Seat Belt ಹಾಕ್ಕೊಂಡು ಪ್ರಾಣ ಉಳಿಸ್ಕಳಿ..! ಬೆಲ್ಟ್‌ ಹಾಕ್ಕೊಂಡ್ರಷ್ಟೇ ಏರ್‌ಬ್ಯಾಗ್‌ ಓಪನ್‌

By Kannadaprabha NewsFirst Published Sep 6, 2022, 9:54 AM IST
Highlights

ಸೈರಸ್‌ ಮಿಸ್ತ್ರಿ ಸಾವಿನ ಬೆನ್ನಲ್ಲೇ ಮತ್ತೆ ಕಾರುಗಳ ಸುರಕ್ಷತೆ ಕುರಿತು ಚರ್ಚೆ ನಡೆಯುತ್ತಿದೆ. ಕಾರಿನಲ್ಲಿ ಸೀಟು ಬೆಲ್ಟೇ ಮೊದಲ ಸುರಕ್ಷತೆ ಸಾಧನವಾಗಿದ್ದು, ಬೆಲ್ಟ್‌ ಹಾಕಿಕೊಂಡರಷ್ಟೇ ಏರ್‌ಬ್ಯಾಗ್‌ ಓಪನ್‌ ಆಗುತ್ತದೆ ಎಂಬುದನ್ನು ಪ್ರಯಾಣಿಕರು ಅರಿಯಬೇಕು. ಈ ಬಗ್ಗೆ ಇಲ್ಲಿದೆ ವಿವರ..

ಮುಂಬೈ: ಖ್ಯಾತ ಉದ್ಯಮಿ ಸೈರಸ್‌ ಮಿಸ್ತ್ರಿ ಸಾವಿನ ಬೆನ್ನಲ್ಲೇ, ಕಾರು ಪ್ರಯಾಣಿಕರ ಸುರಕ್ಷತೆ ಮತ್ತು ಪ್ರಯಾಣದ ವೇಳೆ ವಹಿಸಬೇಕಾದ ಮುಂಜಾಗ್ರತೆ ವಿಷಯ ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದೆ. ಏಕೆಂದರೆ ಅತ್ಯಂತ ಸುರಕ್ಷತೆ ಹೊಂದಿರುವ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಕುಳಿತಿದ್ದ ಹೊರತಾಗಿಯೂ, ಕಾರಿನ ಬೆಲ್ಟ್‌ ಧರಿಸದ ಕಾರಣ ಖ್ಯಾತ ಉದ್ಯಮಿ ಸೈರಸ್‌ ಮಿಸ್ತ್ರಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಈ ನಿಟ್ಟಿನಲ್ಲಿ ಕಾರು ಪ್ರಯಾಣದ ವೇಳೆ ಮುಂಬದಿ ಪ್ರಯಾಣಿಕರಷ್ಟೇ, ಹಿಂಬದಿ ಪ್ರಯಾಣಿಕರೂ ವಹಿಸಬೇಕಾದ ಜಾಗ್ರತೆ, ಹಿಂಬದಿ ಪ್ರಯಾಣಿಕರು ಜಾಗ್ರತೆ ವಹಿಸದೇ ಹೋದರೆ ಮುಂಬದಿ ಪ್ರಯಾಣಿಕರು ಎದುರಿಸಬೇಕಾದ ಅಪಾಯಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸೀಟು ಬೆಲ್ಟೇ ಮೊದಲ ಹಂತದ ಸುರಕ್ಷತೆ

ಕಾರಿನ ಮುಂಭಾಗವಾಗಲೀ ಅಥವಾ ಹಿಂಭಾಗದ ಪ್ರಯಾಣಿಕರಿಗಾಗಲಿ ಸೀಟ್‌ ಬೆಲ್ಟ್‌ ಮೊದಲ ಹಂತದ ಸುರಕ್ಷತಾ ಸಾಧನ. ಒಂದು ವೇಳೆ ನೀವು ಸೀಟ್‌ ಬೆಲ್ಟ್‌ ಧರಿಸದೇ ಹೋದಲ್ಲಿ, ಕಾರಿನಲ್ಲಿ ಜೀವ ಉಳಿಸಬಹುದಾದ ಏರ್‌ಬ್ಯಾಗ್‌ ಇದ್ದೂ ಪ್ರಯೋಜನಕ್ಕೆ ಬಾರದು. ಏಕೆಂದರೆ ಸೀಟ್‌ ಬೆಲ್ಟ್‌ ಹಾಕದೇ ಇದ್ದರೆ ಅಥವಾ ಸರಿಯಾಗಿ ಹಾಕಿಕೊಳ್ಳದೇ ಇದ್ದರೆ ಅಪಘಾತದ ವೇಳೆ ಏರ್‌ಬ್ಯಾಗ್‌ ಓಪನ್‌ ಆಗದು. ಹೀಗಾಗಿ ಸೀಟ್‌ ಬೆಲ್ಟ್‌ ಪ್ರಯಾಣಿಕರ ಪಾಲಿಗೆ ಮೊದಲ ಹಂತದ ಸುರಕ್ಷತೆ.

ಇದನ್ನು ಓದಿ: ಸೀಟ್‌ಬೆಲ್ಟ್‌ ಧರಿಸದಿದ್ದರೆ ಕಾರಿನ ಏರ್‌ಬ್ಯಾಗ್ಸ್ ನಿಷ್ಪ್ರಯೋಜಕ ಏಕೆ?

