
ವಾಷಿಂಗ್ಟನ್(ಸೆ.29): ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ತೈಲಕ್ಕಾಗಿ ಇರಾನ್ ದೇಶವನ್ನು ಅವಲಂಬಿಸಿರುವ ಭಾರತಕ್ಕೆ ಪರ್ಯಾಯ ಪೂರೈಕೆ ಮಾರ್ಗಗಳನ್ನು ಒದಗಿಸುವುದಾಗಿ ಅಮೆರಿಕ ಭರವಸೆ ನೀಡಿದೆ.
'ಭಾರತಕ್ಕೆ ಹೆಚ್ಚಿನ ಪ್ರಮಾಣದ ತೈಲ ಆಮದು ಅಗತ್ಯ ಇರುವುದನ್ನು ವಾಷಿಂಗ್ಟನ್ ಗಮನಿಸಿದೆ. ಇದಕ್ಕಾಗಿ ಪರ್ಯಾಯ ತೈಲ ಪೂರೈಕೆ ಕ್ರಮಗಳ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ನಮ್ಮ ಸ್ನೇಹಿತ ಭಾರತದ ಆರ್ಥಿಕತೆ ಮೇಲೆ ಯಾವುದೇ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ' ಎಂದು ಟ್ರಂಪ್ ಆಡಳಿತ ಭರವಸೆ ನೀಡಿದೆ.
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಅದು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು.
ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಈ ಅವಧಿಯಲ್ಲಿ ಭಾರತ ಸೇರಿದಂತೆ ಎಲ್ಲ ದೇಶಗಳೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿವೆ ಎಂದು ಅಮೆರಿಕ ನಿರೀಕ್ಷಿಸಿದೆ.
ಇರಾನ್ ಜತೆ ಯಾವುದೇ ರೀತಿಯ ವ್ಯವಹಾರ ಮುಂದುವರಿಸುವ ಯಾವುದೇ ದೇಶವು ತನ್ನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಇರಾನ್ ನ ಅತಿ ದೊಡ್ಡ ತೈಲ ಆಮದುದಾರರಲ್ಲಿ ಒಂದಾದ ಭಾರತ, ಈಗಾಗಲೇ ಆಮದು ಪ್ರಮಾಣವನ್ನು ಕಡಿಮೆಗೊಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.