
ಗೂಗಲ್ ಪೇ (Google Pay), ಪೇಟಿಎಂ (Paytm), ಫೋನ್ ಪೇ (Phone Pay) ಬಳಸುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಣ್ಣ ತರಕಾರಿ ಇರಲಿ ದೊಡ್ಡ ಮನೆ ಸಾಮಗ್ರಿ ಇರಲಿ, ಜನರು ಕ್ಯಾಶ್ ಕಿಂತ ಆನ್ಲೈನ್ ಪೇಮೆಂಟ್ ಇಷ್ಟಪಡ್ತಾರೆ. ಕೈನಲ್ಲಿ ಕ್ಯಾಶ್ ಹಿಡಿದು ಪ್ರಯಾಣ ಬೆಳೆಸುವುದಕ್ಕಿಂತ ಇದು ಸುರಕ್ಷಿತ. ನೀವೂ ಯುಪಿಐ ((UPI)) ಮೂಲಕ ಹಣ ಪಾವತಿ ಮಾಡುವವರಾಗಿದ್ದರೆ ನಿಮಗೊಂದು ಮಹತ್ವದ ಸುದ್ದಿ ಇದೆ. ಜುಲೈ 31 ರ ನಂತ್ರ ಯುಪಿಐ ನಿಯಮದಲ್ಲಿ ಬದಲಾವಣೆ ಆಗಲಿದೆ.
ಯುಪಿಐ ತನ್ನ ಸೇವೆಯನ್ನು ಮತ್ತಷ್ಟು ಸುಧಾರಿಸಲು ಆಗಸ್ಟ್ 1, 2025 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಘೋಷಿಸಿದೆ. ಈ ಬದಲಾವಣೆ ತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸಾಮಾನ್ಯ ಜನರಿಗೆ ಯುಪಿಐ ಬಳಕೆ ಮತ್ತಷ್ಟು ಸುಲಭವಾಗುತ್ತದೆ. ಆದ್ರೆ ಇದು ಕೆಲವು ದೈನಂದಿನ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.
ಯುಪಿಐನಲ್ಲಿ ಆಗ್ತಿದೆ ಏನೆಲ್ಲ ಬದಲಾವಣೆ? :
• ಬ್ಯಾಲೆನ್ಸ್ ಚೆಕ್ : ನೀವು ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಯಾವುದನ್ನೇ ಬಳಸ್ತಾ ಇರಿ, ಪ್ರತಿ ದಿನ ನಿಮ್ಮಿಷ್ಟದಂತೆ ಬ್ಯಾಲೆನ್ಸ್ ಚೆಕ್ ಮಾಡಲು ಸಾಧ್ಯವಿಲ್ಲ. ನೀವು ಪ್ರತಿ ದಿ 50 ಬಾರಿ ಮಾತ್ರ ಯುಪಿಐ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು. ಬ್ಯಾಲೆನ್ಸ್ ಚೆಕ್ ನಿಂದ ಸಿಸ್ಟಂ ಮೇಲೆಆಗ್ತಿರುವ ಒತ್ತಡವನ್ನು ತಡೆಯಲು ಈ ನಿರ್ಧಾರಕ್ಕೆ ಬರಲಾಗಿದೆ.
• ಆಟೋಪೇ : ಆಟೋಪೇ ನಿಯಮ ಕೂಡ ಬದಲಾಗಲಿದೆ. ಪ್ರತಿ ಆಟೋಪೇಗೆ 1 ಪ್ರಯತ್ನ ಮತ್ತು 3 ಮರುಪ್ರಯತ್ನಕ್ಕೆ ಮಾತ್ರ ಅವಕಾಶವಿರುತ್ತದೆ. ಅಲ್ಲದೆ ಕಡಿಮೆ ಜನದಟ್ಟಣೆಯ ಸಮಯದಲ್ಲಿ ಮಾತ್ರ ನೀವು ಆಟೋ ಪೇ ಮಾಡ್ಬಹುದು. ಅಂದ್ರೆ ಬೆಳಿಗ್ಗೆ 10 ಗಂಟೆಯ ಮೊದಲು, ಮಧ್ಯಾಹ್ನ 1 ರಿಂದ ಸಂಜೆ 5 ರ ನಡುವೆ ಅಥವಾ ರಾತ್ರಿ 9. 30 ರ ನಂತರ ನಿಮಗೆ ಅವಕಾಶ ಸಿಗಲಿದೆ.
