ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಜಮುಖಿ ಚಿಂತನೆಗೆ ಕೇಂದ್ರ ಸರಕಾರ ಸ್ಪಂದಿಸಿದ್ದು, ಶಿರಸಿಯಲ್ಲಿ ಪೆಟ್ರೋಲ್, ಡೀಸೆಲ್ ದರಕ್ಕೆ ಕೊಂಚ ಕಡಿವಾಣ ಹಾಕಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ
ಶಿರಸಿ, (ಆಗಸ್ಟ್.27): ರಾಜ್ಯದಲ್ಲಿ ಅತೀ ಹೆಚ್ಚು ಪೆಟ್ರೋಲ್ ದರ ಹೊಂದಿರುವ ತಾಲೂಕು ಎಂಬ ಹಣೆಪಟ್ಟಿಯನ್ನು ಉತ್ತರಕನ್ನಡ ಜಿಲ್ಲೆಯ ಶಿರಸಿ ಹೊಂದಿತ್ತು. ಇದರಿಂದ ಜನಸಾಮಾನ್ಯರು ಕೂಡಾ ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಆದರೆ, ಶಿರಸಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಕೊಂಚ ಕಡಿವಾಣ ಹಾಕಲು ಇದೀಗ ಕೇಂದ್ರ ಸರ್ಕಾರದ ನೂತನ ಆದೇಶ ಸಹಾಯ ಮಾಡಿದೆ. ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಜಮುಖಿ ಚಿಂತನೆಗೆ ಸ್ಪಂದಿಸಿರುವ ಸರಕಾರ, ಕೂಡಲೇ ಕ್ರಮ ಕೈಗೊಂಡು ಜನರಿಗಾಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...
ಹೌದು... ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರ ದಾಖಲಾಗಿತ್ತು. ಇದರಿಂದ ಶಿರಸಿ- ಸಿದ್ಧಾಪುರ ತಾಲೂಕಿನಾದ್ಯಂತ ಜನರಿಗೆ ಆರ್ಥಿಕವಾಗಿ ಹೊಡೆತ ಬೀಳುತ್ತಿದ್ದದ್ದರಿಂದ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಈ ಸಮಸ್ಯೆಯನ್ನು ಅನುಭವಿಸಿದ್ದ ಶಿರಸಿಯ ಖ್ಯಾತ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ್, ಈ ಹಿಂದೆಯೂ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾಗ ಆ ಪತ್ರವನ್ನು ಪೆಟ್ರೋಲಿಯಂ ಕಂಪೆನಿಗೆ ರವಾನೆ ಮಾಡಲಾಗಿತ್ತು. ಆದರೆ, ಪೆಟ್ರೋಲಿಯಂ ಕಂಪೆನಿಯವರು ಧನಾತ್ಮಕ ಸ್ಪಂದನೆ ನೀಡಿರಲಿಲ್ಲ.
undefined
Petrol, Diesel Price: ಶಿವಮೊಗ್ಗದಲ್ಲಿ ಏರಿಕೆ, ಬೆಳಗಾವಿಯಲ್ಲಿ ಇಳಿಕೆಯಾದ ಪೆಟ್ರೋಲ್ ದರ
ಬಳಿಕ ಅವರ ಪತ್ನಿಯ ಸಲಹೆಯ ಮೇರೆಗೆ ಮತ್ತೆ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ದರ, ಪ್ರಸ್ತುತ ಎದುರಾಗುತ್ತಿರುವ ಸಮಸ್ಯೆ, ಲಾಭ- ನಷ್ಟ ಮುಂತಾದ ಸಂಪೂರ್ಣ ಮಾಹಿತಿಯೊಂದಿಗೆ ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಜತೆಗೆ ದರವನ್ನು ಕಡಿಮೆ ಮಾಡಲು ಮಾರ್ಗದ ಮಾಹಿತಿಯನ್ನೂ ನೀಡಿದ್ದರು.
ಈ ಕುರಿತ ವಿಷಯವನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂಬ ಉತ್ತರ ಹಣಕಾಸು ಸಚಿವಾಲಯದಲ್ಲಿಂದ ಬಂದಿತ್ತು. ಪ್ರಸ್ತುತ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ/ನ್ಯಾಚುರಲ್ ಗ್ಯಾಸ್ ಇಲಾಖೆಗೆ ಡಾ. ಪಟವರ್ಧನ್ ಬರೆದ ಪತ್ರದ ಸಾರಾಂಶವನ್ನು ಉಲ್ಲೇಖಿಸಿ, ಅವರು ಉಲ್ಲೇಖಿಸಿದಂತೆ ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್/ಡಿಸೇಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಲಾಗಿದೆ.
ಅಂದಹಾಗೆ, ಈ ಮೊದಲು ಶಿರಸಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪೆಟ್ರೋಲ್ ದರ ದಾಖಲಾಗುತ್ತಿತ್ತು. ಅದಕ್ಕೆ ಕಾರಣ ಮುಖ್ಯವಾಗಿ ಮಂಗಳೂರು ವಲಯದಿಂದ ಪೂರೈಕೆಯಾಗಿ, ಅಲ್ಲೇ ದರ ನಿಗದಿ ಆಗುವುದಾಗಿತ್ತು. ಆದರೆ, ಈಗ ಹುಬ್ಬಳ್ಳಿ ವಲಯದಿಂದ ಇಂಧನ ಪೂರೈಕೆಯಾಗಿ ಅಲ್ಲಿಂದಲೇ ದರ ನಿಗದಿಯಾಗುತ್ತಿದೆ. ಇದರಿಂದಾಗಿ ಶಿರಸಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ ರೂ.1.19ರೂ. ಮತ್ತು ಡೀಸೆಲ್ 1.01ರೂ. ಗಳಷ್ಟು ಕಡಿಮೆಯಾಗಿದೆ.
ಇದಕ್ಕಾಗಿ ಕರ್ನಾಟಕ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಕೂಡಾ ಪ್ರಯತ್ನಿಸಿತ್ತು. ಆದರೆ, ಕೊನೆಗೂ ವೈದ್ಯರ ಪತ್ರದ ಪ್ರಯತ್ನದಿಂದ ಇದು ಸಫಲವಾಗಿದೆಯಲ್ಲದೇ, ಇದರಿಂದಾಗಿ ಶಿರಸಿ ತಾಲೂಕಿನ ಒಟ್ಟು ಜನರಿಗೆ ದಿನಕ್ಕೆ 5 ಲಕ್ಷ ರೂ. ಉಳಿತಾಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ತ್ವರಿತ ಸ್ಪಂದನೆಯಿಂದಾಗಿ ಜನರಿಗೆ ಆಗುತ್ತಿದ್ದ ಹೊರೆ ತಪ್ಪಿದಲ್ಲದೇ, ಜನರು ಸಾಕಷ್ಟು ಸಂತೋಷದಲ್ಲಿದ್ದಾರೆ. ರಾಜ್ಯದಾದ್ಯಂತ ಕೂಡಾ ಇದೇ ರೀತಿ ಪೆಟ್ರೋಲ್, ಡೀಸೆಲ್ ರೇಟ್ ಕಡಿಮೆಯಾಗಿ ಜನರ ಹೊರೆ ಮತ್ತಷ್ಟು ಇಳಿಯಲು ಎಂದು ಜನಸಾಮಾನ್ಯರ ಆಗ್ರಹ.