ಬ್ಯಾಂಕ್ ಖಾತೆ ತೆರೆಯಲು ಕೆವೈಸಿ ಕಡ್ಡಾಯ. ಆದರೆ, ಈಗ ಕೆವೈಸಿ ಪ್ರಕ್ರಿಯೆಗೆ ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ವಿಡಿಯೋ ಕಾಲ್ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಹಾಗಾದ್ರೆ ವಿಡಿಯೋ ಕಾಲ್ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಬ್ಯಾಂಕ್ ಖಾತೆ ತೆರೆಯಲು ಇಂದು ಕೆವೈಸಿ ಅತ್ಯಗತ್ಯ. ಗ್ರಾಹಕ ನೀಡಿರುವ ಮಾಹಿತಿಗಳು ಸಮರ್ಪಕವಾಗಿವೆ ಎಂದು ಪರಿಶೀಲಿಸಿ ದೃಢೀಕರಿಸಲು ಕೆವೈಸಿ ಬ್ಯಾಂಕಿಗೆ ನೆರವು ನೀಡುತ್ತದೆ. ಹೀಗಾಗಿ ಬ್ಯಾಂಕ್ ಗಳು ಹೊಸ ಖಾತೆ ತೆರೆಯುವ ಸಮಯದಲ್ಲಿ ಗ್ರಾಹಕರಿಂದ ಕೆವೈಸಿ ಮಾಹಿತಿಗಳನ್ನು ಕೋರುತ್ತದೆ. ಹಿಂದೆಲ್ಲ ಕೆವೈಸಿ ಪೂರ್ಣಗೊಳಿಸಲು ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಕಡ್ಡಾಯವಾಗಿತ್ತು. ಆದರೆ, ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೆವೈಸಿ ಮಾಡಲು ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅಲ್ಲದೆ, ಆರ್ ಬಿಐ ಬ್ಯಾಂಕ್ ಗಳು ಸೇರಿದಂತೆ ನಿಯಂತ್ರಿತ ಸಂಸ್ಥೆಗಳಿಗೆ ಕೆವೈಸಿ ಪರಿಶೀಲನೆಯನ್ನು ವಿಡಿಯೋ ಚಾಟ್ ಮೂಲಕ ಪೂರ್ಣಗೊಳಿಸಲು ಅನುಮತಿ ನೀಡಿದೆ. ಹೀಗಾಗಿ ಎಸ್ ಬಿಐ, ಎಚ್ ಡಿಎಫ್ ಸಿ ಸೇರಿದಂತೆ ದೇಶದ ಸಾರ್ವಜನಿಕ ಹಾಗೂ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಗಳು ವಿಡಿಯೋ ಕೆವೈಸಿ ಆಯ್ಕೆಯನ್ನು ಒದಗಿಸಿವೆ. ವಿಡಿಯೋ ಕೆವೈಸಿ ಸೌಲಭ್ಯದಿಂದಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ತಾವು ಇರುವ ಸ್ಥಳದಿಂದಲೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ವಿಡಿಯೋ ಕೆವೈಸಿ ಪ್ರಕ್ರಿಯೆಯಲ್ಲಿ ಬ್ಯಾಂಕ್ ಸಿಬ್ಬಂದಿ ಜೊತೆಗೆ ಗ್ರಾಹಕರು ಮೊದಲೇ ವಿಡಿಯೋ ಕಾಲ್ ಸಮಯ ನಿಗದಿಪಡಿಸಬೇಕು. ಆ ಬಳಿಕ ನಿಗದಿತ ಸಮಯಕ್ಕೆ ಬ್ಯಾಂಕ್ ಸಿಬ್ಬಂದಿಗೆ ವಿಡಿಯೋ ಕರೆ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ವಿಡಿಯೋ ಕರೆಯಲ್ಲೇ ದಾಖಲೆಗಳ ಪರಿಶೀಲನೆ ನಡೆಯುತ್ತದೆ.
ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರ ನಾಮಿನಿ ಹೆಸರಿಸದೆ ಮರಣ ಹೊಂದಿದ್ರೆ ಹಣ ಯಾರಿಗೆ ಸಿಗುತ್ತೆ?
ವಿಡಿಯೋ ಕೆವೈಸಿ ಹೇಗೆ?
*ಮೊದಲು ನೀವು ಖಾತೆ ತೆರೆಯಲು ಬಯಸುವ ಬ್ಯಾಂಕ್ ವೆಬ್ ಸೈಟ್ ಗೆ ಭೇಟಿ ನೀಡಿ.
*ವಿಡಿಯೋ ಕಾಲ್ ಸಮಯ ನಿಗದಿಪಡಿಸಿ.
*ನಿಮಗೆ ವಿಡಿಯೋ ಕಾಲ್ ಗೆ ಸೇರ್ಪಡೆಗೊಳ್ಳುವ ಲಿಂಕ್ ಜೊತೆಗೆ ಅಟೋಮ್ಯಾಟಿಕ್ ಇ-ಮೇಲ್ ಅಥವಾ ಎಸ್ ಎಂಎಸ್ ಬರುತ್ತದೆ.
*ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಡಿಯೋ ಕಾಲ್ ಗೆ ಸೇರ್ಪಡೆಗೊಳ್ಳಿ.
