
ಹರ್ಯಾಣ: ವಯಸ್ಸು ಬರೀ ನಂಬರ್ ಅಷ್ಟೇ ಅಂತ ನಮ್ಮ ಅನೇಕ ಹಿರಿಯರು ಸಾಬೀತುಪಡಿಸಿದ್ದಾರೆ. ಆಟೋಟಗಳಿಗೆ ಸಾಹಸಗಳಿಗೆ ವಯಸ್ಸಿನ ಹಂಗಿಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಅದೇ ರೀತಿ ಇಲ್ಲೊಂದು ಕಡೆ ಹಿರಿಯರೊಬ್ಬರು ಮೊಮ್ಮಗನ ಜೊತೆ ಸೇರಿಕೊಂಡು ಮಾಡಿದ ಸಾಹಸವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಪೋರ್ಟ್ ಕಾರು, ಸ್ಪೋರ್ಟ್ಸ್ ಬೈಕ್‌ಗಳು, ಐಷಾರಾಮಿ ಕಾರುಗಳು ಎಲ್ಲಾ ಯುವ ಸಮೂಹದ ಅತ್ಯಂತ ಇಷ್ಟದ ಆಕರ್ಷಣೆಗಳು, ಅವುಗಳಲ್ಲಿ ರೈಡ್ ಮಾಡ್ಬೇಕು, ಸುತ್ತಲೂ ತಿರುಗಿಸಿ ಮಜಾ ಮಾಡಬೇಕು ರೇಸಿಂಗ್ ಮಾಡಬೇಕು, ವ್ಹೀಲಿಂಗ್ ಮಾಡ್ಬೇಕು ಎಂಬುದು ಅನೇಕರ ಆಸೆ ಆದರೆ ವಯಸ್ಸಾದವರು ಈ ಸಾಹಸಕ್ಕಿಳಿಯುವುದು ತೀರಾ ಕಡಿಮೆ. ಆದರೆ ವೃದ್ಧರೊಬ್ಬರು ಇಲ್ಲಿ ಫೋರ್ಡ್ ಮುಸ್ತಂಗ್ ಕಾರನ್ನು ಸುತ್ತಲು ತಿರುಗಿಸಿ ಸ್ಪಿನ್ ಮಾಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು 52ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ತಾತನ ಸಾಹಸಕ್ಕೆ ಶಭಾಶ್ ಎಂದಿದ್ದಾರೆ.
ಹರ್ಯಾಣ ಮೂಲದ ಇನ್ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ವೃದ್ಧರೊಬ್ಬರು ತಮ್ಮ ಮೊಮ್ಮಗನ ಫೋರ್ಡ್ ಮುಸ್ತಾಂಗ್ ಕಾರನ್ನು ಓಡಿಸಿದ್ದು, ಬರೀ ಓಡಿಸಿದ್ದಲ್ಲ, ಸುತ್ತಲೂ ತಿರುಗಿಸಿ ಸ್ಪಿನ್ ಮಾಡಿದ್ದಾರೆ. ವೀಡಿಯೋದಲ್ಲಿ ಮೊಮ್ಮಗ ತಾತನಿಗೆ ತನ್ನ ಫೋರ್ಡ್ ಮುಸ್ತಂಗ್ ಕಾರಿನ ಕೀಯನ್ನು ನೀಡಿ ತಗೊಳಿ ರೈಡ್ ಮಾಡಿ ಎಂದು ಕೊಟ್ಟಿದ್ದಾನೆ. ಕೀ ತೆಗೆದುಕೊಂಡ ತಾತ ಫೋರ್ಡ್ ಮುಸ್ತಾಂಗ್ ಕಾರನ್ನು ಬಿಂದಾಸ್ ಆಗಿ ರೈಡ್ ಮಾಡಿದ್ದು, ಸುತ್ತಲೂ ಕಾರನ್ನು ತಿರುಗಿಸಿದ್ದಾರೆ. ಸ್ಪಿನ್ ಮಾಡುವುದು ಎಂದರೆ ಕಾರನ್ನು ವೃತ್ತಾಕಾರವಾಗಿ ತಿರುಗಿಸುವುದು. ಇದಕ್ಕೆ ಹಿಂದಿನ ಚಕ್ರಗಳಿಗೆ ಕಳುಹಿಸಲಾಗುವ ಎಂಜಿನ್ ನೀಡುವ ಅಗಾಧ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತದೆ.
ಇದೇ ಹೀಗೆ ಸಾಹಸ ಮಾಡಿ ಕಾರಿನಿಂದ ಇಳಿದ ಅವರು ತಾವು ಯೌವ್ವನದಲ್ಲಿರುವಾಗ ಹೀಗೆ ಟ್ರಾಕ್ಟರ್ ಚಾಲನೆ ಮಾಡಿ ಹಲವು ಸಾಹಸ ಮಾಡಿದ್ದಾಗಿ ಮೊಮ್ಮಗನಿಗೆ ಹೇಳಿದ್ದಾರೆ.
ಇತ್ತ ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು ಹಲವು ಕಾಮೆಂಟ್ ಮಾಡಿದ್ದಾರೆ. ತಾತ ರಾಕ್ಸ್ ಮೊಮ್ಮಗ ಶಾಕ್ಸ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ತಾತ ಅಲ್ಲ, ದೇಸಿ ಹೀರೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದಾದಾಜಿ ಟಾಪಲ್ಲಿದ್ದಾರೆ. ಇವರೊಬ್ಬರು ಹಳೇ ಕಾಲದ ಕಿಲಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಹಳೇ ಕಾಲದ ಡ್ರೈವರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಜೊತೆ ಕಾರಿನಲ್ಲಿ ಕುಳಿತ ಅವರ ನಂಬಿಕೆಯ ಲೆವೆಲ್ ನೋಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಯಸ್ಸು ಜಸ್ಟ್ ನಂಬರ್ ಅಷ್ಟೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತಾತನ ಸಾಹಸ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ.