ಹೈಡ್ರಾಮಾ ಬಳಿಕ ರಾಣಾ ಸಿಕ್ಕಿಬಿದ್ದಿದ್ದು ಹೇಗೆ?| ಯಸ್ ಬ್ಯಾಂಕ್ ಖರೀದಿಗೆ ಬಂದವರನ್ನು ವಾಪಸ್ ಕಳಿಸುತ್ತಿದ್ದ ಕಪೂರ್| ಲಂಡನ್‌ನಲ್ಲಿದ್ದ ಕಪೂರ್ ತಾವೇ ಯಸ್ ಬ್ಯಾಂಕ್‌ಗೆ ಮರಳಲು ಇಚ್ಛಿಸಿದ್ದರು| ಇದಕ್ಕಾಗಿ ಮಾತುಕತೆಗೆ ಬರುವಂತೆ ಆರ್‌ಬಿಐನಿಂದ ಕಪೂರ್‌ಗೆ ಆಹ್ವಾನದ ನಾಟಕ| ಭಾರತಕ್ಕೆ ಮರಳಿದಾಗ ಬಂಧಿಸುವಲ್ಲಿ ಸರ್ಕಾರ ಯಶಸ್ವಿ
ನವದೆಹಲಿ[ಮಾ.10]: ಅಕ್ರಮ ನಡೆಸಿದ ಆರೋಪ ಹೊತ್ತಿರುವ ಯಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಬಂಧಿತರಾಗಿದ್ದು ಹೇಗೆ ಎಂಬುದರ ಹಿಂದೆ ಕುತೂಹಲಕರ ಕತೆಯೇ ಇದೆ. ಲಂಡನ್‌ನಲ್ಲಿ ವಾಸವಾಗಿದ್ದ ಇವರನ್ನು ಭಾರತಕ್ಕೆ ಮರಳುವಂತೆ ಮಾಡಿದ್ದರ ಹಿಂದೆ ಆರ್‌ಬಿಐನ ನಿಗಾ ಮತ್ತು ತನಿಖಾ ಸಂಸ್ಥೆಗಳ ತಂತ್ರಗಾರಿಕೆ ಇತ್ತು ಎಂಬುದೀಗ ಬಯಲಾಗಿದೆ.
ನಷ್ಟದಲ್ಲಿ ಸಿಲುಕಿದ್ದ ಯಸ್ ಬ್ಯಾಂಕನ್ನು ಖರೀದಿಸಲು ಅನೇಕ ಹೂಡಿಕೆದಾರರು ರಿಸವ್‌ರ್ ಬ್ಯಾಂಕ್ ಮುಖ್ಯಸ್ಥರನ್ನು ಭೇಟಿ ಮಾಡುತ್ತಿದ್ದರು. ಇನ್ನೇನು ಖರೀದಿ ಪ್ರಕ್ರಿಯೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಹೂಡಿಕೆ ನಿರ್ಧಾರದಿಂದ ಹಿಂದೆ ಸರಿದುಬಿಡುತ್ತಿದ್ದರು. ಪದೇ ಪದೇ ಇದೇ ರೀತಿಯ ವಿದ್ಯಮಾನಗಳು ಮರುಕಳಿಸಿದ ಕಾರಣ, ಆರ್‌ಬಿಐ ಕೂಡ ಚಿಂತೆಗೆ ಒಳಗಾಯಿತು.
ಲಂಡನ್‌ನಲ್ಲಿ ಇರುತ್ತಿದ್ದ ರಾಣಾ ಕಪೂರ್, ಹೂಡಿಕೆದಾರರು ಆರ್‌ಬಿಐಗೆ ಹೋಗಿ ಬಂದಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ, ತಮ್ಮ ಕಡೆಯವರನ್ನು ಹೂಡಿಕೆದಾರರ ಬಳಿ ಕಳಿಸುತ್ತಿದ್ದರು. ಅದ್ಹೇಗೋ ಹೂಡಿಕೆಯಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಕೊನೆಗೆ ಹೂಡಿಕೆದಾರರು ಹಿಂದೆ ಸರಿದ ನಂತರ, ‘ನಾನೇ ಯಸ್ ಬ್ಯಾಂಕ್ ಆಡಳಿತ ಮಂಡಳಿಗೆ ವಾಪಸ್ ಬರುವೆ’ ಎಂಬ ಸಂದೇಶವನ್ನು ಆರ್‌ಬಿಐಗೆ ರವಾನಿಸಿದರು.
ಆಗ ಆರ್‌ಬಿಐಗೆ ರಾಣಾ ಹೂಡಿದ್ದ ತಂತ್ರಗಳು ಗೊತ್ತಾದವು. ‘ಆಯಿತು. ನೀವು ಯಸ್ ಬ್ಯಾಂಕ್‌ಗೆ ಮರಳುವ ಬಗ್ಗೆ ಮಾತುಕತೆ ನಡೆಸೋಣ ಬನ್ನಿ’ ಎಂದು ರಾಣಾಗೆ ಆರ್‌ಬಿಐ ಸಂದೇಶ ಕಳಿಸಿತು. ಇದನ್ನೇ ನಂಬಿದ ರಾಣಾ ಭಾರತಕ್ಕೆ ಮರಳಿದರು. ಆಗ ಸರ್ಕಾರದ ಸೂಚನೆ ಮೇರೆಗೆ ತನಿಖಾ ಸಂಸ್ಥೆಗಳು, ರಾಣಾ ಮತ್ತೆ ವಿದೇಶಕ್ಕೆ ಹಾರಬಾರದು ಎಂದು ಅವರ ಚಲನವಲನದ ಮೇಲೆ ನಿಗಾ ಇರಿಸಿದವು. ಆದರೆ ಈ ನಡುವೆ, ಯಸ್ ಬ್ಯಾಂಕ್ ಆಡಳಿತ ಮಂಡಳಿಗೆ ತಾವು ಮರಳುವ ಬಗ್ಗೆ ರಾಣಾಗೆ ಸಂದೇಹ ಶುರುವಾಯಿತು. ಈ ಹಂತದಲ್ಲಿ ರಾಣಾ ಇರುವಿಕೆ ಸ್ಥಳದ ಬಗ್ಗೆ 1-2 ಸಲ ತಿಳಿಯದೇ ತನಿಖಾ ಸಂಸ್ಥೆಗಳು ಆತಂಕಗೊಂಡಿದ್ದವು.
ಇನ್ನು ಮಾರ್ಚ್ 14ರಂದು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆ ನಿಗದಿಯಾಗಿದೆ. ಈ ವೇಳೆ ಬ್ಯಾಂಕ್‌ನ ವಸೂಲಾಗದ ಸಾಲದ ಮೊತ್ತವಾದ 16 ಸಾವಿರ ಕೋಟಿ ರು. ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಇದರಿಂದ ಬ್ಯಾಂಕ್‌ನ ಠೇವಣಿದಾರರು ಬ್ಯಾಂಕ್‌ನಿಂದ ಠೇವಣಿ ಹಿಂಪಡೆಯುವ ಸಾಧ್ಯತೆ ಕೂಡ ದಟ್ಟವಾಗಿತ್ತು. ಈ ಸಂದರ್ಭದಲ್ಲಿ ರಾಣಾರನ್ನು ಮತ್ತೆ ಆಡಳಿತ ಮಂಡಳಿಗೆ ಕರೆತರುವ ಬದಲು ಬಂಧಿಸುವುದೇ ಲೇಸೆಂದು ಭಾವಿಸಿದ ಸರ್ಕಾರ, ಮಾಚ್‌ರ್ 5ರಂದು ಯಸ್ ಬ್ಯಾಂಕ್ ಆಡಳಿತ ಮಂಡಳಿ ರದ್ದು ಮಾಡಿತು. ರಾಣಾ ಅವರನ್ನು ಬಂಧಿಸಿತು ಎಂದು ಮಾಧ್ಯಮ ವರದಿಯೊಂದು ಹೇಳಿದೆ.