ಡಿಜಿಟಲ್ ಜಗತ್ತಲ್ಲಿ ಖರ್ಚಿಗೆ ಕಡಿವಾಣ ಹಾಕುವುದು ಹೇಗೆ? ಈ ಈಸಿ ಟಿಪ್ಸ್ ಪಾಲಿಸಿ ಮ್ಯಾಜಿಕ್ ನೋಡಿ!

Published : Nov 02, 2026, 10:02 PM IST
UPI Payments

ಸಾರಾಂಶ

ಭಾರತದಲ್ಲಿ ಯುಪಿಐ ವಹಿವಾಟುಗಳು ಹೊಸ ದಾಖಲೆ ಬರೆಯುತ್ತಿವೆ. ಆದರೆ ಡಿಜಿಟಲ್ ಪಾವತಿಯ ಸುಲಭತೆಯಿಂದ ಸಣ್ಣಪುಟ್ಟ ಖರ್ಚುಗಳು ಹೆಚ್ಚಾಗುತ್ತಿವೆಯೇ? ಪ್ರತ್ಯೇಕ ಬ್ಯಾಂಕ್ ಖಾತೆ, ಯುಪಿಐ ಲೈಟ್, ಖರ್ಚಿನ ಮಿತಿ ಹಾಗೂ..

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು ಈಗ ಎಲ್ಲಾ ನಿತ್ಯಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಈ ಡಿಜಿಟಲ್ ಕ್ರಾಂತಿಯು ಇದೀಗ ಜಾಗತಿಕ ಮಟ್ಟದಲ್ಲೇ ನೂತನ ಸಾರ್ವಕಾಲಿಕ ದಾಖಲೆಯೊಂದನ್ನು ಬರೆದಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ ದೇಶದಲ್ಲಿ ಬರೋಬ್ಬರಿ ₹31.53 ಲಕ್ಷ ಕೋಟಿ ಮೌಲ್ಯದ ಯುಪಿಐ ವಹಿವಾಟುಗಳು ನಡೆದಿವೆ.

ಅಂದರೆ, ಭಾರತೀಯರು ದಿನವೊಂದಕ್ಕೆ ಸರಾಸರಿ ₹1 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಕೇವಲ ಮೊಬೈಲ್ ಮೂಲಕವೇ ಡಿಜಿಟಲ್ ರೂಪದಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಒಟ್ಟು 2,547 ಕೋಟಿ ವಹಿವಾಟುಗಳು ವಾರ್ಷಿಕ ಆಧಾರದಲ್ಲಿ ಶೇಕಡ 23ರಷ್ಟು ಭಾರಿ ಏರಿಕೆಯನ್ನು ದಾಖಲಿಸಿದ್ದು, ಭಾರತವು ನಗದು ರಹಿತ ಸಮಾಜದತ್ತ ಎಷ್ಟು ವೇಗವಾಗಿ ದಾಪುಗಾಲು ಹಾಕುತ್ತಿದೆ ಎಂಬುದಕ್ಕೆ ಇದು ಉತ್ತಮ ಪುರಾವೆಯಾಗಿದೆ.

ಇದರ ಹಿಂದೆ ಗಂಭೀರವಾದ ಆರ್ಥಿಕ ಅಪಾಯವೂ ಅಡಗಿದೆ. ಹಣಕಾಸು ತಜ್ಞರು ಇದನ್ನು ನೋವಿಲ್ಲದ ಖರ್ಚು ಎಂದು ಕರೆಯುತ್ತಾರೆ. ಅಂದರೆ ಹಿಂದೆ ಜೇಬಿನಿಂದ ನೋಟುಗಳನ್ನು ಎಣಿಸಿ ಕೊಡುವಾಗ ಹಣ ಖಾಲಿಯಾಗುತ್ತಿದೆ ಎಂಬ ಎಚ್ಚರಿಕೆಯ ಭಾವ ಮನಸ್ಸಿನಲ್ಲಿ ಮೂಡುತ್ತಿತ್ತು. ಆದರೆ ಯುಪಿಐ ವ್ಯವಸ್ಥೆಯಲ್ಲಿ ಎಷ್ಟು ಹಣ ವ್ಯಯಿಸುತ್ತಿದ್ದೇನೆ ಎಂಬ ಲೆಕ್ಕವೇ ಸಿಗದೆ ತಿಂಗಳ ಕೊನೆಗೆ ಖಾತೆ ಖಾಲಿಯಾಗಿ ಮಧ್ಯಮ ವರ್ಗದವರು ಪರದಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.

