
ನವದೆಹಲಿ (ಜೂ.6): ಅದು 2016ರ ಮಾರ್ಚ್ 2ರಂದು, ನಾನು ಜಿನೀವಾದಲ್ಲಿ ನಡೆಯಬೇಕಿದ್ದ ಎಫ್‌ಐಎ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಲಂಡನ್‌ಗೆ ಹೋಗುತ್ತಿದ್ದೆ. ನಾನು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೂ ಕೂಡ ನಾನು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದೆ. ಆದರೆ ನನ್ನ ಪಾಸ್‌ಪೋರ್ಟ್ ರದ್ದತಿಯಿಂದಾಗಿ ನಾನು ಲಂಡನ್‌ನಲ್ಲಿ ಸಿಲುಕಿಕೊಂಡೆ. ನಾನು ಎಲ್ಲೂ ಪರಾರಿಯಾಗಿಲ್ಲ, ಇದು ತಪ್ಪಿಸಿಕೊಳ್ಳುವ ಯೋಜನೆಯೂ ಆಗಿರಲಿಲ್ಲ. ನನ್ನನ್ನು ಕಳ್ಳ ಎಂದು ಕರೆಯುವುದೇ ತಪ್ಪು ಎಂದು ವಿಜಯ್ ಮಲ್ಯ ಹೇಳಿದ್ದಾರೆ.
6,200 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಅವರ ಹೇಳಿಕೆ ಇದು. ಆದರೂ, ಬಡ್ಡಿ ಮತ್ತು ಇತರ ಆರೋಪಗಳೊಂದಿಗೆ, ಈ ಮೊತ್ತ ಸುಮಾರು 9000 ಕೋಟಿ ರೂಪಾಯಿ ಆಗಿದೆ. ಇದರ ನಡುವೆ, ಐಡಿಬಿಐ ಬ್ಯಾಂಕಿನಿಂದ 900 ಕೋಟಿ ರೂ. ಸಾಲ ಡೀಫಾಲ್ಟ್ ಪ್ರಕರಣವೂ ದಾಖಲಾಗಿದೆ.
ಒಂಬತ್ತು ವರ್ಷಗಳ ಕಾಲ ಮಾಧ್ಯಮದಿಂದ ದೂರವಿದ್ದ ಮಲ್ಯ ಇತ್ತೀಚೆಗೆ ಯೂಟ್ಯೂಬರ್ ರಾಜ್ ಶಮಾನಿ ಆಯೋಜಿಸಿದ್ದ ಪಾಡ್‌ಕ್ಯಾಸ್ಟ್‌ನಲ್ಲಿ ಮೌನ ಮುರಿದರು. ಈ ನಾಲ್ಕು ಗಂಟೆಗಳ ಸಂಭಾಷಣೆಯಲ್ಲಿ, ಅವರು ತಮ್ಮ ಜೀವನ, ವ್ಯವಹಾರ, ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪತನ, ಉದ್ಯೋಗಿಗಳ ಬಾಕಿ ಸಂಬಳ ಮತ್ತು ಕಾನೂನು ಹೋರಾಟಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ನಾನು ಕೋಲ್ಕತ್ತಾದಲ್ಲಿ ಜನಿಸಿದೆ, ಅಲ್ಲಿ ನನ್ನ ತಂದೆ ವಿಠ್ಠಲ್ ಮಲ್ಯ ಯುಬಿ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ನನ್ನ ಬಾಲ್ಯವು ಕಠಿಣ ಶಿಸ್ತಿನಲ್ಲಿ ಕಳೆದಿದ್ದೆ. ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. "ನೀನು ಕಷ್ಟಪಟ್ಟು ಕೆಲಸ ಮಾಡದಿದ್ದರೆ, ನನ್ನ ವ್ಯವಹಾರದಲ್ಲಿ ನಿನಗೆ ಸ್ಥಾನವಿಲ್ಲ." ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಬಿ.ಕಾಂ ಮಾಡಿದ ನಂತರ, ನಾನು ಯುಬಿ ಗ್ರೂಪ್‌ನಲ್ಲಿ ತಿಂಗಳಿಗೆ 400 ರೂ. ಸಂಬಳದಲ್ಲಿ ತರಬೇತಿ ಪಡೆದೆ. 18 ನೇ ವಯಸ್ಸಿನಲ್ಲಿ, ನನ್ನನ್ನು ಒಂದು ಸಣ್ಣ ಕಂಪನಿಯ ಸಿಇಒ ಆಗಿ ನೇಮಿಸಲಾಯಿತು.
