ಸಾಹಸೋದ್ಯಮಿ ಪ್ರಶಾಂತ್ ಪ್ರಕಾಶ್ ಸಂದರ್ಶನ: ನಾವು ಉತ್ಪಾದನಾ ವಲಯದತ್ತ ಶಿಫ್ಟ್ ಆಗಬೇಕು!

Published : Apr 10, 2025, 01:11 PM ISTUpdated : Apr 10, 2025, 01:16 PM IST
ಸಾಹಸೋದ್ಯಮಿ ಪ್ರಶಾಂತ್ ಪ್ರಕಾಶ್ ಸಂದರ್ಶನ: ನಾವು ಉತ್ಪಾದನಾ ವಲಯದತ್ತ ಶಿಫ್ಟ್ ಆಗಬೇಕು!

ಸಾರಾಂಶ

ಅನಿವಾಸಿ ಭಾರತೀಯರು ಈ ಯುದ್ದದ ಬಲಿಪಶುಗಳೇ ಎಂಬಿತ್ಯಾದಿ ಗೊಂದಲ ಬಗೆಹರಿಸಲು ಕರ್ನಾಟಕ ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಹಾಗೂ ಪದ್ಮಶ್ರೀ ಪುರಸ್ಕೃತ ಸಾಹಸೋದ್ಯಮಿ ಪ್ರಶಾಂತ್ ಪ್ರಕಾಶ್ ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ.

ಮಂಜುನಾಥ್ ನಾಗಲೀಕರ್

ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ತೆರಿಗೆ ಯುದ್ದ ಇಡೀ ಜಗತ್ತನ್ನು ಆರ್ಥಿಕ ವಿಶ್ವ ಯುದ್ಧದ ಅಖಾಡಕ್ಕೆ ತಳ್ಳಿದೆ. ಇಡೀ ಜಗತ್ತಿಗೆ ಧೀರ್ಘಾವಧಿಯ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿದೆ. ಭಾರತ ಸೇರಿ ಎಲ್ಲಾ ದೇಶಗಳ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ಭಾರತ ಅದರಲ್ಲೂ ವಿಶೇಷವಾಗಿ ಸಿಲಿಕಾನ್‌ ವ್ಯಾಲಿ ಬೆಂಗಳೂರಿನ ಮೇಲೂ ಪ್ರತಿ ಸುಂಕದ ವ್ಯತಿರಿಕ್ತ ಪರಿಣಾಮಗಳ ಕರಿಛಾಯೆ ಆವರಿಸಿದೆ. ಐಟಿ-ಬಿಟಿ ಉದ್ಯಮಕ್ಕೆ ಸಂಬಂಧಿಸಿ ಅಮೆರಿಕ ಯಾವುದೇ ಪ್ರತಿ ಸುಂಕ ವಿಧಿಸಿಲ್ಲ. ಆದರೂ, ಕರ್ನಾಟಕದ ಆರ್ಥಿಕ ಶಕ್ತಿ ಕೇಂದ್ರ ಬೆಂಗಳೂರು ನಗರದ ಮೇಲೆ ಅದರ ಪರಿಣಾಮ ಬೀರಲಿದೆ. ಅಮರಿಕದ ಇಂತಹ ನೀತಿ ಭಾರತ, ಕರ್ನಾಟಕ ಹಾಗೂ ಬೆಂಗಳೂರಿನ ಮೇಲೆ ಬೀರುವ ಪರಿಣಾಮಗಳೇನು? ಈ ಯುದ್ಧಎದುರಿಸಲು ನಾವು ಕೈಗೊಳ್ಳಬೇಕಾದ ಸಿದ್ದತೆಗಳೇನು? ಅನಿವಾಸಿ ಭಾರತೀಯರು ಈ ಯುದ್ದದ ಬಲಿಪಶುಗಳೇ ಎಂಬಿತ್ಯಾದಿ ಗೊಂದಲ ಬಗೆಹರಿಸಲು ಕರ್ನಾಟಕ ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಹಾಗೂ ಪದ್ಮಶ್ರೀ ಪುರಸ್ಕೃತ ಸಾಹಸೋದ್ಯಮಿ ಪ್ರಶಾಂತ್ ಪ್ರಕಾಶ್ ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ.

