ವಾಲ್-ಮೆಟ್’ನಲ್ಲಿ ನುವಾಮಾದಿಂದ ₹200 ಕೋಟಿ ಹೂಡಿಕೆ, ಡಿಫೆನ್ಸ್‌, ಏರೋಸ್ಪೇಸ್‌ ವಲಯದ ಸ್ವಾವಲಂಬನೆಗೆ ಹೊಸ ಬೂಸ್ಟ್!

Published : Apr 13, 2026, 03:17 PM IST
Val-Met Engineering

ಸಾರಾಂಶ

ವಾಯುಯಾನ, ರಕ್ಷಣೆ ಮತ್ತು ಬಾಹ್ಯಾಕಾಶ ವಲಯಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ 'ವಾಲ್-ಮೆಟ್ ಎಂಜಿನಿಯರಿಂಗ್' ಕಂಪನಿಯು, ನುವಾಮಾ ಗ್ರೂಪ್‌ನಿಂದ 200 ಕೋಟಿ ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸಿದೆ. ಈ ಹೂಡಿಕೆಯು ಕಂಪನಿಯ ಪೂರೈಕೆ ಜಾಲವನ್ನು ಬಲಪಡಿಸಲು, ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ಮತ್ತು ಜಾಗತಿಕವಾಗಿ ವ್ಯವಹಾರವನ್ನು ವಿಸ್ತರಿಸಲು ನೆರವಾಗಲಿದೆ.

ಮುಂಬೈ: ವಾಯುಯಾನ, ರಕ್ಷಣೆ ಮತ್ತು ಬಾಹ್ಯಾಕಾಶ ವಲಯಗಳಿಗೆ ಅಗತ್ಯವಾದ ಉನ್ನತ ಗುಣಮಟ್ಟದ ಕಚ್ಚಾ ವಸ್ತುಗಳ ಪೂರೈಕೆ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ 'ವಾಲ್-ಮೆಟ್ ಎಂಜಿನಿಯರಿಂಗ್' ಕಂಪನಿ ಬರೋಬ್ಬರಿ 200 ಕೋಟಿ ರೂಪಾಯಿಗಳ ಬಂಡವಾಳ ಸಂಗ್ರಹಿಸಿದೆ. ಭಾರತದ ಪ್ರಮುಖ ಸಂಪತ್ತು ನಿರ್ವಹಣಾ ಕಂಪನಿಯಾಗಿರುವ ನುವಾಮಾ ಗ್ರೂಪ್‌ನ ಅಂಗಸಂಸ್ಥೆಗಳಾದ 'ನುವಾಮಾ ಕ್ರಾಸ್‌ಓವರ್ ಆಪರ್ಚುನಿಟೀಸ್ ಫಂಡ್‌ಗಳು' ಈ ಬೃಹತ್ ಮೊತ್ತವನ್ನು ಹೂಡಿಕೆ ಮಾಡಿದ್ದು, ವಾಲ್-ಮೆಟ್ ಕಂಪನಿಯಲ್ಲಿ ಸಣ್ಣ ಪ್ರಮಾಣದ ಪಾಲನ್ನು ಪಡೆದುಕೊಂಡಿವೆ. ವಿಶೇಷವೆಂದರೆ, 2007ರಲ್ಲಿ ಸ್ಥಾಪನೆಯಾದ ವಾಲ್-ಮೆಟ್ ಎಂಜಿನಿಯರಿಂಗ್ ಸಂಸ್ಥೆ ಪಡೆಯುತ್ತಿರುವ ಮೊಟ್ಟಮೊದಲ ಬಾಹ್ಯ ಬಂಡವಾಳ ಇದಾಗಿದೆ.

ಬಂಡವಾಳದ ಸದ್ಬಳಕೆ ಹೇಗೆ?

ಈ ಹೊಸ ಹೂಡಿಕೆಯ ನೆರವಿನಿಂದ ವಾಲ್-ಮೆಟ್ ಸಂಸ್ಥೆಯು ತನ್ನ ಪೂರೈಕೆಯ ಜಾಲವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದೆ. ಜೊತೆಗೆ, ತನ್ನ ದಾಸ್ತಾನು ಸಾಮರ್ಥ್ಯದ ವಿಸ್ತರಣೆ, ತಾಂತ್ರಿಕ ಮತ್ತು ಸಂಸ್ಕರಣಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಈ ಹಣವನ್ನು ಬಳಸಿಕೊಳ್ಳಲಿದೆ.

ಅಲ್ಲದೆ, ದೇಶೀಯ ಹಾಗೂ ಜಾಗತಿಕ ಮೂಲ ಉಪಕರಣ ತಯಾರಕರು (ಒಇಎಂ) ಮತ್ತು ಗ್ರಾಹಕರೊಂದಿಗಿನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಕಂಪನಿ ಹೊಂದಿದೆ.

ನಿರ್ಣಾಯಕ ಕಚ್ಚಾವಸ್ತುಗಳನ್ನು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಪೂರೈಸುವ ನಿಟ್ಟಿನಲ್ಲಿ ಕಂಪನಿಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದ್ದು, ಇದು ಉತ್ಪಾದನಾ ವೆಚ್ಚವನ್ನು ಉಳಿಸಲು ಹಾಗೂ ದಕ್ಷತೆಯನ್ನು ಹೆಚ್ಚಿಸಲು ವಿಮಾನ ತಯಾರಕರಿಗೆ ಮತ್ತು ಒಇಎಂಗಳಿಗೆ ನೆರವಾಗಲಿದೆ.

