ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ? ಹಾಗಾದ್ರೆ ಈ 5 ವಿಷಯ ತಿಳಿದಿರಲಿ

By Suvarna NewsFirst Published Jul 28, 2021, 12:21 PM IST
Highlights

ಸಾಲ ಮರುಪಾವತಿಸಲು ಸಾಧ್ಯವಾಗದೇ ಹೋದಾಗ ನಿಮ್ಮ ಆಸ್ತಿ ಅಥವಾ ವಸ್ತುವನ್ನು ಬ್ಯಾಂಕ್‌ ಹರಾಜು ಹಾಕಬಹುದು. ಆದ್ರೆ ಇಂಥ ಸಮಯದಲ್ಲಿ ಸಾಲಗಾರನಿಗೂ ಕೆಲವು ಹಕ್ಕುಗಳಿದ್ದು,ಅವುಗಳ ಬಗ್ಗೆ ತಿಳಿದಿರೋದು ಮುಖ್ಯ.

ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನೋ ಮಾತಿದೆ. ಆದ್ರೆ ಸಾಲ ತೀರಿಸೋದು ತುಪ್ಪ ತಿಂದಷ್ಟು ಸುಲಭದ ಕೆಲಸವಂತೂ ಅಲ್ಲ.ಸಾಲವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸೋದು ನಿಜಕ್ಕೂ ಸವಾಲಿನ ಕೆಲಸ. ಎಷ್ಟೋ ಬಾರಿ ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ಅಥವಾ ಅನಿರೀಕ್ಷಿತ ಘಟನೆ ಘಟಿಸಿದಾಗ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದೆ ಹೋಗಬಹುದು.ಇಂಥ ಸಮಯದಲ್ಲಿ ಸಾಲ ನೀಡಿದ ಸಂಸ್ಥೆ ನಿಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬಹುದು.ನೀವು ಸಾಲಕ್ಕೆ ಸೆಕ್ಯುರಿಟಿಯಾಗಿ ನೀಡಿರೋ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ಹರಾಜು ಮಾಡಬಹುದು. ಆದ್ರೆ ನೀವು ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಏಕಾಏಕೀ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ. ನೀವು ಸಾಲಗಾರ ಮಾತ್ರವಲ್ಲ,ಆ ಸಂಸ್ಥೆಯ ಗ್ರಾಹಕ ಕೂಡ. ಹೀಗಾಗಿ ಕಾನೂನಿನಲ್ಲಿ ನಿಮಗೂ ಕೂಡ ಒಂದಿಷ್ಟು ಅಧಿಕಾರವಿದೆ.ಈ ಬಗ್ಗೆ ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆಗಳಲ್ಲಿ ಸಾಲ ಪಡೆದವರು ಮಾಹಿತಿ ಹೊಂದಿರೋದು ಅಗತ್ಯ.

ಆದಾಯ ತೆರಿಗೆ ಭಾರ ತಗ್ಗಿಸೋ ಮಾರ್ಗಗಳು ಯಾವುವು?

ನೋಟಿಸ್‌ ನೀಡೋದು ಅಗತ್ಯ
ಬ್ಯಾಂಕ್‌ ಅಥವಾ ಯಾವುದೇ ಸಂಸ್ಥೆ ಸಾಲ ಪಡೆದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳೋ ಮುನ್ನ ತಪ್ಪದೇ ಆತನಿಗೆ ನೋಟಿಸ್‌ ನೀಡಬೇಕು. 90 ದಿನಗಳ ತನಕ ಯಾವುದೇ ಮರುಪಾವತಿ ಮಾಡದಿದ್ರೆ ಅಂಥ ಸಾಲಗಾರನ ಖಾತೆಯನ್ನು ಸುಸ್ತಿ ಅಥವಾ ವಸೂಲಾಗದ ಸಾಲಗಳ (ಎನ್‌ಪಿಎ) ಖಾತೆ  ಎಂದು ವರ್ಗೀಕರಿಸಲಾಗುತ್ತದೆ. ಅಲ್ಲದೆ, ದಿವಾಳಿ ಸಂಹಿತೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ.  ಇಂಥ ಪ್ರಕರಣದಲ್ಲಿ ಸಾಲ ನೀಡಿದ ಸಂಸ್ಥೆ ಸಾಲಗಾರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳೋ ಮೊದಲು ಆತನಿಗೆ 60 ದಿನಗಳ ಕಾಲಾವಕಾಶ ನೀಡಿ ನೋಟಿಸ್‌ ಜಾರಿ ಮಾಡಬೇಕು. ಒಂದು ವೇಳೆ ಸಾಲಗಾರ ನೋಟಿಸ್‌ನಲ್ಲಿ ತಿಳಿಸಿರೋ ಅವಧಿಯೊಳಗೆ ಸಾಲ ಮರುಪಾವತಿ ಮಾಡಲು ವಿಫಲನಾದ್ರೆ, ಬ್ಯಾಂಕ್‌ ಆತನ ಆಸ್ತಿಗಳ ಹರಾಜಿಗೆ ಮುಂದಾಗಬಹುದು. ಆದ್ರೆ ಹರಾಜು ಮಾಡೋ ಮೊದಲು  ಮಾರಾಟದ ಮಾಹಿತಿಗಳನ್ನೊಳಗೊಂಡಿರೋ ಹಾಗೂ ಮತ್ತೆ 30 ದಿನಗಳ ಸಮಯಾವಕಾಶವಿರೋ ಸಾರ್ವಜನಿಕ ಪ್ರಕಟಣೆಯನ್ನು ಬ್ಯಾಂಕ್ ಪ್ರಕಟಿಸಬೇಕು. 

ನ್ಯಾಯಸಮ್ಮತ ಮೌಲ್ಯಮಾಪನ
ಆಸ್ತಿಗಳನ್ನು ಮಾರಾಟ ಮಾಡೋ ಮುನ್ನ ಬ್ಯಾಂಕ್‌ ಅಥವಾ ಸಾಲ ನೀಡಿದ ಸಂಸ್ಥೆ ಆಸ್ತಿಗೆ ನ್ಯಾಯಯುತ ಬೆಲೆ ನಮೂದಿಸಿರೋ ಜೊತೆ ರಿಸರ್ವ್‌ ದರ, ಹರಾಜಿನ ದಿನಾಂಕ ಹಾಗೂ ಸಮಯದ ಮಾಹಿತಿಗಳನ್ನೊಳಗೊಂಡ ನೋಟಿಸ್‌ ಜಾರಿ ಮಾಡಬೇಕು. ನಿಮ್ಮ ಆಸ್ತಿಗಳಿಗೆ ಬ್ಯಾಂಕ್‌ನ ಮೌಲ್ಯಮಾಪಕರು ಬೆಲೆ ನಿಗದಿಪಡಿಸುತ್ತಾರೆ. ಒಂದು ವೇಳೆ ನಿಮ್ಮ ಆಸ್ತಿಗೆ ಕಡಿಮೆ ಬೆಲೆ ನಿಗದಿಪಡಿಸಿದ್ದಾರೆ ಎಂಬ ಭಾವನೆ ಮೂಡಿದ್ರೆ ನೀವು ಕೂಡ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಹೊಸ ಖರೀದಿದಾರರನ್ನು ಹುಡುಕುವ ಹಾಗೂ ಅವರನ್ನು ಸಾಲ ನೀಡಿದವರಿಗೆ ಪರಿಚಯಿಸೋ ಹಕ್ಕು ನಿಮಗಿದೆ.

ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ?

ಹೆಚ್ಚುವರಿ ಹಣ ಪಡೆದುಕೊಳ್ಳಿ
ನಿಮ್ಮ ಆಸ್ತಿಯ ಹರಾಜಿನ ಸಮಯದಲ್ಲಿ ನೀವು ಅಲ್ಲಿ ಉಪಸ್ಥಿತರಿರೋದು ಅಗತ್ಯ. ಆಸ್ತಿ ಮಾರಾಟದಿಂದ ಸಿಕ್ಕ ಹಣದಲ್ಲಿ ಬ್ಯಾಂಕ್‌ ತನಗೆ ಬರಬೇಕಾದ ಪಾಲನ್ನು ಪಡೆದು ಉಳಿದ ಹಣವನ್ನು ನಿಮಗೆ ನೀಡಬೇಕು. ಹೀಗಾಗಿ ನಿಮ್ಮ ಆಸ್ತಿ ಬ್ಯಾಂಕ್‌ಗೆ ನೀವು ಮರುಪಾವತಿಸಬೇಕಾದ ಹಣಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ರೆ ಉಳಿದ ಹಣ ಕಾನೂನುಬದ್ಧವಾಗಿ ನಿಮಗೆ ಸೇರಬೇಕು. 
 