• ಅಮೆರಿಕ ತೆರಿಗೆ ಯುದ್ಧ ಆರಂಭಿಸಿದೆ, ಟ್ರಂಪ್ ಅವರ ಈ ಧೋರಣೆಗೆ ಕಾರಣವೇನು?
ಅಮೆರಿಕ ವಿತ್ತೀಯ ಕೊರತೆಯ ಸಂಕಷ್ಟದಲ್ಲಿದೆ. ಅದನ್ನು  ದಾರಿಗೆ ತರಲು ಟ್ರಂಪ್ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ದೇಶಿಯವಾಗಿ ಉತ್ಪಾದನೆ ಹೆಚ್ಚಿಸುವ ಮೂಲಕ ಅಲ್ಲಿನ ಜನರಿಗೆ ಉದ್ಯೋಗ ನೀಡಿ ಹಣ ಗಳಿಸಬೇಕು. ಆಮದಿತ ಉತ್ಪನ್ನಗಳ ಮೇಲೆ ಹೆಚ್ಚು ಸುಂಕ ವಿಧಿಸುವ ಮೂಲಕ ಡಾಲರ್ ಬಲಪಡಿಸಬೇಕು. ಹೀಗೆ, ದೇಶದ ಆರ್ಥಿಕ ಅಸಮತೋಲನ ಸರಿಪಡಿಸಿ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಉದ್ದೇಶದ ಪರಿಣಾಮವಿದು.

ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ 'ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ' ಅಭಿಯಾನ

• ನಿರ್ದಿಷ್ಟವಾಗಿ ರಾಜ್ಯದ ಯಾವ ವಲಯಗಳು ಸಮಸ್ಯೆ ಮತ್ತು ಸವಾಲು ಎದುರಿಸಬಹುದು?
ಒಟ್ಟಾರೆ ಆರ್ಥಿಕ ಸಮಸ್ಯೆ ಎದುರಾಗುವ ಸಂಭವವಿದೆ. ಹೊಸ ಉದ್ಯೋಗ ಸೃಷ್ಟಿ, ನೇಮಕಾತಿ ಸ್ಥಗಿತಗೊಳ್ಳುತ್ತವೆ. ಉದ್ಯೋಗಿ ಗಳಿಗೆ ಅನಿಶ್ಚಿತತೆ ಕಾಡುತ್ತದೆ. ಆ ಕಾರಣಮನೆ, ಫ್ಲ್ಯಾಟ್, ಸೈಟ್ ಖರೀದಿ ಯೋಚನೆಯಲ್ಲಿರುವವರು ಹಣ ಉಳಿಸಲು ಮುಂದಾಗುತ್ತಾರೆ. ಅದರ ಮೊದಲ ಪರಿಣಾಮ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬೀಳುತ್ತದೆ. ಖರ್ಚು ಮತ್ತು ಓಡಾಟ ಕಡಿಮೆ ಮಾಡುತ್ತಾರೆ.

• ಸರ್ಕಾರ ಆದಾಯದ ಮೇಲೆ ಏನಾಗರೂ ಪರಿಣಾಮ?
ರಾಜ್ಯದ ಆದಾಯದಲ್ಲಿ ಸುಮಾರು ಶೇ.40ರಷ್ಟು ಪಾಲು ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆ ಇದೆ. ರಾಜ್ಯದ ಜಿಡಿಪಿ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡುತ್ತಿದೆ. ಕರ್ನಾಟಕದ ಜಿಡಿಪಿ ಬೆಳವಣಿಗೆ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದ್ದು,ಶೇ.10ರಆಸುಪಾಸು ಇದೆ. ಆದರೆ, ಉದ್ಯಮ ಕುಸಿತದಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಸರ್ಕಾರಕ್ಕೆ ಬರುವ ಆದಾಯವೂ ಕಡಿಮೆ ಆಗುತ್ತದೆ. 

• ಇದನ್ನು ಹೇಗೆ ಎದುರಿಸಬಹುದು?
ಇತ್ತೀಚೆಗೆ ರಾಜ್ಯ ಸರ್ಕಾರ ಯಶಸ್ವಿಯಾಗಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಸಿದೆ. ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಅನೇಕ ಒಪ್ಪಂದಗಳಾಗಿವೆ. ಉದ್ಯಮಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಉದ್ಯಮ ಸ್ನೇಹಿ ಕ್ರಮಗಳ ಮೂಲಕ, ಕೈಗಾರಿಕೆಗಳ ಸ್ಥಾಪನೆಗೆ ಸಹಕಾರ ನೀಡಿತ್ವರಿತವಾಗಿ ಸ್ಥಾಪನೆಯಾಗಲು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಉದ್ಯೋಗ ಸೃಷ್ಟಿ ಜೊತೆಗೆ ಆರ್ಥಿಕ ಹಿನ್ನಡೆ ಸರಿದೂಗಿಸಲು ಉತ್ಪಾದನಾ ವಲಯಕ್ಕೆ ಸಾಧ್ಯವಿದೆ.

