
ನವದೆಹಲಿ (ಜು.9): ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಜೂನ್ 2026ರ ತಿಂಗಳು ಅತ್ಯಂತ ಲಾಭದಾಯಕವಾಗಿ ಪರಿಣಮಿಸಿದೆ. ಈ ಒಂದೇ ತಿಂಗಳಿನಲ್ಲಿ ದೇಶಾದ್ಯಂತ ಒಟ್ಟು 4,10,853 ಕಾರುಗಳು ಮಾರಾಟವಾಗುವ ಮೂಲಕ ವಾಹನ ಮಾರುಕಟ್ಟೆ ಹೊಸ ದಾಖಲೆ ಬರೆದಿದೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಾದ 3,19,412 ಕಾರುಗಳ ಮಾರಾಟಕ್ಕೆ ಹೋಲಿಸಿದರೆ, ಈ ಬಾರಿ ಶೇಕಡಾ 28 ರಷ್ಟು ಭರ್ಜರಿ ಬೆಳವಣಿಗೆ ದಾಖಲಾಗಿದೆ. ಕಾರುಗಳು ಈಗ ಕೇವಲ ಐಷಾರಾಮಿ ವಸ್ತುವಾಗಿ ಉಳಿದಿಲ್ಲ, ಬದಲಿಗೆ ಕಚೇರಿ ಪ್ರಯಾಣ ಹಾಗೂ ಲಾಂಗ್ ರೋಡ್ ಟ್ರಿಪ್‌ಗಳಿಗಾಗಿ ಜನರ ದೈನಂದಿನ ಅಗತ್ಯತೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಈ ಅಂಕಿ-ಅಂಶಗಳು ಸಾಬೀತುಪಡಿಸಿವೆ.
ಮಾರುತಿ ಸುಜುಕಿ (Maruti Suzuki): 'ರಶ್‌ಲೇನ್' ವರದಿಯ ಪ್ರಕಾರ, ಜೂನ್ ತಿಂಗಳಿನಲ್ಲೂ ಮಾರುತಿ ಸುಜುಕಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಜೂನ್ 2026 ರಲ್ಲಿ ಕಂಪನಿಯು ಒಟ್ಟು 1,67,834 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜೂನ್‌ನಲ್ಲಾದ 1,22,775 ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಶೇ. 36 ರಷ್ಟು ಪ್ರಗತಿ ಕಂಡಿದೆ. ಸದ್ಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರುತಿ ಶೇ. 40 ರಷ್ಟು ಸಿಂಹಪಾಲನ್ನು ಹೊಂದಿದೆ.
ಟಾಟಾ ಮೋಟಾರ್ಸ್ (Tata Motors): ಈ ಬಾರಿ ಮಾರಾಟದ ಪಟ್ಟಿಯಲ್ಲಿ ಟಾಟಾ ಕಂಪನಿಯು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಜೂನ್ 2026 ರಲ್ಲಿ ಕಂಪನಿಯು ಒಟ್ಟು 57,009 ಗ್ರಾಹಕರನ್ನು ಸೆಳೆದಿದೆ. ಕಳೆದ ವರ್ಷದ ಜೂನ್‌ನಲ್ಲಿ ಕಂಪನಿಯು 37,731 ವಾಹನಗಳನ್ನು ಮಾರಾಟ ಮಾಡಿತ್ತು. ಇದರೊಂದಿಗೆ ವಾರ್ಷಿಕ ಆಧಾರದ ಮೇಲೆ ಟಾಟಾ ಮಾರಾಟದಲ್ಲಿ ಶೇ. 51 ರಷ್ಟು ಬೃಹತ್ ಜಿಗಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಶೇ. 13 ರಷ್ಟು ಪಾಲು ಹೊಂದಿದೆ.
ಮಹೀಂದ್ರಾ (Mahindra): ಮಹೀಂದ್ರಾ ಕಂಪನಿಯು ಜೂನ್ 2026 ರಲ್ಲಿ 54,099 ವಾಹನಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಜೂನ್ 2025 ರಲ್ಲಿ ಕಂಪನಿಯು 44,249 ವಾಹನಗಳನ್ನು ಮಾರಾಟ ಮಾಡಿತ್ತು. ಒಟ್ಟು ಮಾರುಕಟ್ಟೆಯಲ್ಲಿ ಮಹೀಂದ್ರಾ ಶೇ. 13 ರಷ್ಟು ಪಾಲು ಹೊಂದಿದೆ.
