ಲಾಕ್‌ಡೌನ್‌ನಲ್ಲಿ ಕಾರು ಮೇಂಟೇನ್ ಸೀಕ್ರೆಟ್ ಕೊಟ್ಟ ಅಟೋ ಕಂಪನಿಗಳು

By Suvarna News  |  First Published Apr 6, 2020, 1:21 PM IST

ಲಾಕ್‌ಡೌನ್ ಆದಮೇಲಿಂದ ವಾಹನಗಳು ಒಂದು ಕಡೆ ನಿಂತುಬಿಟ್ಟಿವೆ. ವಾಹನಗಳ ಫ್ರೀ ಸರ್ವಿಸ್ ಅವಧಿಯನ್ನು ವಿಸ್ತರಿಸಿ ಸಹಕರಿಸಿದ ಅಟೋ ಉತ್ಪಾದಕ ಕಂಪನಿಗಳು ಈಗ ತಮ್ಮ ಗ್ರಾಹಕರಿಗೆ ವಾಹನಗಳನ್ನು ಹೇಗಿಟ್ಟುಕೊಳ್ಳಬೇಕೆಂಬ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡುತ್ತಿವೆ. ಈಗಂತೂ ಅಂಗೈಯಲ್ಲೇ ಮಾಹಿತಿ ಸಿಗುವ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾಗಳ ಮೂಲಕ ಅಗತ್ಯ ಟಿಪ್ಸ್‌ಗಳನ್ನು ನೀಡುತ್ತಿವೆ. ಕೆಲವರು ಸಹಾಯವಾಣಿ ಪ್ರಾರಂಭಿಸಿದರೆ ಮತ್ತೆ ಕೆಲವರು ವೆಬ್‌ಸೈಟ್‌ನಲ್ಲಿ ಪುಟಗಳನ್ನು ತೆರೆದಿದ್ದಾರೆ.  


ವಿಶ್ವವೇ ಕರೋನಾ ಸೋಂಕೆಂಬ ಸನ್ನಿಗೆ ಒಳಗಾಗಿ ಬಹುತೇಕ ದೇಶಗಳು ಲಾಕ್‌ಡೌನ್ ಮೊರೆಹೋಗಿವೆ. ಈ ಸಂದರ್ಭದಲ್ಲಿ ಕಾರುಗಳೂ ಶೆಡ್ ಸೇರಿವೆ. ರಸ್ತೆ ಬದಿ ಪಾರ್ಕಿಂಗ್ ಸ್ಥಿತಿಯಲ್ಲಿ ನಿಂತುಕೊಂಡಿವೆ. ಆದರೆ, ಹೀಗೇ ಬಿಟ್ಟರೆ ಕಾರಿನ ಟೈಂ ಸಹ ಕೆಡುತ್ತದೆ ಎಂಬ ಸಂದೇಶವನ್ನು ಅಟೋ ಉತ್ಪಾದನಾ ಕಂಪನಿಗಳು ರವಾನಿಸಿವೆ. ಇದಕ್ಕಾಗಿ ತಮ್ಮ ಗ್ರಾಹಕರಿಗೆ ಹೇಗೆ ಕಾರನ್ನು ಮೇಂಟೇನ್ ಮಾಡಬೇಕೆಂಬ ಟಿಪ್ಸ್‌ಗಳನ್ನೂ ಕೊಟ್ಟಿವೆ.

ಸೋಷಿಯಲ್ ಮೀಡಿಯಾಗಳಲ್ಲಿ ಕಾರುಗಳನ್ನು ಹೇಗಿಟ್ಟುಕೊಳ್ಳಬೇಕು? ಅದನ್ನು ಆಗಾಗ ಏಕೆ ಸ್ಟಾರ್ಟ್ ಮಾಡುತ್ತಿರಬೇಕು? ಎಂಜಿನ್‌ಗೆ ಕೆಲಸ ಕೊಡುವುದರಿಂದಾಗುವ ಉಪಯೋಗವೇನು? ಎಂಬಿತ್ಯಾದಿಗಳ ಬಗ್ಗೆ ಅಟೊ ಕಂಪನಿಗಳು ತಮ್ಮ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಕೆಲ ಟಿಪ್ಸ್‌ಗಳನ್ನು ಕೊಟ್ಟಿವೆ.

