
ನವದೆಹಲಿ (ಜೂ.20): ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಸದ್ಯ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರು ಉತ್ತಮ ಪರ್ಯಾಯಗಳನ್ನು ಹುಡುಕುತ್ತಿದ್ದಾರೆ. ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಸಿಎನ್‌ಜಿ (CNG) ಕಾರುಗಳು ಭಾರಿ ಜನಪ್ರಿಯವಾಗಿವೆ. ಏಕೆಂದರೆ ಇವು ಪ್ರತಿ ಕೆಜಿಗೆ 25 ರಿಂದ 35 ಕಿಲೋಮೀಟರ್‌ವರೆಗೂ ಭರ್ಜರಿ ಮೈಲೇಜ್ ನೀಡುತ್ತವೆ. ಆದರೆ, ಇದೀಗ ಮಾರುಕಟ್ಟೆಯಲ್ಲಿ 'ಫ್ಲೆಕ್ಸ್-ಫ್ಯುಯೆಲ್' (Flex-Fuel) ಕಾರುಗಳ ಚರ್ಚೆಯೂ ಜೋರಾಗಿ ಆರಂಭವಾಗಿದೆ. ಇವು ಎಥನಾಲ್ ಮಿಶ್ರಿತ ಇಂಧನದಿಂದ ಚಲಿಸುವ ವಿಶೇಷ ಕಾರುಗಳಾಗಿವೆ.
ಭಾರತವು ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಜೇಬಿನ ಮೇಲಿನ ಹೊರೆಯನ್ನು ಇಳಿಸಲು ಇಂತಹ ಪರ್ಯಾಯ ಇಂಧನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ ಅಂದರೆ ಫ್ಲೆಕ್ಸ್ ಇಂಧನವನ್ನು ದೇಶಾದ್ಯಂತ ಉತ್ತೇಜಿಸಲಾಗುತ್ತಿದ್ದು, ದೆಹಲಿಯಲ್ಲಿ E85 ಇಂಧನವನ್ನು ಪರಿಚಯಿಸುವ ಮೂಲಕ ದೇಶದ ಎಥನಾಲ್ ಸಾರಿಗೆ ಯೋಜನೆಯು ಹೊಸ ಹಂತವನ್ನು ತಲುಪಿದೆ.
ದೆಹಲಿಯಲ್ಲಿ E85 ಇಂಧನದ ಬೆಲೆಯನ್ನು ಪ್ರತಿ ಲೀಟರ್‌ಗೆ 82.12 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸಾಮಾನ್ಯ E20 ಪೆಟ್ರೋಲ್‌ಗಿಂತ ಸುಮಾರು 20 ರೂಪಾಯಿಗಳಷ್ಟು ಅಗ್ಗವಾಗಿದೆ. ಇದೇ ಹೊತ್ತಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ದೇಶದ ಮೊದಲ ಮಾಸ್ ಮಾರ್ಕೆಟ್ ಫ್ಲೆಕ್ಸ್-ಫ್ಯುಯೆಲ್ ಕಾರು ‘ವ್ಯಾಗನ್ ಆರ್ ಫ್ಲೆಕ್ಸ್-ಫ್ಯುಯೆಲ್’ ಅನ್ನು ಬಿಡುಗಡೆ ಮಾಡಿದೆ. ಈಗ ಫ್ಲೆಕ್ಸ್ ಫ್ಯುಯೆಲ್ ಕಾರನ್ನು ಖರೀದಿಸುವುದು ಉತ್ತಮವೇ? ಮತ್ತು ಇದರ ಮೈಲೇಜ್ ಸಿಎನ್‌ಜಿಗಿಂತ ಹೆಚ್ಚಿರುತ್ತದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ.
ಕಳೆದ ಹಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳು ಭಾರಿ ಧೂಳೆಬ್ಬಿಸುತ್ತಿವೆ. ಸಿಎನ್‌ಜಿ ದರವು ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಗಣನೀಯವಾಗಿ ಕಡಿಮೆ ಇರುವುದರಿಂದ, ಪ್ರತಿ ಕಿಲೋಮೀಟರ್ ಪ್ರಯಾಣದ ವೆಚ್ಚ (Running Cost) ತುಂಬಾ ಕಡಿಮೆಯಿರುತ್ತದೆ. ಹೆಚ್ಚಿನ ಸಿಎನ್‌ಜಿ ಕಾರುಗಳು ಪ್ರತಿ ಕೆಜಿಗೆ 25 ರಿಂದ 35 ಕಿಲೋಮೀಟರ್ ಮೈಲೇಜ್ ನೀಡುತ್ತವೆ. ಇದೇ ಕಾರಣಕ್ಕೆ ದಿನನಿತ್ಯದ ಆಫೀಸ್ ಪ್ರಯಾಣಿಕರು, ಟ್ಯಾಕ್ಸಿ ಆಪರೇಟರ್‌ಗಳು ಮತ್ತು ನಿರಂತರವಾಗಿ ದೂರದ ಪ್ರಯಾಣ ಮಾಡುವವರು ಸಿಎನ್‌ಜಿ ಕಾರುಗಳನ್ನೇ ಮೊದಲ ಆದ್ಯತೆಯಾಗಿ ಆರಿಸಿಕೊಳ್ಳುತ್ತಾರೆ.