ಇದು ರಾತ್ರೋರಾತ್ರಿ ಆದ ಘಟನೆಯಲ್ಲ. 1983 ರಲ್ಲಿ, ನನ್ನ 27 ನೇ ವಯಸ್ಸಿನಲ್ಲಿ, ತಂದೆ ನಿಧನರಾದ ನಂತರ ನಾನು ಯುಬಿ ಗ್ರೂಪ್ ಅನ್ನು ವಹಿಸಿಕೊಂಡೆ. ನಾನು ಕಿಂಗ್‌ಫಿಷರ್‌ನ ಪ್ಯಾಕೇಜಿಂಗ್ ಅನ್ನು ಹೆಚ್ಚು ಆಕರ್ಷಕವಾಗಿ ಮಾಡಿದೆ, ಸಂಗೀತ ಮತ್ತು ಫ್ಯಾಷನ್ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದೆ, ಅದು ಬ್ರ್ಯಾಂಡ್‌ಗೆ ಹೆಚ್ಚಿನ ಗಮನವನ್ನು ನೀಡಿತು. ಕ್ರಮೇಣ, ಮಾರಾಟ ಹೆಚ್ಚಾಗಲು ಪ್ರಾರಂಭಿಸಿತು. ಅದು ಮ್ಯಾಜಿಕ್ ಆಗಿರಲಿಲ್ಲ. ನಾವು ಮಾರ್ಕೆಟಿಂಗ್ ಅನ್ನು ಸರಿಯಾಗಿ ಮಾಡಿದೆವು, ಇದರ ಬೆನ್ನಲ್ಲಿಯೇ ಮಾರಾಟ ಕೂಡ ಏರಿಕೆಯಾಯಿತು. ಇಂದು, ಕಿಂಗ್‌ಫಿಷರ್ ಬಿಯರ್ 52% ಮಾರುಕಟ್ಟೆ ಪಾಲನ್ನು ಹೊಂದಿದೆ.
ಅದರೊಂದಿಗೆ ಮೆಕ್‌ಡೊವೆಲ್‌ನ ನಂ. 1 ವಿಸ್ಕಿಯನ್ನು ವಿಶ್ವದ ನಂಬರ್ 1 ವಿಸ್ಕಿ ಬ್ರಾಂಡ್ ಆಗಿ ಮಾಡಿದರು. 1988 ರಲ್ಲಿ, ಅವರು ಬರ್ಗರ್ ಪೇಂಟ್ಸ್ ಅನ್ನು ಖರೀದಿಸಿ ಅದನ್ನು 25 ದೇಶಗಳಿಗೆ ವಿಸ್ತರಿಸಿದರು ಮತ್ತು ಲಾಭದಲ್ಲಿ ಮಾರಾಟ ಮಾಡಿದರು.
ನಾನು 2005 ರಲ್ಲಿ ನನ್ನ ಮಗ ಸಿದ್ಧಾರ್ಥ್‌ನ 18 ನೇ ಹುಟ್ಟುಹಬ್ಬದಂದು ಪ್ರೀಮಿಯಂ ಹಾರಾಟದ ಅನುಭವವನ್ನು ನೀಡಲು ಕಿಂಗ್‌ಫಿಷರ್ ಏರ್‌ಲೈನ್ಸ್ ಅನ್ನು ಪ್ರಾರಂಭಿಸಿದೆ. 2008 ರ ಹೊತ್ತಿಗೆ, ಇದು ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಯಿತು. ಆದರೆ 2008 ರ ಆರ್ಥಿಕ ಬಿಕ್ಕಟ್ಟು, ಏರುತ್ತಿದ್ದ ತೈಲ ಬೆಲೆಗಳು, ಹೆಚ್ಚಿನ ತೆರಿಗೆಗಳು ಮತ್ತು ವಿದೇಶಿ ಹೂಡಿಕೆಯ ಕೊರತೆಯು ಅದನ್ನು ಮುಳುಗಿಸಿತು. ಯುಬಿ ಗ್ರೂಪ್‌ನಿಂದ 3,000 ಕೋಟಿ ರೂ.ಗಳನ್ನು ಇದಕ್ಕೆ ನೀಡಿದರೂ, ವಿಮಾನಯಾನ ಸಂಸ್ಥೆಯು 2012 ರಲ್ಲಿ ಮುಚ್ಚಲ್ಪಟ್ಟಿತು.