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!

ಮಾರುತಿ ಸುಜುಕಿ ಹೇಳೋದೇನು?
ತಿಂಗಳಲ್ಲಿ ಒಮ್ಮೆಯಾದರೂ ನಿಮ್ಮ ಕಾರುಗಳನ್ನು ಸ್ಟಾರ್ಟ್ ಮಾಡಿ, 15 ನಿಮಿಷ ಇಂಜಿನ್ ಆನ್ ಇರುವಂತೆ ನೋಡಿಕೊಳ್ಳಿ. SHVS ವಾಹನಗಳಿದ್ದರೆ ತಿಂಗಳಲ್ಲಿ ಕೊನೇಪಕ್ಷ ಒಮ್ಮೆಯಾದರೂ 30 ನಿಮಿಷ ಸ್ಟಾರ್ಟ್ ಮೋಡ್‌ನಲ್ಲಿಯೇ ಇಟ್ಟು ಇಂಜಿನ್ ರನ್ ಮಾಡುವುದಲ್ಲದೆ, ಹೆಡ್‌ಲೈಟ್‌ಗಳನ್ನೂ ಆನ್ ಮಾಡಬೇಕಾಗುತ್ತದೆ. ಜೊತೆಗೆ ಸುಸ್ಥಿಥಿಯಲ್ಲಿ ಬ್ಯಾಟರಿಗಳನ್ನು ಇಟ್ಟುಕೊಳ್ಳಲು ಏನು ಮಾಡಬೇಕು? ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿದ್ದರೆ ಯಾವ ಕ್ರಮ ಅನುಸರಿಸಬೇಕೆಂಬ ಬಗ್ಗೆ ಮಾರುತಿ ಸುಜುಕಿ ಕಂಪನಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸಲಹೆಗಳನ್ನು ಕೊಟ್ಟಿದೆ. ಜೊತೆಗೆ ಕಾರು ಮೇಂಟೇನೆನ್ಸ್ ಬಗ್ಗೆ ಪ್ರತಿದಿನ ಕೆಲ ಮಾಹಿತಿ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದೆ. 

ಮಹೀಂದ್ರಾ-ಹುಂಡೈ ಟಿಪ್ಸ್
ಇನ್ನು ಕೆಲವು ಕಂಪನಿಗಳು ಗ್ರಾಹಕರಿಗೋಸ್ಕರ ಸಹಾಯವಾಣಿ (helplines) ಗಳನ್ನು ತೆರೆದಿದ್ದು, ಗ್ರಾಹಕರು ಕಾರು ಮೇಂಟೇನೆನ್ಸ್ ಹಾಗೂ ಸರ್ವಿಸ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಚಾರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯವರು ತಮ್ಮ ವೆಬ್‌ಸೈಟ್‌ನಲ್ಲಿ "ವಿಥ್ ಯು ಹಮೇಶಾ" (‘With You Humesha’) ಎಂಬ ಪುಟವನ್ನೇ ಪ್ರಾರಂಭಿಸಿದೆ. 

ಇದನ್ನೂ ಓದಿ: ಬುಕ್ ಮಾಡಿದ ಹತ್ತೇ ದಿನದಲ್ಲಿ ಕೈಸೇರಲಿದೆ ಜಾವಾ; ಫುಲ್ ಖುಷ್ ಹುವಾ!

ಹುಂಡೈ ಸಹ ಇದೇ ಮಾದರಿಯನ್ನು ಅನುಸರಿಸಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಸಾವಿರಕ್ಕೂ ಹೆಚ್ಚು ಮನೆ ಬಾಗಿಲ ಸೇವೆ (doorstep service) ಬಗ್ಗೆ ಮಾಹಿತಿಕೊಟ್ಟಿದ್ದು, ತುರ್ತು ಪರಿಸ್ಥಿತಿ ಇದ್ದಾಗ ಸದಾ ಸೇವೆಗೆ ಬದ್ಧ ಎಂಬ ಸಂದೇಶವನ್ನು ಕೊಟ್ಟಿದೆ.