Almost all I know don’t fasten seat belt while sitting in the car’s rear. was sitting in the rear seat minus the seat belt during collision. This simulation shows what happens to an unbelted rear seat passenger in case of a collision. Please ALWAYS! pic.twitter.com/HjS9weMOT0

— Rajesh Kalra (@rajeshkalra)

ಮುಂಬದಿ, ಹಿಂಬದಿಗೆ ಸೀಟ್‌ ಬೆಲ್ಟ್‌ ಕಡ್ಡಾಯ

ಬಹುತೇಕ ಸಮಯ ಮುಂಬದಿ ಪ್ರಯಾಣಿಕರು ಮಾತ್ರವೇ ಸೀಟ್‌ ಬೆಲ್ಟ್‌ ಹಾಕಿರುತ್ತಾರೆ. ಅಪಘಾತದ ವೇಳೆ ಹಿಂಬದಿ ಪ್ರಯಾಣಿಕರು ಹೆಚ್ಚು ಸುರಕ್ಷಿತ ಎಂಬ ಅಪನಂಬಿಕೆ ಇದಕ್ಕೆ ಕಾರಣ. ಆದರೆ ಇದಕ್ಕೆ ಸೈರಸ್‌ ಮಿಸ್ತ್ರಿ ಘಟನೆ ಸ್ಪಷ್ಟ ಎಲ್ಲರಿಗೂ ಸೂಕ್ತ ಸಂದೇಶ ರವಾನಿಸಿದೆ. ಅಪಘಾತವಾದ ಕಾರಿನ ಮುಂಬದಿಯ ಇಬ್ಬರೂ ಸೀಟ್‌ಬೆಲ್ಟ್‌ ಧರಿಸಿದ್ದ ಕಾರಣ ಏರ್‌ಬ್ಯಾಗ್‌ ಓಪನ್‌ ಆಗಿ ಇಬ್ಬರೂ ಬದುಕಿದ್ದಾರೆ. ಹಿಂದಿದ್ದ ಇಬ್ಬರೂ ಸೀಟ್‌ ಬೆಲ್ಟ್‌ ಧರಿಸದ ಕಾರಣ, ಏರ್‌ಬ್ಯಾಗ್‌ ಓಪನ್‌ ಆಗದೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Cyrus Mistry Death: ಖ್ಯಾತ ವೈದ್ಯೆ ಚಲಾಯಿಸುತ್ತಿದ್ದ ಕಾರು; ಸೀಟ್ ಬೆಲ್ಟ್ ಧರಿಸಿರಲಿಲ್ಲ ಸೈರಸ್‌ ಮಿಸ್ತ್ರಿ..!

ಗುರುತ್ವಾಕರ್ಷಣೆಯ ಬಿಗ್‌ ಶಾಕ್‌

ಅಪಘಾತದ ತೀವ್ರತೆಗೆ ಕೆಲವೊಮ್ಮೆ ಕಾರಿನಲ್ಲಿದ್ದವರು 40ಜಿ (ಗುರುತ್ವಾಕರ್ಷಣೆಯ 40 ಪಟ್ಟು ವೇಗ, ಅಂದರೆ ವ್ಯಕ್ತಿಯೊಬ್ಬ 80 ಕೆಜಿ ತೂಕವಿದ್ದರೆ ಆತ 3200 ಕೆ.ಜಿ ತೂಕದಲ್ಲಿ ತೂರಲ್ಪಡುತ್ತಾರೆ) ವೇಗದಲ್ಲಿ ಮುಂದಕ್ಕೆ ಅಥವಾ ಹಿಂದಕ್ಕೆ ತೂರಲ್ಪಡುತ್ತಾರೆ. ಹೀಗಾದಾಗ ಹಿಂಬದಿ ಪ್ರಯಾಣಿಕ ಸೀಟು ಬೆಲ್ಟ್‌ ಧರಿಸದೇ ಹೋದಲ್ಲಿ ಆತ ಭಾರಿ ವೇಗವಾಗಿ ತೂರಲ್ಪಟ್ಟ ಕಾರಣಕ್ಕೆ ಸೀಟ್‌ ಬೆಲ್ಟ್‌ ಧರಿಸಿದ ಮುಂಬದಿ ಸವಾರ ಕೂಡಾ ತೊಂದರೆ ಸಿಕ್ಕಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. 

ಸೀಟ್‌ ಬೆಲ್ಟ್‌ ಧರಿಸಲು ದಿಯಾ ಮಿರ್ಜಾ ಮನವಿ

ಟಾಟಾ ಸನ್ಸ್ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಸಾವಿಗೆ ಸೀಟ್‌ ಬೆಲ್ಟ್‌ ಧರಿಸದಿರುವುದೇ ಕಾರಣ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಬಾಲಿವುಡ್‌ ನಟಿ ದಿಯಾ ಮಿರ್ಜಾ, ಎಲ್ಲರಿಗೂ ಸೀಟ್‌ ಬೆಲ್ಟ್‌ ಧರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ‘’ಎಲ್ಲರಿಗೂ ಸೀಟ್‌ ಬೆಲ್ಟ್‌ ಧರಿಸುವಂತೆ ನಾನು ನಿಮಗೆ ಬೇಡಿಕೊಳ್ಳುತ್ತೇನೆ. ನಿಮ್ಮ ಮಕ್ಕಳಿಗೂ ಸೀಟ್‌ ಬೆಲ್ಟ್‌ ಧರಿಸುವುದನ್ನು ಕಲಿಸಿಕೊಡಿ. ಸೀಟ್‌ ಬೆಲ್ಟ್‌ ಜೀವಗಳನ್ನು ಉಳಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

I beg you to wear your seat belts. Teach your children to wear seat belts. It saves lives 🙏🏻🙏🏻

— Dia Mirza (@deespeak)
click me!