ವೈಫೈ ಸಂಕೇತ ಇರುವ ಎಸ್‌ಬಿಐ ಕಾರ್ಡ್‌ನಿಂದ ವಂಚನೆ?

By Web DeskFirst Published Feb 14, 2019, 8:38 AM IST
Highlights

ವೈಫೈ ಸಂಕೇತ ಇರುವ ಎಸ್‌ಬಿಐ ಕಾಂಟಾಕ್ಟ್ ಲೆಸ್‌ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಇದ್ದರೆ ನೀವು ಎಟಿಎಂ ಪಿನ್‌ ಬಳಸದೇ ನಿಮ್ಮಿಂದ ಹಣ ದೋಚಬಹುದು ಎನ್ನುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದೆಷ್ಟು ನಿಜ? ಇಲ್ಲಿದೆ ವಿವರ

ವೈಫೈ ಸಂಕೇತ ಇರುವ ಎಸ್‌ಬಿಐ ಕಾಂಟಾಕ್ಟ್ ಲೆಸ್‌ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸುವಾಗ ಎಚ್ಚರ. ನಿಮ್ಮನ್ನು ಯಾರು ಬೇಕಾದರೂ ಸುಲಭವಾಗಿ ವಂಚಿಸಬಹುದು. ಏಕೆಂದರೆ, ಈ ಕಾರ್ಡ್‌ ಇದ್ದರೆ ನೀವು ಎಟಿಎಂ ಪಿನ್‌ ಬಳಸದೇ ನಿಮ್ಮಿಂದ ಹಣ ದೋಚಬಹುದು. ಇದನ್ನು ತೋರಿಸುವ ವಿಡಿಯೋವೊಂದು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿದೆ. ನಿಮ್ಮ ಬಳಿ ಇಂತಹ ಕಾರ್ಡ್‌ ಇದ್ದರೆ ಅದನ್ನು ಮರಳಿಸುವಂತೆ ಅಭಿಯಾನ ನಡೆಯುತ್ತಿದೆ.

ಹರೀಶ್‌ ಶೆಟ್ಟಿಎನ್ನುವವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಪ್ರಕಾಶ ಶೆಟ್ಟಿ ಎಂಬಾತ ತನ್ನ ಕಾರ್ಡ್‌ ಅನ್ನು ಪಿಒಎಸ್‌ ಯಂತ್ರದಲ್ಲಿ ಸ್ವೈಪ್‌ ಮಾಡದೇ ಇದ್ದರೂ ಹಣ ಕಡಿತವಾಗಿದ್ದನ್ನು ಮರಾಠಿಯಲ್ಲಿ ವಿವರಿಸುತ್ತಾನೆ. ಇದಕ್ಕೆ ಸಾಕ್ಷಿಯಾಗಿ ಆತ ತನ್ನ ಬ್ಯಾಂಕ್‌ ಖಾತೆಯಿಂದ ಹೇಗೆ 10 ರು. ಕಡಿತವಾಯಿತು ಎನ್ನುವುದನ್ನೂ ತೋರಿಸುತ್ತಾನೆ. ಹೀಗಾಗಿ ನಿಮ್ಮ ಬಳಿಕ ಎಸ್‌ಬಿಐ ಕಾಂಟಾಕ್ಟ್ ಲೆಸ್‌ ಕಾರ್ಡ್‌ ಇದ್ದರೆ ಅದನ್ನು ಕೂಡಲೇ ಮರಳಿಸಿ ಎಂದು ಆತ ಕೇಳಿಕೊಳ್ಳುತ್ತಾನೆ.

ಆದರೆ, ಈ ಬಗ್ಗೆ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಾಗುವ ಅಗತ್ಯವಿಲ್ಲ. ಎಸ್‌ಬಿಐನ ಕಾಂಟಾಕ್ಟ್ ಲೆಸ್‌ ಕಾರ್ಡ್‌ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಎಸ್‌ಬಿಐನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆರ್‌ಬಿಐನ ನೂತನ ನಿಯಮದ ಪ್ರಕಾರ ಕಾಂಟಾಕ್ಟ್ ಲೆಸ್‌ ಕಾರ್ಡ್‌ಗಳಲ್ಲಿ 2000 ರು. ವರೆಗೂ ಪಿನ್‌ ಬಳಸದೇ ವ್ಯವಹಾರ ನಡೆಸಬಹುದಾಗಿದೆ. ಈ ಕಾರ್ಡ್‌ನಿಂದ ಪಿಒಎಸ್‌ ಯಂತ್ರವನ್ನು ಕೈಯಿಂದ ಮುಟ್ಟದೆಯೂ ಹಣ ವರ್ಗಾವಣೆ ಮಾಡಬಹುದಾಗಿದೆ. ಕೇವಲ ಎಸ್‌ಬಿಐ ಮಾತ್ರವಲ್ಲ ಎಡಿಎಫ್‌ಸಿ, ಐಸಿಐಸಿಐ ಕೂಡ ಈ ಕಾರ್ಡ್‌ಗಳನ್ನು ವಿತರಿಸುತ್ತಿದೆ.

click me!