
ಬೆಂಗಳೂರು (ಅ.16): ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ 'ವೊಡಾಫೋನ್ ಐಡಿಯಾ' (Vi) ತನ್ನ ಪ್ರೀಪೇಡ್ ಬಳಕೆದಾರರಿಗಾಗಿ ಆಕರ್ಷಕ ಯೋಜನೆ ಪರಿಚಯಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಪ್ರೀಪೇಡ್ ಗ್ರಾಹಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮೊಬೈಲ್ ಡೇಟಾವನ್ನು ಹಂಚಿಕೊಳ್ಳಲು (Data Sharing) ಅವಕಾಶ ನೀಡುವ ನೂತನ 'ಪ್ರೀಪೇಡ್ ಫ್ಯಾಮಿಲಿ ಪ್ಲಾನ್' ಅನ್ನು ಕಂಪನಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಸದಸ್ಯರು ತಮ್ಮ ಸ್ವಂತ ಪ್ರೀಪೇಡ್ ಪ್ಲಾನ್ ಹಾಗೂ ವ್ಯಾಲಿಡಿಟಿಯನ್ನು (Validity) ಕಾಯ್ದುಕೊಳ್ಳುವುದರ ಜೊತೆಗೆ, ಅಗತ್ಯಬಿದ್ದಾಗ ಕುಟುಂಬದ ಇತರ ಸದಸ್ಯರೊಂದಿಗೆ ಡೇಟಾವನ್ನು ಹಂಚಿಕೊಳ್ಳಬಹುದು ಹಾಗೂ 'Vi App' ಮೂಲಕ ರಿಚಾರ್ಜ್ ಮಾಡಿದಾಗ ಶೇಕಡಾ 10 ರಷ್ಟು ರಿಯಾಯಿತಿಯನ್ನೂ ಪಡೆಯಬಹುದಾಗಿದೆ.
ಈ ಪ್ಲ್ಯಾನ್ನ ವಿಶೇಷತೆ ಗಮನಿಸೋದಾದರೆ, ಚಾಲ್ತಿಯಲ್ಲಿರುವ ವಿಐ ಪ್ರೀಪೇಡ್ ಗ್ರಾಹಕರು 'Vi App' ಮೂಲಕ ಫ್ಯಾಮಿಲಿ ಗ್ರೂಪ್ ರಚಿಸಬಹುದು. ಪ್ರತಿ ಗ್ರೂಪ್ನಲ್ಲಿ ಒಬ್ಬ ಮುಖ್ಯ ಸದಸ್ಯ (Primary Member) ಹಾಗೂ ಗರಿಷ್ಠ ಮೂವರು ದ್ವಿತೀಯ ಸದಸ್ಯರು (Secondary Members) ಸೇರಬಹುದು. ಕುಟುಂಬದ ಸದಸ್ಯರು ತುರ್ತು ಸಂದರ್ಭಗಳಲ್ಲಿ ಒಂದೇ ಬಾರಿಗೆ 500 MB ಡೇಟಾವನ್ನು ಹಂಚಿಕೊಳ್ಳಬಹುದು. ಪ್ರತಿಯೊಬ್ಬ ಸದಸ್ಯರು ತಮ್ಮ ಹಳೆಯ ಪ್ರೀಪೇಡ್ ಪ್ಲಾನ್ ಹಾಗೂ ವ್ಯಾಲಿಡಿಟಿಯನ್ನೇ ಮುಂದುವರಿಸಿಕೊಂಡು ಹೋಗಬಹುದು ದೇಶದ ಯಾವುದೇ ಟೆಲಿಕಾಂ ವಲಯದಲ್ಲಿದ್ದರೂ (Telecom Circles) ಡೇಟಾ ಹಂಚಿಕೆ ಸಾಧ್ಯ ಹಾಗೂ 'Vi App' ಮೂಲಕ ರಿಚಾರ್ಜ್ ಮಾಡಿದರೆ ಪ್ರತಿಬಾರಿ ಶೇಕಡಾ 10 ರವರೆಗೆ ಖಾತ್ರಿ ರಿಯಾಯಿತಿ ಸಿಗಲಿದೆ.
