'ಪರಾರಿಯಾದವ ಎನ್ನಿ, ಕಳ್ಳ ಎನ್ನಬೇಡಿ..' ಕಿಂಗ್‌ಫಿಶರ್‌ ಪತನಕ್ಕೆ ಎಲ್ಲರ ಕ್ಷಮೆ ಕೇಳಿದ ವಿಜಯ್‌ ಮಲ್ಯ!

Published : Jun 06, 2025, 04:39 PM IST
Vijay Mallya

ಸಾರಾಂಶ

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ವೈಫಲ್ಯಕ್ಕೆ ವಿಜಯ್ ಮಲ್ಯ ಕ್ಷಮೆಯಾಚಿಸಿದ್ದಾರೆ, ಆದರೆ ತಮ್ಮ ಮೇಲಿನ ಕಳ್ಳತನದ ಆರೋಪಗಳನ್ನು ನಿರಾಕರಿಸಿದ್ದಾರೆ. ಭಾರತದಲ್ಲಿ ನ್ಯಾಯಯುತ ವಿಚಾರಣೆ ಮತ್ತು ಗೌರವಾನ್ವಿತ ಬದುಕಿನ ಭರವಸೆ ಸಿಕ್ಕಿದರೆ ಮಾತ್ರ ಭಾರತಕ್ಕೆ ಮರಳುವುದಾಗಿ ಹೇಳಿದ್ದಾರೆ.

ನವದೆಹಲಿ (ಜೂ.6): ಕಿಂಗ್‌ಫಿಷರ್ ಏರ್‌ಲೈನ್ಸ್‌ನ ವೈಫಲ್ಯಕ್ಕೆ ಉದ್ಯಮಿ ವಿಜಯ್ ಮಲ್ಯ ಇದೇ ಮೊದಲ ಬಾರಿಗೆ ಅತ್ಯಂತ ಅಪರೂಪ ಎನ್ನುವಂತೆ ಸಾರ್ವಜನಿಕ ಕ್ಷಮೆಯಾಚಿಸಿದರು. ಇದೇ ವೇಳೆ ತಮ್ಮ ಮೇಲಿನ ಕಳ್ಳತನದ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಲ್ಲದೆ, ಭಾರತದಿಂದ ದೂರ ಉಳಿಯಲು ಇರುವ ಕಾರಣಗಳನ್ನು ಸಮರ್ಥಿಸಿಕೊಂಡಿದ್ದಾರೆ.

"ಕಿಂಗ್‌ಫಿಷರ್ ಏರ್‌ಲೈನ್ಸ್‌ನ ವೈಫಲ್ಯಕ್ಕೆ ನಾನು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ" ಎಂದು ಗುರುವಾರ ಉದ್ಯಮಿ ರಾಜ್ ಶಮಾನಿ ಅವರೊಂದಿಗಿನ ನಾಲ್ಕು ಗಂಟೆಗಳ ಪಾಡ್‌ಕಾಸ್ಟ್‌ನಲ್ಲಿ ಮಲ್ಯ ಹೇಳಿದ್ದಾರೆ. ಒಂದು ಕಾಲದಲ್ಲಿ ವಿಜಯ್‌ ಮಲ್ಯ ಅವರ ಆಡಂಬರದ ವ್ಯವಹಾರ ಶೈಲಿಯನ್ನು ಸಂಕೇತಿಸುತ್ತಿದ್ದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಬಳಿಕ ಇದೇ ಆಡಂಬರದ ಕಾರಣಕ್ಕಾಗಿ ಪತನ ಕಂಡಿತ್ತು. ಆದರೆ, ಪರಿಸ್ಥಿತಿ ಸಾಮಾನ್ಯವಾಗಿ ಚಿತ್ರಿಸುವುದಕ್ಕಿಂತ ಹೆಚ್ಚು ಜಟಿಲವಾಗಿತ್ತು ಎಂದು ಅವರು ಸಮರ್ಥಿಸಿಕೊಂಡರು ಮತ್ತು ಯಾವುದೇ ಕ್ರಿಮಿನಲ್ ಉದ್ದೇಶವನ್ನು ನಿರಾಕರಿಸಿದರು.

