Union Budget 2022: ಈ ಬಾರಿಯ ಬಜೆಟ್‌ನ ನಿರೀಕ್ಷೆಗಳೇನು?

Kannadaprabha News   | Asianet News
Published : Jan 31, 2022, 09:23 AM IST
Union Budget 2022: ಈ ಬಾರಿಯ ಬಜೆಟ್‌ನ ನಿರೀಕ್ಷೆಗಳೇನು?

ಸಾರಾಂಶ

ನಮ್ಮ ಜನಸಂಖ್ಯೆಯ ಶೇ.63 ರಷ್ಟುಜನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾರೆ. ಆದರೆ ಅದರಲ್ಲಿ ತೆರಿಗೆ ಪಾವತಿ ಮಾಡುವವರು ಅಂದಾಜು ಶೇ.3ರಷ್ಟುಮಾತ್ರ. ಹಾಗಿದ್ದರೂ ಪ್ರತಿ ಬಜೆಟ್‌ ಸಮಯದಲ್ಲಿ ಆದಾಯ ತೆರಿಗೆ ಕೊಡುಗೆಗಳ ನಿರೀಕ್ಷೆಯ ಬಗ್ಗೆ ಹೆಚ್ಚು ಚರ್ಚಿತವಾಗುತ್ತದೆ.

ನಮ್ಮ ಜನಸಂಖ್ಯೆಯ ಶೇ.63ರಷ್ಟುಜನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾರೆ. ಆದರೆ ಅದರಲ್ಲಿ ತೆರಿಗೆ ಪಾವತಿ ಮಾಡುವವರು ಅಂದಾಜು ಶೇ.3 ರಷ್ಟುಮಾತ್ರ. ಹಾಗಿದ್ದರೂ ಪ್ರತಿ ಬಜೆಟ್‌ ಸಮಯದಲ್ಲಿ ಆದಾಯ ತೆರಿಗೆ ಕೊಡುಗೆಗಳ ನಿರೀಕ್ಷೆಯ ಬಗ್ಗೆ ಹೆಚ್ಚು ಚರ್ಚಿತವಾಗುತ್ತದೆ. ಅದಕ್ಕೆ ಕಾರಣ ಸಂಬಳದಾರರು ಹಾಗೂ ಅವರ ಪ್ರಾಮಾಣಿಕ ತೆರಿಗೆ ಪಾವತಿ. ಹಾಗಾದರೆ ಬೇರೆ ಯಾರೂ ತೆರಿಗೆ ಪಾವತಿಸುವುದಿಲ್ಲವೆಂದರೆ ಸರಿಯಲ್ಲ. ದೇಶದಲ್ಲಿ ಯಾವುದೇ ವಹಿವಾಟು ನಡೆದಾಗ ಅಂದರೆ ಸೂಜಿಯಿಂದ ವಿಮಾನದ ವರೆಗೆ ವ್ಯವಹಾರ ನಡೆದಾಗ ತೆರಿಗೆ ಸಂಗ್ರಹವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮುಖ್ಯ ಆದಾಯವೂ ಕೂಡ ಅದೇ. ಹಾಗಾಗಿ ಎಲ್ಲರೂ ತೆರಿಗೆ ಕಟ್ಟುತ್ತಾರೆ ಮತ್ತು ಬಜೆಟ್‌ ಕೊಡುಗೆಗಳ ನಿರೀಕ್ಷೆ ಸಾಮಾನ್ಯ.

ಚಿನ್ನದ ಬೆಲೆ ಇಳಿಕೆ?

ಜಿಎಸ್‌ಟಿ ಜಾರಿ ಆದ ನಂತರ ವಸ್ತುಗಳ ಬೆಲೆ ಏರಿಕೆ ಅಥವಾ ಇಳಿಕೆ ಬಜೆಟ್‌ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಂತಹ ಜಿಎಸ್‌ಟಿ ಕೌನ್ಸಿಲ್‌ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಬೆಲೆ ಏರಿಕೆ ಹಾಗೂ ಇಳಿಕೆ ಬಗ್ಗೆ ನಿರೀಕ್ಷೆಗಳಿಗೆ ಉತ್ತರ ಕಷ್ಟ. ಆದರೆ ಆಮದು ಸುಂಕ ಏರಿಕೆ ಅಥವಾ ಇಳಿಕೆ, ದರಗಳ ಬದಲಾವಣೆ ಸಾಧ್ಯ. ಉದಾಹರಣೆಗೆ ಪೆಟ್ರೋಲ್‌ ಮೇಲಿನ ಸುಂಕ ಇಳಿಸಿದರೆ ಇದು ಖಂಡಿತವಾಗಿ ಪೆಟ್ರೋಲ್‌ ಮೇಲಲ್ಲದೆ ಎಲ್ಲಾ ವಸ್ತುಗಳ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಇನ್ನು ಚಿನ್ನದ ಬೆಲೆ ಇಳಿಕೆಯ ಬಗ್ಗೆ ನಿರೀಕ್ಷೆಗಳಿವೆ. ಆದರೆ ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಕಷ್ಟ.

