ವಿಪ್ರೋ ಉದ್ಯೋಗಿಗಳಿಗೆ ಸಿಹಿ ಸುದ್ದಿ; ಶೇ.96ರಷ್ಟು ಮಂದಿಗೆ ವಾರ್ಷಿಕ ವೇತನ ಹೆಚ್ಚಳ

By Suvarna NewsFirst Published Sep 26, 2022, 4:22 PM IST
Highlights

*ಸೆಪ್ಟೆಂಬರ್ ನಲ್ಲಿ ವೇತನ ಹೆಚ್ಚಳ ಮಾಡೋದಾಗಿ ಈ ಹಿಂದೆ ಮಾಹಿತಿ ನೀಡಿದ್ದ ವಿಪ್ರೋ
*ಇ-ಮೇಲ್ ಮೂಲಕ ಉದ್ಯೋಗಿಗಳಿಗೆ ಮಾಹಿತಿ
*ಎಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂಬ ಮಾಹಿತಿಯಿಲ್ಲ

ಬೆಂಗಳೂರು (ಸೆ.26): ಆರ್ಹತೆ ಮಾನದಂಡ ತಲುಪಿದ ಹಾಗೂ ಉತ್ತಮ ಪ್ರದರ್ಶನ ತೋರಿದ ಶೇ.96ರಷ್ಟು ವಿಪ್ರೋ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಭಾಗ್ಯ ದೊರಕಿದೆ. ಸೆಪ್ಟೆಂಬರ್ ನಲ್ಲಿ ಉದ್ಯೋಗಿಗಳ ವೇತನ ಹೆಚ್ಚಳ ಮಾಡೋದಾಗಿ ವಿಪ್ರೋ ಈ ಹಿಂದೆ ಘೋಷಿಸಿದ್ದು, ಕೆಲವು ವಿಪ್ರೋ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಪತ್ರ ಈಗಾಗಲೇ ದೊರಕಿದೆ. ಉಳಿದವರಿಗೆ ಮುಂದಿನ ಕೆಲವೇ ದಿನಗಳಲ್ಲಿ ವೇತನ ಹೆಚ್ಚಳದ ಪತ್ರ ಕೈಸೇರಲಿದೆ. ವಿಪ್ರೋ ಉದ್ಯೋಗಿಗಳಿಗೆ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಕಳುಹಿಸಿರುವ ಇ-ಮೇಲ್ ನಲ್ಲಿ ಕಾರ್ಯದಕ್ಷತೆ ಹಾಗೂ ಅರ್ಹತೆ ಮಾನದಂಡದ ಆಧಾರದಲ್ಲಿ ಶೇ.96ರಷ್ಟು ಉದ್ಯೋಗಿಗಳು ವೇತನ ಹೆಚ್ಚಳದ ಸೌಲಭ್ಯ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಇ-ಮೇಲ್ ನಲ್ಲಿ ಎಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಕಳೆದ ತ್ರೈಮಾಸಿಕದಲ್ಲಿ ಹಣಕಾಸಿನ ಒತ್ತಡದ ಹೊರತಾಗಿಯೂ ನಾವು ಸಾಕಷ್ಟು ಹೆಚ್ಚಿನ ಮೊತ್ತದ ಹಾಗೂ ಮಾರುಕಟ್ಟೆ ಆಧಾರಿತ ವೇತನ ಹೆಚ್ಚಳ ಮಾಡಿದ್ದೇವೆ. ಇದು ನಿಮ್ಮ ಕಠಿಣ ಪರಿಶ್ರಮದ ಪ್ರತಿಫಲನ ಹಾಗೂ ನಮ್ಮ ಪ್ರಯತ್ನಗಳು ಫಲ ನೀಡುತ್ತಿವೆ ಎಂಬುದಕ್ಕೆ ಉತ್ತಮ ಸೂಚನೆಯಾಗಿದೆ' ಎಂದು ಗೋವಿಲ್ ತಮ್ಮ ಉದ್ಯೋಗಿಗಳಿಗೆ ಬರೆದಿರುವ ಇ-ಮೇಲ್ ನಲ್ಲಿ ತಿಳಿಸಿದ್ದಾರೆ.

'ನಮ್ಮ ಪ್ರಕ್ರಿಯೆಗಳನ್ನು ಉತ್ತೇಜಿಸಲು ಹಾಗೂ ಸರಳಗೊಳಿಸಲು ಆಂತರಿಕ ಪರಿವರ್ತನೆ ಯೋಜನೆಗಳನ್ನು ಕೂಡ ನಾವು ಹೊಂದಿದ್ದು, ಅದು ನಮ್ಮ ಕಾರ್ಯಕ್ಷಮತೆ ಹಾಗೂ ಚುರುಕುತನ ಹೆಚ್ಚಿಸಲು ನೆರವು ನೀಡಲಿದೆ. ಅಲ್ಲದೆ, ನಮ್ಮ ಮಾರ್ಜಿನ್ ಗಳನ್ನು ಉತ್ತಮಪಡಿಸಿಕೊಳ್ಳಲು ನೆರವು ನೀಡಲಿದೆ' ಎಂದು ಇ-ಮೇಲ್ ನಲ್ಲಿ ಬರೆಯಲಾಗಿದೆ. ಕಂಪನಿಯ ಈ ಹಿಂದಿನ ಘೋಷಣೆಯಂತೆ ಸೆಪ್ಟೆಂಬರ್ ನಲ್ಲಿ ವೇತನ ಹೆಚ್ಚಳ ಮಾಡಲಾಗಿದೆ. ಆದರೆ, ಈ ಹೆಚ್ಚಳವನ್ನು ಮೂರು ತಿಂಗಳು ತಡ ಮಾಡಲಾಗಿದೆ. ಈ ಹಿಂದಿನ ವರ್ಷ ಅಂದ್ರೆ 2021ರಲ್ಲಿ ಜೂನ್ ನಲ್ಲಿ ಹೆಚ್ಚಳ ಮಾಡಲಾಗಿತ್ತು. 

