
ಮುಂಬೈ (ನ.7): ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವಾಹನಗಳ ರಿಟೇಲ್ ಮಾರಾಟದಲ್ಲಿ ಭಾರಿ ಕುಸಿತ ದಾಖಲಾಗಿದೆ: ಆಟೋಮೊಬೈಲ್ ಡೀಲರ್ಗಳ ಒಕ್ಕೂಟದ (FADA - Federation of Automobile Dealers Associations) ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ನಲ್ಲಿ ದೇಶಾದ್ಯಂತ ಒಟ್ಟು ವಾಹನ ಮಾರಾಟವು ಶೇಕಡಾ 23.8 ರಷ್ಟು ಇಳಿಕೆಯಾಗಿ 31.72 ಲಕ್ಷ ಯೂನಿಟ್ಗಳಿಗೆ ತಲುಪಿದೆ. ಆದರೆ, ಈ ಕುಸಿತದ ನಡುವೆಯೂ ಸಿಎನ್ಜಿ (CNG), ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳು (EV) ಪೆಟ್ರೋಲ್ ಕಾರುಗಳನ್ನೇ ಹಿಂದಿಕ್ಕಿ ಗಮನಾರ್ಹ ಸಾಧನೆ ಮಾಡಿವೆ.
ಈ ಅವಧಿಯಲ್ಲಿ ದ್ವಿಚಕ್ರ ಹಾಗೂ ಪ್ಯಾಸೆಂಜರ್ (ಪ್ರಯಾಣಿಕರ) ಕಾರುಗಳ ಮಾರಾಟದ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದೆ. ಆದರೆ ಈ ಕುಸಿತಕ್ಕೆ ಬರೀ ವಾಹನಗಳ ಬೇಡಿಕೆ ಕಡಿಮೆಯಾಗಿರುವುದು ಒಂದೇ ಕಾರಣವಲ್ಲ; ಬದಲಿಗೆ ಹಬ್ಬಗಳ ದಿನಾಂಕಗಳಲ್ಲಿ ಉಂಟಾದ ಬದಲಾವಣೆಯೂ ಈ ಅಂಕಿ-ಅಂಶಗಳ ಮೇಲೆ ಪ್ರಮುಖ ಪ್ರಭಾವ ಬೀರಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ನವರಾತ್ರಿ ಮತ್ತು ದೀಪಾವಳಿ ಎರಡೂ ಹಬ್ಬಗಳು ಒಂದೇ ತಿಂಗಳಿನಲ್ಲಿ ಬಂದಿದ್ದವು. ಆದರೆ, ಈ ವರ್ಷ ನವರಾತ್ರಿ ಹಬ್ಬವು ಅಕ್ಟೋಬರ್ನಲ್ಲಿ ಬಂದಿದ್ದರೆ, ಧಂತೇರಸ್ ಮತ್ತು ದೀಪಾವಳಿ ಹಬ್ಬಗಳು ನವೆಂಬರ್ಗೆ ಬಂದಿವೆ. ಹೀಗಾಗಿ, ಹಲವು ಗ್ರಾಹಕರು ಹೊಸ ವಾಹನ ಖರೀದಿಸುವ ನಿರ್ಧಾರವನ್ನು ನವೆಂಬರ್ವರೆಗೆ ಮುಂದೂಡಿದ್ದಾರೆ.
ಇದಲ್ಲದೆ, ಸೆಪ್ಟೆಂಬರ್ 22, 2025 ರಂದು ಜಿಎಸ್ಟಿ (GST 2.0) ದರಗಳಲ್ಲಿ ಕಡಿತ ಮಾಡಿದ ನಂತರ ಕಳೆದ ವರ್ಷ ಮಾರುಕಟ್ಟೆಯಲ್ಲಿ ಅಭೂತಪೂರ್ವ ಖರೀದಿ ದಾಖಲಾಗಿತ್ತು. ಹೀಗಾಗಿ, ಕಳೆದ ವರ್ಷದ ಗರಿಷ್ಠ ಮಟ್ಟದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿಯ ಅಕ್ಟೋಬರ್ ಅಂಕಿ-ಅಂಶಗಳಲ್ಲಿ ಕುಸಿತ ದೊಡ್ಡದಾಗಿ ಕಾಣಿಸುತ್ತಿದೆ.
ಫಾಡಾ (FADA) ನೀಡಿರುವ ವರದಿಯ ಪ್ರಕಾರ, ಅಕ್ಟೋಬರ್ನಲ್ಲಿ ದ್ವಿಚಕ್ರ ವಾಹನಗಳ ರಿಟೇಲ್ ಮಾರಾಟವು ಶೇಕಡಾ 28.35 ರಷ್ಟು ಇಳಿಕೆಯಾಗಿ 23.21 ಲಕ್ಷ ಯೂನಿಟ್ಗಳಿಗೆ ತಲುಪಿದೆ. ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಶೇಕಡಾ 4.23 ರಷ್ಟು ಇಳಿಕೆಯಾಗಿದ್ದು, 5.08 ಲಕ್ಷ ಯೂನಿಟ್ಗಳು ಮಾರಾಟವಾಗಿವೆ.
