ಇನ್ಸುರೆನ್ಸ್ ಮುಗಿದು 4 ವರ್ಷವಾದ್ರೂ ರಾಜರೋಷವಾಗಿ ಓಡಾಡುತ್ತಿರುವ ಸರ್ಕಾರಿ ಕಾರು

By Suvarna NewsFirst Published Jun 7, 2022, 3:38 PM IST
Highlights

* ಸರ್ಕಾರಿ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ
* ವಿಮೆ ಇಲ್ಲದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿರುವ ವಾಹನ 
* ಇನ್ಸುರೆನ್ಸ್ ಮುಗಿದು ನಾಲ್ಕು ವರ್ಷವಾದ್ರೂ ಓಡುತ್ತಿದೆ ಸರ್ಕಾರದ ಕಾರು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಜೂನ್.07):
ಜನಸಾಮಾನ್ಯರಿಗೆ ಒಂದು ಕಾನೂನು, ಸರ್ಕಾರಿ ಅಧಿಕಾರಿಗಳಿಗೆ ಮತ್ತೊಂದು ಕಾನೂನು ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ. ವಿಮೆ ಮಾಡಿಸಿ ಅಂತ ಸಾರ್ವಜನಿಕರಿಗೆ ತಿಳಿಹೇಳುವ ಸರ್ಕಾರಿ ಅಧಿಕಾರಿಗಳೇ ತಮ್ಮ ವಾಹನಕ್ಕೆ ವಿಮೆ ಮಾಡಿಸಿದೇ ಇರುವುದು ನಿರ್ಲಕ್ಷದ ಪರಮಾವಧಿ ಆಗಿದೆ.

 ಜನಸಾಮಾನ್ಯರಿಗಾದ್ರೆ ಹೆಲ್ಮೆಟ್ ಇಲ್ಲ. ಸೀಟ್ ಬೆಲ್ಟ್ ಹಾಕಿಲ್ಲ. ಇನ್ಸುರೆನ್ಸ್ ಇಲ್ಲ, ಎಮಿಷನ್ ಟೆಸ್ಟ್ ಇಲ್ಲ, ಮಿರರ್ ಇಲ್ಲ ಅದಿಲ್ಲ-ಇದಿಲ್ಲ ಅಂತೆಲ್ಲಾ ಪೊಲೀಸರು ಕೇಸ್ ಮೇಲೆ ಕೇಸ್ ಹಾಕುತ್ತಾರೆ. ಆದರೆ, ಸರ್ಕಾರದ ಗಾಡಿಯಲ್ಲಿ ಇನ್ಸುರೆನ್ಸ್ ಮುಗಿದು ಒಂದೆರಡು ತಿಂಗಳಲ್ಲ ಬರೋಬ್ಬರಿ ನಾಲ್ಕು ವರ್ಷವಾಗಿದೆ. ಆದ್ರು ಸರ್ಕಾರದ ಕಾರು ರಸ್ತೆಯಲ್ಲಿ ಓಡುತ್ತಲೇ ಇದೆ. 

ಮೊದಲ ಬಾರಿಗೆ ಕಾರು ಖರೀದಿಸುತ್ತಿದ್ದೀರಾ? ಎಚ್ಚರಿಕೆ ಅತೀ ಅಗತ್ಯ!

