ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಲು ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸುತ್ತಿವೆ. ಈ ಸಾಲಿಗೆ ಗುಜರಾತ್ ರಾಜ್ಯವೂ ಸೇರ್ಪಡೆಯಾಗಿದೆ. ಬ್ಯಾಟರಿ ಚಾಲಿತ ಕಾರ್ ಖರೀದಿಸಿದರೆ 1.5 ಲಕ್ಷ ರೂ. ಮತ್ತು ದ್ವಿಚಕ್ರವಾಹನ ಖರೀದಿಗೆ 20 ಸಾವಿರ ರೂ.ವರೆಗೂ ಗುಜರಾತ್ ಸರ್ಕಾರ ಸಬ್ಸಿಡಿ ನೀಡಲಿದೆ.
ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಪರಿಣಾಮ ತೈಲ ಆಧರಿತ ವಾಹನಗಳನ್ನು ಬಳಸುವುದೇ ಭಾರಿ ತುಟ್ಟಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳು ಪರ್ಯಾಯಾವಾಗಿ ಕಾಣುತ್ತಿವೆ. ಆದರೆ, ಅವು ಗ್ರಾಹಕರ ಕೈಗೆಟುಕುವ ದರಲ್ಲಿ ಸಿಗುತ್ತಿಲ್ಲ ಎಂಬುದು ನಿಜವೇ ಆದರೂ ಹಲವು ರಾಜ್ಯ ಸರ್ಕಾರಗಳು ಸಬ್ಸಿಡಿಯಂಥ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಈ ಸಾಲಿಗೆ ಗುಜರಾತ್ ಈಗ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಗುಜರಾತ್ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿದೆ. ಗುಜರಾತ್‌ನಲ್ಲಿ ನೀವು ಎಲೆಕ್ಟ್ರಿಕ್ ಕಾರ್ ಖರೀದಿಸಿದರೆ ಸುಮಾರು 1.5 ಲಕ್ಷ ರೂಪಾಯಿವರೆಗೂ ಸಬ್ಸಿಡಿ ಸಿಗಲಿದೆ. ಹಾಗೆಯೇ, ಬ್ಯಾಟರಿ ಚಾಲಿತ ದ್ವಿಚಕ್ರವಾಹನವನ್ನು ಖರೀದಿಸಿದರೆ 20 ಸಾವಿರ ರೂಪಾಯಿವರೆಗೂ ಲಾಭ ದೊರೆಯಲಿದೆ. ಕೇಂದ್ರ ಸರ್ಕಾರದ ಒದಗಿಸಿದ ಫೆಮ್ ಎರಡು ಸಬ್ಸಿಡಿಯ ಹೊರತಾಗಿ ಗುಜರಾತ್ ಈ ಸಬ್ಸಿಡಿಗಳನ್ನು ನೀಡುತ್ತಿದೆ. ಜೊತೆಗೆ ರಾಜ್ಯಾದ್ಯಂತ ರಾಜ್ಯಾದ್ಯಂತ 250 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು 10 ಲಕ್ಷದವರೆಗೆ 25% ಬಂಡವಾಳ ಸಹಾಯಧನವನ್ನೂ ನೀಡಲಿದೆ.
ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲೂ 17,800 ರೂ.ವರೆಗೆ ಕಡಿತ!
ಈ ಹೊಸ ನೀತಿಯ ಪ್ರಕಾರ, ಗುಜರಾತ್‌ನಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಸುಮಾರು 2 ಲಕ್ಷ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಅಂದಾಜು 670 ಕೋಟಿ ರೂಪಾಯಿ ಒದಗಿಸಲು ನಿರ್ಧರಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಖರೀದಿಗೆ ಪ್ರೋತ್ಸಾಹ ನೀಡಲು ಗುಜರಾತ್ ಸರ್ಕಾರ ಮುಂದಾಗಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಈ ಎಲೆಕ್ಟ್ರಿಕ್ ನೀತಿಯನ್ನು ಘೋಷಿಸಿದ್ದು, ಪ್ರತಿ ಕಿಲೋ ವ್ಯಾಟ್ ಮೇಲೆ ಸರ್ಕಾರವು ಸಬ್ಸಿಡಿಯನ್ನು ನೀಡಲಿದೆ. ಹೊಸ ಗುಜರಾತ್ ಎಲೆಕ್ಟ್ರಿಕ್ ನೀತಿಯ ಅನ್ವಯ, ಖರೀದಾರರಿಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಖರೀದಿಗೆ ಉತ್ತೇಜಿಸಲಾಗುತ್ತಿದೆ. ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಗೂ ಬಂಡವಾಳ ಸಹಾಯಧನವನ್ನೂ ಒದಗಿಸಲಾಗುತ್ತದೆ.