ಇದೇ ವೇಳೆ ಪಾಡ್‌ಕಾಸ್ಟ್‌ನಲ್ಲಿ, ಭಾರತದಲ್ಲಿ ನ್ಯಾಯಯುತ ವಿಚಾರಣೆ ಮತ್ತು ಗೌರವಾನ್ವಿತ ಬದುಕಿನ ಭರವಸೆ ಸಿಕ್ಕಿದರೆ ಮಾತ್ರವೇ ಭಾರತಕ್ಕೆ ಮರಳುವ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದ್ದಾರೆ. "ಭಾರತದಲ್ಲಿ ನ್ಯಾಯಯುತ ಹಾದಿ ಮತ್ತು ಗೌರವಾನ್ವಿತ ಅಸ್ತಿತ್ವದ ಬಗ್ಗೆ ನನಗೆ ನ್ಯಾಯಯುತ ಭರವಸೆ ಇದ್ದರೆ, ನಾನು ಅದರ ಬಗ್ಗೆ (ಭಾರತಕ್ಕೆ ಮರಳುವ) ಗಂಭೀರವಾಗಿ ಯೋಚಿಸುತ್ತೇನೆ' ಎಂದು ತಿಳಿಸಿದರು.

ಹಣಕಾಸಿನ ದುರುಪಯೋಗದ ಆರೋಪಗಳನ್ನು ಉಲ್ಲೇಖಿಸಿದ ಮಲ್ಯ, "ನೀವು ನನ್ನನ್ನು ಪರಾರಿಯಾದ ವ್ಯಕ್ತಿ ಎಂದು ಕರೆಯಬಹುದು. ಆದರೆ, ನಾನು ಓಡಿ ಹೋಗಲಿಲ್ಲ. ನಾನು ಪೂರ್ವನಿಗದಿತ ಭೇಟಿಗಾಗಿ ವಿಮಾನದಲ್ಲಿ ಹಾರಿದೆ. ನ್ಯಾಯಯುತವೆಂದು ನಾನು ಪರಿಗಣಿಸುವ ಕಾರಣಗಳಿಗಾಗಿ ನಾನು ಹಿಂತಿರುಗಲಿಲ್ಲ... ಆದ್ದರಿಂದ ನೀವು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಲು ಬಯಸಿದರೆ, ಅದನ್ನು ನೀವು ಮಾಡಬಹುದು. ಆದರೆ 'ಚೋರ್' (ಕಳ್ಳ) ಎನ್ನುವ ಮಾತು ಎಲ್ಲಿಂದ ಬರುತ್ತದೆ? 'ಚೋರಿ' (ಕಳ್ಳತನ) ಎಲ್ಲಿದೆ ಇಲ್ಲಿ" ಎಂದು ಪ್ರಶ್ನೆ ಮಾಡಿದ್ದಾರೆ.

ಭಾರತೀಯ ಬ್ಯಾಂಕುಗಳ ಒಕ್ಕೂಟವು ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ನೀಡಲಾಗಿದ್ದ ₹9,000 ಕೋಟಿಗೂ ಹೆಚ್ಚಿನ ಸಾಲವನ್ನು ಮರುಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆರೋಪ ವಿಜಯ್‌ ಮಲ್ಯ ಅವರ ಮೇಲಿದೆ. ಅವರು 2016 ರಿಂದ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸ ಮಾಡುತ್ತಿದ್ದು, ಗಡೀಪಾರು ಪ್ರಕ್ರಿಯೆಗಳ ವಿರುದ್ಧ ಹೋರಾಡುತ್ತಿದ್ದಾರೆ.

2018 ರಲ್ಲಿ ಯುಕೆ ನ್ಯಾಯಾಲಯವು ತನ್ನ ಹಸ್ತಾಂತರದ ಪರವಾಗಿ ನೀಡಿದ ತೀರ್ಪು ಸೇರಿದಂತೆ ಹಲವಾರು ಕಾನೂನು ಹಿನ್ನಡೆಗಳ ಹೊರತಾಗಿಯೂ, ಮಲ್ಯ ಅವರು ಭಾರತಕ್ಕೆ ಮರಳುವುದನ್ನು ಮುಂದೂಡುತ್ತಲೇ ಇದ್ದಾರೆ. ಭಾರತದಲ್ಲಿ ತಮ್ಮನ್ನು ಕೀಳಾಗಿ ನಡೆಸಿಕೊಳ್ಳುವ ಹಾಗೂ ಮಾಧ್ಯಮಗಳಿಂದಲೇ ವಿಚಾರಣೆಗೆ ಎದುರಾಗುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?