ಹೌದು.. ದಾರಿಯುದ್ದಕ್ಕೂ ನಿಲ್ಲುವ ಪೊಲೀಸರು, ಚೆಕ್ ಪೋಸ್ಟ್ ಗಳನ್ನು ದಾಟಿ ಆ ಸರ್ಕಾರಿ ಕಾರು ಚಿಕ್ಕಮಗಳೂರಿಗೆ ಬಂದಿದೆ.ರಸ್ತೆ ಉದ್ದಕ್ಕೂ ಸಾರ್ವಜನಿಕರ ವಾಹನವನ್ನು ತಪಾಸಣೆ ಮಾಡುವ ಪೊಲೀಸರು ಮಾತ್ರ ಈ ವಾಹನಕ್ಕೆ ಹೇಳೋರಿಲ್ಲ. ಕೇಳೋರಿಲ್ಲ ಎನ್ನುವಂತೆ ವರ್ತನೆ ಮಾಡಿದ್ದಾರೆ. ಬೆಂಗಳೂರಿನಿಂದ ತುಮಕೂರು, ಹಾಸನ, ಚಿಕ್ಕಮಗಳೂರನ್ನ ದಾಟಿ ಮೂಡಿಗೆರೆಗೆ ಬಂದಿದೆ. ನಾಲ್ಕು ವರ್ಷದಲ್ಲಿ ಇನ್ನೂ ಎಲ್ಲೆಲ್ಲಿ ಓಡಾಡಿದ್ಯೋ ಗೊತ್ತಿಲ್ಲ. ಆದರೆ, ಎಲ್ಲೂ ಯಾರು ನಿಲ್ಲಿಸಿ ದಾಖಲೆ ಕೇಳಿಲ್ಲವಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಇನ್ಸುರೆನ್ಸ್ ರಿನಿವಲ್ ಆಗಿಲ್ಲ ಎರಡು‌, ಮೂರು ತಿಂಗಳ ಪ್ರಶ್ನೆಯಲ್ಲ, ಬರೋಬ್ಬರಿ ನಾಲ್ಕು ವರ್ಷಗಳಿಂದ ಸರ್ಕಾರಿ ಕಾರಿಗೆ ವಿಮೆಯನ್ನು ಅಧಿಕಾರಿಗಳು ಮಾಡಿಸಿಲ್ಲ. ಇದು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹಾಕಿದ್ದಾರೆ.

ಸರ್ಕಾರದ ಲೋಗೋ ಇರುವ ಕಾರು 
ಬೆಂಗಳೂರಿನ ಕೆಎ 02 ಎಮ್ ಎಮ್ 6627 ಇನ್ನೋವಾ ಕಾರಿಗೆ ಇನ್ಸುರೆನ್ಸ್ ಇಲ್ಲದೇ ಇರುವುದನ್ನು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಸ್ಥಳೀಯರು ಪತ್ತೆ ಹಚ್ಚಿದ್ದಾರೆ.ಸ್ಥಳೀಯರು ಇನ್ಸೂರೆನ್ಸ್ ಅನ್ನು ಮೊಬೈಲ್‌ನಲ್ಲಿ ಪರೀಕ್ಷಿಸಿರುವುದು ಬಯಲಿಗೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಾರೆ. ಸರ್ಕಾರದ ಗಾಡಿ. ಸರ್ಕಾರದ ಲೋಗೋ ಇದೆ. 

ಈ ಕಾರು ರಿಜಿಸ್ಟ್ರೇಷನ್ ಆಗಿರೋದು 2017ರಲ್ಲಿ. 2018ರಲ್ಲೇ ಇನ್ಸುರೆನ್ಸ್ ಮುಗಿದಿದೆ. ನಾಲ್ಕು ವರ್ಷದಿಂದ  ಇನ್ಸುರೆನ್ಸ್ ಇಲ್ಲದೆ ಓಡಾಡುತ್ತಿದೆ. 2022ರಲ್ಲಿ ಈ ಗಾಡಿಯನ್ನ ಜ್ಞಾನಭಾರತಿ ಆರ್.ಟಿ.ಓ. ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿದೆ. ಆದರೂ ಈ ಗಾಡಿ ರಾಜರೋಷವಾಗಿ ರಸ್ತೆಯಲ್ಲಿ ಓಡಾಡುತ್ತಿದೆ. ಇದನ್ನ ಗಮನಿಸಿದ ಸ್ಥಳಿಯರು ಸರ್ಕಾರ, ಪೊಲೀಸ್ ಹಾಗೂ ಆರ್.ಟಿ.ಓ ವಿರುದ್ಧ ವ್ಯಂಗ್ಯವಾಡಿದ್ದಾರೆ. 

ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಅಂದ್ರೆ ಗಾಡಿ ಸೈಡಿಗೆ ಹಾಕಿಸಿ ಗಾಡಿಯ ಜನ್ಮ ಜಾಲಾಡುತ್ತಾರೆ. ಒಂದು ದಾಖಲೆ ಇಲ್ಲ ಅಂದ್ರು ಫೈನ್ ಹಾಕುತ್ತಾರೆ. ಈ ಗಾಡಿ ಹೇಗೆ ಓಡಾಡೋದಕ್ಕೆ ಸಾಧ್ಯ. ಹಾಗಾದ್ರೆ, ಸರ್ಕಾರದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರವಾ ಎಂದು ಪ್ರಶ್ನಿಸಿದ್ದಾರೆ.

click me!