ಗುಜರಾತ್‌ನಲ್ಲಿ ಘೋಷಿಸಲಾಗಿರುವ ಈ ಹೊಸ ಇವಿ ನೀತಿಯಿಂದ ಕನಿಷ್ಠ 1.25 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು, 75,000 ಇ-ರಿಕ್ಷಾಗಳು ಮತ್ತು 25,000 ಎಲೆಕ್ಟ್ರಿಕ್ ಕಾರುಗಳ ರಸ್ತೆಗಿಳಿಯಲು ಸಾಧ್ಯವಾಗಲಿದೆ ಎಂದು ಗುಜರಾತ್ ಸರ್ಕಾರ ಅಂದಾಜಿಸಿದೆ. ಗುಜರಾತ್ ರಾಜ್ಯವನ್ನು ಇ-ವೆಹಿಕಲ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸಲು ಈ ನೀತಿಯ ಉದ್ದೇಶವಾಗಿದೆ.
ಕೇಂದ್ರ ನಿರ್ಧಾರದ ಎಫೆಕ್ಟ್: ಅಗ್ಗವಾಗಲಿವೆ ಇ-ಸ್ಕೂಟರ್, ಅಥರ್ ಎನರ್ಜಿ ಇಳಿಸಲಿದೆ ಬೆಲೆ!
ಗುಜರಾತ್‌ನ ಹೊಸ ನೀತಿಯ ಅನ್ವಯ ಚಾರ್ಜಿಂಗ್ ಸೌಲಭ್ಯಗಳನ್ನು ಹೌಸಿಂಗ್ ಮತ್ತು ಕಮರ್ಷಿಯಲ್ ಮೂಲಸೌಕರ್ಯಗಳಲ್ಲೂ ಸ್ಥಾಪಿಸಲು ನೆರವು ಒದಗಿಸಲಾಗುವುದು. ಇವಿ ಚಾರ್ಜಿಂಗ್ ಸ್ಟೆಷನ್‌ಗಳನ್ನು ಸ್ಥಾಪಿಸಲು ಪೆಟ್ರೋಲ್ ಪಂಪ್‌ಗಳಿಗೆ ಒಪ್ಪಿಗೆ ನೀಡಲಾಗುವುದು. ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಹೂಡಿಕೆದಾರರು ಮತ್ತು ಸ್ಟಾರ್ಟಪ್‌ಗಳನ್ನು ಪ್ರೇರೇಪಿಸಲಾಗುವುದು.
ಗುಜರಾತ್‌ನಲ್ಲಿ ನೋಂದಣಿಯಾಗುವ ಎಲ್ಲ ಎಲೆಕ್ಟ್ರಿಕ್ ವೆಹಿಕಲ್‌ಗಳಿಗೆ ನೋಂದಣಿ ಶುಲ್ಕ ವಿನಾಯ್ತಿ ನೀಡಲಾಗುತ್ತದೆ. ಹಾಗೆಯೇ, ಘೋಷಿಸಲಾಗಿರುವ ಸಬ್ಸಿಡಿಯನ್ನು ನೇರ ನಗದು ವರ್ಗಾವಣೆ ಮೂಲಕವೇ ನೇರವಾಗಿ ಬ್ಯಾಂಕುಗಳಿಗೆ ನೀಡಲಾಗುವುದು ಎಂದು ಗುಜರಾತ್ ಇವಿ ನೀತಿಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಸಾಂಪ್ರದಾಯಿಕ ಇಂಧನ ಆಧರಿತ ವಾಹನಗಳ ಬಳಕೆಯನ್ನು ತಗ್ಗಿಸಿ, ಬ್ಯಾಟರಿ ಚಾಲಿತ ವಾಹನಗಳ ಬಳಕೆಯಿಂದಾಗಿ ಪರಿಸರ ಸಂರಕ್ಷಣೆ ಕೂಡ ಸಾಧ್ಯವಾಗಲಿದೆ.
ಎಲೆಕ್ಟ್ರಿಕ್ ವಾಹನ ಖರೀದಿಸಬೇಕಾ? ಈ ಸಂಗತಿಗಳ ಬಗ್ಗೆ ತಿಳಿದಿರಿ
ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆಸಂಬಂಧಿಸಿದಂತೆ ಅನೇನಕ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ದಿಲ್ಲಿ, ಕರ್ನಾಟಕ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಎಲೆಕ್ಟ್ರಿಕ್ ನೀತಿಯನ್ನು ಪ್ರಕಟಿಸಿವೆ.