
ಬೆಂಗಳೂರು (ಮಾ.20): ನೀವು ಜೊಮಾಟೋಮೂಲಕ ಬಿರಿಯಾನಿ ಅಥವಾ ಪಿಜ್ಜಾ ಆರ್ಡರ್ ಮಾಡುತ್ತಿದ್ದರೆ, ನಿಮ್ಮ ಜೇಬಿಗೆ ಸ್ವಲ್ಪ ಹೆಚ್ಚಿನ ಹೊರೆ ಬೀಳಲಿದೆ. ಜೊಮಾಟೋಕಂಪನಿಯು ಶುಕ್ರವಾರದಿಂದ ಜಾರಿಗೆ ಬರುವಂತೆ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇ. 19ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಪ್ರತಿ ಆರ್ಡರ್ ಮೇಲೆ ಈ ಹಿಂದೆ ಇದ್ದ ₹12.50 ಶುಲ್ಕವು ಈಗ ₹14.90ಕ್ಕೆ ಏರಿಕೆಯಾಗಿದೆ. ಅಂದರೆ ಗ್ರಾಹಕರು ಪ್ರತಿ ಆರ್ಡರ್ ಮೇಲೆ ₹2.40 ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಇದರ ಮೇಲೆ ಜಿಎಸ್‌ಟಿ (GST) ಸೇರಿದಾಗ ಈ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ.
ಪ್ಲಾಟ್‌ಫಾರ್ಮ್ ಶುಲ್ಕವು ಜಿಎಸ್‌ಟಿ, ರೆಸ್ಟೋರೆಂಟ್ ಶುಲ್ಕ ಮತ್ತು ಡೆಲಿವರಿ ಶುಲ್ಕಕ್ಕಿಂತ ಭಿನ್ನವಾದ ಹೆಚ್ಚುವರಿ ಶುಲ್ಕವಾಗಿದೆ. ಜೊಮಾಟೋಪ್ರತಿದಿನ ಸುಮಾರು 20 ರಿಂದ 25 ಲಕ್ಷ ಆರ್ಡರ್‌ಗಳನ್ನು ವಿತರಿಸುತ್ತದೆ, ಹೀಗಾಗಿ ಈ ಸಣ್ಣ ಏರಿಕೆಯೂ ಕಂಪನಿಗೆ ಕೋಟಿಗಟ್ಟಲೆ ಲಾಭ ತಂದುಕೊಡಲಿದೆ. ಸದ್ಯ ಜೊಮ್ಯಾಟೋದ ಪ್ರಮುಖ ಪ್ರತಿಸ್ಪರ್ಧಿ ಸ್ವಿಗ್ಗಿ (Swiggy) ಕೂಡ ತೆರಿಗೆ ಸೇರಿದಂತೆ ಸುಮಾರು ₹14.99 ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ.
ಕಂಪನಿಯು ಕಳೆದ ಏಳು ತಿಂಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಆಗಸ್ಟ್ 2023ರಲ್ಲಿ ಲಾಭ ಹೆಚ್ಚಿಸಿಕೊಳ್ಳಲು ಮೊದಲ ಬಾರಿಗೆ ₹2 ಶುಲ್ಕ ಪರಿಚಯಿಸಲಾಯಿತು. ಜನವರಿ 2024ರಲ್ಲಿ ಶುಲ್ಕವನ್ನು ಹಂತಹಂತವಾಗಿ ₹3 ಮತ್ತು ₹4ಕ್ಕೆ ಏರಿಸಲಾಯಿತು. 2025ರ ಆರಂಭದಲ್ಲಿ ಈ ಶುಲ್ಕ ₹7ಕ್ಕೆ ತಲುಪಿತ್ತು. ಬಳಿಕ ಸೆಪ್ಟೆಂಬರ್ 2025ರಲ್ಲಿ ಶೇ. 20ರಷ್ಟು ಹೆಚ್ಚಳ ಮಾಡಲಾಗಿತ್ತು.ಈಗ ಮಾರ್ಚ್ 2026ರಲ್ಲಿ ಈಗ ₹14.90ಕ್ಕೆ ಏರಿಸಲಾಗಿದೆ.
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಕಾರ್ಯನಿರ್ವಹಣಾ ವೆಚ್ಚಗಳು (Operational Costs) ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ತೈಲ ಬೆಲೆ ಹೆಚ್ಚಾದಾಗ ಡೆಲಿವರಿ ಪಾಲುದಾರರ ವೆಚ್ಚವೂ ಹೆಚ್ಚಾಗುತ್ತದೆ, ಇದು ಕಂಪನಿಯ ಲಾಜಿಸ್ಟಿಕ್ಸ್ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಕಂಪನಿಯ ಲಾಭದ ಪ್ರಮಾಣವನ್ನು ಸುಧಾರಿಸಲು ಜೊಮಾಟೋಕಾಲಕಾಲಕ್ಕೆ ಈ ಶುಲ್ಕವನ್ನು ಬದಲಾಯಿಸುತ್ತಲೇ ಇರುತ್ತದೆ.
ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಡ್ಡಾ ಅವರು 2008 ರಲ್ಲಿ 'ಫೂಡಿಬೇ' (FoodieBay) ಹೆಸರಿನ ರೆಸ್ಟೋರೆಂಟ್ ಡೈರೆಕ್ಟರಿ ವೆಬ್‌ಸೈಟ್ ಆರಂಭಿಸಿದ್ದರು. ಕೇವಲ ಒಂಬತ್ತು ತಿಂಗಳಲ್ಲಿ ಇದು ದೆಹಲಿ ಎನ್‌ಸಿಆರ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತು. 2010 ರಲ್ಲಿ ಇದನ್ನು 'ಜೊಮ್ಯಾಟೋ' ಎಂದು ಮರುನಾಮಕರಣ ಮಾಡಲಾಯಿತು. 2012 ರಿಂದ ಶ್ರೀಲಂಕಾ, ಯುಎಇ, ಬ್ರಿಟನ್ ಸೇರಿದಂತೆ ವಿದೇಶಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿತು. ಜೊಮಾಟೋದೇಶದ ಮೊದಲ 'ಫೂಡ್-ಟೆಕ್ ಯೂನಿಕಾರ್ನ್' (1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಸ್ಟಾರ್ಟ್ಅಪ್) ಎನಿಸಿಕೊಂಡಿದೆ. 2022 ರಲ್ಲಿ ದೀಪಿಂದರ್ ಗೋಯಲ್ ಅವರು ದಿನಸಿ ವಿತರಣಾ ವ್ಯವಹಾರವನ್ನು ವಿಸ್ತರಿಸಲು 'ಬ್ಲಿಂಕಿಟ್' (Blinkit) ಅನ್ನು ಸ್ವಾಧೀನಪಡಿಸಿಕೊಂಡರು. ಕಳೆದ ವರ್ಷ ತಮ್ಮ ಕಂಪನಿಯ ಹೆಸರನ್ನು ಎಟರ್ನಲ್ ಆಗಿ ಬದಲಿಸಿದ್ದು, ಫುಡ್‌ಡೆಲಿವರಿ ಅಪ್ಲಿಕೇಶನ್ ಹೆಸರನ್ನು ಜೋಮೋಟೋ ಆಗಿಯೇ ಮುಂದುವರಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.