ಅಮಾನವೀಯವಾಗಿ ವರ್ತಿಸುವಂತಿಲ್ಲ
ಸಾಲ ನೀಡಿದವರು ಮಧ್ಯವರ್ತಿಗಳ ಮೂಲಕ ಸಾಲ ಪಡೆದವರಿಂದ ವಸೂಲಿಗೆ ಪ್ರಯತ್ನಿಸಬಹುದು. ಆದ್ರೆ ಈ ಮಧ್ಯವರ್ತಿಗಳು ಬ್ಯಾಂಕ್‌ ತನ್ನ ಗ್ರಾಹಕರೊಂದಿಗಿನ ವರ್ತನೆಗ ಸಂಬಂಧಿಸಿದ ನೀತಿ ಸಂಹಿತೆಯನ್ನು ಮೀರುವಂತಿಲ್ಲ. ಮಧ್ಯವರ್ತಿಗಳು ಸಾಲಗಾರರನ್ನು ಅವರ ಮನೆ, ಆಫೀಸ್‌ ಅಥವಾ ನಿಗದಿತ ಸ್ಥಳದಲ್ಲಿ ಭೇಟಿ ಮಾಡಬಹುದು. ಆದ್ರೆ ಅವರು ಈ ಸಮಯದಲ್ಲಿ ನಾಗರಿಕ ವರ್ತನೆ ಹಾಗೂ ಸಭ್ಯತೆ ಮೀರಿ ವರ್ತಿಸುವಂತಿಲ್ಲ. ಸಾಲಗಾರರು ಅಥವಾ ಅವರ ಕುಟುಂಬ ಸದಸ್ಯರನ್ನು ಅವಮಾನಿಸೋದು ಅಥವಾ ಅವರ ಮೇಲೆ ಹಲ್ಲೆ ಮಾಡುವಂತಹ ವರ್ತನೆ ತೋರಿದ್ರೆ ಸಾಲಗಾರರು ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳ ಗಮನ ಸೆಳೆಯಬಹುದು. ಅಲ್ಲದೆ, ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ಗೆ ಕೂಡ ದೂರು ನೀಡಬಹುದು.

ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ತೀರಾ? 

ವಸೂಲಾತಿ ನಿಯಮ ಪಾಲಿಸೋದು ಅಗತ್ಯ
ಜೀವಮಾನದ ಉಳಿತಾಯವನ್ನೆಲ್ಲ ಒಟ್ಟುಗೂಡಿಸಿ ಖರೀದಿಸಿದ ಆಸ್ತಿ ಕೈತಪ್ಪಿ ಹೋದ್ರೆ ಬೇಸರವಾಗೋದು ಸಹಜ. ಆದ್ರೆ ಉದ್ಯೋಗ ಕಳೆದುಕೊಂಡಾಗ ಅಥವಾ ಉದ್ಯಮದಲ್ಲಿ ನಷ್ಟವುಂಟಾದಾಗ ಸಾಲ ಮರುಪಾವತಿಸಲು ಸಾಧ್ಯವಾಗದೇ ಹೋಗಬಹುದು. ಇಂಥ ಸಮಯದಲ್ಲಿ ಪರಿಸ್ಥಿತಿಯನ್ನು ಒಪ್ಪಿಕೊಳ್ಳೋದೊಂದೇ ನಮ್ಮ ಮುಂದಿರೋ ಆಯ್ಕೆ. ಆದ್ರೆ ಸಾಲಗಾರ ದಿವಾಳಿಯಾಗಿದ್ರೂ ಸಾಲ ನೀಡಿದ ಸಂಸ್ಥೆ ವಸೂಲಿ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಪಾಲಿಸೋದು ಅಗತ್ಯ. ಒಂದು ವೇಳೆ ಬ್ಯಾಂಕ್‌ ಈ ನಿಯಮ ಪಾಲಿಸಲು ವಿಫಲವಾದ್ರೆ, ಅದನ್ನು ಪ್ರಶ್ನಿಸೋ ಹಕ್ಕು ಸಾಲಗಾರನಿಗಿದೆ. 
 

click me!