ದ್ವಿಚಕ್ರವಾಹನಿಗಳೂ ಇದೆ ಸಲಹೆ
ದ್ವಿಚಕ್ರವಾಹನಗಳನ್ನು ಹೇಗಿಟ್ಟುಕೊಳ್ಳಬೇಕೆಂಬ ಬಗ್ಗೆಯೂ ಕೆಲ ಉಪಯುಕ್ತ ಸಲಹೆಗಳನ್ನು ಕೊಡಲಾಗಿದೆ. ಟಿವಿಎಸ್ ಮೋಟಾರ್ ಕಂಪನಿ ಮತ್ತು ಯಮಹಾ ಮೋಟಾರ್ ಇಂಡಿಯಾ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಗ್ರಾಫಿಕ್ಸ್‌ಗಳ ಮೂಲಕ ಹೇಗೆ ಬೈಕ್ ಪಾರ್ಕ್ ಮಾಡಬೇಕು ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ವಾರಕ್ಕೆ 2 ಬಾರಿಯಾದರೂ ಸ್ಟಾರ್ಟ್ ಮಾಡಿ ಇಂಜಿನ್ ಅನ್ನು ಸುಸ್ಥಿತಿಯಲ್ಲಿಡಬೇಕು ಎಂಬ ಬಗ್ಗೆ ಮಾಹಿತಿಯನ್ನು ನೀಡಿದೆ.

ಟಯರ್ ಉತ್ಪಾದಕ ಕಂಪನಿ ಸಿಯೆಟ್ ಸಹ ಕಾರು ಮಾಲೀಕರಿಗೆ ಕೆಲ ಟಿಪ್ಸ್ ಕೊಟ್ಟಿದ್ದು, ಕಾರನ್ನು ನಿಲ್ಲಿಸಿದಲ್ಲೇ ಅಲ್ಪ ಮುಂದೆ-ಹಿಂದೆ ಮಾಡುವ ಮೂಲಕ ಫ್ಲಾಟ್ ಸ್ಪಾಟ್ ತಪ್ಪಿಸಬೇಕು ಎಂದು ಗ್ರಾಫಿಕ್ ಮೂಲಕ ತೋರಿಸಿಕೊಟ್ಟಿದೆ.



ಈ ಕ್ರಮಗಳನ್ನೂ ನೀವು ತಪ್ಪದೇ ಅನುಸರಿಸಿ
- ಕಾರಿನ ಬ್ಯಾಟರಿ ಉತ್ತಮವಾಗಿರಲು 3-4 ದಿನಕ್ಕೊಮ್ಮೆ ಸ್ಟಾರ್ಟ್ ಮಾಡುತ್ತಿರುವುದು.
- ಹ್ಯಾಂಡ್ ಬ್ರೇಕ್ ಮೂಲಕ ವಾಹನ ನಿಲುಗಡೆ ಮಾಡುವುದಕ್ಕಿಂತ ಗೇರ್ ಮೂಲಕವೇ ನಿಲ್ಲಿಸುವುದು ಸೂಕ್ತ.
- ಕಾರಿನ ಒಳಭಾಗ ತಿನಿಸುಗಳನ್ನು ಇಡದೆ ಇಲಿ-ಹೆಗ್ಗಣಗಳಿಂದ ಕಾಪಾಡಿಕೊಳ್ಳುವುದು.
- ಪೇಪರ್, ಪ್ಲಾಸ್ಟಿಕ್ ಗಳಂತಹ ವಸ್ತುಗಳಿದ್ದರೆ ತೆಗೆದಿಡುವುದು ಸೂಕ್ತ. ಕಾರಣ, ಒಳಗೆ ಉಷ್ಣತೆ ಹೆಚ್ಚಾದರೆ ಇವುಗಳಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ.
- ಶೆಡ್ ವ್ಯವಸ್ಥೆ ಇಲ್ಲದಿದ್ದರೆ ಸಾಧ್ಯವಾದಷ್ಟು ನೆರಳಿನಲ್ಲಿಯೇ ಪಾರ್ಕ್ ಮಾಡುವುದು ಉತ್ತಮ. ಇಲ್ಲದಿದ್ದರೆ ಬಿಸಿಲಿನ ಪ್ರಖರತೆಯಿಂದ ಕಾರಿನ ಬಣ್ಣ ಕುಂದಲಿದ್ದು, ಅಂದ ಕೆಡಲಿದೆ.

click me!