ಕೆಲವು ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗದಿದ್ದಕ್ಕೆ ನನಗೆ ತುಂಬಾ ಬೇಸರವಿದೆ. ಆದರೆ, ನನಗೆ ಯಾವುದೇ ನೆಪವಿಲ್ಲ. 260 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ಬ್ಯಾಂಕುಗಳು ಆಕ್ಷೇಪಿಸಿದವು. ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಂಡಿದ್ದರಿಂದ ನನಗೆ ಹೆಚ್ಚಿನ ಹಣವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.
ನಾನು 17 ಬ್ಯಾಂಕ್‌ಗಳಿಂದ 6,203 ಕೋಟಿ ರೂ. ಸಾಲವನ್ನು ಪಡೆದಿದ್ದೆ. ಬ್ಯಾಂಕುಗಳು ಆಸ್ತಿಗಳಿಂದ 14,131.6 ಕೋಟಿ ರೂ.ಗಳನ್ನು ವಸೂಲಿ ಮಾಡಿವೆ, ಇದು ಸಾಲದ ಮೊತ್ತದ ಎರಡೂವರೆ ಪಟ್ಟು ಹೆಚ್ಚು. 2012-2015ರಲ್ಲಿ ನಾನು ನಾಲ್ಕು ಬಾರಿ ಸೆಟಲ್‌ಮೆಂಟ್ ಆಫರ್ ನೀಡಿದ್ದೆ.ಇದರಲ್ಲಿ 5,000 ಕೋಟಿ ರೂಪಾಯಿಯ ಆಫರ್ ಕೂಡ ಸೇರಿತ್ತು. ಆದರೆ ಬ್ಯಾಂಕುಗಳು ಅದನ್ನು ತಿರಸ್ಕರಿಸಿದವು.
ಬ್ರಾಂಡ್ ಮೌಲ್ಯಮಾಪನ ಮತ್ತು ಖಾಸಗಿ ಜೆಟ್‌ನ "ದುರುಪಯೋಗ" ಎಂದು ಸಿಬಿಐ ಆರೋಪಿಸಿದೆ. 3,547 ಕೋಟಿ ರೂ.ಗಳ ಹಣ ವರ್ಗಾವಣೆಯನ್ನು ಇಡಿ ಆರೋಪಿಸಿದೆ. ಆದರೆ ವಿಮಾನಯಾನ ಸಂಸ್ಥೆಯ ವೆಚ್ಚದ 50% ವಿದೇಶಿ ಕರೆನ್ಸಿಯಲ್ಲಿತ್ತು, ಇದನ್ನು ಹಣ ವರ್ಗಾವಣೆ ಎಂದು ಕರೆಯುವುದು ಅಸಂಬದ್ಧ. ನಾನು ಐಡಿಬಿಐಗೆ 900 ಕೋಟಿ ರೂ.ಗಳ ಸಾಲವನ್ನು ಕೂಡ ಮರುಪಾವತಿಸಿದ್ದೇನೆ.
ನಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಲಂಡನ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದೆ. ನಾನು ಸಂಸತ್ತಿನಿಂದಲೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ತಿಂಗಳುಗಳ ಹಿಂದೆ ನಿಗದಿಯಾಗಿದ್ದ ಎಫ್‌ಐಎ ವರ್ಲ್ಡ್ ಕೌನ್ಸಿಲ್ ಸಭೆಗಾಗಿ ನಾನು ಜಿನೀವಾಕ್ಕೆ ಹೋಗಬೇಕಾಗಿತ್ತು. ನನ್ನ ಸೆಟಲ್‌ಮೆಂಟ್ ಬಗ್ಗೆ ಬ್ಯಾಂಕ್‌ಗಳೊಂದಿಗೆ ಮಾತನಾಡಲು ನಾನು ಜೇಟ್ಲಿಗೆ ತಿಳಿಸಿದ್ದಲ್ಲದೆ, ಭಾರತಕ್ಕೆ ವಾಪಾಸಾಗುತ್ತೇನೆ ಎಂದು ಕೂಡ ಹೇಳಿದ್ದೆ.
