ಕೇಂದ್ರ ಬಜೆಟ್ ಎನ್ನುವುದು ಭಾರೀ ಜವಾಬ್ದಾರಿ. ಇದನ್ನು ಸಂಸತ್ತಿನಲ್ಲಿ ಹಣಕಾಸು ಸಚಿವರು ಮಂಡನೆ ಮಾಡುತ್ತಾರಾದರೂ, ಅದರ ಹಿಂದೆ ಸಾಕಷ್ಟು ಅನುಭವಿ ವ್ಯಕ್ತಿಗಳು ಕೆಲಸ ಮಾಡುತ್ತಾರೆ. ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರ ಟೀಮ್‌ನಲ್ಲಿರುವ ವ್ಯಕ್ತಿಗಳ ಲಿಸ್ಟ್ ಇಲ್ಲಿದೆ.
ನವದೆಹಲಿ (ಜ.27): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ವಾರ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಸಾಮಾನ್ಯ ಜನರು ಬಜೆಟ್‌ನಿಂದ ವಿಶೇಷ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ, ಈ ಬಾರಿಯ ಬಜೆಟ್ ಮೇಲೆ ದೊಡ್ಡ ನಿರೀಕ್ಷೆಗಳನ್ನು ಇರಿಸಿಕೊಳ್ಳಬೇಡಿ. ಯಾವುದೇ ಪ್ರಮುಖ ಘೋಷಣೆ ಆಗೋದಿಲ್ಲ ಎಂದು ಈಗಾಗಲೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಬಜೆಟ್ ಸಿದ್ದಪಡಿಸುವ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಮುಖವಾಗಿದ್ದರೆ, ಅವರಿಗೆ ಸಹಾಯ ಮಾಡಲು 6 ಸದಸ್ಯ ಅನುಭವಿ ತಂಡವಿದೆ. ಈ ಮಧ್ಯಂತರ ಬಜೆಟ್ ಸಿದ್ಧ ಮಾಡುವ ಸಂಪೂರ್ಣ ಜವಾಬ್ದಾರಿ ಇವರ ಮೇಲಿದೆ. ಬಜೆಟ್ ತಂಡದ ಸದಸ್ಯರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ನಿರ್ಮಲಾ ಸೀತಾರಾಮನ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಧಿಕಾರಾವಧಿಯ ಆರನೇ ಬಜೆಟ್ ಮಂಡಿಸಲಿದ್ದಾರೆ. ಇದು ಮಧ್ಯಂತರ ಬಜೆಟ್ ಆಗಿದ್ದರೂ, ಈ ಬಜೆಟ್ ಭಾಷಣದೊಂದಿಗೆ ಅವರು ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ 5 ಸಾಮಾನ್ಯ ಬಜೆಟ್ ಮತ್ತು 1 ಮಧ್ಯಂತರ ಬಜೆಟ್ ಮಂಡಿಸಿದ್ದರು. ಹಣಕಾಸು ಸಚಿವರು 1 ಫೆಬ್ರವರಿ 2024 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ಸಹಾಯ ಮಾಡಲು 6 ಅನುಭವಿ ಸದ್ಯಸ್ಯರ ತಂಡವಿದೆ.
undefined
ಟಿ.ವಿ.ಸೋಮನಾಥನ್ (TV Somnathan): ನಿರ್ಮಲಾ ಸೀತಾರಾಮನ್ ಅವರ ಬಜೆಟ್ ತಂಡದಲ್ಲಿ ಬರುವ ಮೊದಲ ಹೆಸರು ಹಣಕಾಸು ಸಚಿವಾಲಯದ ಅತ್ಯಂತ ಹಿರಿಯ ಕಾರ್ಯದರ್ಶಿ ಟಿವಿ ಸೋಮನಾಥನ್ ಅವರದ್ದು. ತಮಿಳುನಾಡು ಕೇಡರ್‌ನ 1987 ಬ್ಯಾಚ್‌ನ ಐಎಎಸ್ ಅಧಿಕಾರಿ. ಸೋಮನಾಥನ್ ಅವರು ಪ್ರಸ್ತುತ ಹಣಕಾಸು ಕಾರ್ಯದರ್ಶಿ ಮತ್ತು ವೆಚ್ಚ ಇಲಾಖೆಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಪ್ತ ವ್ಯಕ್ತಿ ಎಂದೂ ಪರಿಗಣಿಸಲಾಗಿದೆ. ಏಪ್ರಿಲ್ 2015 ರಿಂದ ಆಗಸ್ಟ್ 2017 ರವರೆಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಇವರು ಕೆಲಸ ಮಾಡಿದ್ದಾರೆ. ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ ಸೋಮನಾಥನ್ ಅವರು ಅರ್ಥಶಾಸ್ತ್ರದ ಕುರಿತು 80 ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಪಿಎಂಒ ಅಲ್ಲದೆ ವಿಶ್ವ ಬ್ಯಾಂಕ್‌ನಲ್ಲೂ ಕೆಲಸ ಮಾಡಿದ್ದಾರೆ.
ಅಜಯ್ ಸೇಠ್ (Ajay Seth): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 2ನೇ ಬಲಿಷ್ಠ ವ್ಯಕ್ತಿ. ಅಜಯ್ ಸೇಠ್ ಕರ್ನಾಟಕ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಅವರು ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಅಜಯ್ ಸೇಠ್ ಭಾರತದ ಮೊಟ್ಟಮೊದಲ ಸಾವರ್ಜಿನ್ ಗ್ರೀನ್ ಬಾಂಡ್ ನೀಡುವಲ್ಲಿ ಮತ್ತು ಮೂಲಸೌಕರ್ಯ ಹಣಕಾಸು ಸಚಿವಾಲಯದ ರಚನೆಗೆ ಹೆಸರುವಾಸಿಯಾಗಿದ್ದಾರೆ.ಕಳೆದ ವರ್ಷ, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ತುಹಿನ್ ಕಾಂತ್ ಪಾಂಡೆ (Tuhin Kant Pandey): ನಿರ್ಮಲಾ ಸೀತಾರಾಮನ್ ಅವರ ಟೀಮ್‌ನ ಪ್ರಮುಖ ಮುಖ ತುಹಿನ್ ಕಾಂತ್ ಪಾಂಡೆ. ಅವರು ಪ್ರಸ್ತುತ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿಯಾಗಿದ್ದಾರೆ. ತುಹಿನ್ ಕಾಂತ್ ಒಡಿಶಾ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಏರ್ ಇಂಡಿಯಾದ ಖಾಸಗೀಕರಣ ಮತ್ತು LIC ಯ ದೇಶದ ಅತಿದೊಡ್ಡ IPO ನಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
ಸಂಜಯ್ ಮಲ್ಹೋತ್ರಾ (Sanjay Malhotra): ರಾಜಸ್ಥಾನ ಕೇಡರ್‌ನ 1990 ರ ಬ್ಯಾಚ್ ಅಧಿಕಾರಿ ಸಂಜಯ್ ಮಲ್ಹೋತ್ರಾ ಅವರು ಪ್ರಸ್ತುತ ಕಂದಾಯ ಕಾರ್ಯದರ್ಶಿಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಹಣಕಾಸು ಸೇವೆಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಮಧ್ಯಂತರ ಬಜೆಟ್ ಪ್ರಕ್ರಿಯೆಯಲ್ಲಿ ತೆರಿಗೆ ಆದಾಯ ಹೆಚ್ಚಿಸುವ ಜವಾಬ್ದಾರಿ ಸಂಜಯ್ ಮಲ್ಹೋತ್ರಾ ಅವರ ಹೆಗಲ ಮೇಲಿದೆ. ಇದಲ್ಲದೆ, ಅವರು ಹಣಕಾಸು ಸಚಿವರ ಬಜೆಟ್ ಭಾಷಣದ 2ನೇ ಭಾಗದ ಕರಡು ರಚನೆಯ ಕೆಲಸವನ್ನೂ ಮಾಡಲಿದ್ದಾರೆ.
ವಿ ಅನಂತ ನಾಗೇಶ್ವರನ್ (V Anantha Nageswaran): ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ವಿ ಅನಂತ ನಾಗೇಶ್ವರನ್, ಬರಹಗಾರ ಹಾಗೂ ಶಿಕ್ಷಕರೂ ಆಗಿದ್ದಾರೆ. ನಾಗೇಶ್ವರನ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ. ಭಾರತದ ಆರ್ಥಿಕತೆಯ ಮೇಲೆ ಯಾವುದೇ ಜಾಗತಿಕ ಅಂಶಗಳ ಪರಿಣಾಮಗಳನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಪಿಎಂ ಕಿಸಾನ್, ಶ್ರಮಯೋಗಿ ಮಾನಧನ್.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!
ವಿವೇಕ್ ಜೋಶಿ (Vivek Joshi): ನಿರ್ಮಲಾ ಸೀತಾರಾಮನ್ ಅವರ ಟೀಮ್‌ನಲ್ಲಿರುವ ಅತ್ಯಂತ ಹೊಸ ಸದಸ್ಯ ವಿವೇಕ್ ಜೋಶಿ. ಹರಿಯಾಣ ಕೇಡರ್‌ನ 1989ರ ಬ್ಯಾಚ್‌ನ ಐಎಎಸ್ ಅಧಿಕಾರಿ. 2022ರ ನವೆಂಬರ್‌ನಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಹಣಕಾಸು ಇಲಾಖೆಗೆ ಸೇರಿದ್ದಾರೆ. ಜಿನೀವಾ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ವಿವೇಕ್ ಜೋಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿಯ ಕಮಿಷನರ್ ಆಫ್ ಇಂಡಿಯಾ ಆಗಿದ್ದರು.
Union Budget 2024: ತೆರಿಗೆಯಿಂದ ಹಿಡಿದು ರಿಯಲ್ ಎಸ್ಟೇಟ್ ತನಕ, ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳೇನು?