
ನವದೆಹಲಿ(ಜೂ.12): ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಇಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿ ಬ್ಯಾಂಕ್ ವಂಚನೆ ಪ್ರಕರಣ ಸೇರಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಇದೇ ವೇಳೆ ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಊರ್ಜಿತ್ ಪಟೇಲ್ ಸಂಸದೀಯ ಸಮಿತಿಗೆ ಭರವಸೆ ನೀಡಿದ್ದಾರೆ. ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಗವರ್ನರ್ ಪಟೇಲ್, ವಸೂಲಾಗದ ಸಾಲದ ಪ್ರಮಾಣ(ಎನ್‌ಪಿಎ) ಬಿಕ್ಕಟ್ಟನ್ನು ಶೀಘ್ರವಾಗಿ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯಲ್ಲಿನ ಕೆಲ ಸದಸ್ಯರು ಇತ್ತೀಚೆಗೆ ಎಟಿಎಂಗಳಲ್ಲಿ ಹಣ ಕೊರತೆಯಾಗಿರುವ ಕಾರಣ ತಿಳಿಯಲು ಬಯಸಿದ್ದರು. ಜತೆಗೆ ಬ್ಯಾಂಕ್ ವಂಚನೆ ನಿಭಾವಣೆ ಸಂಬಂಧ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ ಏಕೆಂದು ಪಟೇಲ್ ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಪಟೇಲ್, ಬಿಕ್ಕಟ್ಟಿನ ನಿವಾರಣೆಗೆ ಸಂಬಂಧಿಸಿ ನಾವು ಶ್ರಮಿಸುತ್ತಿದ್ದೇವೆ. ಮತ್ತು ಶೀಘ್ರವಾಗಿ ಸಮಸ್ಯೆ ಪರಿಹಾರವಾಗುವುದೆಂದು ಭರವಸೆ ಹೊಂದಿದ್ದೇವೆ'ಎಂದು ಹೇಳಿದರು. ದಿವಾಳಿತನ ಸಂಹಿತೆಯನ್ನು (ಐಬಿಸಿ) ಅನುಷ್ಠಾನಗೊಳಿಸಿದ ನಂತರ, ಎನ್‌ಪಿಎ ಸಮಸ್ಯೆ ಬಗೆಹರಿಯುತ್ತಿದೆ ಎಂದು ಪಟೇಲ್ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸಮಿತಿಗೆ ಭರವಸೆ ನಿಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.