ಫಾಡಾ ಅಧ್ಯಕ್ಷ ಸಾಯಿ ಗಿರಿಧರ್ ಮಾತನಾಡಿ, ಅಕ್ಟೋಬರ್ ಸಾಮಾನ್ಯವಾಗಿ ವರ್ಷದ ಅತಿದೊಡ್ಡ ರಿಟೇಲ್ ಮಾರಾಟದ ತಿಂಗಳಾಗಿರುತ್ತದೆ. ಆದರೆ ಈ ಬಾರಿಯ ಅಂಕಿ-ಅಂಶಗಳನ್ನು ಹಬ್ಬಗಳ ದಿನಾಂಕಗಳ ಆಧಾರದ ಮೇಲೆ ಗ್ರಹಿಸಬೇಕಾಗಿದೆ. ಈ ಬಾರಿಯ ವಾರ್ಷಿಕ ಕುಸಿತಕ್ಕೆ ಪ್ರಮುಖವಾಗಿ ಕ್ಯಾಲೆಂಡರ್ ದಿನಾಂಕಗಳ ಬದಲಾವಣೆಯೇ ಕಾರಣ ಎಂದಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಕುಸಿತ ಕಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಿಟೇಲ್ ಮಾರಾಟವು ಶೇಕಡಾ 33.97 ರಷ್ಟು ಕುಸಿದಿದ್ದರೆ, ನಗರ ಪ್ರದೇಶಗಳಲ್ಲಿ ಶೇಕಡಾ 20.77 ರಷ್ಟು ಇಳಿಕೆ ದಾಖಲಾಗಿದೆ. ಆದರೆ, ಇನ್ನೊಂದೆಡೆ ಎಲೆಕ್ಟ್ರಿಕ್ ವಾಹನಗಳಿಗೆ (EV) ಈ ತಿಂಗಳು ಅತ್ಯಂತ ಲಾಭದಾಯಕವಾಗಿತ್ತು. ಇವಿಗಳ ಮಾರಾಟವು ಬರೋಬ್ಬರಿ 3.55 ಲಕ್ಷ ಯೂನಿಟ್ಗಳ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ತಲುಪಿದೆ. ಕಳೆದ ವರ್ಷ ಶೇಕಡಾ 6 ರಷ್ಟಿದ್ದ ಇವಿ ವಾಹನಗಳ ಮಾರುಕಟ್ಟೆ ಪಾಲು, ಈ ಬಾರಿ ಶೇಕಡಾ 11.5 ರಷ್ಟು ಭಾರಿ ಏರಿಕೆ ಕಂಡಿದೆ.
ಅಕ್ಟೋಬರ್ ಆಟೋ ಸೇಲ್ಸ್ನಲ್ಲಿ ಅತ್ಯಂತ ಕುತೂಹಲಕಾರಿ ಬದಲಾವಣೆಯೊಂದು ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಸಿಎನ್ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಒಟ್ಟು ಪಾಲು ಶೇಕಡಾ 41.83 ರಷ್ಟಿದ್ದರೆ, ಪೆಟ್ರೋಲ್ ಕಾರುಗಳ ಪಾಲು ಶೇಕಡಾ 41.6 ರಷ್ಟಿತ್ತು. ಅಂದರೆ, ಪರ್ಯಾಯ ಇಂಧನದ ಕಾರುಗಳು ಪೆಟ್ರೋಲ್ ಕಾರುಗಳನ್ನು ಅಲ್ಪ ಅಂತರದಲ್ಲಿ ಹಿಂದಿಕ್ಕಿ ಮುನ್ನಡೆ ಸಾಧಿಸಿವೆ. ವಾಣಿಜ್ಯ ವಾಹನಗಳು (Commercial Vehicles) ಶೇಕಡಾ 2.29 ರಷ್ಟು ಏರಿಕೆಯಾಗಿ 1.15 ಲಕ್ಷ ಯೂನಿಟ್ಗಳು ಮಾರಾಟವಾಗಿವೆ. ತ್ರೀವೀಲರ್ (Three-Wheelers) ಶೇಕಡಾ 3.97 ರಷ್ಟು ಏರಿಕೆಯಾಗಿ 1.41 ಲಕ್ಷ ಯೂನಿಟ್ಗೆ ತಲುಪಿದೆ. ಹಾಗೂ ಟ್ರ್ಯಾಕ್ಟರ್ಗಳು (Tractors) ಶೇಕಡಾ 3.10 ರಷ್ಟು ಏರಿಕೆಯಾಗಿ 79,285 ಯೂನಿಟ್ಗಳು ಮಾರಾಟವಾಗಿವೆ.
ನವೆಂಬರ್ ತಿಂಗಳಿನಲ್ಲಿ ಆಟೋ ಮಾರುಕಟ್ಟೆಯ ವೇಗ ಮತ್ತೆ ಭರ್ಜರಿಯಾಗಿ ಹೆಚ್ಚಾಗಲಿದೆ ಎಂದು ವಾಹನ ಡೀಲರ್ಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ಧಂತೇರಸ್ ಹಬ್ಬವು ನವೆಂಬರ್ 6 ಹಾಗೂ ದೀಪಾವಳಿ ನವೆಂಬರ್ 8 ರಂದು ಇರುವುದರಿಂದ ಹಬ್ಬದ ಸೀಸನ್ನಲ್ಲಿ ವಾಹನಗಳ ನೋಂದಣಿ (Registration) ಸಾಗುತ್ತಿರುವ ರೀತಿ ಆಶಾದಾಯಕವಾಗಿದೆ ಎಂದು ಫಾಡಾ ತಿಳಿಸಿದೆ. ಇನ್ನು ಡಿಸೆಂಬರ್ ಮತ್ತು ಜನವರಿಯ ಆಟೋ ಮಾರಾಟವು ವರ್ಷಾಂತ್ಯದಲ್ಲಿ ಸಿಗುವ ರಿಯಾಯಿತಿಗಳು (Discounts), ನೂತನ ಮಾಡೆಲ್ಗಳ ಬಿಡುಗಡೆ ಹಾಗೂ ಗ್ರಾಹಕರ ಆಯ್ಕೆಯ ಪಸಂದಿನ ವೇರಿಯೆಂಟ್ಗಳ ಲಭ್ಯತೆಯ ಮೇಲೆ ನಿರ್ಧಾರವಾಗಲಿದೆ.