• ಪ್ರತಿಸುಂಕ ಕ್ರಮದಿಂದ ಭಾರತಕ್ಕೆ ಅನುಕೂಲಗಳು ಕೂಡ ಇವೆ ಎಂದು ಹೇಳಲಾಗುತ್ತಿದೆಯಲ್ಲ?
ಅನೇಕ ಬಾರಿ ಪ್ರತಿಕೂಲ ಪರಿಸ್ಥಿತಿಯ ಪ್ರಯೋಜನಗಳನ್ನು ಪಡೆಯಲು ವಿಫುಲ ಅವಕಾಶಗಳು ಇರುತ್ತವೆ. ಅಂತಹ ಸಮಯ ಈಗ ಬಂದಿದೆ. ಐಟಿ ಬಿಟಿಯಿಂದ ಉತ್ಪಾದನಾ ವಲಯದ ಕಡೆ ಹೈ ಗೇರ್‌ ಶಿಫ್ಟ್ ಮಾಡಬೇಕಿದೆ. ಪರಿಸ್ಥಿತಿಯ ಲಾಭ ಪಡೆಯಬೇಕಿದೆ. ಚೀನಾದ ಪ್ರಾಬಲ್ಯದಿಂದ ಬಿಡುಗಡೆ ಬಯಸುವವರಿಗೆ ನಾವು ಆಧಾರವಾಗಬೇಕು. ಅಮೆರಿಕ ವಿಧಿಸಿದ ಪ್ರತಿಸುಂಕಕ್ಕೆ ಚೀನಾ ಸೆಡ್ಡು ಹೊಡೆದಿದೆ. ಪರಿಣಾಮ ಚೀನಾದಲ್ಲಿನ ಉದ್ಯಮಗಳನ್ನು ಭಾರತದಲ್ಲಿ ಸ್ಥಾಪಿಸಲು ಅಮೆರಿಕ ಕಂಪನಿಗಳು ಯೋಚಿಸಿವೆ. ಉದಾಹರಣೆಗೆ ಆ್ಯಪಲ್ ಕಂಪನಿ ಐಫೋನ್ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸುವ ಪ್ರಯತ್ನ ನಡೆಸಿದೆ. ಈಗಾಗಲೇ ನಮ್ಮಲ್ಲಿ ಆ್ಯಪಲ್ ಫೋನ್ ಉತ್ಪಾದನಾ ಘಟಕಗಳು ಇರುವುದರಿಂದ ಅವುಗಳನ್ನು ವಿಸ್ತರಣೆ ಮಾಡಬೇಕು. ಉತ್ಪಾದನೆಯ ವೇಗ ಹೆಚ್ಚಿಸಿ ಬೇಡಿಕೆ ಪೂರೈಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ರಾಜ್ಯದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ.

• ಉದ್ಯೋಗ ವಲಯದ ಮೇಲೆ ಪರಿಣಾಮಗಳು ಏನು? 
ಐಟಿ ವಲಯದಲ್ಲಿ ಸದ್ಯಕ್ಕೆ ಉದ್ಯೋಗ ಕಡಿತದ ಅಪಾಯ ಕಾಣಿಸದೇ ಇದ್ದರೂ ಹೊಸ ನೇಮಕಾತಿಗಳು ವಿಳಂಬವಾಗಬಹುದು ಅಥವಾ ತಾತ್ಕಾಲಿಕವಾಗಿ ತಡೆ ಹಿಡಿಯಬಹುದು. ಈ ಪರಿಸ್ಥಿತಿಯನ್ನು ಈಗಲೇ ಊಹೆ ಮಾಡಲಾಗದು. ವ್ಯತಿರಿಕ್ತ ಪರಿಣಾಮಗಳು ಇದ್ದೇ ಇವೆ.