ಇನ್ನೊಂದೆಡೆ, ಫ್ಲೆಕ್ಸ್-ಫ್ಯುಯೆಲ್ ವಾಹನಗಳು ಸಾಮಾನ್ಯ ಪೆಟ್ರೋಲ್ ಜೊತೆಗೆ E85 ಅಥವಾ E100 ನಂತಹ ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನದಲ್ಲೂ ಚಲಿಸುವ ಎಂಜಿನ್ ಸಾಮರ್ಥ್ಯ ಹೊಂದಿರುತ್ತವೆ. ಎಥನಾಲ್ ಬೆಲೆಯು ಪೆಟ್ರೋಲ್‌ಗಿಂತ ಕಡಿಮೆಯಿದ್ದರೂ, ಅದರಲ್ಲಿರುವ ಎನರ್ಜಿ ಡೆನ್ಸಿಟಿ (ಶಕ್ತಿ ಸಾಂದ್ರತೆ) ಕಡಿಮೆಯಿರುತ್ತದೆ. ಇದರರ್ಥ, ಸಿಎನ್‌ಜಿ ಅಥವಾ ಸಾಮಾನ್ಯ ಪೆಟ್ರೋಲ್ ಕಾರು ಕ್ರಮಿಸುವಷ್ಟೇ ದೂರವನ್ನು ಕ್ರಮಿಸಲು ಫ್ಲೆಕ್ಸ್-ಫ್ಯುಯೆಲ್ ಕಾರಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದ ಇಂಧನದ ಅಗತ್ಯವಿರುತ್ತದೆ. ಅಂದರೆ ಇಲ್ಲಿ ಮೈಲೇಜ್ ಕೊಂಚ ಕಡಿಮೆ ಸಿಗಬಹುದು.
ಖರೀದಿ ದರವನ್ನು ನೋಡುವುದಾದರೆ, ಪ್ರಸ್ತುತ ಸಿಎನ್‌ಜಿ ಕಾರುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಹತ್ತಾರು ಮಾಡೆಲ್‌ಗಳು ಇವೆ. ಆದರೆ ಸಿಎನ್‌ಜಿ ಮಾದರಿಗಳ ಬೆಲೆಯು ಸಾಮಾನ್ಯ ಪೆಟ್ರೋಲ್ ಮಾಡೆಲ್‌ಗಿಂತ ಸುಮಾರು 80,000 ರೂ.ನಿಂದ 1 ಲಕ್ಷ ರೂ.ವರೆಗೆ ಹೆಚ್ಚಿರುತ್ತದೆ.
ಮತ್ತೊಂದೆಡೆ, ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನವು ಭಾರತದಲ್ಲಿ ಇನ್ನು ಆರಂಭಿಕ ಹಂತದಲ್ಲಿದೆ ಮತ್ತು ಸದ್ಯಕ್ಕೆ ಇಂತಹ ವಾಹನಗಳ ಆಯ್ಕೆಗಳು ಸೀಮಿತವಾಗಿವೆ. ಇತ್ತೀಚೆಗೆ ಪ್ರದರ್ಶಿಸಲಾದ ಮಾರುತಿ ವ್ಯಾಗನ್ ಆರ್ ಫ್ಲೆಕ್ಸ್ ಫ್ಯುಯೆಲ್ ಕಾರಿನ ಅಂದಾಜು ಎಕ್ಸ್ ಶೋರೂಮ್ ಬೆಲೆ ₹ 7.24 ಲಕ್ಷ ಎನ್ನಲಾಗಿದೆ. ಇದು ಸಾಮಾನ್ಯ ಪೆಟ್ರೋಲ್ ಮಾಡೆಲ್‌ಗಿಂತ ಸುಮಾರು 85,000 ದಿಂದ 86,000 ರೂಪಾಯಿ ಅಧಿಕವಾಗಿದೆ.
ಕೇವಲ ರನ್ನಿಂಗ್ ಕಾಸ್ಟ್ (ಪ್ರಯಾಣದ ವೆಚ್ಚ) ಮತ್ತು ಮೈಲೇಜ್ ಅನ್ನು ಮಾತ್ರ ಲೆಕ್ಕ ಹಾಕುವುದಾದರೆ, ಸದ್ಯದ ಪರಿಸ್ಥಿತಿಯಲ್ಲಿ ಸಿಎನ್‌ಜಿ ಕಾರುಗಳೇ ಹೆಚ್ಚು ಲಾಭದಾಯಕವಾಗಿವೆ. ಆದರೆ ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಇದು ದೇಶೀಯವಾಗಿ ತಯಾರಾಗುವ ಎಥನಾಲ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ದೇಶದ ಆರ್ಥಿಕತೆಗೆ ನೆರವಾಗುತ್ತದೆ.
ನಿಮ್ಮ ನಗರದಲ್ಲಿ ಸಿಎನ್‌ಜಿ ಬಂಕ್‌ಗಳ ಉತ್ತಮ ನೆಟ್‌ವರ್ಕ್ ಇದ್ದು, ನಿಮ್ಮ ವಾರ್ಷಿಕ ರನ್ನಿಂಗ್ (ಕಿಲೋಮೀಟರ್ ಓಟ) ಹೆಚ್ಚಿದ್ದರೆ ಕಣ್ಣು ಮುಚ್ಚಿ ಸಿಎನ್‌ಜಿ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಭವಿಷ್ಯದಲ್ಲಿ ಒಂದು ವೇಳೆ ದೇಶಾದ್ಯಂತ E85 ಇಂಧನದ ಲಭ್ಯತೆ ಹೆಚ್ಚಾಗಿ, ಫ್ಲೆಕ್ಸ್-ಫ್ಯುಯೆಲ್ ಕಾರುಗಳ ಬೆಲೆ ಇನ್ನಷ್ಟು ಕಡಿಮೆಯಾದರೆ, ಈ ತಂತ್ರಜ್ಞಾನ ಕೂಡ ಸಿಎನ್‌ಜಿಗೆ ಪ್ರಬಲ ಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.