ಪ್ರಸ್ತುತ ಜಾಗತಿಕ ವಿಮಾನ ತಯಾರಕರು ಭಾರತದಲ್ಲಿ ತಮ್ಮ ವಿಮಾನಗಳ ಜೋಡಣೆ ಮತ್ತು ಬಿಡಿಭಾಗಗಳ ಪೂರೈಕಾ ಜಾಲವನ್ನು ವಿಸ್ತರಿಸುತ್ತಿದ್ದು, ಇದೇ ಹೊತ್ತಲ್ಲಿ ಈ ಬೆಳವಣಿಗೆ ನಡೆದಿದ್ದು ಭಾರೀ ಮಹತ್ವ ಪಡೆದುಕೊಂಡಿದೆ.

ಜಾಗತಿಕ 'ಹಬ್' ಆಗುವತ್ತ ಭಾರತ ದೃಢ ಹೆಜ್ಜೆ

ಈ ಹೂಡಿಕೆಯ ಕುರಿತು ಮಾತನಾಡಿರುವ ವಾಲ್-ಮೆಟ್ ಎಂಜಿನಿಯರಿಂಗ್‌ನ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪಿ.ಎಚ್. ಸುಬ್ರಮೋನಿ ಅವರು, "ಪ್ರಸ್ತುತ ಉದ್ಯಮದಲ್ಲಿರುವ ಪೂರೈಕಾ ಸರಪಳಿಯ ನಿರ್ಬಂಧಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಜಾಗತಿಕ ಏರೋಸ್ಪೇಸ್ ಒಇಎಂಗಳ ಪೂರೈಕಾ ಜಾಲದಲ್ಲಿ ಭಾರತಕ್ಕೆ ದೊಡ್ಡ ಅವಕಾಶ ಸೃಷ್ಟಿಯಾಗಿದೆ. ನಮ್ಮ ಸುದೀರ್ಘ ಅನುಭವ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ತಜ್ಞರ ತಂಡವು ಈ ಅವಕಾಶವನ್ನು ಬಳಸಿಕೊಳ್ಳಲು ಸಿದ್ಧವಾಗಿದೆ. ನುವಾಮಾದ ಈ ಹೂಡಿಕೆಯು ನಮ್ಮ ಬೆಳವಣಿಗೆಗೆ ಹಾಗೂ ಬೇಡಿಕೆಯನ್ನು ಪೂರೈಸಲು ನಿರ್ಣಾಯಕ ಪಾತ್ರ ವಹಿಸಲಿದೆ" ಎಂದಿದ್ದಾರೆ.

ನುವಾಮಾ ಅಸೆಟ್ ಮ್ಯಾನೇಜ್ಮೆಂಟ್ ಲಿ.ನ ಪ್ರೈವೇಟ್ ಈಕ್ವಿಟಿ ವಿಭಾಗದ ಮುಖ್ಯಸ್ಥ ಮತ್ತು ಮ್ಯಾನೇಜಿಂಗ್ ಪಾರ್ಟ್ನರ್ ಪ್ರಣವ್ ಪರೀಖ್ ಪ್ರತಿಕ್ರಿಯಿಸಿ, "ಭಾರತದ ಏರೋಸ್ಪೇಸ್, ರಕ್ಷಣೆ ಮತ್ತು ನಿಖರ ಉತ್ಪಾದನಾ ವಲಯಗಳಲ್ಲಿ ಹಲವು ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದ್ದು, ಈ ಜಾಲದಲ್ಲಿ ವಾಲ್-ಮೆಟ್ ಎಂಜಿನಿಯರಿಂಗ್ ನಿರ್ಣಾಯಕ ಪಾತ್ರ ವಹಿಸಲಿದೆ,” ಎಂದು ತಿಳಿಸಿದ್ದಾರೆ.

ಅತ್ಯಂತ ಕಟ್ಟುನಿಟ್ಟಾದ ಜಾಗತಿಕ ತಾಂತ್ರಿಕ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಕೆಲವೇ ಭಾರತೀಯ ಕಂಪನಿಗಳಲ್ಲಿ ವಾಲ್-ಮೆಟ್ ಕೂಡ ಒಂದಾಗಿದೆ. ಜಾಗತಿಕ ಪೂರೈಕಾ ಜಾಲ ಮರುಹೊಂದಾಣಿಕೆಯಾಗುತ್ತಿದ್ದು, ಭಾರತದ ಕಾರ್ಯತಂತ್ರದ ಉತ್ಪಾದನಾ ಪರಿಸರ ವ್ಯವಸ್ಥೆಗೆ ಬೆಂಬಲ ನೀಡಲು ಕಂಪನಿ ಸಜ್ಜಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Bigg Boss ಮನೆಯಲ್ಲಿ ಹೇಳಿದಂತೆ ಮಾಡಿದ ರಕ್ಷಿತಾ ಶೆಟ್ಟಿ; ಉದ್ಘಾಟನೆಗೆ ಬಂದು ಕಿತ್ತಾಡಿಕೊಂಡ ಅಣ್ಣ-ತಂಗಿ
ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