• ನಿಖರವಾಗಿ ಹೇಳಿ, ಬೆಂಗಳೂರಿನ ಐಟಿ ಉದ್ಯಮಕ್ಕೆ ಪೆಟ್ಟು ಬೀಳುವುದೇ?
ಮಾಹಿತಿ ತಂತ್ರಜ್ಞಾನ ಮತ್ತು ಫಾರ್ಮಾ ಉದ್ಯಮದ ಮೇಲೆ ಸದ್ಯ ಪ್ರತಿ ಸುಂಕ ವಿಧಿಸದಿರುವ ಕಾರಣ ಹಾಲಿ ಇರುವ ವ್ಯವಸ್ಥೆ ಮೇಲೆ ಈಗಲೇ ನೇರ ಪರಿಣಾಮ ಕಾಣಿಸುತ್ತಿಲ್ಲ. ಆದರೆ, ಪಾಲುದಾರಿಕೆ, ಸಹಭಾಗಿತ್ವ, ಸಂಯೋಜನೆಯೊಂದಿಗೆ ಕೆಲಸ ಮಾಡುವ ಕಾರಣ ಮುಂದಿನ ಅನೇಕ ಕಂಪನಿಗಳು ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

• ಈ ಪರಿಣಾಮಗಳು ದೀರ್ಘ ಕಾಲದವರೆಗೂ ನಮ್ಮನ್ನು ಕಾಡಬಹುದೇ?
ಅಮೆರಿಕದ ಕ್ರಮದಿಂದ ಭಾರತ, ಬೆಂಗಳೂರಿನ ಮೇಲೆ ಸುಮಾರು ಹತ್ತು ವರ್ಷಗಳವರೆಗೂ ವ್ಯತಿರಿಕ್ತ ಪರಿಣಾಮ ಇರುತ್ತದೆ. ಈ ಅವಧಿಯಲ್ಲಿ ಗುಣಮಟ್ಟದ ಉತ್ಪಾದನಾ ವಲಯದ ಕಡೆ ಸರ್ಕಾರ ಗಮನ ಹರಿಸಬೇಕು.

• ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆ?
ತಾತ್ಕಾಲಿಕ ವೀಸಾ ಪಡೆದು ವ್ಯಾಸಂಗ ಮುಗಿಸಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮೆರಿಕದ ಕ್ರಮ ಹೊಡೆತ ನೀಡುತ್ತದೆ. ಸ್ಥಳೀಯರಿಗೆ ಉದ್ಯೋಗ ನೀಡಲು ಮೊದಲು ಆದ್ಯತೆ ನೀಡಲು ಅಲ್ಲಿನ ಸರ್ಕಾರ ಯೋಚಿಸುತ್ತಿರುವುದರಿಂದ ಭಾರತೀಯರು ತಾಯ್ನಾಡಿಗೆ ಮರಳಬೇಕಾಗಬಹುದು.

• ಇಂಥ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮತ್ತು ಶೈಕ್ಷಣಿಕ ಕ್ಷೇತ್ರ ಕಲಿಯಬೇಕಿರುವ ಪಾಠವೇನು?
ಕೃತಕ ಬುದ್ಧಿಮತ್ತೆಯ (ಎಐ) ವ್ಯಾಪಕ ಪ್ರವೇಶದಿಂದ ಐಟಿ ವಲಯ ಈಗಾಗಲೇ ಒತ್ತಡದಲ್ಲಿದೆ. ಅನೇಕ ಉದ್ಯೋಗಗಳು ಕಡಿತಗೊಂಡಿದ್ದು, ಇನ್ನಷ್ಟು ಉದ್ಯೋಗಗಳು ಕಡಿತಗೊಳ್ಳುವ ಆತಂಕವಿದೆ. ಇಂತಹ ಪರಿಸ್ಥಿತಿಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಳೇ ಪಠ್ಯಕ್ರಮವನ್ನೇ ಬೋಧಿಸುವ ಬದಲು ಎಐ ಮತ್ತು ಮಷಿನ್ ಲರ್ನಿಂಗ್ ಸೇರಿ ಹಾಲಿ ಬೇಡಿಕೆ ಇರುವ ಕೋರ್ಸ್‌ಗಳ ಪಠ್ಯಕ್ರಮವನ್ನು ತ್ವರಿತವಾಗಿ ಅಳವಡಿಸಿ ಕೊಳ್ಳಬೇಕು. ಇಲ್ಲದಿದ್ದರೆ ಕಂಪ್ಯೂಟರ್‌ ಸೈನ್ಸ್ ಮತ್ತು ತತ್ಸಂಬಂಧಿತ ಕೋರ್ಸ್‌ ಮುಗಿಸಿ ಕಾಲೇಜಿನಿಂದ ಹೊರಬರುವ ಪದವೀಧರರು ಉದ್ಯೋಗಕ್ಕಾಗಿ ಪರಿತಪಿಸಬೇಕಾಗುತ್ತದೆ. ಕಾಲೇಜಿನ ಪ್ರತಿ ವಿದ್ಯಾರ್ಥಿಗೂ ಕೌಶಲ್ಯ ನೀಡಬೇಕು.ನವೀನ, ನಾವೀನ್ಯತೆಯ ಕೌಶಲ್ಯ ವೃದ್ಧಿಗೆ ಕ್ರಮ ಕೈಗೊಳ್ಳಬೇಕು.