ಆದರೆ, ಮಾಧ್ಯಮಗಳಲ್ಲಿ ಕಿರುಚಾಟ ಆರಂಭವಾಯಿತು. ಮೊದಲಿಗೆ ಜೇಟ್ಲಿ ಸಭೆಯನ್ನು ನಿರಾಕರಿಸಿದರು. ನಂತರ ಕಾಂಗ್ರೆಸ್ ಸಂಸದರು ನಾನು ಅವರಿಬ್ಬರನ್ನು ಒಟ್ಟಿಗೆ ನೋಡಿದ್ದೆ ಎಂದು ಹೇಳಿದ ಬಳಿಕ, ಜೇಟ್ಲಿ ಒಂದು ಸಣ್ಣ ಸಭೆ ನಡೆದಿದೆ ಎಂದು ಒಪ್ಪಿಕೊಂಡಿದ್ದರು.
ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ನಾನು ವಿದೇಶಿ ಪಾಲುದಾರರೊಂದಿಗೆ ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಮಾತನಾಡಿದೆ. ನನಗೆ ಸಮಯ ನೀಡುವಂತೆ ಇಡಿಗೆ ಪತ್ರ ಬರೆದಿದ್ದೆ. ನಾನು ಈಗಾಗಲೇ ಸಿಬಿಐ ಮುಂದೆ ಹಾಜರಾಗಿದ್ದೇನೆ, ನಾನು ನಿಮ್ಮ ಮುಂದೆಯೂ ಹಾಜರಾಗುತ್ತೇನೆ. ಆದರೆ ನಂತರ ನನ್ನ ಪಾಸ್‌ಪೋರ್ಟ್ ರದ್ದಾಯಿತು. ಪಾಸ್‌ಪೋರ್ಟ್ ರದ್ದತಿಯಿಂದಾಗಿ, ನಾನು ಲಂಡನ್‌ನಲ್ಲಿ ಸಿಲುಕಿಕೊಂಡೆ. ನಾನು ಪರಾರಿಯಾಗಿಲ್ಲ, ಇದು ತಪ್ಪಿಸಿಕೊಳ್ಳುವ ಯೋಜನೆಯಾಗಿರಲಿಲ್ಲ. ನನ್ನನ್ನು ಕಳ್ಳ ಎಂದು ಕರೆಯುವುದೇ ತಪ್ಪು.
ಭಾರತದ ಅಧಿಕಾರಶಾಹಿಯೇ ಬ್ಯುಸಿನೆಸ್‌ಗೆ ಒಂದು ದೊಡ್ಡ ಅಡಚಣೆಯಾಗಿದೆ. ನಾವು 29 ರಾಜ್ಯಗಳ ವಿಭಿನ್ನ ನೀತಿಗಳನ್ನು ಎದುರಿಸಬೇಕಾಗಿತ್ತು. ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಮದ್ಯ ಮತ್ತು ಹಣವನ್ನು ಕೇಳುತ್ತಿದ್ದರು. ನನ್ನ ಕಂಪನಿ ದೊಡ್ಡದಾಗಿದ್ದರಿಂದ ನಾನು ಮದ್ಯವನ್ನು ಮಾತ್ರ ನೀಡಿದ್ದೇನೆ. ನಾನು ಲಂಚ ನೀಡಲಿಲ್ಲ.
ಈ ಪಾರ್ಟಿಗೆ ನಾನು 2015 ರಲ್ಲಿ ನನ್ನ ಸ್ವಂತ ಜೇಬಿನಿಂದ ಹಣ ನೀಡಿದ್ದೆ. ನಾನು ಅದನ್ನು ಲಂಡನ್‌ನಲ್ಲಿ ಮಾಡಿದ್ದರೆ, ಬಹುಶಃ ಯಾರಿಗೂ ತಿಳಿದಿರುತ್ತಿರಲಿಲ್ಲ. ಮಲ್ಯ ಬ್ಯಾಂಕ್‌ಗಳಿಗೆ ಮರುಪಾವತಿ ಮಾಡಲು ವಿಫಲನಾಗಿದ್ದ. ಆ ಕಾರಣಕ್ಕಾಗಿ ದುಬಾರಿ ಪಾರ್ಟಿಯ ಬಗ್ಗೆ ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ಟೀಕೆ ಇತ್ತು.
