ಕೆಲವೇ ತಿಂಗಳಲ್ಲಿ ಪೆಟ್ರೋಲ್ ಕಾರಿನ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಕಾರು, ಗಡ್ಕರಿ ಘೋಷಣೆ!

By Suvarna NewsFirst Published Nov 2, 2022, 6:00 PM IST
Highlights

ಭಾರತದಲ್ಲಿ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ. ಬಳಿಕ ಪೆಟ್ರೋಲ್ ಕಾರಿನಂತೆ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತಿನಿಂದ ಆಟೋ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. 

ನವೆದಹಲಿ(ನ.02) ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯಾಗಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರಿನಲ್ಲಿ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಸ್ಕೂಟರ್ ವಿಭಾಗದಲ್ಲಿ ಹತ್ತು ಹಲವು ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆ. ಆದರೆ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಇವಿ ಬೆಲೆ ದುಬಾರಿಯಾಗಿದೆ. ಆದರೆ ಇವಿಗಳ ಮೇಲಿರುವ ದುಬಾರಿ ಹಣೆಪಟ್ಟಿ ಕಳಚಲಿದೆ. ಇನ್ನು ಕೆಲವೆ ತಿಂಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಕಾರಿನ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಲಭ್ಯವಾಗಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

ಈಗ ನಾವು ನವೆಂಬರ್ ತಿಂಗಳಲ್ಲಿದ್ದೇವೆ. ಇನ್ನು ಇನ್ನೆರಡು ತಿಂಗಳಲ್ಲಿ ಹೊಸ ವರ್ಷದ ಆಗಮನವಾಗಲಿದೆ. 2023ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆ ಪೆಟ್ರೋಲ್ ಕಾರಿನ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಅಗ್ಗದ ಎಲೆಕ್ಟ್ರಿಕ್ ಕಾರಿನ ಕುರಿತು ಈಗಾಗಲೇ ನಿತಿನ್ ಗಡ್ಕರಿ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ಗಡ್ಕರಿ ಪೆಟ್ರೋಲ್ ಕಾರುಗಳ ರೀತಿಯಲ್ಲಿ ಎಲೆಕ್ಟ್ರಿಕ್ ಕಾರುಗಳು ಲಭ್ಯವಾಗಲಿದೆ ಎಂದು ಪುನರುಚ್ಚರಿಸಿದ್ದಾರೆ.

 

ಓಲಾ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಮಾಹಿತಿಯುಳ್ಳ ಟೀಸರ್ ಬಿಡುಗಡೆ

ಗಡ್ಕರಿ ಈ ಮಾತನ್ನು ಸುಮ್ಮನೆ ಹೇಳಿಲ್ಲ. 2023ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಉತ್ಪಾದನೆ ಶೇಕಡಾ 100 ರಷ್ಟು ಆಗಲಿದೆ. ಸದ್ಯ ಲಿಥಿಯಂ ಹಾಗೂ ಐಯಾನ್ ಬ್ಯಾಟರಿ ಉತ್ಪಾದನೆ ಭಾರತದಲ್ಲಿ ಆಗುತ್ತಿದೆ. ಆದರೆ ಈ ಉತ್ಪಾದನೆಗೆ ಶೇಕಡಾ 25 ರಿಂದ 30 ವರಗೆ ವಿದೇಶಗಳನ್ನು ಅವಲಂಬಿಸಿದೆ. ಆದರೆ 2023ರಿಂದ ಸಂಪೂರ್ಣ ಬ್ಯಾಟರಿ ಭಾರತದಲ್ಲೇ ಉತ್ಪಾದನೆಯಾಗಲಿದೆ. ಯಾವುದೇ ದೇಶವನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ಇನ್ನು ಸಮಿಕಂಡಕ್ಟರ್ ಉತ್ಪಾದನೆಗಳು ಭಾರತದಲ್ಲೇ ಆಗಲಿದೆ. ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಗ್ರಾಹಕರಿಗೆ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹೀಗಾಗಿ ವಾಹನಗಳ ಉತ್ಪಾದನಾ ವೆಚ್ಚಾ ಕಡಿಮೆಯಾಗಲಿದೆ.

ಈ ಕಾರಣ ಮಾತ್ರವಲ್ಲ, ಈಗಾಗಲೇ ಭಾರತದಲ್ಲಿ ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಲಭ್ಯವಿದೆ. ಟಾಟಾ ಮೋಟಾರ್ಸ್ ಇತ್ತೀಚಿಗೆ ಟಿಯಾಗೋ ಇವಿ ಕಾರು ಬಿಡುಗಡೆ ಮಾಡಿದೆ. ಇದರ ಬೆಲೆ 8.49 ಲಕ್ಷ ರೂಪಾಯಿ(ಎಕ್ಸ ಶೋ ರೂಂ). ಈ ಕಾರಿನ ಆನ್‌ರೋಡ್ ಬೆಲೆ ಸರಿ ಸುಮಾರು 9 ಲಕ್ಷ ರೂಪಾಯಿ(ವಿಮೆ ಸೇರಿ). ಇದು ಭಾರತದಲ್ಲಿ ಲಭ್ಯವಿರುವ ಕೈಗಟುಕುವ ದರದ ಎಲೆಕ್ಟ್ರಿಕ್ ಕಾರಾಗಿದೆ. ಟಿಯಾಗೋ ಇವಿ 150 ರಿಂದ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

 

ಟಾಟಾ ಟಿಗೋರ್‌ ಇವಿಗೆ ಭಾರಿ ಬೇಡಿಕೆ: ಮೊದಲ ದಿನವೇ 10 ಸಾವಿರ ವಾಹನ ಬುಕ್

ಇದೀಗ ಮತ್ತಷ್ಟು ಆಟೋ ಕಂಪನಿಗಳು ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಅತ್ಯಧಿಕ ಮೈಲೇಜ್ ರೇಂಜ್ ಹಾಗೂ ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲು ತಯಾರಿಗಳು ನಡೆಯುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಉತ್ತೇಜನ ನೀಡುತ್ತಿದೆ. ಇತ್ತ ಕೇಂದ್ರ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮೂಲಭೂತ ಸೌಕರ್ಯ ಹೆಚ್ಚಿಸುತ್ತಿದೆ. ನಗರಗಳ ಜೊತೆಗೆ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಮಾಡುತ್ತಿದೆ. 
 

click me!