• ಆರ್ಥಿಕ ಹೊಡೆತ ಸರ್ಕಾರದ ಯೋಜನೆಗಳ ಮೇಲೆ ಪರಿಣಾಮ ಬೀರುವುದೇ? 
ಬೆಳವಣಿಗೆ ಕುಸಿತವಾದರೆ ಎಲ್ಲಾ ರೀತಿಯ ಸವಾಲು, ಸಮಸ್ಯೆಗಳು ಎದುರಾಗುತ್ತವೆ. ಸರ್ಕಾರದ ಯೋಜನೆಗಳ ಮೇಲೂ ಪರಿಣಾಮ ಬೀರಬಹುದು. ಆದರೆ, ಕಾಲಮಿಂಚಿಲ್ಲ.ಅವಕಾಶ ವನ್ನು ಸದ್ಬಳಕೆ ಮಾಡಿಕೊಳ್ಳುವ ಕಡೆ ಗಮನ ಹರಿಸಬೇಕು.

• ಅಮೆರಿಕದ ಮೇಲಿನ ಅವಲಂಬನೆ ಕಡಿತಗೊಳಿಸಲು ಅವಕಾಶಗಳು ಇವೆಯೇ?
ಬೆಂಗಳೂರಿನ ಐಟಿ ಉದ್ಯ ಮ ಮತ್ತು ಐಟಿ ಸೇವಾ ಕಂಪನಿಗಳು ನೇರವಾಗಿ ಅಮೆರಿಕದ ಮೇಲೆ ಅವಲಂಬಿತವಾಗಿವೆ. ಐಟಿ ಸೇವೆ ಸಂಬಂಧಿಸಿದ ಹೊರಗುತ್ತಿಗೆ ಕೆಲಸ ನಿರ್ವಹಿಸುವ ಅನೇಕ ಕಂಪನಿಗಳು ಇಲ್ಲಿವೆ. ಬೆಂಗಳೂರಿಗೆ ಖ್ಯಾತಿ ತಂದುಕೊಟ್ಟಿವೆ. ಹೀಗಾಗಿ, ನಮ್ಮಆರ್ಥಿಕತೆಯ ಮೂಲಗಳನ್ನು ವೈವಿಧ್ಯವಗೊಳಿಸಿಕೊಳ್ಳಬೇಕು. ಪರಿಸ್ಥಿತಿಯ ಅನುಕೂಲಪಡೆಯುವ ಕಡೆ ಚಿಂತಿಸಬೇಕು.

• ರಾಜ್ಯದಲ್ಲಿರುವ ಅಮೆರಿಕ ಮೂಲದ ಕಂಪನಿಗಳು, ಉದ್ಯಮ ವಲಯಗಳ ಪರಿಸ್ಥಿತಿ ಏನು?
ಅಮೆರಿಕ ಮತ್ತು ಅಮೆರಿಕದೊಂದಿಗೆ ನೇರ ಮತ್ತು ಪರೋಕ್ಷ ವಾಗಿ ವ್ಯವಹಾರ ನಡೆಸುವ, ಸೇವೆ ಮತ್ತು ಸೌಲಭ್ಯಗಳನ್ನು ನೀಡುವ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಪ್ರತಿಸುಂಕ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂಬರುವ ದಿನಗಳಲ್ಲಿ ತೀವ್ರತೆ ಗೊತ್ತಾಗುತ್ತದೆ.