ನಾನು ಲಂಡನ್‌ನಲ್ಲಿ ಆರು ನಾಯಿಗಳೊಂದಿಗೆ ಸಮಯ ಕಳೆಯುತ್ತೇನೆ. ನನಗೆ ನಾಯಿಗಳು ತುಂಬಾ ಇಷ್ಟ, ನಾನು ಅವುಗಳ ಜೊತೆ ತುಂಬಾ ಆಟವಾಡುತ್ತೇನೆ. ನನ್ನ ಬಳಿ ಕೆಲವು ಕ್ಲಾಸಿಕ್ ಕಾರುಗಳಿವೆ, ಅವುಗಳನ್ನು ರಿಪೇರಿ ಮಾಡಲು ನನಗೆ ಸಂತೋಷವಾಗುತ್ತದೆ. ಸಿಬ್ಬಂದಿ ಕೆಲಸ ಮಾಡುವ ಆಸ್ತಿಯ ಪಕ್ಕದಲ್ಲಿ ನನ್ನ ಕಚೇರಿಯೂ ಇದೆ.
ಇಲ್ಲಿ ನಾನು ನನ್ನ ನಡೆಯುತ್ತಿರುವ ಬ್ಯುಸಿನೆಸ್ ಮೇಲೆ ಕಣ್ಣಿಟ್ಟಿದ್ದೇನೆ. ಮುಖ್ಯ ವ್ಯವಹಾರ ಇನ್ನೂ ಮದ್ಯ ಮತ್ತು ಸಾರಾಯಿ ತಯಾರಿಕೆಗೆ ಸಂಬಂಧಿಸಿದೆ. ನಾನು ಕಾನೂನು ಹೋರಾಟ ನಡೆಸುತ್ತಿದ್ದೇನೆ. ನನಗೆ ನ್ಯಾಯಯುತ ವಿಚಾರಣೆ ಸಿಕ್ಕರೆ, ನಾನು ಭಾರತಕ್ಕೆ ಮರಳುವುದನ್ನು ಪರಿಗಣಿಸುತ್ತೇನೆ. ನಾನು ಜೈಲಿಗೆ ಹೋಗಬೇಕಾಗಿದ್ದರೆ, ನಾನು ಅದನ್ನು ಎದುರಿಸುತ್ತೇನೆ.
ನನ್ನನ್ನು ಕಳ್ಳನಾಗಿ ಅಲ್ಲ, 1.75 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ನಿರ್ಮಿಸಿದ ಕಠಿಣ ಪರಿಶ್ರಮಿ ಉದ್ಯಮಿಯಾಗಿ ನೋಡಲು ಇಚ್ಛೆಪಡುತ್ತೇನೆ. ಕಿಂಗ್‌ಫಿಷರ್ ವಿಫಲವಾಯಿತು, ಆದರೆ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಭಾರತದಲ್ಲಿ, ಬ್ಯುಸಿನೆಸ್‌ನಲ್ಲಿ ಆಗುವ ನಷ್ಟವನ್ನು ವಂಚನೆ ಎಂದು ಪರಿಗಣಿಸಲಾಗುತ್ತದೆ.
ನಾನು ಶಬರಿಮಲೆ ಮತ್ತು ತಿರುಪತಿ ದೇವಾಲಯಗಳಿಗೆ ಚಿನ್ನವನ್ನು ದಾನ ಮಾಡಿದ್ದೇನೆ. ನಾನು ದೇವರನ್ನು ನಂಬುತ್ತೇನೆ. ಈ ಕಷ್ಟದ ಸಮಯವು ಆತನ ಇಚ್ಛೆಯಾಗಿದ್ದರೆ, ನಾನು ಅದನ್ನು ಸ್ವೀಕರಿಸುತ್ತೇನೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.