• ಲಿಂಕ್ ಮಾಡಲಾದ ಖಾತೆ ಪರಿಶೀಲನೆ : ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ನೀವು ದಿನಕ್ಕೆ 25 ಬಾರಿ ಮಾತ್ರ ನೋಡಲು ಸಾಧ್ಯವಾಗುತ್ತದೆ.
• ವಹಿವಾಟಿನ ಮಾಹಿತಿ : ವಹಿವಾಟು ಸ್ಥಿತಿ ಪರಿಶೀಲಿಸಲು ಎಪಿಐ (API) ಕರೆಗಳನ್ನು ಒಂದೊಂದಾಗಿ ಮಾಡಬೇಕಾಗುತ್ತದೆ. ಎನ್ ಪಿಸಿಐ ನಿಯಮಗಳ ಪ್ರಕಾರ, ವಹಿವಾಟಿನ ಸ್ಥಿತಿಯನ್ನು 3 ಬಾರಿಗಿಂತ ಹೆಚ್ಚು ಬಾರಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಪ್ರತಿ ವಿನಂತಿಯ ನಡುವೆ 90 ಸೆಕೆಂಡುಗಳ ಅಂತರದ ಅಗತ್ಯವಿದೆ.
ಈ ಬದಲಾವಣೆಗೆ ಕಾರಣ ಏನು? : ಯುಪಿಐ ಭಾರತದಲ್ಲಿ ಡಿಜಿಟಲ್ ಪಾವತಿಯ ಅತಿದೊಡ್ಡ ಸಾಧನ. ಮೇ 2025 ರಲ್ಲಿ ಯುಪಿಐ ಮೂಲಕ, 25.14 ಲಕ್ಷ ಕೋಟಿಗಿಂತ ಹೆಚ್ಚು ಮೌಲ್ಯದ 18 ಶತಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಮಾರ್ಚ್ 26 ಮತ್ತು ಏಪ್ರಿಲ್ 12, 2025 ರ ನಡುವೆ ಯುಪಿಐ ವ್ಯವಸ್ಥೆ 18 ದಿನಗಳಲ್ಲಿ 4 ಬಾರಿ ಕ್ರ್ಯಾಶ್ ಆಗಿದೆ. ಏಪ್ರಿಲ್ 12 ರಂದು 5 ಗಂಟೆಗಳ ಕಾಲ ಇದರ ಸೇವೆ ಬಂದ್ ಆಗಿತ್ತು. ಅತಿಯಾದ ಒತ್ತಡ ಮತ್ತು ಎಪಿಐ ದುರುಪಯೋಗ ಇದಕ್ಕೆ ಕಾರಣ. ಕೆಲವು PSP ಗಳು ಹಳೆಯ ವಹಿವಾಟಿನ ಸ್ಥಿತಿಯನ್ನು ಪದೇ ಪದೆ ಚೆಕ್ ಮಾಡ್ತಿವೆ. ಇದ್ರಿಂದ ವ್ಯವಸ್ಥೆ ನಿಧಾನವಾಗ್ತಿದೆ.
ಇದರಿಂದ ಯಾರಿಗೆ ಸಮಸ್ಯೆ : ಇದ್ರಿಂದ ಹೆಚ್ಚಿನ ಸಮಸ್ಯೆ ಇಲ್ಲದೆ ಹೋದ್ರೂ ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುವವರು ತಮ್ಮ ಅಭ್ಯಾಸ ಬಿಡಬೇಕು. ಹಾಗೆ ಆಟೋಪೇ ಸಮಯ ಬದಲಾಗಿರುವ ಕಾರಣ ಸಬ್ಸ್ಕ್ರೈಬ್ ಪಾವತಿ ಟೈಂ ಬದಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.