ಅಕ್ಟೋಬರ್ ನಲ್ಲಿ 21 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ರಜಾ ಕ್ಯಾಲೆಂಡರ್ ಹೀಗಿದೆ ನೋಡಿ

ವಿಪ್ರೋ (Wipro) ತನ್ನ ಸಂಸ್ಥೆಯ ಉತ್ತಮ ಕಾರ್ಯಕ್ಷಮತೆ ತೋರುವ ಉದ್ಯೋಗಿಗಳಿಗೆ ತ್ರೈಮಾಸಿಕವಾಗಿ ಬಡ್ತಿ ನೀಡೋದಾಗಿ ತಿಳಿಸಿತ್ತು. ಇನ್ನು ಆಗಸ್ಟ್ ನಲ್ಲಿ ವಿಪ್ರೋ ತನ್ನ ಉದ್ಯೋಗಿಗಳ ವ್ಯತ್ಯಾಸ ಪಾವತಿಯನ್ನು (variable pay ) ನೀಡಿಲ್ಲ ಎಂಬ ಬಗ್ಗೆ ವರದಿಯಾಗಿತ್ತು. ಉನ್ನತ ಮಟ್ಟದ ಅಧಿಕಾರಿಗಳಿಗೆ  ವ್ಯತ್ಯಾಸ ಪಾವತಿ ನೀಡಿಲ್ಲ. ಆದರೆ, ಕಿರಿಯ ಮಟ್ಟದ ಅಧಿಕಾರಿಗಳಿಗೆ ಶೇ.70ರಷ್ಟು ವ್ಯತ್ಯಾಸ ಪಾವತಿ ಮಾಡಲಾಗಿತ್ತು. ಆದರೆ, ಆಗ ಈ ಸ್ಪಷ್ಟನೆ ನೀಡಿದ್ದ ವಿಪ್ರೋ ಕಂಪನಿ ಮಾರ್ಜಿನ್ ಉತ್ತಮವಾಗಿಲ್ಲ. ಹೀಗಾಗಿ ವ್ಯತ್ಯಾಸ ವೇತನ ಪಾವತಿ ಮಾಡುತ್ತಿಲ್ಲ. ಆದರೆ, ಉತ್ತಮ ಕಾರ್ಯದಕ್ಷತೆ ತೋರುವ ಉದ್ಯೋಗಿಗಳಿಗೆ ಲಾಭ ಗಳಿಕೆಯನ್ನು ನೀಡಲಾಗುತ್ತದೆ' ಎಂದು ತಿಳಿಸಿತ್ತು. 2023ನೇ ಹಣಕಾಸು ಸಾಲಿನಲ್ಲಿ ವಿಪ್ರೋ ಕಾರ್ಯನಿರ್ವಹಣೆ ಮಾರ್ಜಿನ್ ಶೇ.15ರಷ್ಟು ಇಳಿಕೆಯಾಗಿತ್ತು. 
ವಿಪ್ರೋ ಸಿಇಒ ಥಿಯರಿ ಡೆಲಾಪೋರ್ಟ್‌ ಅವರು 2021-2022ರ ಆರ್ಥಿಕ ವರ್ಷದಲ್ಲಿ ಭರ್ಜರಿ 79.8 ಕೋಟಿ ರೂ. ವಾರ್ಷಿಕ ವೇತನ ಪಡೆದುಕೊಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ವೇತನ ಪಡೆದ ಭಾರತದ ಐಟಿ ವಲಯದ ಉದ್ಯೋಗಿ ಎನ್ನಿಸಿಕೊಂಡಿದ್ದಾರೆ. ವಿಪ್ರೋ ಭದ್ರತೆ ಹಾಗೂ ವಿನಿಮಯ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದೆ. ಡೆಲಾಪೋರ್ಚ್‌ 13.2 ಕೋಟಿ ರು. ವೇತನ ಹಾಗೂ ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ. 

ರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ ಯೋಜನೆ 12ನೇ ಕಂತಿನ ಹಣ ಈ ತಿಂಗಳು ಖಾತೆಗೆ ಬರುವ ನಿರೀಕ್ಷೆ

ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಪುತ್ರ ರಿಷಾದ್ ಪ್ರೇಮ್ ಜಿ ಕಳೆದ ವರ್ಷ 1.82 ಮಿಲಿಯನ್ ಡಾಲರ್‌ ವೇತನ ಪಡೆದಿದ್ದಾರೆ. ಅದರ ಹಿಂದಿನ ವರ್ಷ 1.62 ಮಿಲಿಯನ್ ಡಾಲರ್ ವೇತನವಿತ್ತು. ರೂಪಾಯಿ ಲೆಕ್ಕದಲ್ಲಿ ರಿಷಾದ್ ಪ್ರೇಮ್ ಜಿ ವೇತನ 11.8 ಕೋಟಿ ರೂ. ಗಳಿಂದ 13.8 ಕೋಟಿ ರೂ.ಗೆ ಹೆಚ್ಚಳವಾಗಿದೆ. 

click me!