ಹ್ಯುಂಡೈ (Hyundai): ಹ್ಯುಂಡೈ ಕಂಪನಿಯು ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜೂನ್ 2026 ರಲ್ಲಿ ಕಂಪನಿಯು 44,163 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಜೂನ್ ತಿಂಗಳಿನ 40,743 ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಶೇ. 8 ರಷ್ಟು ಬೆಳವಣಿಗೆ ಸಾಧಿಸಿದೆ. ಮಾರುಕಟ್ಟೆಯಲ್ಲಿ ಇದರ ಪಾಲು ಶೇ. 10 ರಷ್ಟಿದೆ.
ಟೊಯೋಟಾ (Toyota): ಟೊಯೋಟಾ ಕಂಪನಿಯು 28,818 ವಾಹನಗಳ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷದ ಜೂನ್‌ನಲ್ಲಿ ಕಂಪನಿಯು 25,031 ವಾಹನಗಳನ್ನು ಮಾರಾಟ ಮಾಡಿತ್ತು. ವಾರ್ಷಿಕ ಆಧಾರದ ಮೇಲೆ ಇದರ ಮಾರಾಟ ಶೇ. 15 ರಷ್ಟು ಹೆಚ್ಚಾಗಿದ್ದು, ಮಾರುಕಟ್ಟೆಗೆ ಶೇ. 7 ರಷ್ಟು ಕೊಡುಗೆ ನೀಡಿದೆ.
ಕಿಯಾ (Kia): ಕಿಯಾ ಮೋಟಾರ್ಸ್ ಜೂನ್ 2026 ರಲ್ಲಿ ಒಟ್ಟು 23,166 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜೂನ್‌ನಲ್ಲಿ ಈ ಪ್ರಮಾಣ 19,485 ಆಗಿತ್ತು. ಇದರೊಂದಿಗೆ ಕಿಯಾ ಮಾರಾಟದಲ್ಲಿ ಶೇ. 18 ರಷ್ಟು ಪ್ರಗತಿ ಕಂಡಿದ್ದು, ಒಟ್ಟು ಮಾರುಕಟ್ಟೆಯಲ್ಲಿ ಶೇ. 5 ರಷ್ಟು ಪಾಲು ಪಡೆದಿದೆ.
ಸ್ಕೋಡಾ ಫೋಕ್ಸ್‌ವ್ಯಾಗನ್ (Skoda Volkswagen): ಈ ಜಂಟಿ ಕಂಪನಿಗಳು 8,098 ವಾಹನಗಳನ್ನು ಮಾರಾಟ ಮಾಡುವ ಮೂಲಕ ಏಳನೇ ಸ್ಥಾನದಲ್ಲಿವೆ. ಆದರೆ, ವಾರ್ಷಿಕ ಆಧಾರದ ಮೇಲೆ ಇವರ ಮಾರಾಟದಲ್ಲಿ ಶೇ. 5 ರಷ್ಟು ಕುಸಿತ ದಾಖಲಾಗಿದ್ದು, ಮಾರುಕಟ್ಟೆಯಲ್ಲಿ ಕೇವಲ ಶೇ. 1 ರಷ್ಟು ಪಾಲು ಹೊಂದಿವೆ.
ಎಂಜಿ ಮೋಟಾರ್ಸ್ (MG): ಎಂಜಿ ಕಂಪನಿಯು ಜೂನ್ 2026 ರಲ್ಲಿ ಒಟ್ಟು 6,997 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜೂನ್‌ನಲ್ಲಿ ಕಂಪನಿಯು 5,768 ಗ್ರಾಹಕರನ್ನು ಹೊಂದಿತ್ತು. ಈ ಬಾರಿ ಕಂಪನಿಯ ಮಾರಾಟದಲ್ಲಿ ಶೇ. 21 ರಷ್ಟು ಏರಿಕೆ ಕಂಡುಬಂದಿದೆ.
ಹೊಂಡಾ (Honda): ಹೊಂಡಾ ಕಂಪನಿಯು 4,833 ವಾಹನಗಳನ್ನು ಮಾರಾಟ ಮಾಡುವ ಮೂಲಕ ಒಂಬತ್ತನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಂಡಾ ಕಾರುಗಳ ಮಾರಾಟದಲ್ಲಿ ಶೇ. 14 ರಷ್ಟು ಪ್ರಗತಿಯಾಗಿದೆ.
ರೆನಾಲ್ಟ್ (Renault): ರೆನಾಲ್ಟ್ ಕಂಪನಿಯು ಜೂನ್ ತಿಂಗಳಿನಲ್ಲಿ ಒಟ್ಟು 3,858 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜೂನ್‌ನಲ್ಲಿ ಮಾರಾಟವಾಗಿದ್ದ 2,578 ವಾಹನಗಳಿಗೆ ಹೋಲಿಸಿದರೆ, ಈ ಬಾರಿ ಕಂಪನಿಯು ಶೇ. 49 ರಷ್ಟು ಭರ್ಜರಿ ಬೆಳವಣಿಗೆಯನ್ನು ದಾಖಲಿಸಿದೆ.