
ನವದೆಹಲಿ (ಜು.05): ಬುಧವಾರವಷ್ಟೇ ಐತಿಹಾಸಿಕ 80000 ಅಂಕಗಳನ್ನು ಮುಟ್ಟಿಬಂದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ 1 ಲಕ್ಷದ ಗಡಿಯನ್ನು ಮುಟ್ಟಲಿದೆಯೇ? ಇಂಥದ್ದೊಂದು ಕುತೂಹಲ, ಚರ್ಚೆ ಇದೀಗ ಎಲ್ಲರಲ್ಲಿ ನಡೆದಿದೆ. ಸೆನ್ಸೆಕ್ಸ್ ಕಳೆದ 45 ವರ್ಷಗಳಲ್ಲಿ ಶೇ.15.9ರಷ್ಟು ಸಮಗ್ರ ವಾರ್ಷಿಕ ಅಭಿವೃದ್ಧಿ ಪ್ರಮಾಣ ಹೊಂದಿದೆ.
1986ರಲ್ಲಿ ಆರಂಭಗೊಂಡ ಸೆನ್ಸೆಕ್ಸ್‌ನ ಮೂಲ ಮೌಲ್ಯವನ್ನು ಅದು 1979ರ ಏ.3ರಲ್ಲಿ ಇದ್ದ 100ಕ್ಕೆಹೊಂದಾಣಿಕೆ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಅದು 800 ಪಟ್ಟು ಬೆಳವಣಿಗೆ ಕಂಡುಬಂದಿದೆ. ಹೀಗಾಗಿ ಕಳೆದ 45 ವರ್ಷಗಳಲ್ಲಿ ದಾಖಲಿಸಿದ ಶೇ.15.99ರಷ್ಟು ಬೆಳವಣಿಗೆ ಗತಿಯನ್ನೇ ಮುಂದುವರೆಸಿದರೆ 2025ರ ಡಿಸೆಂಬರ್ ವೇಳೆಗೆ ಸೆನ್ಸೆಕ್ಸ್ 1 ಲಕ್ಷ ಅಂಕ ತಲುಪುವ ಎಲ್ಲಾ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ.
ಹಾಥ್ರಸ್ ಕಾಲ್ತುಳಿತ, 6 ಜನರ ಬಂಧನ: ಸಂಘಟಕನ ಪತ್ತೆಗೆ 1 ಲಕ್ಷ ಬಹುಮಾನ
1996ರ ಬಳಿಕ ಕೇವಲ 6 ವರ್ಷ ಮಾತ್ರವೇ ಸೆನ್ಸೆಕ್ಸ್ ಋಣಾತ್ಮಕ ಫಲಿತಾಂಶ ನೀಡಿದೆ. ಕಳೆದ 5 ವರ್ಷಗಳಲ್ಲಿ ಸೂಚ್ಯಂಕ 40000 ಅಂಕಗಳ ಭಾರೀ ಏರಿಕೆ ಕಾಣುವ ಮೂಲಕ ಡಬಲ್ ಆಗಿದೆ. ಇನ್ನು ಸೆನ್ಸೆಕ್ಸ್ ಪ್ರತಿ 5 ವರ್ಷಕ್ಕೆ ದ್ವಿಗುಣ ಆಗುತ್ತಾ ಇರುವ ಲೆಕ್ಕಾಚಾರ ಪರಿಗಣಿಸಿದರೆ 2029ರ ವೇಳೆಗೆ ಸೂಚ್ಯಂಕ ಮತ್ತೊಂದು ಸಾರ್ವಕಾಲಿಕ ಮಟ್ಟವಾದ 1.50 ಲಕ್ಷ ಅಂಕಗಳನ್ನು ಮುಟ್ಟಲಿದೆ ಎಂದು ತಜ್ಞರು ಹೇಳಿದ್ದಾರೆ.
ಕೆಳಗಿಳಿದ ಸೆನ್ಸೆಕ್ಸ್: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ 80000 ಅಂಕಗಳ ಐತಿಹಾಸಿಕ ಮಟ್ಟ ತಲುಪಿ, ಬಳಿಕ 79,986 ಅಂಕಕ್ಕೆ ದಿನದ ವಹಿವಾಟು ಮುಗಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾದ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟವಾದ 24,286 ಅಂಕಗಳಲ್ಲಿ ಅಂತ್ಯವಾಗಿದೆ.
ಕಳೆದ ಕೆಲ ದಿನಗಳಿಂದ ಏರುಗತಿಯಲ್ಲೇ ಇರುವ ಸೆನ್ಸೆಕ್ಸ್ ಗುರುವಾರ ಮಧ್ಯಂತರದ ಅವಧಿಯಲ್ಲಿ 632 ಅಂಕಗಳ ಏರಿಕೆ ಕಂಡು 80,074 ಅಂಕಗಳನ್ನು ತಲುಪಿತ್ತು. ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಆದರೆ ದಿನದಂತ್ಯಕ್ಕೆ ಸೂಚ್ಯಂಕ ಅಲ್ಪ ಇಳಿಕೆ ಕಂಡು 545 ಅಂಕಗಳ ಏರಿಕೆಯೊಂದಿಗೆ 79,986 ಅಂಕಗಳಲ್ಲಿ ಮುಕ್ತಾಯವಾಗಿದೆ.
ಪ್ರಧಾನಿ ಮೋದಿ, ಅನುರಾಗ್ ವಿರುದ್ಧ ಸ್ಪೀಕರ್‌ಗೆ ಕಾಂಗ್ರೆಸ್ ದೂರು
ಜೂ.4ರಂದು ಲೋಸಕಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಸೆನ್ಸೆಕ್ಸ್ 4,390 ಅಂಕಗಳ ಭಾರೀ ಕುಸಿತ ಕಂಡು 72079ರಲ್ಲಿ ಕೊನೆಗೊಂಡಿತ್ತು. ಅದಾದ 21 ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಭರ್ಜರಿ 8,000 ಅಂಕಗಳ ಏರಿಕೆ ಕಂಡು ಹೂಡಿಕೆದಾರರ ಸಂಪತ್ತನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ನಡುವೆ ನಿಫ್ಟಿ ಕೂಡಾ ಗುರುವಾರ 162 ಅಂಕಗಳ ಏರಿಕೆ ಕಂಡು 24286 ಅಂಕಗಳಲ್ಲಿ ಅಂತ್ಯವಾಗಿದೆ. ಮಧ್ಯಂತರ ಅವಧಿಯಲ್ಲಿ ನಿಫ್ಟಿ 183 ಅಂಕ ಏರಿ 24,307ರವರೆಗೂ ತಲುಪಿತ್ತಾದರೂ ದಿನದಂತ್ಯಕ್ಕೆ ಅಲ್ಪ ಇಳಿಕೆ ಕಂಡಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.