ಈ ಫ್ಯಾಮಿಲಿ ಗ್ರೂಪ್ನಲ್ಲಿ ಒಟ್ಟು ನಾಲ್ಕು ಮಂದಿ ಸೇರಬಹುದಾಗಿದೆ. ಪ್ರೀಪೇಡ್ ಗ್ರಾಹಕರು ತಮ್ಮ ಆ್ಯಪ್ ಮೂಲಕ ಅರ್ಹ ಕುಟುಂಬದ ಸದಸ್ಯರನ್ನು ಗ್ರೂಪ್ಗೆ ಸೇರ್ಪಡೆಗೊಳಿಸಬಹುದು. ಈ ಯೋಜನೆಗೆ ಸೇರಲು ಪ್ರತಿಯೊಬ್ಬರೂ ಒಂದೇ ರೀತಿಯ ರಿಚಾರ್ಜ್ ಪ್ಲಾನ್ ಅಥವಾ ಒಂದೇ ದಿನಾಂಕದ ವ್ಯಾಲಿಡಿಟಿ ಹೊಂದುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಪ್ಲಾನ್ಗಳನ್ನೇ ಬಳಸಬಹುದು. ವಿಶೇಷವೆಂದರೆ, ಕುಟುಂಬದ ಸದಸ್ಯರು ದೇಶದ ಬೇರೆ ಬೇರೆ ನಗರ ಅಥವಾ ಟೆಲಿಕಾಂ ವಲಯಗಳಲ್ಲಿದ್ದರೂ (ಉದಾಹರಣೆಗೆ ಒಬ್ಬರು ಕರ್ನಾಟಕ, ಇನ್ನೊಬ್ಬರು ದೆಹಲಿಯಲ್ಲಿದ್ದರೂ) ಈ ಡೇಟಾ ಶೇರಿಂಗ್ ಸೌಲಭ್ಯವನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.
ಪ್ರಯಾಣಿಸುವಾಗ, ಆನ್ಲೈನ್ ಕ್ಲಾಸ್ ಕೇಳುವಾಗ, ವೀಡಿಯೋ ಕರೆ ಮಾಡುವಾಗ, ಮ್ಯಾಪ್ ಬಳಸುವಾಗ ಅಥವಾ ಅಗತ್ಯ ಆ್ಯಪ್ಗಳನ್ನು ಬಳಸುವಾಗ ದಿಢೀರನೆ ಡೇಟಾ ಮುಗಿದುಹೋದರೆ, ಕುಟುಂಬದ ಮತ್ತೊಬ್ಬ ಸದಸ್ಯರಿಂದ ಒಂದೇ ಬಾರಿಗೆ 500 MB ಡೇಟಾವನ್ನು ಟ್ರಾನ್ಸ್ಫರ್ ಮಾಡಿಕೊಳ್ಳಬಹುದು. ಆದರೆ, ದಿನಕ್ಕೆ ಅಥವಾ ತಿಂಗಳಿಗೆ ಎಷ್ಟು ಬಾರಿ ಹೀಗೆ 500 MB ಡೇಟಾ ಶೇರ್ ಮಾಡಬಹುದು ಹಾಗೂ ಹೀಗೆ ಪಡೆದ ಡೇಟಾದ ವ್ಯಾಲಿಡಿಟಿ ಎಷ್ಟಿರಲಿದೆ ಎಂಬ ವಿವರವನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಬೇಕಿದೆ.
ಡೇಟಾ ಶೇರಿಂಗ್ ಜೊತೆಗೆ, 'Vi App' ಮೂಲಕ ಮಾಡುವ ಪ್ರತಿಯೊಂದು ಪ್ರೀಪೇಡ್ ರಿಚಾರ್ಜ್ ಮೇಲೆಯೂ ಶೇಕಡಾ 10 ರಷ್ಟು ಗ್ಯಾರಂಟಿ ರಿಯಾಯಿತಿಯನ್ನು ನೀಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಈ ಕುರಿತು ಮಾತನಾಡಿರುವ ವಿಐ ಸಂಸ್ಥೆಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (CMO) ಅವ್ನೀಶ್ ಖೋಸ್ಲಾ, "ಸರಿಯಾದ ಸಮಯಕ್ಕೆ ಗ್ರಾಹಕರಿಗೆ Flexibility ಹಾಗೂ ಹೆಚ್ಚಿನ ಡೇಟಾ ನೀಡುವುದೇ ಪ್ರೀಪೇಡ್ ವಿಭಾಗದ ಭವಿಷ್ಯವಾಗಿದೆ. ಕುಟುಂಬದ ಸದಸ್ಯರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಪರಸ್ಪರ ನೆರವಾಗಲು ಈ ಯೋಜನೆ ಸಹಕಾರಿಯಾಗಲಿದೆ" ಎಂದಿದ್ದಾರೆ. ಈ ನೂತನ ಯೋಜನೆಯನ್ನು ಪ್ರಚಾರ ಮಾಡಲು ವೊಡಾಫೋನ್ ಐಡಿಯಾ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನೊಳಗೊಂಡ ಭಾರಿ ಜಾಹೀರಾತು ಅಭಿಯಾನವನ್ನು "Vi Pe Sab Hain VIP" ಎಂಬ ಹೆಸರಿನಲ್ಲಿ ಆರಂಭಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.