ಏಕೆಂದರೆ ನಾವು ಚಿನ್ನವನ್ನು ಆಮದು ಮಾಡಿಕೊಳ್ಳುತ್ತೇವೆ. ಹೆಚ್ಚು ಆಮದು ನಮ್ಮ ವಿದೇಶಿ ವಿನಿಮಯಕ್ಕೆ ಹೊರೆಯಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ಸಣ್ಣ ಮತ್ತು ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕೊಡುಗೆ ನಿರೀಕ್ಷಿಸಬಹುದು. ಸ್ಟಾರ್ಟಪ್‌ ಯೋಜನೆಗಳಿಗೆ ಹೆಚ್ಚು ಕೊಡುಗೆ ಹಾಗೂ ಮೇಕ್‌ ಇನ್‌ ಇಂಡಿಯಾ ಯೋಜನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಗಬಹುದು. ಕೊರೋನಾ ಹೆಮ್ಮಾರಿಯ ಹೊಡೆತದಿಂದ ಹೆಚ್ಚು ಬಾಧಿತವಾಗಿರುವ ಕ್ಷೇತ್ರ ಇದು. ಹಾಗಾಗಿ ಈ ಕ್ಷೇತ್ರಕ್ಕೆ ಕೊಡುಗೆ ಸರಿಯಷ್ಟೆ. ಕೊರೋನಾ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲ ದೇಶಗಳ ಆರ್ಥಿಕತೆ ನಲುಗಿದೆ. ಹಾಗಾಗಿ ಹೆಚ್ಚು ಸಾಲ ಮಾಡದೆ ಹೇಗೆ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂಬುದನ್ನು ಈ ಬಜೆಟ್‌ನಲ್ಲಿ ನೋಡಬೇಕು.

ಜನಪ್ರಿಯ ಬಜೆಟ್‌ ನಿರೀಕ್ಷೆ

ಪ್ರತಿ ಬಾರಿಯಂತೆ ಕೃಷಿ ಕ್ಷೇತ್ರಕ್ಕೆ ಕೊಡುಗೆಗಳು ಖಂಡಿತವಾಗಿ ಇರುತ್ತದೆ. ಹಲವು ರಾಜ್ಯಗಳ ಚುನಾವಣೆ ಮತ್ತು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಜನಪ್ರಿಯ ಬಜೆಟ್‌ ನಿರೀಕ್ಷೆ ಇದೆ.

ಆದಾಯ ತೆರಿಗೆಯಲ್ಲಿ ಕೆಲವು ಕೊಡುಗೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಕೇವಲ 5 ಲಕ್ಷ ರು. ಮಾತ್ರ ಆದಾಯವಿರುವವರು ತೆರಿಗೆ ಪಾವತಿಸುವಂತಿಲ್ಲ. ಹಾಗಾಗಿ ತೆರಿಗೆ ವಿನಾಯಿತಿ ಸ್ತರವನ್ನು ಈಗಿನ 2.50 ಲಕ್ಷದಿಂದ ಏರಿಸಬಹುದು. ಇನ್ನು ಹೂಡಿಕೆಗಳ ಮಿತಿಯನ್ನು ಏರಿಸಬೇಕೆಂಬ ಬೇಡಿಕೆ ಇದೆ. ಆದರೆ ಸರ್ಕಾರ ಮುಂಬರುವ ದಿನಗಳಲ್ಲಿ ತೆರಿಗೆ ದರ ಕಡಿಮೆ ಮಾಡಿ ಸ್ತರಗಳನ್ನು ಜಾಸ್ತಿ ಮಾಡಿ ಎಲ್ಲ ರಿಯಾಯಿತಿ, ವಿನಾಯಿತಿಗಳನ್ನು ರದ್ದು ಮಾಡುವುದರ ಮೂಲಕ ಹೆಚ್ಚು ಸಂಖ್ಯೆಯ ಜನ ತೆರಿಗೆ ಪಾವತಿ ಮಾಡುವುದರ ಮೂಲಕ ತೆರಿಗೆ ವ್ಯಾಪ್ತಿಯನ್ನು ಹೆಚ್ಚಿಸುವುದರ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಯೋಜನೆಯಿದೆ. ಜಿಎಸ್‌ಟಿ ಸಂಗ್ರಹ ಏರಿಕೆಯ ಹಿನ್ನೆಲೆಯಲ್ಲಿ ಈ ಬಾರಿ ಆದಾಯ ತೆರಿಗೆದಾರರಿಗೆ ಕೊಡುಗೆ ಸಾಧ್ಯತೆ ಇದೆ. ಇನ್ನು ಆದಾಯದ ಮೇಲೆ ತೆರಿಗೆಗಿಂತ ಖರ್ಚಿನ ಮೇಲೆ ತೆರಿಗೆ ಹಾಕುವುದರ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ ಈಗಿರುವ ನಮ್ಮ ಆರ್ಥಿಕ ಪರಿಸ್ಥಿತಿಯಾಗಲೀ ಅಥವಾ ವ್ಯವಸ್ಥೆಯಾಗಲಿ ಆ ನೀತಿಯ ಜಾರಿಗೆ ಸಾಧ್ಯವಿಲ್ಲ ಎನ್ನುತ್ತದೆ.

ಒಟ್ಟಾರೆಯಾಗಿ ಕುಸಿದ ಆರ್ಥಿಕತೆ, ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ನಿಭಾಯಿಸುವಷ್ಟುಗುರುತರ ಜವಾಬ್ದಾರಿ ಈ ಬಜೆಟ್‌ ಮೇಲಿದೆ.

- ವಿಜಯ್‌ ರಾಜೇಶ್‌, ವಕೀಲರು, ತೆರಿಗೆ ಸಲಹಾಗಾರರು

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