*ಅಧಿಕೃತ ಅರ್ಹ ದಾಖಲೆಗಳೊಂದಿಗೆ OSV ಚೆಕ್ ಮಾಡಿ.
*ಗ್ರಾಹಕರ ಗೂಗಲ್ ಮ್ಯಾಪ್ಸ್ ಹಾಗೂ ಜಿಯೋ ಟ್ಯಾಗಿಂಗ್ ಬಳಸಿಕೊಂಡು ವಿಳಾಸ ದೃಢೀಕರಣ, ರಿಯಲ್ ಟೈಮ ಇಮೇಜ್ ಕ್ಯಾಪ್ಚರ್, ಇರ್ಯಾಟಿಕ್ ಬಾಡಿಲಿ ಮೋಷನ್ಸ್ ಹಾಗೂ ಇತರ ಪರೀಕ್ಷೆಗಳು ನಡೆಯುತ್ತವೆ.
* ಆ ಬಳಿಕ ದಾಖಲೆಗಳು ಹಾಗೂ ವ್ಯಾಲಿಡೇಷನ್ ಜೊತೆಗೆ ಫೇಸ್ ಮ್ಯಾಚ್ ಮಾಡಲಾಗುತ್ತದೆ.
*ಪರಿಶೀಲನೆ ಬಳಿಕ ಬ್ಯಾಂಕ್ ಸಿಬ್ಬಂದಿ ನಿಮ್ಮ ಕೆವೈಸಿ ಅರ್ಜಿಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು.
*ಅಡಿಟರ್ ಮಾಹಿತಿಗಳನ್ನು ಪರಿಶೀಲಿಸಿ, ಅರ್ಜಿಯನ್ನು ಪೂರ್ಣಗೊಳಿಸುತ್ತಾರೆ.
*ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗ್ರಾಹಕರಿಗೆ ಅಧಿಸೂಚನೆ ಬರುತ್ತದೆ.
ವಿಡಿಯೋ ಕೆವೈಸಿ ಸೌಲಭ್ಯ ನೀಡುವ ಬ್ಯಾಂಕ್ ಗಳು
ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್.
ಎಲ್ಐಸಿ ಪಾಲಿಸಿಗಳು ಲ್ಯಾಪ್ಸ್ ಆಗಿವೆಯಾ? ವಿಳಂಬ ಶುಲ್ಕ ಕಟ್ಟದೆ ಮತ್ತೆ ಪ್ರಾರಂಭಿಸಲು ಇಲ್ಲಿದೆ ಸುವರ್ಣಾವಕಾಶ
ಕೆವೈಸಿಗೆ ಯಾವೆಲ್ಲ ದಾಖಲೆಗಳು ಅಗತ್ಯ?
ಗ್ರಾಹಕರು ಕೆವೈಸಿ ಮಾಡಿಸಲು ಪಾನ್ ಕಾರ್ಡ್(PAN Card), ಆಧಾರ್ ಕಾರ್ಡ್ (Aadhaar Card), ಮತದಾರರ ಚೀಟಿ(Voter's Identity Card),ಡ್ರೈವಿಂಗ್ ಲೈಸೆನ್ಸ್ (Driving Licence),ನರೇಗಾ ಉದ್ಯೋಗ ಚೀಟಿ, ಪಾಸ್ ಪೋರ್ಟ್( Passport) ಇವೆಷ್ಟರಲ್ಲಿ ಯಾವುದಾದರೊಂದು ಒಂದು ದಾಖಲೆಯನ್ನು ಗುರುತು ಹಾಗೂ ವಿಳಾಸ ದೃಢೀಕರಣಕ್ಕಾಗಿ ನೀವು ಬ್ಯಾಂಕಿಗೆ ಸಲ್ಲಿಕೆ ಮಾಡಬೇಕಾಗುತ್ತದೆ.
ಕೆವೈಸಿ ಏಕೆ ಅಗತ್ಯ?
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(Anti-money laundering Act)-2002 ಹಾಗೂ ಅಕ್ರಮ ಹಣ ವರ್ಗಾವಣೆ ತಡೆ (ದಾಖಲೆಗಳ ನಿರ್ವಹಣೆ) ನಿಯಮಗಳು 2005ರ ಅನ್ವಯ ಗ್ರಾಹಕರ ಗುರುತು ಮಾಹಿತಿಗಳನ್ನು ಕಲೆ ಹಾಕುವಂತೆ ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ 2016ರಲ್ಲಿ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಅನ್ವಯ ಅನಾಮಿಕರ ಅಥವಾ ಬೇನಾಮಿ ಹೆಸರಿನಲ್ಲಿ ಯಾವುದೇ ಖಾತೆ ತೆರೆಯುವಂತಿಲ್ಲ. ಖಾತೆ ತೆರೆಯೋ ಸಂದರ್ಭದಲ್ಲಿ ಖಾತೆದಾರ ಗುರುತು ಮತ್ತು ವಿಳಾಸ ಪುರಾವೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಅಲ್ಲದೆ, ಕಾಲಕಾಲಕ್ಕೆ ಕೆವೈಸಿ ಮಾಹಿತಿಗಳನ್ನು ಪರಿಷ್ಕರಿಸಬೇಕು ಎಂದು ಆರ್ ಬಿಐ (RBI) ಸೂಚಿಸಿದೆ.