ಡ್ರ್ಯಾಗ್ ರೇಸಿಂಗ್ ವೀಡಿಯೋಗಳಿಂದ ಫೇಮಸ್ ಆಗಿದ್ದ 25 ವರ್ಷದ ಯೂಟ್ಯೂಬರ್ ಆಂಡ್ರೆ ಬೀಡಲ್ ನ್ಯೂಯಾರ್ಕ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ತಮ್ಮ ಡ್ರ್ಯಾಗ್ ರೇಸಿಂಗ್ ವೀಡಿಯೋಗಳಿಂದ ಫೇಮಸ್ ಆಗಿದ್ದ ಅಮೆರಿಕಾದ 25 ವರ್ಷದ ಯೂಟ್ಯೂಬರ್ ಆಂಡ್ರೆ ಬೀಡಲ್ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿರುವ ನಸ್ಸೌ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಮುಂಜಾನೆ ನಡೆದ ಭೀಕರ ಕಾರು ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ಆನ್‌ಲೈನ್‌ನಲ್ಲಿ 1Stockf30 ಎಂದು ಕರೆಯಲ್ಪಡುವ ಆಂಡ್ರೆ ಬೀಡಲ್ ಅವರು 2023ರ ಬಿಎಂಡಬ್ಲ್ಯು ಕಾರನ್ನು ಅತೀವೇಗದಿಂದ ಚಾಲನೆ ಮಾಡುತ್ತಿದ್ದಾಗ ಕಾರು ಅವರ ನಿಯಂತ್ರಣ ತಪ್ಪಿ ಈ ಭೀಕರ ದುರಂತ ಸಂಭವಿಸಿದೆ ಎಂದು ನ್ಯೂಯಾರ್ಕ್ ಪೊಲೀಸರು ಹೇಳಿದ್ದಾರೆ.
25 ವರ್ಷದ ಯೂಟ್ಯೂಬರ್ ಆಂಡ್ರೆ ಬೀಡಲ್ ಅತೀವೇಗದ ಡ್ರ್ಯಾಗ್ ರೇಸಿಂಗ್ ವೀಡಿಯೋಗಳಿಂದ ಯೂಟ್ಯೂಬ್‌ನಲ್ಲಿ ಫೇಮಸ್ ಆಗಿದ್ದರು. ಅತೀವೇಗದಿಂದ ಆಂಡ್ರೆ ಬೀಡಲ್ ಅವರ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಬಲಕ್ಕೆ ತಿರುಗಿ ಅಲ್ಲಿದ್ದ ಲೋಹದ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ತಡರಾತ್ರಿ ನಡೆದ ಈ ಘಟನಾ ಸ್ಥಳಕ್ಕೆ ರಾತ್ರಿ 1.12ಕ್ಕೆ ತುರ್ತು ಸಹಾಯ ತಂಡ ಆಗಮಿಸಿದೆ. ಅಲ್ಲೇ ಕೂಡಲೇ ಬೀಡಲ್‌ನನ್ನು ಜಮೈಕಾದ ಹಾಸ್ಪಿಟಲ್ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ.
ಘಟನೆಗೆ ಏನು ಕಾರಣ ಎಂದು ಹೆದ್ದಾರಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬೀಡಲ್ ಯೂಟ್ಯೂಬ್‌ನಲ್ಲಿ 59,500 ಫಾಲೋವರ್ಸ್‌ಗಳನ್ನು ಹೊಂದಿದ್ದರು. ಅವರು ಸ್ಟೀಟ್ ರೇಸಿಂಗ್ ಹಾಗೂ ಉನ್ನತ ತಂತ್ರಜ್ಞಾನದ ಕಾರುಗಳೊಂದಿನ ತಮ್ಮ ಅನುಭವವನ್ನು ಆಗಾಗ ಹಂಚಿಕೊಳ್ಳುತ್ತಿದ್ದರು. ಅಲ್ಲದೇ ಅವರು ಇತರ ಫೇಮಸ್ ಸ್ಟ್ರೀಟ್ ರೇಸರ್‌ಗಳ ಜೊತೆ ರೇಸ್ ಮಾಡಿದ ವೀಡಿಯೋಗಳು ಕೂಡ ಇದ್ದವು. ಕಳೆದ ಜೂನ್‌ನಲ್ಲಿ ಅವರು ಗಂಟೆಗೆ 170 ಮೈಲು ವೇಗದಲ್ಲಿ ಸಂಚರಿಸುತ್ತಿದ್ದಾಗ ಬಿಎಂಡಬ್ಲ್ಯು ಕಾರು ಅಪಘಾತವಾದ ವಿಚಾರವನ್ನು ವೀಡಿಯೋದಲ್ಲಿ ಹೇಳಿಕೊಂಡಿದ್ದರು. ಇವರ ಹಠಾತ್ ಸಾವು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ತಂದಿದೆ.