು. ಇದಕ್ಕೂ ಮುನ್ನ ಫೆಬ್ರವರಿ 2026 ರಲ್ಲಿಯೇ ಚಿನ್ನ, ಬೆಳ್ಳಿ ಸೇರಿದಂತೆ ಅಗತ್ಯ ಕಚ್ಚಾವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು, ಕಾರುಗಳ ದರ ಏರಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಗಿತ ವ್ಯಕ್ತಪಡಿಸಿತ್ತು. ಈ ಬೆಲೆ ಏರಿಕೆಯ ಸುದ್ದಿಯು ಶೇರು ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರಿದ್ದು, ಮಂಗಳವಾರ ಮಧ್ಯಾಹ್ನ ಬಿಎಸ್‌ಇ (BSE) ಮಾರುಕಟ್ಟೆಯಲ್ಲಿ ಮಾರುತಿ ಶೇರುಗಳು 122.55 ರೂಪಾಯಿಗಳಷ್ಟು ಏರಿಕೆ ಕಂಡು 13,630 ರೂಪಾಯಿಗಳಲ್ಲಿ ವಹಿವಾಟು ನಡೆಸಿದ್ದವು.

ನೀವೇನಾದರೂ ಮುಂಬರುವ ದಿನಗಳಲ್ಲಿ ನೂತನ ಮಾರುತಿ ಕಾರು ಖರೀದಿಸುವ ಯೋಜನೆ ಹೊಂದಿದ್ದರೆ, ಆಗಸ್ಟ್ ತಿಂಗಳಿಗೂ ಮುನ್ನವೇ ಬುಕಿಂಗ್ ಮಾಡುವುದು ಲಾಭದಾಯಕವಾಗಲಿದೆ. ಏಕೆಂದರೆ ಆಗಸ್ಟ್ ನಂತರ ಅದೇ ಮಾಡೆಲ್‌ಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯ ಆಲ್ಟೋ K10, ವ್ಯಾಗನ್ ಆರ್, ಸ್ವಿಫ್ಟ್, ಬಲೆನೋ, ಬ್ರೆಝಾ, ಫ್ರಾಂಕ್ಸ್, ಡೈಜೈರ್, ಎರ್ಟಿಗಾ ಮತ್ತು ಗ್ರಾಂಡ್ ವಿಟಾರಾ ಕಾರುಗಳಿಗೆ ದೇಶಾದ್ಯಂತ ಭಾರಿ ಬೇಡಿಕೆಯಿದ್ದು, ಈ ದರ ಏರಿಕೆಯು ಅಪಾರ ಸಂಖ್ಯೆಯ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.

PREV
Read more Articles on
click me!

Recommended Stories

ಭಾರತದ ಈ ಕಂಪನಿಗೆ ಮಾರಾಟವಾಗಲಿದ್ಯಾ ಸ್ಕೋಡಾ ಆಟೋ ವೋಕ್ಸ್‌ವಾಗನ್‌ ಇಂಡಿಯಾ?
Tata Avinya EV: ಫುಲ್ ಚಾರ್ಜ್ ಮಾಡಿದ್ರೆ 700 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್ ಕಾರ್ !