ಆರ್ ಬಿಐ ಹಳೆಯ 5ರೂ. ನಾಣ್ಯ ಸ್ಥಗಿತಗೊಳಿಸಿದ್ದು ಏಕೆ? ಇದರ ಹಿಂದಿದೆ ಬಾಂಗ್ಲಾದೇಶೀಯರ ಕೈವಾಡ!

By Suvarna NewsFirst Published Feb 28, 2023, 10:59 AM IST
Highlights

ಆರ್ ಬಿಐ ಹಳೆಯ 5ರೂ. ನಾಣ್ಯಗಳನ್ನು ಸ್ಥಗಿತಗೊಳಿಸಿದ್ದು ಏಕೆ? ಎಂಬ ಪ್ರಶ್ನೆ ಅನೇಕರನ್ನು ಕಾಡಿರಬಹುದು. ಇದರ ಹಿಂದೆ ಬಲವಾದ ಒಂದು ಕಾರಣವಿದೆ. ಹಳೆಯ 5ರೂ. ನಾಣ್ಯಗಳನ್ನುಬಾಂಗ್ಲಾದೇಶಕ್ಕೆ ಅಕ್ರಮ ಸಾಗಣೆ ಮಾಡಿ, ಅಲ್ಲಿ ಅದರಿಂದ ರೇಜರ್ ಬ್ಲೇಡ್ ಗಳನ್ನು ತಯಾರಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಆರ್ ಬಿಐ ಹೊಸ 5ರೂ. ನಾಣ್ಯವನ್ನು ಪರಿಚಯಿಸಿದೆ. 

Business Desk: 5ರೂ. ಮುಖಬೆಲೆಯ ಹಳೆಯ ನಾಣ್ಯಗಳ ಚಲಾವಣೆಯಲ್ಲಿ ಭಾರೀ ಇಳಿಕೆಯಾಗಿರೋದನ್ನು ನೀವು ಗಮನಿಸಿರಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಾಣ್ಯ ಹಾಗೂ ನೋಟುಗಳ ಮುದ್ರಣಕ್ಕೆ ಸಂಬಂಧಿಸಿ ಆಗಾಗ ಬದಲಾವಣೆಗಳನ್ನು ಮಾಡುತ್ತಿರುತ್ತದೆ. ಖೋಟಾ ನೋಟುಗಳ ನಿಯಂತ್ರಣ ಹಾಗೂ ದುರ್ಬಳಕೆ ತಡೆಗೆ ಆರ್ ಬಿಐ ಆಗಾಗ ಈ ಕ್ರಮ ಕೈಗೊಳ್ಳುತ್ತದೆ.  ಹಾಗೆಯೇ 5ರೂ. ನಾಣ್ಯದ ಸ್ವರೂಪದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಆದರೆ, ಈ ಬದಲಾವಣೆಯ ಹಿಂದಿನ ಕಾರಣ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ. 2 ಸಾವಿರ ರೂ. ಮುಖಬೆಲೆಯ  ನೋಟುಗಳ ಮುದ್ರಣ ನಿಂತ ರೀತಿಯಲ್ಲೇ 5ರೂ. ಮುಖಬೆಲೆಯ ಹಳೆಯ ನಾಣ್ಯದ ತಯಾರಿಕೆಯನ್ನು ಕೂಡ ಅರ್ ಬಿಐ ನಿಲ್ಲಿಸಿದೆ. ಈ ಹಳೆಯ 5ರೂ. ಮೌಲ್ಯದ ನಾಣ್ಯಗಳ ತಯಾರಿಕೆಯಲ್ಲಿ 9ಗ್ರಾಂ ತೂಕದ ಕುಪ್ರೋ ನಿಕ್ಕಲ್ ಬಳಸಲಾಗುತ್ತಿತ್ತು. ಈಗ ನಿಮ್ಮ ಪರ್ಸ್ ನಲ್ಲಿರುವ 5ರೂ. ಮುಖಬೆಲೆಯ ಹೊಸ ನಾಣ್ಯವನ್ನು ಒಮ್ಮೆ ಪರೀಕ್ಷಿಸಿ ನೋಡಿ. ಇದರ ತೂಕ ಹಳೆಯ 5ರೂ. ನಾಣ್ಯಕ್ಕಿಂತ ಕಡಿಮೆಯಿದ್ದು, ತೆಳ್ಳಗಿರೋದು ಕಂಡುಬರುತ್ತದೆ. ಈ ರೀತಿ 5ರೂ. ಮುಖಬೆಲೆಯ ನಾಣ್ಯದ ಸ್ವರೂಪದಲ್ಲಿ ದಿಢೀರ್ ಬದಲಾವಣೆ ಮಾಡಲು ಕಾರಣವೇನು? ಇಲ್ಲಿದೆ ಮಾಹಿತಿ.