• ಯಾವ ಉದ್ಯಮ, ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ವಿಸ್ತರಣೆಗೆ ಈಗ ಅವಕಾಶಗಳು ಇವೆ?
ಎಲ್ಲಾ ರೀತಿಯಕೈಗಾರಿಕೆಗಳನ್ನು ಸ್ಥಾಪಿಸಲುಮತ್ತು ವಿಸ್ತರಿಸಲು ಈಗ ಸುವರ್ಣ ಅವಕಾಶವಿದೆ. ಅದಕ್ಕೆ ಪ್ರೋತ್ಸಾಹಿಸುವ ಮತ್ತು ವ್ಯಾಪಾರೋದ್ಯಮ ಸ್ಥಾಪನೆ ಸರಳೀಕರಣಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳಿಗೆ ಈಗ ಬೇಡಿಕೆ ಮತ್ತು ಬೆಲೆ ಇದೆ. ರಫ್ತು ಮಾಡಲು ನಮ್ಮ ಕೈಗಾರಿಕೆಗಳು ಸಾಮಾನ್ಯ ದರ್ಜೆಯಿಂದ ಮೇಲ್ದರ್ಜೆಗೆ ಏರಬೇಕು. ರಾಜ್ಯದ ಉತ್ಪಾದನಾ ವಲಯದಲ್ಲಿ ಸುಧಾರಣೆಗಳು ಆಗಬೇಕು. ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಉದ್ಯಮಿಗಳು, ಕೈಗಾರಿಕೆಗಳು ಒತ್ತು ನೀಡಬೇಕು. ಮುಂದಿನ ಮೂರು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಕೆಲಸಗಳು ಆಗಬೇಕಿದೆ.

ಹೋಟೆಲ್‌ ಬೆಲೆ ಏರಿಕೆ ನಿಯಂತ್ರಣಕ್ಕಿಲ್ಲ ವ್ಯವಸ್ಥೆ: ಗ್ರಾಹಕರ ಮೇಲೆ ಸವಾರಿ ತಡೆಯೋರ್ಯಾರು?

• ತೆರಿಗೆ ಯುದ್ದದಿಂದ ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರಿನ ಮೇಲೆ ಆಗುವ ಪರಿಣಾಮ ಏನು?
ಅಮೆರಿಕ ಮತ್ತು ಬೆಂಗಳೂರು ನಗರ ಸಾವಿರಾರು ಮೈಲಿ ದೂರದಲ್ಲಿದ್ದರೂ ಪರಸ್ಪರ ಇಂಟರ್ ಕನೆಕ್ಟ್ ಆಗಿವೆ. ಹೀಗಾಗಿ, ಅಲ್ಲಿನ ಪರಿಣಾಮಗಳು ನಮ್ಮ ಮೇಲೂ ಬೀರುತ್ತವೆ. ಅಮೆರಿಕದ ಅನೇಕ ಐಟಿ ಉದ್ಯಮಗಳು ನೇರವಾಗಿ ಮತ್ತು ಪರೋಕ್ಷವಾಗಿ ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಮೆರಿಕ ಸರ್ಕಾರದ ಕ್ರಮದಿಂದಾಗಿ ತಮ್ಮ ಉದ್ಯಮ ಯೋಜನೆಗಳನ್ನು ಬದಲಾಯಿಸಿಕೊಳ್ಳುತ್ತವೆ. ಆಗ ಸಹಜವಾಗಿಯೇ ಇಡೀ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ. ತಮ್ಮ ಆರ್ಥಿಕ ಯೋಜನೆಗಳು, ಉದ್ಯಮ ವಿಸ್ತರಣೆ, ಹೊಸ ನೇಮಕಾತಿ, ವೇತನ ಹೆಚ್ಚಳ, ಹೊಸ ಕಚೇರಿ, ಶಾಖೆ ಸ್ಥಾಪಿಸುವ ಯೋಜನೆಗಳನ್ನು ಸ್ಥಗಿತಗೊಳಿಸುತ್ತವೆ. ಅದರ ವ್ಯತಿರಿಕ್ತ ಪರಿಣಾಮ ಬೆಂಗಳೂರು ಮತ್ತು ಇಡೀ ದೇಶದ ಮೇಲೆ ಆಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು