Union Budget 2023:ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ; ಉಳಿತಾಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ

By Suvarna NewsFirst Published Feb 1, 2023, 4:41 PM IST
Highlights

2023-24ನೇ ಸಾಲಿನ ಬಜೆಟ್ ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಉತ್ತೇಜಿಸಲು ಹೆಚ್ಚಿನ ಬಡ್ಡಿದರ ನೀಡುವ ಮಹಿಳಾ ಸಮ್ಮಾನ್​ ಉಳಿತಾಯ ಪತ್ರ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ. 
 

ನವದೆಹಲಿ (ಫೆ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಕುರಿತು ಎಲ್ಲ ವರ್ಗದ ಜನರಲ್ಲೂ ನಿರೀಕ್ಷೆಗಳು ಹೆಚ್ಚಿದ್ದವು. ಸಮಾಜದ ವಿವಿಧ ಸ್ತರದ ಜನರಿಗೆ ಬಜೆಟ್ ನಲ್ಲಿ ಮನ್ನಣೆ ನೀಡಲಾಗಿದೆ ಕೂಡ. ಅದರಲ್ಲೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಬಾರಿ ಒತ್ತು ನೀಡಲಾಗಿದೆ. ಮಹಿಳೆ ಆರ್ಥಿಕ ಸಬಲೀಕರಣದಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನು ನೀಡಿದೆ ಕೂಡ. 'ಮಹಿಳಾ ಸಮ್ಮಾನ್ ಉಳಿತಾಯ ಪತ್ರ' ಅಡಿಯಲ್ಲಿ ಒಮ್ಮೆಗೆ ಸಣ್ಣ ಮೊತ್ತದ ಉಳಿತಾಯ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಉಳಿತಾಯದ ಮನೋಭಾವ ಉತ್ತೇಜಿಸಲು ಈ ಯೋಜನೆ ನೆರವು ನೀಡುವುದರಲ್ಲಿ ಅನುಮಾನವಿಲ್ಲ. ಹಾಗಾದ್ರೆ ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರನ್ನು ಕೇಂದ್ರೀಕರಿಸಿ ಏನೆಲ್ಲ ಯೋಜನೆಗಳನ್ನು ಘೋಷಿಸಲಾಗಿದೆ? ಮಹಿಳೆಯರಿಗೆ ಏನೆಲ್ಲ ಪ್ರಯೋಜನಗಳು ಸಿಗಲಿವೆ? ಇಲ್ಲಿದೆ ಮಾಹಿತಿ.

ಮಹಿಳಾ ಸಮ್ಮಾನ್​ ಉಳಿತಾಯ ಪತ್ರ
ಆಜಾದಿ ಕಾ ಅಮೃತ ಮಹೋತ್ಸವದ ನೆನಪಿಗಾಗಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ವಿತ್ತ ಸಚಿವೆ 'ಮಹಿಳಾ ಸಮ್ಮಾನ್ ಉಳಿತಾಯ ಪತ್ರ' ಯೋಜನೆ ಘೋಷಿಸಿದ್ದಾರೆ. ಮಹಿಳಾ ಸಮ್ಮಾನ್ ಉಳಿತಾಯ ಪತ್ರದಲ್ಲಿ ಎರಡು ವರ್ಷಗಳ ಅವಧಿಗೆ ಮಹಿಳೆಯರು ಹೂಡಿಕೆ ಮಾಡಬಹುದಾಗಿದ್ದು, ಶೇ.7.5 ಬಡ್ಡಿದರ ನೀಡಲಾಗುವುದು. ಈ ಬಡ್ಡಿ ದರ ಸ್ಥಿರವಾಗಿದ್ದು, ಬದಲಾವಣೆ ಆಗೋದಿಲ್ಲ. ಈ ಯೋಜನೆ  2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಭಾಗಶಃ ಹೂಡಿಕೆ ಹಿಂಪಡೆಯುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. 

ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

ಮಹಿಳೆಯರ ಆರ್ಥಿಕ ಸಬಲೀಕರಣ
ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಗಮನಾರ್ಹ ಯಶಸ್ಸು ದಾಖಲಿಸಿದೆ. 81ಲಕ್ಷ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಒಟ್ಟುಗೂಡಿಸಿದೆ. ಈ ಗುಂಪುಗಳು ಮುಂದಿನ ಆರ್ಥಿಕ ಸಬಲೀಕರಣದ ಹಂತವನ್ನು ತಲುಪಲು ನಾವು ಅವರಿಗೆ ನೆರವು ನೀಡುತ್ತೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ದೊಡ್ಡ ಉತ್ಪಾದನಾ ಉದ್ಯಮಗಳ ಸ್ಥಾಪನೆ ಮೂಲಕ ಅಥವಾ ಸಾವಿರಾರು ಮಹಿಳೆಯರನ್ನು ಒಟ್ಟುಗೂಡಿಸಿ ಉದ್ಯಮ ಪ್ರಾರಂಭಿಸಿ ಅದನ್ನು ವೃತ್ತಿಪರವಾಗಿ ನಿರ್ವಹಣೆ ಮಾಡಲಾಗುವುದು. ಈ ಉದ್ಯಮಗಳಿಗೆ ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಉತ್ತಮ ವಿನ್ಯಾಸ, ಗುಣಮಟ್ಟ, ಅವರ ಉತ್ಪನ್ನಗಳ ಬ್ರ್ಯಾಂಡಿಂಗ್ ಹಾಗೂ ಮಾರ್ಕೇಟಿಂಗ್ ಗೆ ನೆರವು ಒದಗಿಸಲಾಗುವುದು. ಬೆಂಬಲ ನೀತಿ ಮೂಲಕ ಅವರು ತಮ್ಮ ಉತ್ಪಾದನೆ ಹೆಚ್ಚಿಸಿಕೊಳ್ಳಲು ನೆರವು ನೀಡುವ ಮೂಲಕ ದೊಡ್ಡ ಮಾರುಕಟ್ಟೆಗಳನ್ನು ಹೊಂದುವಂತೆ ನೆರವು ನೀಡಲಾಗುವುದು. ಇದರಿಂದ ಅನೇಕ ಸ್ಟಾರ್ಟ್ ಅಪ್ ಗಳು 'ಯುನಿಕಾರ್ನ್' ಗಳಾಗಿ ಬೆಳೆಯಲು ಸಾಧ್ಯವಾಗಲಿದೆ. 

ಈ ಬಾರಿಯ ಬಜೆಟ್ ನಲ್ಲಿ ಮಕ್ಕಳು ಹಾಗೂ ಅಂಗನವಾಡಿಗೆ ಸಂಬಂಧಿಸಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಆದರೆ, ಕಳೆದ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳ ಬಗ್ಗೆ ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. 

Union Budget 2023: ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು; ಕೌಶಲಾಭಿವೃದ್ಧಿಗೆ ಡಿಜಿಟಲ್ ವೇದಿಕೆ

ಕಳೆದ  ಬಜೆಟ್ ನಲ್ಲಿ ಏನಿತ್ತು?
ಕಳೆದ ಬಾರಿಯ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳಿಗೆ ಹೊಸ ರೂಪ ನೀಡಲಾಗಿತ್ತು. ಇದರ ಅನ್ವಯ  ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ  ಮತ್ತು ಸಕ್ಷಮ್ ಅಂಗನವಾಡಿ ಹಾಗೂ ಪೋಶನ್  2.0 ಎಂಬ ಮೂರು ಯೋಜನೆಗಳನ್ನು ಸರ್ಕಾರ ಘೋಷಿಸಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಾಹಿತಿ ಅನ್ವಯ 2011ರ ಜನಗಣತಿ ಪ್ರಕಾರ ಮಹಿಳೆಯರು ಮತ್ತು ಮಕ್ಕಳು ಭಾರತದ ಒಟ್ಟು ಜನಸಂಖ್ಯೆಯ 67.7% ರಷ್ಟಿದ್ದಾರೆ. 
 

click me!