ಪ್ರಸ್ತುತ ಬಂಗಾರ ವರ್ಣದ 5ರೂ. ಮುಖಬೆಲೆಯ ನಾಣ್ಯಗಳು ಹೆಚ್ಚು ಚಲಾವಣೆಯಲ್ಲಿವೆ. ಇದಕ್ಕೆ ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ಭಾರತದ ಹಳೆಯ 5ರೂ. ಮುಖಬೆಲೆಯ ನಾಣ್ಯಗಳನ್ನು ಸ್ಮಗ್ಲರ್  ಗಳು ಬಾಂಗ್ಲಾದೇಶಕ್ಕೆ ಅಕ್ರಮ ಸಾಗಣೆ ಮಾಡುತ್ತಿದ್ದರು. ಇದು ಭಾರತದಲ್ಲಿ 5ರೂ. ಮುಖಬೆಲೆಯ ಹಳೆಯ ನಾಣ್ಯಗಳ ಚಲಾವಣೆಯನ್ನು ತಗ್ಗಿಸಿದೆ. ಅಂದ ಹಾಗೇ ಬಾಂಗ್ಲಾದೇಶದಲ್ಲಿ ಈ ನಾಣ್ಯವನ್ನು ಕರಗಿಸಿ ಅದರಿಂದ ರೇಜರ್ ಬ್ಲೇಡ್ ಗಳನ್ನು ತಯಾರಿಸಲಾಗುತ್ತಿತ್ತು. 5ರೂ. ಮುಖಬೆಲೆಯ ಒಂದೇ ಒಂದು ನಾಣ್ಯದಿಂದ 6 ಬ್ಲೇಡ್ ಗಳನ್ನು ಸಿದ್ಧಗೊಳಿಸಬಹುದಾಗಿದ್ದು, ಪ್ರತಿ ಬ್ಲೇಡ್ ಬೆಲೆ 2ರೂ. ಆಗಿದೆ. ಅಂದರೆ 6 ಬ್ಲೇಡ್ ಗಳಿಂದ 12ರೂ. ಗಳಿಸಬಹುದು. 

ಮಾರ್ಚ್ 1ರಿಂದ ಈ ನಿಯಮಗಳಲ್ಲಿ ಬದಲಾವಣೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ

5ರೂ. ಮುಖಬೆಲೆಯ ನಾಣ್ಯಗಳು ಬಾಂಗ್ಲಾದೇಶಕ್ಕೆ ಅಕ್ರಮ ಸಾಗಣೆಯಾಗುತ್ತಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ ಭಾರತ ಸರ್ಕಾರ ನಾಣ್ಯದ ಸ್ವರೂಪ ಹಾಗೂ ಅದರಲ್ಲಿ ಬಳಸಲಾಗುತ್ತಿದ್ದ ಲೋಹದ ಅಂಶವನ್ನು ಬದಲಾಯಿಸಿದೆ. ಆರ್ ಬಿಐ 5 ರೂ. ನಾಣ್ಯಗಳನ್ನು ಹಿಂದಿನ ನಾಣ್ಯಗಳಿಗಿಂತ ತೆಳ್ಳಗೆ ಮಾಡಿದೆ. ಅಲ್ಲದೆ, ಇದರಲ್ಲಿ ಬಳಸಲಾಗುತ್ತಿರುವ ಲೋಹಕ್ಕೆ ಕಡಿಮೆ ಬೆಲೆಯ ಧಾತುಗಳನ್ನು ಬೆರೆಸಿದೆ. ಹೀಗಾಗಿ ಹೊಸ 5ರೂ. ನಾಣ್ಯಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮ ಸಾಗಣೆ ಮಾಡಿದರೂ ಅದರಿಂದ ರೇಜರ್ ಬ್ಲೇಡ್ ಗಳನ್ನು ತಯಾರಿಸಲು ಸಾಧ್ಯವಾಗೋದಿಲ್ಲ. 