ಈ ಡಿಜಿಟಲ್ ಮಾಯಾಲೋಕದಲ್ಲಿ ಮಿತಿಮೀರಿದ ಖರ್ಚಿಗೆ ಕಡಿವಾಣ ಹಾಕಲು ತಜ್ಞರು ಕೆಲವು ಪ್ರಮುಖ ಸೂತ್ರಗಳನ್ನು ಸೂಚಿಸುತ್ತಾರೆ:

1. ದಿನನಿತ್ಯದ ಖರ್ಚಿಗೆ ಪ್ರತ್ಯೇಕ ಬ್ಯಾಂಕ್ ಖಾತೆ

ನಿಮ್ಮ ಮಾಸಿಕ ಸಂಬಳ ಜಮೆಯಾಗುವ ಅಥವಾ ತುರ್ತು ಉಳಿತಾಯವಿರುವ ಮುಖ್ಯ ಬ್ಯಾಂಕ್ ಖಾತೆಯನ್ನು ಯುಪಿಐಗಳಿಗೆ ಜೋಡಿಸಬಾರದು. ಬದಲಿಗೆ, ದಿನನಿತ್ಯದ ಚಿಲ್ಲರೆ ಖರ್ಚುಗಳಿಗಾಗಿಯೇ ಪ್ರತ್ಯೇಕ ಖಾತೆಯೊಂದನ್ನು ಇಟ್ಟುಕೊಳ್ಳಿ. ತಿಂಗಳ ಆರಂಭದಲ್ಲಿ ಬಜೆಟ್‌ಗೆ ತಕ್ಕಂತೆ ಕೇವಲ ₹5,000 ಅಥವಾ ₹10,000 ಹಣವನ್ನು ಅದಕ್ಕೆ ವರ್ಗಾಯಿಸಿ. ಆ ಮೊತ್ತ ಮುಗಿದ ತಕ್ಷಣ ನಿಮ್ಮ ಕೈ ತಾನಾಗಿಯೇ ಕಟ್ಟಿಹಾಕಲ್ಪಡುತ್ತದೆ.

2. ಚಿಲ್ಲರೆ ಪಾವತಿಗೆ ಯುಪಿಐ ಲೈಟ್ ಬಳಕೆ

ದಿನಕ್ಕೆ ಹತ್ತಾರು ಬಾರಿ ಮಾಡುವ ₹10, ₹20 ಅಥವಾ ₹50ರ ಸಣ್ಣಪುಟ್ಟ ಚಹಾ-ತಿಂಡಿ ಖರ್ಚುಗಳಿಗೆ ಯುಪಿಐ ಲೈಟ್ ಬಳಸಿ. ಇದರಲ್ಲಿ ರಹಸ್ಯ ಸಂಖ್ಯೆ ಇಲ್ಲದೆಯೇ ತ್ವರಿತವಾಗಿ ಪಾವತಿಯಾಗುವುದರ ಜೊತೆಗೆ, ನಿಮ್ಮ ಮುಖ್ಯ ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಸಣ್ಣ ವಹಿವಾಟುಗಳ ದೊಡ್ಡ ಪಟ್ಟಿ ತುಂಬಿಕೊಳ್ಳುವುದು ತಪ್ಪುತ್ತದೆ.

3. ದೈನಂದಿನ ವಹಿವಾಟು ಮಿತಿ ನಿಗದಿ

ಯುಪಿಐ ಆ್ಯಪ್‌ಗಳಲ್ಲಿ ದಿನಕ್ಕೆ ಗರಿಷ್ಠ ಎಷ್ಟು ಯುಪಿಐ ಪಾವತಿ ಮಾಡಬಹುದು ಎಂಬ ಮಿತಿಯನ್ನು ನಾವೇ ಸ್ವತಃ ನಿಗದಿಪಡಿಸಿಕೊಳ್ಳಬಹುದು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ದಿನಕ್ಕೆ ಗರಿಷ್ಠ ₹2,000 ಅಥವಾ ₹3,000 ಮಿತಿ ಹಾಕಿಕೊಳ್ಳಿ.

4. ಖರ್ಚಿನ ನಡುವೆಯೇ ಚಿಲ್ಲರೆ ಹೂಡಿಕೆ

ನೀವು ದಿನವಿಡೀ ಹಣ ಖರ್ಚು ಮಾಡುವಾಗಲೇ, ರೌಂಡ್-ಅಪ್ ಅಥವಾ ಮೈಕ್ರೋ-ಎಸ್‌ಐಪಿ ಮಾದರಿಯ ಆ್ಯಪ್‌ಗಳ ಮೂಲಕ ಪ್ರತಿ ವಹಿವಾಟಿನ ₹5 ಅಥವಾ ₹10 ಚಿಲ್ಲರೆ ಹಣ ತಾನಾಗಿಯೇ ಇಂಡೆಕ್ಸ್‌ ಫಂಡ್‌ಗಳಿಗೆ ಜಮೆಯಾಗುವಂತೆ ನೋಡಿಕೊಳ್ಳಿ. ಇದರಿಂದ ಖರ್ಚು ನಡೆದಷ್ಟೂ ಉಳಿತಾಯದ ನಿಧಿಯೂ ಬೆಳೆಯುತ್ತಾ ಸಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸಣ್ಣ ಬೆಂಕಿಪೆಟ್ಟಿಗೆ ಕಾರ್ಖಾನೆಯಾಗಿ ಆರಂಭವಾಗಿದ್ದ ಯುನಿಟ್‌, 300 ಕೋಟಿ ಮೌಲ್ಯದ ಪಟಾಕಿ ಕಂಪನಿಯಾಗಿ ಬೆಳೆದಿದ್ದು ಹೇಗೆ?
ಒಂದೇ ದಿನದಲ್ಲಿ 55 ಸಾವಿರ ಕೋಟಿ ಗಳಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಷೇರುಗಳು 6 ವರ್ಷಗಳಲ್ಲಿ ಅತಿ ದೊಡ್ಡ ಏರಿಕೆ