ಹೊಸ 5ರೂ. ನಾಣ್ಯಕ್ಕೆ ಹೋಲಿಸಿದರೆ ಹಳೆಯ ನಾಣ್ಯದ ಗುಣಮಟ್ಟ ಉತ್ತಮವಾಗಿದೆ. ಹಳೆಯ ನಾಣ್ಯದಲ್ಲಿ ಬಳಸಲಾಗುತ್ತಿದ್ದ ಕುಪ್ರೋ ನಿಕೆಲ್ ಲೋಹದ ಬೆಲೆ ಸ್ವಲ್ಪ ದುಬಾರಿಯಾದ ಕಾರಣ ಹಳೆಯ 5ರೂ. ನಾಣ್ಯ ಹೆಚ್ಚು ಮೌಲ್ಯಯುತವಾಗಿತ್ತು. ಈ ನಾಣ್ಯವನ್ನು ಕರಗಿಸಿ ಮಾರಿದರೆ 5ರೂ.ಗಿಂತ ಹೆಚ್ಚಿನ ಹಣ ಸಿಗುತ್ತದೆ. ಇದೇ ಕಾರಣಕ್ಕೆ ಹಳೆಯ 5ರೂ. ನಾಣ್ಯದ ದುರ್ಬಳಕೆ ಹೆಚ್ಚಿತ್ತು. ನಾಣ್ಯದ ಮುಖಬೆಲೆಗೂ ಹಾಗೂ ಅದರಲ್ಲಿ ಬಳಸುವ ಲೋಹದ ಬೆಲೆಗೂ ವ್ಯತ್ಯಾಸವಿರುತ್ತದೆ. ಲೋಹದ ಮಾರುಕಟ್ಟೆ ಮೌಲ್ಯದ ಬದಲಾವಣೆಗೆ ಅನುಗುಣವಾಗಿ ನಾಣ್ಯದಲ್ಲಿ ಬಳಸಲಾದ ಲೋಹದ ಮೌಲ್ಯವೂ ಬದಲಾಗುತ್ತದೆ. 

ಯುಪಿಐ ಪಾವತಿ ಅಪ್ಲಿಕೇಷನ್ ಬಳಸುತ್ತಿದ್ದೀರಾ? ಹಾಗಾದ್ರೆ ಮರೆಯದೆ ಈ 5 ಟಿಪ್ಸ್ ಫಾಲೋ ಮಾಡಿ

ಇನ್ನು ಹೊಸ 5ರೂ. ನಾಣ್ಯ ಆಕರ್ಷಕವಾಗಿದ್ದರೂ ತೂಕ ಕಡಿಮೆ. ಇದರ ತಯಾರಿಕೆಯಲ್ಲಿ ಕಡಿಮೆ ಬೆಲೆಯ ಲೋಹಗಳನ್ನು ಬಳಸಲಾಗಿದೆ. ಹೀಗಾಗಿ ಈ ನಾಣ್ಯವನ್ನು ಕರಗಿಸಿ ಅನ್ಯ ಲಾಭದಾಯಕ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಹೊಸ 5ರೂ. ನಾಣ್ಯದ ಚಲಾವಣೆ ತಗ್ಗುವ ಸಾಧ್ಯತೆ ಕೂಡ ಇಲ್ಲ.
 

click me!